ಮಂಗಳೂರು ನಗರದಿಂದ ಕೇವಲ 10 ಕಿ. ಮೀ, ದೂರದ ಮಂಗಳೂರು – ಕಾರ್ಕಳ ರಾಷ್ಟೀಯ ಹೆದ್ದಾರಿ ಹಾದು ಹೋಗುವ ವಾಮಂಜೂರಿನ ತಿರುವೈಲು ಪರಿಸರದ ಆಕರ್ಷಕ ಕಣಿವೆ ಪ್ರದೇಶದ ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಕಳೆದ 25 ವರ್ಷಗಳಿಂದ ರಾರಾಜಿಸುತ್ತಿರುವ ಮಾತ್ರವಲ್ಲದೇ, ಸಹಸ್ರ ಸಹಸ್ರ ವಿದ್ಯಾರ್ಥಿಗಳ ಉಜ್ಜಲ ಭವಿಷ್ಯಕ್ಕೆ ಬುನಾದಿ ಹಾಕಿಕೊಟ್ಟ ಜಾಣು ಶೆಟ್ಟಿ ಮೆಮೋರಿಯಲ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತದಲ್ಲಿರುವ ಅಮೃತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬೆಳ್ಳಿ ಹಬ್ಬ ಸಮಾರಂಭ ಜನವರಿ 18 ರಂದು ನಡೆಯಲಿದೆ. ಹಾಗೆಯೇ ಮೂರು ಅಂತಸ್ತಿನ ಸಕಲ ಸೌಕರ್ಯಗಳುಳ್ಳ ಸುಸಜ್ಜಿತ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಜನವರಿ 17 ರಂದು ಸಂಜೆ 5ರಿಂದ 10 ರ ತನಕ ಬಹಳ ವಿಜೃಂಭಣೆಯಿಂದ ನಡೆಯಲಿದೆ.
1925 ರಲ್ಲಿ ಶ್ರೀ ಕ್ಷೇತ್ರ ಅಮೃತೇಶ್ವರ ದೇವಸ್ಥಾನದ ಸುತ್ತಮುತ್ತದ ನೂರಾರು ಮಕ್ಕಳಿಗಾಗಿ ಸರಕಾರದಿಂದ ಸ್ಥಾಪಿಸಲ್ಪಟ್ಟ ಪ್ರಾಥಮಿಕ ಶಾಲೆ ನಂತರ 1963 ರಲ್ಲಿ ವಾಮಂಜೂರು ಪದವಿಗೆ ಸ್ಥಳಾಂತರಗೊಂಡು ತಿರುವೈಲು ಪರಿಸರದ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವುದಕ್ಕೆ ರಾಷ್ಟೀಯ ಹೆದ್ದಾರಿಯನ್ನು, ಗುಡ್ಡ ಪ್ರದೇಶವನ್ನು ನಡೆದುಕೊಂಡೇ ಬಹುದೂರ ಹೋಗಬೇಕಾದ ಪರಿಸ್ಥಿತಿ ಬಂದೊದಗಿತು. ಆ ಸಮಯದಲ್ಲಿ ಶಾಲೆಗೆ ತೆರಳಿದ ಅನೇಕ ಮಕ್ಕಳು ರಸ್ತೆ ಅಪಘಾತಕ್ಕೂ ಒಳಗಾದರು. ಈ ಸಂಧಿಗ್ಧ ಪರಿಸ್ಥಿತಿಯನ್ನು ಕಂಡ ಹೆಸರಾಂತ ಶಿಕ್ಷಣ ಪ್ರೇಮಿ, ಸಾಮಾಜಿಕ ಚಿಂತಕ ದಿವಂಗತ ಜಾಣು ಶೆಟ್ಟಿಯವರು ತನ್ನ ಈ ಪರಿಸರದ ಮಕ್ಕಳ ಉಜ್ಜಲ ಭವಿಷ್ಯಕ್ಕಾಗಿ ಯಾರಾದರೊಬ್ಬ ಪುಣ್ಯಾತ್ಮ ಪ್ರಾಥಮಿಕ ಶಾಲೆಯೊಂದನ್ನು ಇಲ್ಲಿ ಕಟ್ಟುವುದಕ್ಕೆ ಮುಂದಾಗಲಿ ಎಂದು ಗ್ರಾಮ ದೇವರಾದ ಶ್ರೀ ಅಮೃತೇಶ್ವರನಲ್ಲಿ ನಿರಂತರ ಪ್ರಾಥಿಸುತ್ತಿದ್ದರು ಎಂದು ಊರವರು ಇಂದಿಗೂ ಹೇಳುತ್ತಿದ್ದಾರೆ. ಹಿರಿಯರ ಪ್ರಾರ್ಥನೆಗೆ ಈಶ್ವರ ದೇವರೇ ಹರಸಿ ಪ್ರಸಾದ ನೀಡಿದರು ಎನ್ನಬಹುದಾದ ಜಾಣು ಶೆಟ್ಟರ ಸುಪುತ್ರ, ಬ್ಯಾಂಕ್ ಉದ್ಯೋಗಿ, ಥಾಣೆ ಪರಿಸರದ ಹೋಟೆಲ್ ಉದ್ಯಮಿ ಸೀತಾರಾಮ ಶೆಟ್ಟಿಯವರು1999 ರಲ್ಲಿ ತನ್ನ ತಂದೆಯ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟೊಂದನ್ನು ಸ್ಥಾಪಿಸಿ ಆ ಮೂಲಕ ಅಮೃತೇಶ್ವರ ಹಿರಿಯ ಪ್ರಾರ್ಥಮಿಕ ಕನ್ನಡ ಶಾಲೆಯನ್ನು ಸರಕಾರದ ಮಾನ್ಯತೆ ಪಡೆದು ಆರಂಭಿಸಿದರು ಎನ್ನುವುದೇ ಒಂದು ವಿಶೇಷ ಸಾಧನೆ ಎನ್ನಬಹುದು. ಸುಮಾರು 18 ವರ್ಷಗಳ ಕಾಲ ಎಲ್ಲಾ ಮಕ್ಕಳಿಗೆ ಶಿಕ್ಷಣದೊಂದಿಗೆ ಸಮವಸ್ತ್ರ, ಕಲಿಕಾ ಸಾಮಗ್ರಿ ನೀಡಿದ್ದಾರೆ. ಅಲ್ಲದೇ ದಾನಿಗಳ ನೆರವಿನಿಂದ ಮಧ್ಯಾಹ್ನದ ಧರ್ಮಾರ್ಥ ಬಿಸಿ ಊಟದ ವ್ಯವಸ್ಥೆಯನ್ನೂ ಮಾಡಿಕೊಂಡು ಬಂದಿದ್ದಾರೆ.
ಸುಮಾರು 36 ವರ್ಷಗಳ ನಂತರ ತಿರುವೈಲ್ ನ ಅದೇ ಪರಿಸರದಲ್ಲಿ ಪ್ರಾಥಮಿಕ ಶಾಲೆಯೊಂದು ಪುನರಾರಂಭಗೊಳ್ಳುವುದಕ್ಕೆ ಇದೇ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಪಡೆದ ಸೀತಾರಾಮ ಜೆ. ಶೆಟ್ಟಿಯವರು ಕಾರಣರಾಗುತ್ತಾರೆ ಎಂಬ ಊಹೆಯೂ ಊರವರಲ್ಲಿರಲಿಲ್ಲ. ಕಾರಣ ಮಾಧ್ಯಮಿಕ ಶಿಕ್ಷಣವನ್ನೇ ಮೊಟಕುಗೊಳಿಸಿ ಸರಸ್ವತಿ ಮತ್ತು ಲಕ್ಷ್ಮೀಯ ಹುಡುಕಾಟದಲ್ಲಿ ಪುಣ್ಯ ಭೂಮಿ ಮುಂಬಯಿಗೆ ಕಾಲಿರಿಸಿದವರು ಈ ಶಾಲೆಯ ಸಂಸ್ಥಾಪಕ ಸೀತಾರಾಮ ಜೆ. ಶೆಟ್ಟಿಯವರು. ಹಗಲಲ್ಲಿ ಹೋಟೆಲು, ಕ್ಯಾಂಟೀನುಗಳಲ್ಲಿ ದುಡಿದು ಹೈಸ್ಕೂಲ್, ಕಾಲೇಜು ಶಿಕ್ಷಣವನ್ನು ಪಡೆದು ವಿಜಯಾ ಬ್ಯಾಂಕ್ ನಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಂಡು ನಂತರ ಹುದ್ದೆಗೆ ರಾಜೀನಾಮೆ ನೀಡಿ ಸಣ್ಣ ಪುಟ್ಟ ಹೋಟೆಲು ವ್ಯವಸಾಯವನ್ನು ಮಾಡಿಕೊಂಡು, ತನ್ನ ಆದಾಯದ ಹೆಚ್ಚಿನ ಪಾಲನ್ನು ಈ ಶಾಲೆಯ ಅಭಿವೃದ್ಧಿಗಾಗಿ ವಿನಿಯೋಗಿಸಿದವರು. ಜೊತೆಗೆ ಅವರ ಯೋಜನೆ, ಯೋಚನೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾ ಬಂದವರು ಅವರ ಧರ್ಮಪತ್ನಿ ಡಾ. ಸತ್ಯಾ ಎಸ್. ಶೆಟ್ಟಿ ಮತ್ತು ಮಕ್ಕಳು.
1999ರಲ್ಲಿ ಅಮೃತೇಶ್ವರ ದೇವಸ್ಥಾನದ ಅಂಗಣದಲ್ಲಿ ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಕಾರ್ಯಧ್ಯಕ್ಷ ಡಾ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತದಿಂದ ಉದ್ಘಾಟಿಸಲ್ಪಟ್ಟ ಈ ಶಾಲೆ ಇಂದು ಸುಮಾರು 25 ಸಾವಿರ ಚದರ ಅಡಿ ವಿಸ್ತಾರವನ್ನೊಳಗೊಂಡ ಅತ್ಯಾಕರ್ಷಕ ಆಂಗ್ಲ ಮಾಧ್ಯಮ ಪ್ರೌಢಶಾಲೆಯಾಗಿ ರೂಪುಗೊಂಡು ವಾಮಂಜೂರು ಪರಿಸರದಲ್ಲಿ ರಾರಾಜಿಸುತ್ತಿದೆ. ಜೊತೆಗೆ ಒಂದೂವರೆ ಎಕರೆ ಜಾಗದಲ್ಲಿ ಬಹಳ ವಿಸ್ತಾರವಾದ ಕ್ರೀಡಾ ಮೈದಾನ ಮತ್ತು ಕಟ್ಟಡದೊಳಗೆ ಸುಮಾರು 400 ಜನ ಆಸೀನರಾಗಬಹುದಾದ ಸುಸಜ್ಜಿತವಾದ ಸಕಲ ಸೌಕರ್ಯಗಳುಳ್ಳ ರಂಗ ಮಂದಿರವೂ ಇದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೂ ಇಲ್ಲಿ ಎಲ್ಲಾ ತರಹದ ಆಧುನಿಕ ಸುವ್ಯವಸ್ಥೆ ಇದ್ದು, ಈ ವಿದ್ಯಾಸಂಸ್ಥೆ ಬೆಳೆದು ನಿಲ್ಲುವುದಕ್ಕೆ ವಿವಿಧ ರೀತಿಯಲ್ಲಿ ಸಹಕರಿಸಿದ ಶಿಕ್ಷಣ ಪ್ರೇಮಿಗಳು, ಅಭಿಮಾನಿಗಳು, ತನ್ನ ಚಿಂತನೆಗೆ ಸ್ವಂದಿಸಿ ಮಾರ್ಗದರ್ಶನ ನೀಡಿದವರೆಲ್ಲರಿಗೂ ಈ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಸೀತಾರಾಮ ಜೆ. ಶೆಟ್ಟಿ ದಂಪತಿ ಕೃತಜ್ಞತೆಗಳನ್ನು ಸಲ್ಲಿಸುವುದರ ಜೊತೆಗೆ ಈ ಉದ್ಘಾಟನಾ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುವಂತೆ ವಿನಂತಿಸಿಕೊಂಡಿದ್ದಾರೆ.
ಜನವರಿ ತಿಂಗಳ 17 ರಂದು ಸಂಜೆ 5 ಗಂಟೆಗೆ ಸರಿಯಾಗಿ ನೂತನ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮೂಡಬಿದ್ರಿ ಇದರ ಕಾರ್ಯಧ್ಯಕ್ಷ ಡಾ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಅವರು ಈ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಿದ್ದು, ಅಶೀರ್ವಚನ ನೀಡಲಿದ್ದಾರೆ.
ಚಿತ್ರ, ವರದಿ : ಪ್ರಕಾಶ್ ಹೆಗ್ಡೆ ಕುಂಠಿನಿ