ನಮ್ಮ ಬಂಟ ಬಾಂಧವರು ತಮ್ಮ ಸಂಸಾರ ನಿರ್ವಹಣೆಯ ಜೊತೆ ಜೊತೆಗೇ ಸಮಾಜ ಸೇವೆ, ಕಲಾಪೋಷಣೆ ಮಾಡುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಾ ತಮ್ಮ ಪ್ರಸಿದ್ಧಿ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಂಡು ಸಮಾಜದ ಆದರ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಅಂಥವರಲ್ಲಿ ಹೊಟೇಲ್ ಉದ್ಯಮಿ, ಕಲಾಪ್ರೇಮಿ, ಸಮಾಜ ಸೇವಕ ಕರ್ನೂರು ಶಂಕರ ಆಳ್ವರೂ ಒಬ್ಬರು. ಇವರೊಬ್ಬ ನಯವಿನಯ ತುಂಬಿದ ಸಜ್ಜನರು. ತಾನು ನುಡಿದಂತೆ ನಡೆವ ಸತ್ಯನಿಷ್ಠರು. ತುಂಬಾ ಯೋಚಿಸಿ ಮಾತನಾಡುವವರು. ಯಾರೊಬ್ಬರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸುತ್ತಾರೆ. ಯಕ್ಷಗಾನ, ಸಮಾಜ ಸೇವೆ, ಧಾರ್ಮಿಕ ಚಟುವಟಿಕೆಯ ಕ್ಷೇತ್ರಗಳಲ್ಲಿ ಪ್ರಚಲಿತವಿರುವ ಹೆಸರುಗಳಲ್ಲಿ ಇವರೂ ಒಬ್ಬರು. ಇವೆಲ್ಲವುದಕ್ಕೆ ಕಲಶ ಪ್ರಾಯವೆಂಬಂತೆ ಕಲಾ ಸಂಘಟನೆಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉದಾರ ಮನಸ್ಸಿನಿಂದ ಗುಪ್ತದಾನ ನೀಡುವ ಪುಣ್ಯಾತ್ಮರು.
ಇವರ ವ್ಯಕ್ತಿತ್ವ ಜನಮಾನ್ಯವಾದುದು. ಅಹಮಿಕೆಯ ಲವಲೇಶವೂ ಇಲ್ಲದ ಸಹಜ ಸರಳ ಹಾಗೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಯಾವುದೇ ಮುಜುಗರವಿಲ್ಲದೆ ಹೇಳುವವರು. ಆಳ್ವರು ಒಬ್ಬ ಸರಸ ಭಾಷಣಗಾರ. ತಾಳಮದ್ದಳೆ ಯಕ್ಷಗಾನ ಕ್ಷೇತ್ರಗಳ ವಾಗ್ಮಿ. ಹವ್ಯಾಸಿ ಕಲಾವಿದ. ಇವರ ಕೆಲವು ಪಾತ್ರಗಳನ್ನು ಪಾತ್ರದ ಠೀವಿ ಹೆಜ್ಜೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಬ್ಬ ವೃತ್ತಿಪರ ಕಲಾವಿದನಲ್ಲಿರಬಹುದಾದ ಸತ್ವ ಇವರಲ್ಲಿ ಅಂತಸ್ಥವಾಗಿದೆ ಎಂದು ಯಾರಿಗಾದರೂ ಅನಿಸದೆ ಇರದು. ಶ್ರೀಯುತರ ರಕ್ತಬೀಜ ಪಾತ್ರ ಮಹಾರಾಷ್ಟ್ರದ ಕಲಾವಲಯದಲ್ಲಿ ವ್ಯಾಪಕ ಕೀರ್ತಿ ಪಡೆದಿದೆ. ಉಳಿದಂತೆ ದೇವೇಂದ್ರ, ಅರುಣಾಸುರ, ದಾರಿಕಾಸುರ, ಈಶ್ವರ ಮೊದಲಾದ ಪಾತ್ರಗಳಿಗೆ ಹೇಳಿ ಮಾಡಿಸಿದ ಆಳ್ತನ ಆಳ್ವರದು.
ವಸಾಯಿ ಪರಿಸರದ ಮಾತ್ರವಲ್ಲದೇ ಅನ್ಯ ಪ್ರದೇಶದ ಹೊಟೇಲ್ ಉದ್ಯಮಿಗಳ ಜೊತೆಗೆ ಆತ್ಮೀಯ ಸಂಬಂಧ ಹೊಂದಿದ ಆಳ್ವರು ಪರಿಸರದ ಸಂಘ ಸಂಸ್ಥೆಗಳು ಗೌರವ ಅತಿಥಿ ಎಂಬಂತೆ ಆಹ್ವಾನಿಸಿದರೆ ಯಾವುದೇ ಗಂಭೀರತೆ ತೋರಿಸದೆ ವಿನಯದಿಂದ ಒಪ್ಪಿಕೊಳ್ಳುವ ಜಾಯಮಾನದವರು. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲವೆಂದಲ್ಲಿ ಫೋನ್ ಮಾಡಿ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವ ನೀತಿವಂತರು. ಶಿಷ್ಟಾಚಾರ ಸಂಪನ್ನರು. ವಸಾಯಿ ಪರಿಸರದ ಹೆಚ್ಚಿನ ಸಂಘ ಸಂಸ್ಥೆಗಳೊಂದಿಗೆ ಸಕ್ರಿಯರಾಗಿರುವ ಆಳ್ವರು ಪ್ರಮುಖ ಪದ ಪಡೆದು ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಸಮರ್ಥ ಸಂಘಟಕರು. ಶ್ರೀಯುತರು ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ, ಯಕ್ಷರಕ್ಷಣಾ ಕಲಾವೇದಿಕೆಯ ಗೌರವಾಧ್ಯಕ್ಷರಾಗಿ, ಮೀರಾಡಹಣೂ ಬಂಟ್ಸ್ ನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವರಲ್ಲದೆ ಕರ್ನಾಟಕ ಸಂಘ ವಸಾಯಿ ಇದರ ಜತೆ ಕಾರ್ಯದರ್ಶಿಯಾಗಿ, ವಸಾಯಿ ಹೋಟೆಲ್ ಓನರ್ಸ್ ಎಸೋಸಿಯೇಶನ್ ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಮಹತ್ತರ ಕಾರ್ಯ ಸಾಧಿಸಿದ್ದಾರೆ. ಯಕ್ಷಕಲಾ ವೇದಿಕೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಂಸ್ಥೆಯಲ್ಲಿ ವೇಷಧಾರಿಯಾಗಿ ಜನಪ್ರಿಯತೆ ಪಡೆದಿರುತ್ತಾರೆ.
ಶ್ರೀಯುತರು ಮೂಲತಃ ಪುತ್ತೂರು ತಾಲೂಕಿನ ಕರ್ನೂರಿನವರು. ಅಲ್ಲಿನ ನಡುಮನೆ ಎಂಬ ಪ್ರತಿಷ್ಠಿತ ಬಂಟ ಕುಟುಂಬದಲ್ಲಿ ಜನಿಸಿದವರು. ಹುಟ್ಟೂರಿನಲ್ಲಿ ಶಿಕ್ಷಣ ಪೂರೈಸಿ ಮಹಾನಗರ ಮುಂಬಯಿ ಸೇರಿ ಹೊಟೇಲ್ ಉದ್ಯಮದಲ್ಲಿ ಯಶಸ್ಸು ಕಂಡ ಬಳಿಕ ವಸಾಯಿ ಪ್ರದೇಶದಲ್ಲಿ ಹೊಟೇಲ್ ಉದ್ಯಮ ಪ್ರಾರಂಭಿಸಿ ಹಂತ ಹಂತವಾಗಿ ಆರ್ಥಿಕ ಭದ್ರತೆಯ ಭಾವ ಮೂಡಿದ ಮೇಲೆ ತನ್ನ ಆಸಕ್ತಿಯ ಕ್ಷೇತ್ರಗಳಾದ ಸಮಾಜ ಸೇವೆ, ಸಂಘಟನೆ, ಕಲಾಸಂಘಟನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಜೀವನದಲ್ಲಿಯೂ ಗುರುತಿಸಿಕೊಂಡರು. ಸುಶೀಲೆ ಸದ್ಗೃಹಿಣಿ ಶ್ರೀಮತಿ ಸುಶೀಲಾ ಎಸ್ ಆಳ್ವ ಮತ್ತು ಪ್ರತಿಭಾವಂತ ಪುತ್ರ ಶಶಾಂಕ್ ಎಸ್ ಆಳ್ವರೊಂದಿಗಿನ ಸಂತೃಪ್ತ ಸಾಂಸಾರಿಕ ಜೀವನ ಆಳ್ವರದ್ದು.
ಹುಟ್ಟೂರಿನಲ್ಲೂ ತನ್ನ ಸಾರ್ವಜನಿಕ ಜೀವನದಲ್ಲಿ ಆಳ್ವರು ಹಿಂದುಳಿದವರಲ್ಲ. ನಡುಮನೆ ಫ್ಯಾಮಿಲಿ ಟ್ರಸ್ಟ್ ಇದರ ಅಧ್ಯಕ್ಷರಾಗಿ, ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಅಮೂಲ್ಯ ಸೇವೆ ಸಲ್ಲಿಸಿದ ಕೃತಾರ್ಥ ಭಾವ ಆಳ್ವರಿಗಿದೆ. ಬಂಟರ ಸಂಘ ಮುಂಬಯಿ ಇದರ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಣೆ ಮಾಡಿದ ಹೆಗ್ಗಳಿಕೆ ಕರ್ನೂರು ಅವರಿಗಿದೆ. ತಾನು ಕಲಿತ ಕರ್ನೂರು ವಿದ್ಯಾಸಂಸ್ಥೆಗೆ ನೂತನ ಪ್ರವೇಶ ದ್ವಾರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಜವಾಬ್ದಾರಿ ವಹಿಸಿದ ಆಳ್ವರು ತಾನು ಕಲಿತ ಶಿಕ್ಷಣ ಸಂಸ್ಥೆಯ ಕುರಿತು ಪ್ರೀತಿ ಅಭಿಮಾನ ವ್ಯಕ್ತ ಪಡಿಸಿದ್ದಾರೆ. ಇನ್ನು ಊರಿನ ಈಶ್ವರ ಮಂಗಲದಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಧಾರ್ಮಿಕ ಉತ್ಸವದ ಒಂದು ದಿನದ ಅನ್ನಸಂರ್ಪಣೆಯ ಜವಾಬ್ದಾರಿಯನ್ನೂ ಕರ್ನೂರು ಅವರು ವಹಿಸಿಕೊಂಡು ದೇವರ ಕುರಿತ ಆಸ್ಥೆ ಶ್ರದ್ಧೆಯನ್ನು ತೋರಿಸುತ್ತಾರೆ.
ತನ್ನ ಮಾತಾಪಿತರ ಹೆಸರಿನಲ್ಲಿ ದೇವಸ್ಥಾನಕ್ಕೆ ನೀಡುವ ಈ ಪುಣ್ಯ ಪ್ರದ ಅನ್ನ ಸಂತರ್ಪಣೆ ಅವರಿಗೆ ತನ್ನ ಮಾತಾಪಿತರ ಮೇಲಿರುವ ಭಕ್ತಿ ಗೌರವಗಳನ್ನು ತೋರಿಸುತ್ತದೆ. ಹೀಗೆ ಬಾಲ್ಯದ ಶಾಲಾ ಜೀವನದಿಂದಲೇ ಪ್ರತಿಭಾವಂತ ವಿದ್ಯಾರ್ಥೀಯಾಗಿ ಯಕ್ಷಗಾನ, ನಾಟಕ, ಭಾಷಣ, ಛದ್ಮವೇಷ ಇವುಗಳಲ್ಲಿ ತನ್ನ ಪ್ರತಿಭೆಯನ್ನು ತೋರಿಸುತ್ತಿದ್ದವರು ಕ್ರಮೇಣ ಓರ್ವ ಪ್ರಬುದ್ಧ ಕಲಾವಿದರಾಗಿಯೂ ಗುರುತಿಸಿಕೊಂಡರು. ಹೀಗೆ ಹತ್ತಾರು ಕ್ಷೇತ್ರಗಳ ಮೌನ ಸಾಧಕನಾದರೂ ಅತ್ಯಂತ ವಿನಮ್ರ ವ್ಯಕ್ತಿತ್ವ ಹೊಂದಿದ ಆಳ್ವರು ಓರ್ವ ಯಶಸ್ವಿ ಉದ್ಯಮಿಯಾಗಿಯೂ ಜನಪ್ರಿಯತೆ ಪಡೆದಿದ್ದಾರೆ. ಆರಕ್ಕೇರದೆ ಮೂರಕ್ಕಿಳಿಯದೆ ನಗರ ಜೀವದಲ್ಲಿಯೂ ಸ್ಥಾಯೀ ಜೀವನ ಶೈಲಿಯನ್ನು ತನ್ನದಾಗಿಸಿದ ಆದರ್ಶ ವ್ಯಕ್ತಿ ಕರ್ನೂರು ಶಂಕರ ಆಳ್ವರ ವ್ಯಾಪಾರ ವ್ಯವಹಾರ ವೃದ್ಧಿಸಲಿ. ಭವಿಷ್ಯದಲ್ಲಿ ಸುಖ, ಸಮೃದ್ಧಿ,ಆರೋಗ್ಯ, ನೆಮ್ಮದಿಯಿಂದ ಕೂಡಿದ ದೀರ್ಘಾಯುಷ್ಯ ಅವರಿಗಿರಲಿ. ಮುಂಬರುವ ನವನವೀನ ಸಂವತ್ಸರ ಅವರ ಕುಟುಂಬಕ್ಕೆ ಹೊಸ ಹರುಷದ ಹೊಂಬೆಳಕ ಹೊತ್ತು ತರಲೆಂದು ಸಮಸ್ತ ಬಂಟ ಸಮಾಜ ಬಾಂಧವರ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.
ಸರ್ವೇ ಜನಾ ಸುಖಿನೋ ಭವಂತು. ಶುಭಮಸ್ತು.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು