ಜೀವನದಲ್ಲಿ ಉನ್ನತ ಧ್ಯೇಯ, ಕಠಿಣ ಪರಿಶ್ರಮ, ಸಾಧನೆಯ ಛಲ, ನಡೆ ನುಡಿಯಲ್ಲಿ ಪ್ರಾಮಾಣಿಕತೆ ಇವುಗಳು ಜೀವನದ ಯಶಸ್ಸಿನ ಗುಟ್ಟು ಎನ್ನುವುದು ಸರ್ವೇಸಾಮಾನ್ಯವಾದ ಮಾತು. ಆದರೆ ಇದೆಲ್ಲವನ್ನೂ ಜೀವನದಲ್ಲಿ ಅನುಸಂಧಾನ ಮಾಡಿಕೊಂಡು, ಮುನ್ನಡೆದು ಸಾಧಕರಾಗಿ ಕಾಣಸಿಗುವವರು ವಿರಳ. ಇಂತವರ ಸಾಲಿನಲ್ಲಿ ವಿಶೇಷವಾಗಿ ಕಂಡುಬರುವ ಹುಬ್ಬಳ್ಳಿ ಧಾರವಾಡ ಪರಿಸರದಲ್ಲಿ ವೃತ್ತಿಯಲ್ಲಿ ನಿಪುಣರಾಗಿ, ಸಮಾಜಸೇವಕರಾಗಿ, ಜನಾನುರಾಗಿಯಾಗಿ ತುಳು ಕನ್ನಡಿಗರಲ್ಲಿ ಅನ್ಯೋನ್ಯತೆಯೊಂದಿಗೆ ಬೆರೆತು ಬಾಳುವ, ಯಾವುದೇ ಪ್ರಚಾರವನ್ನು ಬಯಸದೇ, ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ವ್ಯಕ್ತಿತ್ವವೆಂದರೆ ಅದು ಸಿ.ಎ. ಎಸ್.ಬಿ.ಶೆಟ್ಟಿ ಯವರು. ಎಡಗೈಯಲ್ಲಿ ನೀಡಿದ್ದು ಬಲಗೈಗೆ ತಿಳಿಯಬಾರದು ಎನ್ನುವ ಮನೋಧರ್ಮವನ್ನು ರೂಢಿಸಿಕೊಂಡು ಯಾರೇ ನೆರವಿಗೆ ಬಂದರೂ ತನ್ನಿಂದಾದ ಸಹಾಯ ಮಾಡಿ ಪರೋಪಕಾರ ಧರ್ಮದಲ್ಲಿ ಧನ್ಯತೆಯನ್ನು ಕಾಣುವ ಇವರ ಮುಖದಲ್ಲಿ ಸದಾ ಮಂದಹಾಸ, ಮೃದು ಮಾತು ಎಲ್ಲರನ್ನೂ ಸ್ನೇಹಭಾವದಿಂದ ಕಾಣುವ ಇವರ ಸ್ವಭಾವ ಎಂತಹವರನ್ನೂ ಆಕರ್ಷಿಸದೆ ಇರದು.
ಶ್ರೀ. ಸಿ.ಎ. ಎಸ್. ಬಿ. ಶೆಟ್ಟಿಯವರು 1975 ರಲ್ಲಿ ತಮ್ಮ ಲೆಕ್ಕಪರೀಶೋಧನಾ ವೃತ್ತಿಯನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ (ಶ್ರೀ. ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪ), ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ಹಾಗೂ ಭಾರತೀಯ ಲೆಕ್ಕ ಪರೀಶೋಧಕರ ಹುಬ್ಬಳ್ಳಿ ಶಾಖೆಯ ಅಧ್ಯಕ್ಷರಾಗಿ, ಅತ್ಯುತ್ತಮ ಶಾಖೆ ಎಂದು ಪ್ರಶಸ್ತಿ ಪಡೆದಿದ್ದಾರೆ. ಇವರು ರೋಟರಿ ಕ್ಲಬ್ ಹುಬ್ಬಳ್ಳಿ, ಇದರ ಅಧ್ಯಕ್ಷರಾಗಿ ಹಾಗೂ ರೋಟರಿ ಜಿಲ್ಲಾ ತರಬೇತುದಾರರಾಗಿ, ರೋಟರಿ ಜಿಲ್ಲಾ 3170 ಇದರ ಉಪ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವರು. ಇವರು ಹಲವಾರು ಸೇವಾ ಸಂಸ್ಥೆಗಳಲ್ಲಿ ಹಾಗೂ ವಿದ್ಯಾಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು, ಅನಿತಾ ಎಜುಕೇಶನ್ ಸೊಸೈಟಿಯ ಶ್ರೀ ದುರ್ಗಾ ಆಂಗ್ಲ ಮಾದ್ಯಮ ಶಾಲೆ, ಕೊಕರ್ಣೇ, ಜಿಲ್ಲಾ: ಉಡುಪಿ ಇದರ ಅಧ್ಯಕ್ಷರಾಗಿ, ಆರ್.ಎನ್.ಎಸ್. ವಿದ್ಯಾನಿಕೇತನ ಹುಬ್ಬಳ್ಳಿ ಇದರ ಆಡಳಿತ ಮಂಡಳಿಯ ಸದಸ್ಯರಾಗಿ ಹಾಗೂ ಡಾ. ಡಿ.ಜಿ.ಶೆಟ್ಟಿ ಎಜುಕೇಶನ್ ಸೊಸೈಟಿ, ಧಾರವಾಡ ಇದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಯುತ. ಸಿ.ಎ. ಎಸ್.ಬಿ.ಶೆಟ್ಟಿ ಇವರ ಅನುಭವ ಮತ್ತು ಪರಿಣಿತಿಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಸರಕಾರವು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಇದರ ಸ್ವತಂತ್ರ ನಿರ್ದೇಶಕರನ್ನಾಗಿ ಐದು ವರ್ಷಗಳ ಕಾಲ ನೇಮಕಗೊಂಡಿರುತ್ತಾರೆ. ಇವರ ಅಪಾರ ಸೇವೆಯನ್ನು ಪರಿಗಣಿಸಿ, ರೋಟರಿ ಸಂಸ್ಥೆ, ಲೆಕ್ಕ ಪರಿಶೋಧನಾ ಸಂಸ್ಥೆ ಹಾಗೂ ಪ್ರತಿಷ್ಠೀತ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿರುತ್ತಾರೆ.
ಶ್ರೀಯುತರು ದಿವ್ಯಾಂಗರ ಸೇವೆಗಾಗಿ ಮುಡಿಪಾಗಿರುವ ರಾಷ್ಟ್ರೀಯ ಸಂಸ್ಥೆಯ ’ಸಕ್ಷಮ್’ ಉತ್ತರ ಕರ್ನಾಟಕ ಪ್ರಾಂತ್, ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ 13 ಜಿಲ್ಲೆಗಳಲ್ಲಿರುವ ದಿವ್ಯಾಂಗರಿಗೆ ತಮ್ಮಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಶ್ರೀಯುತರು ಆದಾಯ ತೆರಿಗೆ, ಸರಕು ಮತ್ತು ಸೇವಾ ತೆರಿಗೆ ಹಾಗೂ ಲೆಕ್ಕ ಪರೀಶೋಧನೆಯ ವಿಷಯಗಳಲ್ಲಿ ಹಲವಾರು ಪ್ರಭಂಧಗಳನ್ನು ಪ್ರಕಟಿಸಿರುವುದಲ್ಲದೇ, ಮೇಲಿನ ವಿಷಯಗಳಲ್ಲಿ ಹಲವಾರು ಚರ್ಚಾಕೂಟದಲ್ಲಿ ಭಾಗವಹಿಸಿರುವರು ಮತ್ತು ಹಲವಾರು ಪ್ರತೀಷ್ಠಿತ ವಿದ್ಯಾಸಂಸ್ಥೆಗಳು, ಬ್ಯಾಂಕಗಳು, ಇನ್ಸೂರೆನ್ಸ್ ಕಂಪನಿಗಳು ಹಾಗೂ ಪ್ರತೀಷ್ಠಿತ ಸಂಸ್ಥೆಗಳ ಲೆಕ್ಕ ಪರೀಶೋಧಕರಾಗಿ ಹಾಗೂ ತೆರಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೇವಲ ವೃತ್ತಿಯಲ್ಲಿ ಯಶಸ್ಸನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವಿರದೆ ತಾನು ಬಂದ ಸಮಾಜವನ್ನೂ ಪ್ರೀತಿಸಿಕೊಂಡು, ತಾನಾರ್ಜಿಸಿದ ಸಂಪತ್ತಿನ ಒಂದಂಶವನ್ನು ಸಮಾಜದ ಏಳಿಗೆಗೂ ವ್ಯಯಿಸುತ್ತಾ ಕೇವಲ ಬಂಟ ಸಮಾಜವಲ್ಲದೇ ಹುಬ್ಬಳ್ಳಿ ಧಾರವಾಡ ಭಾಂಧವರ ಪ್ರೀತಿ ವಿಸ್ವಾಸಗಳಿಗೂ ಕಾರಣರಾಗಿದ್ದಾರೆ. ಧರ್ಮಪತ್ನಿ ಶ್ರೀಮತಿ. ಸುಗಂಧಿ ಶೆಟ್ಟಿ, ಪುತ್ರಿಯರಾದ ನಯನಾ ಶೆಟ್ಟಿ, ವಿನಯಾ ಶೆಟ್ಟಿ ಹಾಗೂ ಪುತ್ರ ಕಾರ್ತಿಕ ಶೆಟ್ಟಿ (ಇವರು ಲೆಕ್ಕ ಪರೀಶೋಧಕರು) ಎಂಬ ಮೂರು ಮಕ್ಕಳೊಂದಿಗೆ ಸಂತೃಪ್ತ ಬದುಕು ಅವರದಾಗಿದ್ದು, ಭವಿಷ್ಯದಲ್ಲಿ ದೇವರು ದೀರ್ಘಾಯುಷ್ಯ, ಆರೋಗ್ಯ ಭಾಗ್ಯ, ಸುಖ ಸಂಪತ್ತುಗಳನ್ನು ನೀಡಿ ದಯಪಾಲಿಸಲಿ ಎಂದು ಶುಭವನ್ನು ಹಾರೈಸೋಣ.