ಅರಿಶಿಣ ಪ್ರಮುಖ ವಾಣಿಜ್ಯ ತೋಟಗಾರಿಕೆಯ ಬೆಳೆಗಳಲ್ಲಿ ಒಂದು. ಹೇರಳ ಔಷಧೀಯ ಗುಣಗಳನ್ನು ಹೊಂದಿರುವ ಮಸಾಲೆ ಬಂಗಾರ ಎಂದೇ ಹೆಸರಿರುವ ಅರಶಿನ ಒಂದು ಪ್ರಮುಖ ಸಾಂಬಾರು ಪದಾರ್ಥ. ತೆಂಗು, ಕಂಗು, ಬಾಳೆ, ತೋಟಗಳಲ್ಲಿ ಉಪಬೆಳೆಯಾಗಿ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ಅರಶಿಣ ಅಲ್ಪಾವಧಿಯ ಬೆಳೆ. ಅತ್ಯಂತ ಕಡಿಮೆ ಅವಧಿಯಲ್ಲಿ ಅಧಿಕ ಇಳುವರಿ ಪಡೆಯಬಹುದು. ಬೆಳೆ ಸ್ಥಿರತೆ ಹಾಗೂ ಉತ್ತಮ ಲಾಭಕ್ಕಾಗಿ ಅರಶಿಣ ಬೆಳೆಯನ್ನು ಆಶ್ರಯಿಸುತ್ತಾರೆ.
ಅರಶಿಣ ಎಲೆಯ ಮಹತ್ವರ ಪ್ರಯೋಜನಗಳು :
ಗಡ್ಡೆ ಕಟಾವಿಗೆ ಬರುವ ಮುನ್ನ ಅರಶಿಣದ ಎಲೆಯನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದು. ಶ್ರಾವಣ, ದೀಪಾವಳಿ, ನಾಗರ ಪಂಚಮಿ, ನೂಲು ಹುಣ್ಣುಮೆ, ಕೃಷ್ಣ ಜನ್ಮಾಷ್ಟಮಿ ಹೀಗೆ ಅನೇಕ ಹಬ್ಬಗಳ ಖಾದ್ಯದಲ್ಲಿ ಅರಶಿಣ ಎಲೆ ಬಳಸುತ್ತಾರೆ. ಅರಶಿಣ ಎಲೆಗೆ ಕಡೆದ ಕೊಚ್ಚಲಕ್ಕಿ ಬಂದ ಹಚ್ಚಿದ ಎಲೆಗೆ ಬೆಲ್ಲ ತೆಂಗಿನ ತುರಿ ಪಸರಿಸಿ ಆವಿಯಲ್ಲಿ ಬೇಯಿಸಿದರೆ ಬರುವ ರುಚಿ ಹಾಗೂ ಪರಿಮಳಕ್ಕೆ ಸಾಟಿ ಇಲ್ಲ. ಹಬ್ಬ ಹರಿದಿನಗಳಲ್ಲಿ ಬಳಸುವ ಅರಶಿಣ ಎಲೆಗೆ ಒಳ್ಳೆಯ ಮಾರುಕಟ್ಟೆ ಲಭ್ಯವಿರುತ್ತದೆ. ಸಾಂಬಾರು ಪದಾರ್ಥಗಳಲ್ಲಿ ಅಗ್ರಸ್ಥಾನ ಪಡೆದ ಅರಶಿಣ ಎಲೆಯಲ್ಲಿ ಔಷಧೀಯ ಗುಣವಿದೆ. ಆಧುನಿಕ ವಿಜ್ಞಾನಕ್ಕೂ ನಿಲುಕದ ಹಲವು ಸತ್ಯಗಳು ಪ್ರಕೃತಿಯಲ್ಲಿರುವ ಸತ್ಯಗಳಲ್ಲಿ ಅರಶಿಣವೂ ಒಂದು. ಜೀರ್ಣ ಕ್ರಿಯೆಗೆ ಉತ್ತಮ. ಸಂಧಿವಾತ ನಿವಾರಕವು ಹೌದು. ಅರಶಿಣ ಎಲೆಯಲ್ಲಿ ಕುರ್ಕುಮಿನ್ ಅಂಶವಿದ್ದು ಊರಿಯುತ ನಿವಾರಕ ಹಾಗೂ ಕ್ಯಾನ್ಸರ್ ನಿವಾರಣ ಗುಣವಿದೆ. ಮೊಡವೆ ಕಲೆ ನಿವಾರಣೆಗೆ ಅರಶಿಣ ಎಲೆಯ ಲೇಪನ ನಿಯಮಿತವಾಗಿ ಬಳಸಬಹುದು.
ಧಾರ್ಮಿಕವಾಗಿ ಅರಶಿಣ :
ಶಾಸ್ತ್ರದಲ್ಲಿ ಅರಶಿಣ ಬಂಗಾರಕ್ಕಿಂತ ಶ್ರೇಷ್ಠ ಎನ್ನುತ್ತಾರೆ. ಅರಶಿಣ ಭಾರತದ ಪುರಾತನ ಮಸಾಲಾ ಪದಾರ್ಥವಾದರೂ ಇದಕ್ಕೆ ಧಾರ್ಮಿಕ, ವೈಜ್ಞಾನಿಕ ಮಹತ್ವವಿದೆ. ಹಲವಾರು ಔಷಧೀಯ ಗುಣಗಳ ಆಗರವಾಗಿರುವ ಅರಶಿಣ ಮಂಗಳ ದ್ರವ್ಯವಾಗಿ ವಿವಿಧ ಶುಭ ಸಮಾರಂಭಗಳಲ್ಲಿ ಧಾರ್ಮಿಕ ಆಚರಣೆಗಳಲ್ಲಿ ಮಂಗಳ ದ್ರವ್ಯವಾಗಿ ಬಳಸಲಾಗುತ್ತದೆ. ಹಳದಿ ಬಣ್ಣ ಜ್ಞಾನದ ಸಂಕೇತ ಎನ್ನುತ್ತಾರೆ. ಇದನ್ನು ಎಲ್ಲಾ ಧರ್ಮದವರು ಧಾರ್ಮಿಕವಾಗಿ ಉಪಯೋಗಿಸುತ್ತಾರೆ. ಪೂಜಾ ದ್ರವ್ಯದಲ್ಲಿ ಅರಶಿಣಕ್ಕೆ ಅಗ್ರಸ್ಥಾನ. ಅರಶಿಣ ಕೊಂಬು ರೂಪದ ಗಣಪತಿ ಮಾಡಿ ಅದಕ್ಕೆ ಗರಿಕೆ ಅರ್ಪಿಸಿದರೆ ಬಹುಶುದ್ದ ಹಾಗೂ ಪವಿತ್ರವಂತೆ. ಕೆಲವೆಡೆ ಅರಶಿಣ ಕೊಂಬು ಕಟ್ಟಿದ ಅರಶಿಣ ಲೇಪಿತ ನೂಲನ್ನು ವರನು ವಧುವಿಗೆ ತಾಳಿರೂಪದಲ್ಲಿ ಕಟ್ಟುವ ಕ್ರಮವಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ಮದುಮಕ್ಕಳು ಮದುವೆಗೆ ಮೊದಲು ಅರಶಿಣ ಮಿಶ್ರಿತ ತೆಂಗಿನ ಕಾಯಿ ಹಾಲು ಲೇಪಿಸುತ್ತಾರೆ ಹಾಗೂ ಮುಸ್ಲಿಮರಲ್ಲಿ ಮದುಮಗಳು ಮದರಂಗಿಯಿಡುವ ಮೊದಲು ಅರಶಿಣ ಸ್ಪರ್ಶಿಸಿಯೇ ಮದರಂಗಿ ಇಡುವ ಕ್ರಮವಿದೆ.
ಅರಶಿಣದ ಹಳದಿ ಬಣ್ಣ ಶ್ರೀಮನ್ನಾರಾಯಣನಿಗೆ ಪ್ರೀತಿಯ ಬಣ್ಣ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಶ್ರೀ ಕೃಷ್ಣ ಅರಶಿಣ ಬಣ್ಣದ ಬಟ್ಟೆಗಳನ್ನು ಧರಿಸುತ್ತಿದ್ದನಂತೆ. ಬೌದ್ಧ ಭಿಕ್ಷುಗಳು ನಿಜ ಅರಶಿಣದಿಂದ ಡೈಮಾಡಿದ ಬಟ್ಟೆಯನ್ನು ಧರಿಸುತ್ತಾರೆ. ಅರಶಿಣವನ್ನು ಆಧ್ಯಾತ್ಮಿಕ ಶುದ್ದಿಕರಣಕ್ಕೂ ಬಳಸಲಾಗುತ್ತದೆ. ಸಮುದ್ರ ಮಂಥನ ಕಾಲದಲ್ಲಿ ಆದಿಶಕ್ತಿ ಸ್ವರೂಪಳಾದ ಶ್ರೀ ಮಹಾಲಕ್ಷ್ಮಿಯ ಜೊತೆ ಬಳೆ, ಹೂ, ಕುಂಕುಮದೊಂದಿಗೆ ಅರಶಿಣವೂ ಬಂತು ಎನ್ನಲಾಗಿದೆ. ಸೀತಾದೇವಿ ಅಶೋಕವನದಲ್ಲಿ ರಾವಣನಿಂದ ಬಂಧಿಸಲ್ಪಟ್ಟಾಗ ಹಣೆಯ ತಿಲಕವಿಲ್ಲದೆ ಮದರಂಗಿ ಸೊಪ್ಪು ಬಳಸುವುದನ್ನು ಗಮನಿಸಿದ ಮಂಡೋದರಿ ಸೀತೆಗೆ ಕಳುಹಿಸುತ್ತಿರುವ ಊಟದ ಬಟ್ಟಲಲ್ಲಿ ಸ್ವಲ್ಪ ಅರಶಿಣ ಹಾಕಿ ಕೊಡುತ್ತಿದ್ದಳಂತೆ. ರಜನಿ, ರಾತ್ರಿ, ಯಶೋಪ್ರಿಯ, ಗೌರಿ, ವರವರ್ಣಿನಿ, ಕ್ರಿಮಿಸಂಹಾರಣಿ, ಅರಶಿಣ, ಹಳದಿ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ.
ಅರಶಿಣ ಬೆಳೆ :
ಭಾರತೀಯ ಸಾಂಬಾರು ಸಂಶೋಧನಾ ಸಂಸ್ಥೆ ಅರಶಿಣದಲ್ಲಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ ಹೊಸ ತಳಿಯನ್ನು ಬಿಡುಗಡೆ ಮಾಡಿ ಹೆಚ್ಚಿನ ಇಳುವರಿ ನೀಡುವ “ಪ್ರತಿಭಾ” ಎಂಬ ಹೊಸ ತಳಿಯನ್ನು ಬಿಡುಗಡೆ ಮಾಡಿದೆ. ಮೈಸೂರಿನ ತೋಟಗಾರಿಕಾ ಇಲಾಖೆ ಕರ್ನಾಟಕ ಹಾಗೂ ಕೇರಳದಲ್ಲಿ ಅರಶಿಣ ಗಡ್ಡೆಗಳಿಂದ ಸಾಂಪ್ರದಾಯಿಕ ವಿಧಾನಗಳಲ್ಲಿ ಉತ್ಪಾದಿಸುವುದು ಶ್ರಮದಾಯಕ ಕೆಲಸ ಮತ್ತು ಹೆಚ್ಚು ಗಡ್ಡೆಗಳು ಬೇಕಾಗುತ್ತವೆ. ಆದರೆ ಪ್ರತಿಭಾ ಅರಶಿಣ ತಳಿಯನ್ನು ಬಳಸುವುದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಇಳುವರಿ ಪಡೆಯಬಹುದು. ಈ ತಳಿ ನಾಟಿ ಮಾಡಿ ಗಡ್ಡೆಗಳು ಚಿಗುರಿ ಒಡೆದು ಸಮೃದ್ಧವಾಗಿ ಕಟಾವಿಗೆ ಬರುತ್ತದೆ. ಅಲ್ಲದೇ ಅರಶಿಣಕ್ಕೆ ರೋಗ ಬಾಧೆ ಕಡಿಮೆ ಆದ್ದರಿಂದ ಬೆಳೆ ಫಲಪ್ರದ. ಇದರ ಬೆಳೆಗೆ ಮಣ್ಣು ತೇವಾಂಶದಿಂದ ಕೂಡಿದರೆ ಉತ್ತಮ ಹಟ್ಟಿ ಗೊಬ್ಬರ ಹಾಕಿ ಉಳುಮೆ ಮಾಡಿ ಎರಡು ಅಡಿ ಅಗಲ ಒಂದು ಅಡಿ ಎತ್ತರ ಮಾಡಿ, ಅಂದರೆ ಏರಿಗಳನ್ನು ತಯಾರಿಸಿ 2 ಅಡಿ ಅಂತರದಲ್ಲಿ ಬಿತ್ತನೆ ಮಾಡಿದರೆ ನೆಲದಡಿ ಬೆಳೆಯುವ ಅರಶಿಣ ಗಡ್ಡೆಯಿಂದ ಗಿಡ ಚಿಗುರಿ ಮೇಲೆ ಬಂದಾಗ ಅರಶಿಣ ಗಡ್ಡೆ ನೆಲದಡಿಯಲ್ಲಿ ಬೆಳೆಯುತ್ತಾ ಹೋಗುತ್ತದೆ. ಎಲೆ ಹಣ್ಣಾಗುತ್ತಾ ಹೋಗಿ ಸಂಪೂರ್ಣ ಒಣಗುತಿದ್ದಂತೆ ಗಡ್ಡೆ ಕೀಳಬೇಕು. ಮಣ್ಣಿನಿಂದ ಬೇರ್ಪಡಿಸಿ ಹಸಿಯಾಗಿರುವಾಗಲೇ ಅಥವಾ ಒಣಗಿಸಿಯೂ ಮಾರಾಟ ಮಾಡಬಹುದು. ಒಣ ಅರಶಿಣಕ್ಕೆ ಬೆಲೆ ಹೆಚ್ಚು.
ಆಯುರ್ವೇದ ಔಷಧ, ರಂಗವಲ್ಲಿಗೆ ಬಣ್ಣದ ಹುಡಿಯಾಗಿ ಬಟ್ಟೆಗಳಿಗೆ ಬಣ್ಣ ಹಾಕಲು ಬಳಸುತ್ತಾರೆ. ಶೀತ ನೆಗಡಿ, ಗಂಟಲು ಕಿರಿಕಿರಿಯುಂಟಾದಾಗ ಅರಶಿಣ ಪುಡಿಯನ್ನು ಬಿಸಿನೀರಿನೊಂದಿಗೆ ಸೇವಿಸಬಹುದು. ಅಡುಗೆಗೆ ಬಣ್ಣ ರುಚಿ ವಾಸನೆಯನ್ನು ನೀಡುವ ಇದರಲ್ಲಿ ಕ್ರಿಮಿನಾಶಕ, ಜೀರ್ಣಕಾರಕ ಮತ್ತು ರಕ್ತ ಶೋಧಕ ಗುಣಗಳಿರುವುದರಿಂದ ಅಗತ್ಯವಾಗಿ ಬಳಕೆ ಹಿತಕರ. ಅರಶಿಣ ಕೊಂಬನ್ನು ತರಕಾರಿಯಂತೆ ಪಲ್ಯ ಮಾಡಿ ತಿನ್ನಬಹುದು.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ