ಅಖಿಲ ಭಾರತ ತುಳು ಒಕ್ಕೂಟದ ಸಭೆಯು ಒಕ್ಕೂಟದ ಅಧ್ಯಕ್ಷರಾದ ಎ ಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚಿಗೆ ನಡೆಯಿತು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿಗಳಾದ ಕರುಣಾಕರ್ ಶೆಟ್ಟಿಯವರು ಉಳ್ಳಾಲ ತಾಲೂಕು ಸಮಿತಿಯ ರಚನೆ ಬಗ್ಗೆ ಮಾಹಿತಿ ನೀಡಿ, ಪ್ರಥಮವಾಗಿ ಓರ್ವ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಅವರನ್ನು ಆಯ್ಕೆ ಮಾಡುವಂತೆ ಸೂಚಿಸಿದರು. ಅದರಂತೆ ಕೆ. ಟಿ ಸುವರ್ಣರ ಸೂಚನೆಯಂತೆ ನಿವೃತ್ತ ಮುಖ್ಯ ಉಪಾಧ್ಯಾಯರಾದ ಕೆ. ರವೀಂದ್ರ ರೈ ಅವರನ್ನು ಅಧ್ಯಕ್ಷರನ್ನಾಗಿ, ಆನಂದ ಕೆ ಅಸೈಗೋಳಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿತು. ನಂತರ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಶಿವರಾಮ ಶೆಟ್ಟಿ ಹಾಗೂ ವಿಜೇತ್ ಮಂಜನಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಸಭಾಧ್ಯಕ್ಷರಾದ ಎ.ಸಿ ಭಂಡಾರಿ ಅವರು ಮಾತನಾಡಿ ಒಕ್ಕೂಟವು ತುಳು ಭಾಷೆ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕು ಹಂತದಲ್ಲೂ ಘಟಕವನ್ನು ರಚನೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಒಕ್ಕೂಟದ ಕೋಶಾಧಿಕಾರಿ ಚಂದ್ರಹಾಸ್ ದೇವಾಡಿಗ, ಜೊತೆ ಕಾರ್ಯದರ್ಶಿ ಟಿ ಎ ಪೂಜಾರಿ, ಚಂದ್ರಶೇಖರ್ ಉಚ್ಚಿಲ್, ಉಸ್ಮಾನ್ ಬೆಲ್ಮ, ಚಾರ್ಜ್ ಡಿಸಿಲ್ವ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋಹನ್ ಶಿರ್ಲಾಲ್ ಧನ್ಯವಾದ ಸಲ್ಲಿಸಿದರು. ಚಂದ್ರಹಾಸ್ ಕಣಂತೂರು ಕಾರ್ಯಕ್ರಮ ನಿರೂಪಿಸಿದರು.