ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಉದ್ಯಮಿ, ದಾನಿ ಹಾಗೂ ಸಮಾಜ ಸೇವಕ ಎಂ.ಆರ್. ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ “ಬಂಜಾರ ಗೋಲ್ಡ್ ಪಿಂಚ್ ಕೊರಂಗ್ರಪಾಡಿ ಪ್ರಕಾಶ್ ಕೆ ಶೆಟ್ಟಿ” ಅವರು 25 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಮಾರ್ಗದರ್ಶಿಗಳಾದ ಶ್ರೀಯುತ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಶ್ರೀಯುತ ಉಪೇಂದ್ರ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಅವರ ಮುಖಾಂತರ ಶ್ರೀಯುತ ಪ್ರಕಾಶ್ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಪ್ರಕಾಶ್ ಶೆಟ್ಟಿ ಅವರಿಗೆ ಕಟ್ಟಡದ ಬಗ್ಗೆ ಮಾಹಿತಿಯನ್ನು ಅಧ್ಯಕ್ಷರು ನೀಡಿದರು.
ನಂತರ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ದೇಶ ವಿದೇಶದಲ್ಲಿರುವ ಸಮಸ್ತ ಬಂಟರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಾ ಹಾಗೂ ಬಂಟರ ಸಮುದಾಯದ ಅಭಿವೃದ್ಧಿಗಾಗಿ ನಾನು ಎಂದಿಗೂ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತೇನೆ ಎಂದರು. ಪ್ರತಿ ವರ್ಷ ಒಂದು ಸಾವಿರ ಬಂಟ ಹಾಗೂ ಅನ್ಯ ಜನಾಂಗದ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದರು. ಅದರಲ್ಲಿ ಸಾಗರ ತಾಲ್ಲೂಕಿನ 15 ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದರು. ಸಮಾಜ ನನಗೆ ನೀಡಿದ ಸಂಪತ್ತನ್ನು ಸಮಾಜದ ಅಭಿವೃದ್ಧಿಗಾಗಿ ಬಳಸುತ್ತೇನೆ ಎಂದರು. ಸಮುದಾಯದ ವಿವಿಧ ರೀತಿಯ ಸಮಸ್ಯೆಯನ್ನು ಚರ್ಚಿಸಿ ಅದಕ್ಕೆ ಪರಿಹಾರ ಮಾರ್ಗದ ಬಗ್ಗೆ ಮಾತನಾಡಿದರು. ಮಲೆನಾಡು ಭಾಗದ ಬಂಟರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಈ ಭಾಗಗಳ ಜೊತೆ ನಾನು ಎಂದಿಗೂ ಇರುತ್ತೇನೆ ಎಂದು ಹೇಳಿ ಸಾಗರ ಬಂಟರ ಸಂಘದ ಕಟ್ಟಡಕ್ಕೆ ಆಶಾ ಪ್ರಕಾಶ್ ಶೆಟ್ಟಿ ಹೆಸರಿನಲ್ಲಿ 25 ಲಕ್ಷ ರೂಪಾಯಿಗಳನ್ನು ನೀಡಿದರು.
ಜೊತೆಗೆ ಕೊಪ್ಪ ಬಂಟರ ಸಂಘಕ್ಕೆ 25 ಲಕ್ಷ ರೂಪಾಯಿಗಳನ್ನು ನೀಡಿದರು. ಎರಡೂ ಬಂಟರ ಸಂಘದ ಪದಾಧಿಕಾರಿಕಾರಿಗಳು ಪ್ರಕಾಶ್ ಶೆಟ್ಟಿ ಅವರನ್ನು ಅಭಿನಂದಿಸಿದರು. ಎರಡೂ ಬಂಟರ ಸಂಘದ ಪದಾಧಿಕಾರಿಗಳ ಕಣ್ಣುಗಳು ತೇವವಾಗಿದ್ದವು. ಪ್ರಕಾಶ್ ಶೆಟ್ಟಿ ಅವರ ಮಾತುಗಳು ಸಂಘದ ಸದಸ್ಯರೆಲ್ಲರನ್ನು ರೋಮಾಂಚನ ಗೊಳಿಸಿತ್ತು. ಎರಡೂ ಸಂಘದ ಪದಾಧಿಕಾರಿಗಳು ಪ್ರಕಾಶ್ ಶೆಟ್ಟಿ ಅವರ ಸರಳತೆ ಹಾಗೂ ಸಮುದಾಯದ ಬಗ್ಗೆ ಅವರಿಗೆ ಇರುವ ಕಾಳಜಿ ಕಂಡು ಅವರಿಗೆ ನಮಸ್ಕರಿಸಿದರು.
ಈ ಸಂಧರ್ಭದಲ್ಲಿ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ವ್ಯವಸ್ಥಾಪಕ ಉಪೇಂದ್ರ ಶೆಟ್ಟಿ, ಸಾಗರ ಬಂಟರ ಸಂಘದ ಅಧ್ಯಕ್ಷರಾದ ಹೆಚ್. ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ರಘುಪತಿ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ, ನಿರ್ದೇಶಕರಾದ ಸುರೇಶ್ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.