“ಇರೋದು ಒಂದೇ ಬದುಕು, ನಮ್ ಇಷ್ಟದಂಗೆ ನಾವ್ ಬಾಳ್ಬೇಕು, ಎಲ್ಲದ್ರಲ್ಲೂ ಎಲ್ಲದಕ್ಕೂ ಹೊಂದಾಣಿಕೆ ಮಾಡ್ಕೊಂಡ್ ಬಾಳಕಾಗಲ್ಲ. ಎಷ್ಟು ದಿನ ಇರ್ತಿವೋ ಗೊತ್ತಿಲ್ಲ! ಎಲ್ಲದಕ್ಕೂ ಅನುಸರಿಸಿಕೊಂಡು ಹೋಗು ಅನ್ನೋ ಮಾತನ್ನೇ ಓಬಿರಾಯನ ಕಾಲದಿಂದಲೂ ಕೇಳಿ-ಕೇಳಿ ಸಾಕಾಗಿದೆ. ನನಗೆ ಸ್ವತಂತ್ರ ಬೇಕು, ನನ್ನ ಬದುಕು ನನ್ನ ನಿರ್ಧಾರ ಅಷ್ಟೇ!’. ಇತ್ತೀಚಿನ ದಿನಗಳಲ್ಲಿ ತನ್ನದೇ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ಮಕ್ಕಳು ಹೇಳುವ ಮಾತುಗಳಿವು. ಸ್ವ-ಇಚ್ಛೆಯ ಬದುಕಿನ ಹಂಬಲ ಅವರದು. ಆದರೆ ಹಿರಿಯರು ಹೇಳುವ ಕಿವಿಮಾತು, “ನೋಡಿ ಮಕ್ಕಳೇ ನೀವು ಬೆಳೆಯುತ್ತಿದ್ದೀರಿ, ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕು, ಯಾರನ್ನೂ ಎದುರು ಹಾಕಿಕೊಳ್ಳಬಾರದು. ನೀವಂತೂ ನಿಮ್ಮದೇ ರೂಲ್ಸ್ ರೆಗ್ಯುಲೇಷನ್ಸ್ ಅಂತ ಫಾಲೋ ಮಾಡಿ, ಸುಮ್ನೆ ಇಲ್ಲ ಸಲ್ಲದ್ದರ ಬಗ್ಗೆ ದಾವಂತ ಪಡುತ್ತೀರಿ’ ಎನ್ನುವುದು ಸರ್ವೇಸಾಮಾನ್ಯ ವಿಷಯವಾಗಿ ಹೋಗಿದೆ. ಅದರಲ್ಲೂ ಮದುವೆಯಾಗಿ ಹೋಗುವ ಹೆಣ್ಣು ಮಕ್ಕಳ ಪಾಲಿಗೆ ಹೊಂದಾಣಿಕೆಯ ಮಹಾಮಂತ್ರವನ್ನು ಪಠಿಸಿಯೇ ಕಳಿಸುವುದು. ನಮಗೆಲ್ಲಾ ಗೊತ್ತಿರುವಂತೆ ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬೆರೆತು ಬಾಳಬೇಕಾದುದು ಬದುಕಿನ ನಿಯಮ. ಆದರೆ ಹೊಂದಿಕೊಂಡು ಬಾಳುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಅನೇಕ ಬಾರಿ ನಮ್ಮೊಳಗಿನ ಅಹಂ ಭಾವ ನಮ್ಮನ್ನು ಬೇರೆಯದೇ ರೀತಿಯಲ್ಲಿ ಬದುಕುವಂತೆ ಮಾಡುತ್ತದೆ. ಕೆಲವೊಮ್ಮೆ ನಾವೇ ಮಾತನಾಡಿಕೊಳ್ಳುತ್ತಿರುತ್ತೇವೆ, “ಎಲ್ಲದಕ್ಕೂ ನಾವೇ ಅಡ್ಜಸ್ಟ್ ಆಗಬೇಕಾ?’ ಎಂದು. ಹೌದು, ನಾವು ಅನುಸರಿಸಿಕೊಂಡು ಹೋದರೆ ನಮ್ಮೊಂದಿಗೆ ಸುತ್ತಮುತ್ತಲಿನವರೂ ನಮ್ಮನ್ನು ಅನುಸರಿಸುತ್ತಾರೆ. ಅದು ಸಾಮರಸ್ಯದ ಬದುಕಿಗೂ ಕಾರಣವಾಗುತ್ತದೆ. ಹೊಂದಿಕೊಂಡು ಹೋಗುವುದು ಒಂದು ರೀತಿಯಲ್ಲಿ ಎಮೋಶನಲ್ ಇಂಟೆಲಿಜೆನ್ಸ್ ಇದ್ದ ಹಾಗೆ. ಹೊಂದಾಣಿಕೆ ಮತ್ತು ಪರಸ್ಪರ ಸಹಕಾರಿ ಮನೋಭಾವ ಹೊಂದುವುದು ಇತ್ತೀಚಿಗಿನ ದಿನಗಳಲ್ಲಿ ಬಹಳ ಅಗತ್ಯ. ಹೊಂದಾಣಿಕೆಯಿಲ್ಲದ ಮನಸ್ಥಿತಿಯಿಂದಾಗಿಯೇ ಕೂಡು ಕುಟುಂಬಗಳು ಕಡಿಮೆಯಾಗಿವೆ. ಬದುಕಿನಲ್ಲಿ ಪರಸ್ಪರ ಹೊಂದಾಣಿಕೆ ಬಹಳ ಅಗತ್ಯ. ಮಾತ್ರವಲ್ಲ ಅನಿವಾರ್ಯವೂ ಹೌದು. ಹೆಣ್ಣು ಮದುವೆಯಾದ ಬಳಿಕ ತಾನು ಹುಟ್ಟಿದ ಮನೆಯಿಂದ ಗಂಡನ ಮನೆಗೆ ಹೋಗಿ, ಇದು ನನ್ನದೇ ಮನೆ ಎಂದು ಬಾಳಬೇಕು. ಅಲ್ಲಿ ಗಂಡನ ಕುಟುಂಬದವರೆಲ್ಲ ತನ್ನವರೆಂದು ಎಲ್ಲರೊಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಅನುಸರಿಸಿಕೊಂಡು ಬದುಕ ಬೇಕು. ಹೀಗೆ ಹೊಂದಾಣಿಕೆ ಕಷ್ಟವಾದಾಗ “ಎಷ್ಟು ಕಷ್ಟವೋ ಹೊಂದಿಕೆ ಎಂಬುದು’ ಎಂದು ರಾಗ ಎಳೆಯುವುದು ಇದ್ದೇ ಇದೆ.
ಗಂಡು ಮಕ್ಕಳು ಹೆಣ್ಣಿಗಿಂತ ನಾಜೂಕು, ಅವರಿಗೆ ಹೊಂದಾಣಿಕೆ ಮಂತ್ರ ಆಗುವುದಿಲ್ಲ. “ಪ್ರಕೃತಿ ಮತ್ತು ಪುರುಷ’ ಎಂದು ಎರಡು ಕುಲವನ್ನು ಪರಿಗಣನೆಗೆ ತೆಗೆದುಕೊಂಡಾಗ, ಪ್ರಕೃತಿ ಮತ್ತು ಪುರುಷ ಹೊಂದಾಣಿಕೆ ಆಗುವುದು ಒಬ್ಬರ ಜತೆಯಲ್ಲಿ ಮತ್ತೂಬ್ಬರು ಅದು ಪ್ರಕೃತಿದತ್ತ ಕ್ರಿಯೆ, ಹೌದು! ಅದು ಸಹ ಸಮರಸವೇ ಜೀವನ ಎನ್ನುವಂತೆ. “ಹತ್ತಿರವಿದ್ದು ದೂರ ನಿಲ್ಲುವೆವು.. ನಮ್ಮ ಅಹಂಮಿನ ಕೋಟೆಯಲಿ’ ಜಿ. ಎಸ್. ಶಿವರುದ್ರಪ್ಪನವರು ರಚಿಸಿದ ಭಾವಗೀತೆ ಸಾಲುಗಳಿವು. ಎಷ್ಟೋ ಮನೆಗಳಲ್ಲಿ ಜತೆಯಲ್ಲಿ ವಾಸವಿದ್ದರೂ, ಮನಸ್ಸುಗಳಲ್ಲಿ ಅಹಂ ಒಂದು ಬೇರೂರಿ ಬಿಟ್ಟರೆ, ಅಲ್ಲಿಗೆ ಆ ಸಂಬಂಧದ ಕಗ್ಗೊಲೆಯಾಗುವುದು ನಿಶ್ಚಿತ. ಮತ್ತಿನ್ನು ಹತ್ತಿರವಿದ್ದು ಪ್ರಯೋಜನವೇನು? ಸಮಾಜದ ಮುಂದೆ ಕೇವಲ ತೋರ್ಪಡಿಕೆಗಾಗಿಯೂ ಹತ್ತಿರವಿರುವುದಿದೆ. ಆದರೆ “ಮಾನಸಿಕವಾಗಿ ಸಾಗರದಷ್ಟು ದೂರವಿರುವ ಅವರ ಮನಸ್ಸುಗಳು ಸಂಧಿಸುವುದು, ತನ್ನೊಳಗಿನ ಅಹಂ ಅನ್ನು ಬೇರುಸಮೇತ ಕಿತ್ತು ಎಸೆದಾಗ ಮಾತ್ರ’. ಅದಾಗಬೇಕೆಂದರೆ ಯಾರಾದರೊಬ್ಬರೂ ತಗ್ಗಲೇಬೇಕು. ಒಂದು ಬಂಧ ಬೆಸೆಯಲು ಸಾವಿರ ಕಾರಣ ಹುಡುಕಿ, ನೂರಾರು ಬಾರಿ ಯೋಚಿಸಿ, ಜತೆ ಸಾಗುವ ನಿರ್ಧಾರ ಮಾಡಿ, ಯಾವುದೋ ಒಂದು ಕ್ಷುಲ್ಲಕ ಕಾರಣದಿಂದಾಗಿ ಆ
ಸಂಬಂಧದಿಂದ ದೂರ ಉಳಿಯುವುದೆಂದರೆ? ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ನೀಡುವ ಹೋಂ ವರ್ಕ್ ಸಹ ಕಷ್ಟವೇ? ಆದರೂ ಅದನ್ನು ಮಾಡಿ ಮುಗಿಸುವಂತೆ ಹೆತ್ತವರು ಮಕ್ಕಳಿಗೆ “ಮಿಸ್ ಒಳ್ಳೆಯವರು, ನೀನು ಅಡ್ಜಸ್ಟ್ ಮಾಡಿಕೊಂಡು ಅಂದಿನ ಹೋಮ್ ವರ್ಕ್ ಅಂದೇ ಮುಗಿಸಿ ತೋರಿಸು ಗುಡ್ ಹೇಳುತ್ತಾರೆ’ ಎಂದು ಹೇಳಿದಾಗ ಅವರಲ್ಲೊಂದು ಸಂತಸ, ಅದನ್ನು ಒಪ್ಪುವ ಮನಸ್ಥಿತಿ. ಹಾಗೆಯೇ ಸಹ ಕುಟುಂಬ ಸಂಸಾರದಲ್ಲಿ ಕೆಲವರು ಗುರು-ಹಿರಿಯರ ಮಾತುಗಳು, ಅವರ ಅನುಭವಗಳು ಕಿರಿಯರ ಬಾಳಿಗೆ ಬದುಕಿಗೆ ಒಳ್ಳೆಯದನ್ನೇ ಹರಸುವುದಾದರೆ ಒಂದಿಷ್ಟು ನಮ್ಮೊಳಗಿನ ಅಹಂ ತ್ಯಜಿಸಿ ಬಿಡಬೇಕು. ನಾಲ್ಕು ದಿನದ ಬದುಕನ್ನು ಹೊಂದಾಣಿಯ ಮಹಾಮಂತ್ರ ಪಠಿಸಿ ಉತ್ತಮವಾಗಿ ಜೀವನವನ್ನು ರೂಪಿಸಿಕೊಳ್ಳುವುದು ಸಹ ನಮ್ಮ ಕೈಯಲ್ಲೇ ಇರುತ್ತದೆ. ವೈವಿಧ್ಯಮಯ ಸಂಸ್ಕೃತಿಯ ಜನರು ಇರುವಾಗ ಮನಸ್ಥಿತಿಗಳೂ ವಿಭಿನ್ನತೆ ಇರುವುದು ಸಹಜ. ಸಣ್ಣತನ, ಪೂರ್ವಭಾವಿ ಕಲ್ಪನೆಗಳೊಂದಿಗೆ ವ್ಯಕ್ತಿಯೊಂದಿಗೆ ಸಂವಹನ ನಡೆಸುವುದಕ್ಕೆ ಸಾಧ್ಯವಿಲ್ಲ. ನಮ್ಮದೇ ಪೂರ್ವಯೋಜಿತ ಕಲ್ಪನೆ ಹೊಂದಿ, ವ್ಯಕ್ತಿಯ ಅಂತರಾತ್ಮವನ್ನು ಅರಿಯದೇ ಹೋದರೆ ಉತ್ತಮ ಸಂವಹನ ಸಾಧ್ಯವಿಲ್ಲ. ಹೊಂದಾಣಿಕೆಯಿಂದ ಬಾಳುವುದಕ್ಕೆ ಸಾಧ್ಯವಾಗುವುದಿಲ್ಲ. ಯಾವಾಗಲೂ ಚಿಂತೆಯಲ್ಲಿ ಮುಳುಗಿದ ವರಂತೆ ಕಂಡುಬಂದರೆ ಮೂಡಿ ಎಂದು ಕರೆಸಿಕೊಳ್ಳುತ್ತೇವೆ. ಕೇವಲ ಸಮಸ್ಯೆಗಳನ್ನು ಹಂಚಿಕೊಳ್ಳದೆ, ಬದುಕಿನ ಬಗೆಗೆ ನಕಾರಾತ್ಮಕ ಚಿಂತೆಗಳನ್ನೇ ಚರ್ಚಿಸದೇ ಆಶಾವಾದ ಹೊಂದಬೇಕು. ನಮ್ಮ ಸಮಸ್ಯೆಗಳನ್ನು ತೋರಿಸಿಕೊಳ್ಳದೆ, ಎಲ್ಲರೊಳಗೊಂದಾಗಿ ಬಾಳುವುದರಲ್ಲಿ ಹೆಚ್ಚು ಅರ್ಥವಿದೆ.