ತಾಯಿ ವಾತ್ಸಲ್ಯದ , ತ್ಯಾಗದ ವಿಶಿಷ್ಟ ಸಾಹಿತ್ಯವಿರುವ ಹಾಡು ”ಮತ್ತೇನಿಲ್ಲಾ” ಇದೆ ತಿಂಗಳ 17 ರಂದು ಸಂಜೆ 7.30 ಕ್ಕೆ ಐಲೇಸಾ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ .
ಮುಂಬೈ ರಂಗ ಮತ್ತು ಧ್ವನಿ ಕಲಾವಿದ ಸುರೇಂದ್ರ ಮಾರ್ನಾಡ್ ಅವರ ಸಾಹಿತ್ಯದ ಈ ಹಾಡನ್ನು ಪ್ರಸಿದ್ಧ ಗಾಯಕ ರಾಮಚಂದ್ರ ಹಡಪದ ಸಂಗೀತ ಸಂಯೋಜಿಸಿ ತಾನೇ ಹಾಡಿದ್ದಾರೆ . ಬೆಂಗಳೂರಿನ ಉದ್ಯಮಿ ಕಾರ್ಕಳ ರೆಂಜಾಳದ ವಲೆರಿಯನ್ ರಾಡ್ರಿಗಸ್ ಹಾಡನ್ನು ಪ್ರಾಯೋಜಿಸಿದ್ದು ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಯ ಮೂಲಕ ಸಂಗೀತ ಪ್ರಿಯರಿಗೆ ಸಮರ್ಪಿಸಿದ್ದಾರೆ. ಸಚ್ಚು ಮಾರ್ನಾಡ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು , ಛಾಯಾಗ್ರಹಣದಲ್ಲಿ ಸಂದೀಪ ಮೂಡಬಿದ್ರೆ ಅವರು ತಮ್ಮ ಕೈ ಚಳಕ ತೋರಿಸಿದ್ದಾರೆ ಗೋಪಾಲ್ ಪಟ್ಟೆ ಜಯಂತ್ ಐತಾಳ್ , ವಿನಾಯಕ್ ಮಲ್ಯ ಸಂಕಲನದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ.
ಸಾಂಸಾರಿಕ ಜೀವನದಲ್ಲಿ ಹೆಣ್ತನದ ,ತಾಯ್ತನದ ತ್ಯಾಗವನ್ನು ವಿಸ್ತರಿಸುತ್ತಾ ಹೋಗುವ ಈ ಹಾಡು ತಾಯಿ ತನಗಾಗಿ ಏನನ್ನೂ ಬಯಸದೆ ಎಲ್ಲವನ್ನೂ ಮಕ್ಕಳ ಶ್ರೇಯಸ್ಸಿಗೆ ದೇವರಲ್ಲಿ ಮೊರೆಯಿಡುತ್ತಾ ತಾನು ಅವರ ಏಳಿಗೆಯಲ್ಲೆ ಸಂತೋಷವನ್ನು ಕಾಣುವುದನ್ನು ಮಾರ್ಮಿಕವಾಗಿ ಬಿಡಿಸಿಡುತ್ತದೆ . ಸುಸಂಸ್ಕೃತರಾಗಿ ಬೆಳೆಯಬೇಕಾದ ಮಕ್ಕಳು ಸ್ವಾರ್ಥಿಗಳಾಗುವುದನ್ನು ನೋಡುತ್ತಾ ‘ಮತ್ತಿನ್ನೇನೂ ಉಳಿದಿಲ್ಲ” ಎನ್ನುವ ವಾಸ್ತವ ಒಪ್ಪಿಕೊಳ್ಳುವಲ್ಲಿ ಬಾಳು ಮುಗಿಯುವುದನ್ನು ಒಪ್ಪಿಕೊಳ್ಳುತ್ತಾ ಹಾಡು ಕೊನೆಯಾಗುವುದು .
ಭಾರತೀಯ ಚಿತ್ರರಂಗದ ಪ್ರಬುದ್ಧ , ರಂಗಭೂಮಿಯ ಶ್ರೇಷ್ಠ ನಟ ಕಾಶ್ಮೀರಿ ಫೈಲ್ಸ್ ಚಿತ್ರ ಖ್ಯಾತಿಯ ಶ್ರೀ ಪ್ರಕಾಶ್ ಬೆಳವಾಡಿಯವರು ಈ ಹಾಡನ್ನು ಬಿಡುಗಡೆ ಗೊಳಿಸಲಿದ್ದಾರೆ, ಹಾಡಿನ ಸಾಹಿತ್ಯದ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯದ ಡಾ. ಸಾಯಿಗೀತಾ ಹೆಗ್ಡೆ ಅವರು ಮಾತಾಡಲಿದ್ದಾರೆ,ಮುಂಬೈ ವಿಶ್ವವಿದ್ಯಾಲಯ ಮತ್ತು ಚಿಣ್ಣರ ಬಿಂಬದ ಮಕ್ಕಳು ಕೂಡಾ ಭಾಗವಹಿಸಲಿದ್ದಾರೆ .ಮುಂಬೈ ರಂಗ ಕಲಾವಿದ ಅವಿನಾಶ್ ಕಾಮತ್ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಡಿಸೆಂಬರ್ 17 ಭಾನುವಾರದಂದು ಝೂಮ್ ವೇದಿಕೆಯಲ್ಲಿ zoom id :81328827677 PassCode: ilesa ಬಳಸಿಕೊಂಡು ಸಂಜೆ 7:30 ಗಂಟೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಐಲೇಸಾ ತಂಡದ ಮಾಧ್ಯಮ ಸಂಚಾಲಕರಾದ ಗೋಪಾಲ್ ಪಟ್ಟೆ ಮತ್ತು ವಿವೇಕಾನಂದ ಮಂಡಕರೆ ಸಂಗೀತ ಪ್ರಿಯರಲ್ಲಿ ವಿನಂತಿಸಿದ್ದಾರೆ