ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಸಿದ್ದಿ ವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆಪ್ಟೆಂಬರ್ 19 ರಿಂದ 21 ರವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸರ್ವ ಬಂಟ ಸಮಾಜದ ಸಹಕಾರದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಲಿದೆ.
ಗಣೇಶೋತ್ಸವ ಪ್ರಯುಕ್ತ ಪ್ರತಿಭಾನ್ವೇಷಣೆಯಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ ವಹಿಸಿದ್ದರು. ಕೊರೋನದಿಂದ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ನಾವು 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಎಲ್ಲರನ್ನೂ ಸೇರಿಸಿ ಆಚರಿಸುತ್ತೀದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಸಮುದಾಯದ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದಕ್ಕೆ ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದೇವೆ. ಆಸಕ್ತರನ್ನು ಸಮಿತಿಗಳಿಗೆ ಸೇರಿಸಿಕೊಂಡು ಕಾರ್ಯಕ್ರಮ ನಡೆಸಲಾಗುವುದು ಎಂದು ಸಿದ್ದಿ ವಿನಾಯಕ ಟ್ರಸ್ಟ್ ನ ಟ್ರಸ್ಟಿ ಆಶಾಜ್ಯೋತಿ ರೈ ತಿಳಿಸಿದರು. ಆಗಸ್ಟ್ 28ರಂದು ವಿವಿಧ ದೇವಸ್ಥಾನಗಳ ಬಂಟ ಆಡಳಿತ ಮೊಕ್ತೇಸರರು ಹಾಗೂ ದೈವಸ್ಥಾನಗಳ ಗಡಿಗಾರರ ಸಮ್ಮೇಳನ, ಸೆಪ್ಟೆಂಬರ್ 3 ರಂದು ಬಂಟ ಕಲೋತ್ಸವ, ಸೆಪ್ಟೆಂಬರ್ 10 ರಂದು ಬಂಟ ಕ್ರೀಡೋತ್ಸವ, ಸೆಪ್ಟೆಂಬರ್ 16 ರಂದು ಬಂಟ ಯುವ ಸಮ್ಮಿಲನ ನಡೆಯಲಿದೆ ಎಂದು ಅವರು ತಿಳಿಸಿದರು.
ಪ್ರಮುಖರಾದ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ದಿವಾಕರ ಸಾಮಾನಿ ಚೇಳ್ಯಾರು, ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್, ಅಶ್ವತ್ತಾಮ ಹೆಗ್ಡೆ ಹಾಗೂ ಕಿರಣ್ ಪಕ್ಕಳ ಉಪಯುಕ್ತ ಮಾಹಿತಿಗಳನ್ನು ಸಭೆಗೆ ತಿಳಿಸಿದರು. ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಸಂಚಾಲಕ ವಸಂತ ಶೆಟ್ಟಿ, ಬಂಟರ ಮಾತೃ ಸಂಘದ ಕೋಶಾಧಿಕಾರಿ ಮನಮೋಹನ ರೈ, ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ನಿಟ್ಟೆಗುತ್ತು ರವಿರಾಜ ಶೆಟ್ಟಿ ಹಾಗೂ ವಿವಿಧ ಬಂಟರ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿವೇದಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.