ಈ ಜಗತ್ತಿನ ಭರವಸೆಯು ಯುವಜನರ ಮೇಲಿದೆ. ದೇಶವೊಂದರ ಯುವಶಕ್ತಿ ಸರಿಯಾದ ಮಾರ್ಗದಲ್ಲಿ ಸಾಗಿದರೆ ಮಾತ್ರ ಆ ದೇಶ ಪ್ರಗತಿಯತ್ತ ಸಾಗಲು ಸಾಧ್ಯಎಂದು ನಂಬಿದ್ದ ವಿವೇಕಾನಂದರ ಮಾತು ನೆನಪಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ಎಂದು ಯುವ ಜನತೆಯನ್ನು ಬಡಿದೆಬ್ಬಿಸಿದ ಮಹಾನ್ ಚೇತನ ವಿಶ್ವಸಂತ ವಿವೇಕಾನಂದರು. ಆದರೆ ಪ್ರಸ್ತುತ ಈ ಮಾತು ಏಳಿ, ಎದ್ದೇಳಿ ಮೊಬೈಲ್ ಗೀಳಿನಲ್ಲಿ ಮುಳುಗಿದ ಯುವಜನತೆಯೇ ವ್ಯಸನಗಳ ತೊಟ್ಟಿಲಲ್ಲಿ ಮಲಗಿರುವ ಯುವ ಜನತೆಯೇ ಏಳಿ, ಎದ್ದೇಳಿ ಎಂದು ಸಾರುವಂತಾಗಿದೆ. ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ತಮಗೆ ಎಷ್ಟು ಲೈಕ್ ಬಂದಿದೆ ಎಂದು ನೋಡುತ್ತಾ ಮೈಮರೆಯುತ್ತಿದೆ ತನ್ನ ಸಾಧನೆ ಏನು ಎಷ್ಟು ಎಂದು ಗಮನಿಸುತ್ತಿಲ್ಲ. ಜನ ಹೊರ ಜಗತ್ತಿನಲ್ಲಿ ನಿಜವಾಗಿಯೂ ತನ್ನನ್ನು ಎಷ್ಟು ಲೈಕ್ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿಲ್ಲ.
ತಮ್ಮ ಫೇಸ್ಬುಕ್ನಲ್ಲಿ ಎಷ್ಟು ಜನ ಸ್ನೇಹಿತರಿದ್ದಾರೆ ಇ ನ್ಸ್ಟಾಗ್ರಾಮ್ನಲ್ಲಿ ಎಷ್ಟು ಜನ ಫಾಲೋವರ್ಸ್ ಇದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆ ಹೊರತು ನಿಜ ಜೀವನದಲ್ಲಿ ತನಗೆ ಎಷ್ಟು ಜನ ಆಪ್ತರಿದ್ದಾರೆ. ಕಷ್ಟ ಬಂದಾಗ ಯಾರು ತನಗೆ ನಿಜವಾಗಿಯೂ ಸಹಾಯಕ್ಕೆ ಬರುತ್ತಾರೆ ಎಂಬುದರ ಬಗ್ಗೆ ಯೋಚಿಸುತ್ತಿಲ್ಲ. ನೆರೆಹೊರೆಯೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಂಡಿಲ್ಲ. ಈ ಕಾರಣದಿಂದಲೇ ಯೋಗ್ಯ ಸಮಯಕ್ಕೆ ಸಹಾಯ, ಸಲಹೆ ಪಡೆಯಲಾಗದೆ ಸಾಧನೆ ಮಾಡಲಾಗದೆ ತೊಳಲಾಡುತ್ತಾ ಮಾನಸಿಕ ಅಸ್ವಸ್ಥತೆಗೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಅಂತಹ ಘನಘೋರ ನಿರ್ಧಾರವನ್ನು ಮಾಡಿ ಬದುಕು ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ಆಧುನಿಕತೆಯ ಸ್ಪರ್ಶವೋ? ಫ್ಯಾಶನ್ ಲೋಕವೊ? ಅಂತರ್ಜಾಲವೆಂಬ ಮಾಯಾವಿಯೋ? ಒಟ್ಟಾರೆ ಮಾನಸಿಕವಾಗಿ ಸ್ವಯಂ ಬಂಧಿಗಳಾಗಿ ಕುಟುಂಬದವರು ನೆರೆಹೊರೆಯವರು ಆಪ್ತರೇಷ್ಟರ ಜತೆಗೆ ಬೆರೆಯದೆ ನಶೆ ಹತ್ತಿದವರ ಹಾಗೆ ಸ್ವಯಂ ತೃಪ್ತರ ರೀತಿಯಲ್ಲಿ ನಡೆದುಕೊಳ್ಳುತ್ತಾ ಕಷ್ಟ ಸುಖ ಹಂಚಿಕೊಳ್ಳದೆ ಸರಿಯೋ ತಪ್ಪೋ ಅಥೈಸದೇ ಅಂತರ್ಜಾಲವೆಂಬ ಮಾಯಾಲೋಕದಲ್ಲಿ ವಿಹರಿಸುತ್ತಾ ಅದರ ಆಚೆಗಿರುವ ಸದೃಢ ಜೀವನ ಶೈಲಿ, ಪುಸ್ತಕ ಸಂಗಾತ ಜೀವನ, ಬದುಕು ಕಟ್ಟಿಕೊಳ್ಳುವ ಭರವಸೆ, ನಾಡ ಕಟ್ಟುವ ಅಭಿಲಾಷೆ ಎಲ್ಲವನ್ನು ಮರೆತು ಮರುಳರಂತೆ ಖನ್ನತೆಗೆ ಒಳಗಾಗುತ್ತಿರುವುದು ದುರಂತವೇ ಸರಿ.
ಎಷ್ಟೋ ಮಹನೀಯರು ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಡುವೆಯೂ ಅವುಗಳನ್ನ ಹಿಮ್ಮೆಟ್ಟಿಸಿ ಸಾಧನೆ ಶಿಖರವನ್ನೇರಿ ಜಗತ್ತಿಗೆ ಮಾದರಿಯಾದರು, ಆದರೆ ಇಂದಿನ ಯುವಜನತೆ ಸಣ್ಣ ಸಣ್ಣ ವಿಷಯಗಳಲ್ಲಿ ಸಹ ಎಡವುತ್ತಿರುವುದು ಕಷ್ಟ ಪಡುತ್ತಿರುವುದನ್ನು ನೋಡಿದರೆ ಇದು ಅವರಲ್ಲಿರುವ ಸಮಸ್ಯೆಯೇ ಕೊರತೆಯೇ, ವ್ಯವಸ್ಥೆಯಲ್ಲಿರುವ ಸಮಸ್ಯೆಯೇ ಎಂಬುದರ ಬಗ್ಗೆ ನಮ್ಮ ನಿಮ್ಮಲ್ಲಿ ಪ್ರಶ್ನೆ ಹುಟ್ಟದೆ ಇರಲಾರದು. ವಿಚಾರಿಸಿ ನೋಡಿದರೆ ಇದಕ್ಕೆಲ್ಲ ಆರೋಗ್ಯಕರ ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಈ ಪೀಳಿಗೆಗೆ ಹಲವು ಕ್ರಾಂತಿಗಳ ಅನಂತರವೂ ದೊರೆಯುತ್ತಿಲ್ಲವೇ ಯಕ್ಷಪ್ರಶ್ನೆ? ಅಂತರ್ಜಾಲ ಭೂಗತ ಲೋಕ, ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಇನ್ನೊಂದು ಕಡೆ ನಿಲ್ಲುತ್ತದೆ ಆಘಾತಕಾರಿಯಾದ ಮತ್ತೂಂದು ದುರಂತವೆಂದರೆ ಮಾದಕ ವಸ್ತುಗಳ ಬಳಕೆ. ಕಾಲ ಕಳೆದಂತೆ ಜಗತ್ತು ಬದಲಾಗುತ್ತಿದೆ ಹೌದು ಬದಲಾವಣೆ ಜಗತ್ತಿನ ನಿಯಮ ಆದರೆ ಪೂರ್ವಜರು ನಂಬಿದ್ದ ಎಷ್ಟೋ ಸಂಪ್ರದಾಯಗಳು ಆಚರಣೆಗಳು ನಂಬಿಕೆಗಳನ್ನು ಕಳೆದುಕೊಂಡ ಯುವ ಜನತೆ ತಮ್ಮ ಸದೃಢ ಶಕ್ತಿಯನ್ನು ಸಮಾಜಕ್ಕೆ ಮಾರಕವಾದ ಎಷ್ಟೋ ಕೆಲಸಗಳಲ್ಲಿ ವ್ಯಯ ಮಾಡುತ್ತಿರುವುದು, ಗುರು ಹಿರಿಯರ ಮಾತನ್ನು ಗ್ರಹಿಸುವುದಿರಲಿ ಆಲಿಸುವ ಸಂಸ್ಕಾರವನ್ನು ಕೂಡ ಕಳೆದುಕೊಂಡಿರುವುದು ಇದೇನು ಸಭ್ಯತೆ? ಇದೇನು ಸಂಸ್ಕೃತಿ? ಎಂದು ಕೇಳುವಂತಾಗಿರುವುದು ಮತ್ತೂಂದು ಬೇಸರದ ಸಂಗತಿ. ಯುವಜನತೆಯ ಮೇಲೆ ದೇಶದ ನಾಳೆಗಳು ನಿಂತಿವೆ ಆದರೆ ದಾರಿ ತಪ್ಪಿದ ಯುವಜನತೆ ಅಷ್ಟೇ ಹಾನಿಯನ್ನು ಉಂಟುಮಾಡುತ್ತದೆ ಯುವಶಕ್ತಿ ಎನ್ನುವುದು ಪ್ರತಿಯೊಬ್ಬನ ಬಾಳಿನಲ್ಲಿ ಒಮ್ಮೆ ದಾಟಿದರೆ ಮತ್ತೆ ಬಾರದ ಅವಧಿ. ಬದುಕನ್ನು ಕಟ್ಟಲು ಈ ಕಾಲ ವಿನಿಯೋಗವಾಗಬೇಕು. ಗುರಿ ಆದರ್ಶಗಳೇ ಇಲ್ಲದೆ ದುರ್ವ್ಯಸನ ಮಾಡಿ ಪ್ರಯೋಜನವಿಲ್ಲ ಎಂಬ ಸ್ವಯಂ ಅರಿವು ಯುವ ಜನತೆಯಲ್ಲಿ ಮೂಡಿದರೆ ಸಾಕಾಗಿದೆ. ನಿಷೇಧಾತ್ಮಕ ಯೋಚನೆ ಯೋಜನೆಗಳಿಂದ ಹೊರ ಬಂದರೆ ಸಾಕಾಗಿದೆ.
ವಿವೇಕಾನಂದರು ಬಯಸಿದ ಸದೃಢಯುತ ಯುವಜನತೆ ಭಾರತದ ಭವ್ಯ ಭವಿಷ್ಯ ಬೆಳಗುವ ಭಾರತಾಂಬೆಯ ಸುಪುತ್ರರಾಗುವಂತಾಗಲಿ.