ಮೂಡುಬಿದಿರೆ ಒಂದು ಕಾಲದಲ್ಲಿ ಜೈನಕಾಶಿಯೆಂದೇ ಪ್ರಚಲಿತದಲ್ಲಿದ್ದ ಪ್ರದೇಶ. ಸಾವಿರಕಂಬದ ಬಸದಿ, ತೋಡಾರು ಕೊಡಮಣಿತ್ತಾಯ ದೈವಸ್ಥಾನ, ರಾಣಿ ಅಬ್ಬಕ್ಕನ ಹುಟ್ಟೂರು, ಚೌಟರ ಅರಮನೆ, ಹನುಮಂತ ದೇವಸ್ಥಾನ, ಕಡಲ ಕೆರೆ ನಿಸರ್ಗ ಧಾಮ ಇವೆಲ್ಲವೂ ಒಂದು ಕಾಲದಲ್ಲಿ ಮೂಡುಬಿದಿರೆಗೆ ಮುಕುಟ ಪ್ರಾಯವಾಗಿ ಕೈಬೀಸಿ ಕರೆಯುತ್ತಿತ್ತು ಹಾಗೂ ಕರೆಯುತ್ತಿದೆ. ಪ್ರಸ್ತುತ ಕಾಲದಲ್ಲಿ ಇವೆಲ್ಲವುಗಳ ಸಾಲಿನ ಜೊತೆ ಸೇರಿ ನವಭಾಷ್ಯಕ್ಕೆ ಮುನ್ನುಡಿ ಬರೆಯುತ್ತಿದೆ ಆಳ್ವಾಸ್ ಶಿಕ್ಷಣ ಸಂಸ್ಥೆ. ಇಂದು ಮೂಡುಬಿದಿರೆ ಶಿಕ್ಷಣ ಕಾಶಿಯಾಗಿ ಬೆಳೆದಿದೆ. ಮೂಡುಬಿದಿರೆ ಪ್ರದೇಶದಲ್ಲಿ ಸುಮಾರು ಮುನ್ನೂರು ಎಕರೆ ಜಾಗದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಇಂಜಿನಿಯರಿಂಗ್ ತನಕ ಬೇರೆ ಬೇರೆ ವಿಭಾಗದಲ್ಲಿ ಸುಮಾರು 22000 ಮಕ್ಕಳು ಕಲಿಯುತ್ತಿದ್ದು, ಅದರಲ್ಲಿ 3000 ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದು ವರ್ಷಕ್ಕೆ ಸುಮಾರು 50 ಕೋಟಿ ಆಳ್ವಾಸ್ ವ್ಯಯಿಸುತ್ತದೆ. ಅಂಗ ನ್ಯೂನತೆಯ ಜೊತೆ ಬೇರೆ ಬೇರೆ ವಿಭಾಗದಲ್ಲಿ ದತ್ತು ಸ್ವೀಕರಿಸಿ ಉಚಿತ ಶಿಕ್ಷಣ ನೀಡುತ್ತಿದೆ. ಕನ್ನಡ ಮಾಧ್ಯಮ ಶಾಲೆ ರಾಜ್ಯಕ್ಕೆ ಪ್ರಥಮವಾಗಿದೆ. ಆಳ್ವರ ಸಾಂಸ್ಕೃತಿಕ ವಿಚಾರದಲ್ಲಿ ಈ ತನಕ 17 ನುಡಿಸಿರಿ, 30 ವಿರಾಸತ್, ಒಂದು ವಿಶ್ವ ನುಡಿಸಿರಿ ಮಾಡಿ ಸುಮಾರು 90 ನುಡಿಸಿರಿ ಘಟಕ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ದೇಶ ವಿದೇಶಗಳಲ್ಲಿ ತೋರಿಸಿಕೊಟ್ಟ ಕೀರ್ತಿ ಮೂಡುಬಿದಿರೆಯ ಮಿಜಾರು ಆನಂದ ಆಳ್ವರ ಮಗನಿಗೆ ಸಲ್ಲುತ್ತದೆ.

ಆಳ್ವಾಸ್ ಕೇವಲ ಶಿಕ್ಷಣ ಸಂಸ್ಥೆಯಲ್ಲ, ದುಡ್ಡು ಮಾಡುವ ಕೇಂದ್ರವಲ್ಲ. ಬದಲಾಗಿ ಸಂಸ್ಕೃತಿ, ಸಂಸ್ಕಾರ, ಸಾಂಸ್ಕೃತಿಕವಾಗಿ ಮರೆಯಾಗುತ್ತಿರುವ ಹಲವು ಕಲೆ, ನೃತ್ಯ, ನಾಟ್ಯ, ಮತ್ತೆ ಮರುಕಳಿಸುವ ಯೋಚನೆಯಿಂದ ತಂಡವನ್ನು ಕಟ್ಟಿಕೊಂಡು ಪ್ರಕಾರಗಳನ್ನು ಉಳಿಸುವ ಕೆಲಸ ಸಾಧನೆಯೇ ಸರಿ. ಪುತ್ತೂರಿನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆದದ್ದು ಕಲೆಯನ್ನು ಆಸ್ವಾದಿಸಲು ಹೊರತು ಮಾರ್ಕೆಟಿಂಗ್ ಅಲ್ಲ. ಯಾಕೆಂದರೆ ಮುನ್ನೂರು ಎಕರೆಯಲ್ಲಿ ಸಂಸ್ಥೆ ಕಟ್ಟಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಸಂಸ್ಥೆಯ ಆಳ್ವರಿಗೆ ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು ಎಂದು ತಿಳಿದಿದೆ. ಮುಖ್ಯವಾಗಿ ಹತ್ತು ವರ್ಷದ ನಂತರ ಪುತ್ತೂರಿಗೆ ಈ ಕಾರ್ಯಕ್ರಮ ಸಿಕ್ಕಿದ್ದು ಪುತ್ತೂರಿಗರ ಪುಣ್ಯ. ಇನ್ನೂ ಮುಂದೆ ಈ ಕಾರ್ಯಕ್ರಮ ಯಾವಾಗ ಪುತ್ತೂರಿಗೆ ಸಿಗ್ತದೋ ತಿಳಿದಿಲ್ಲ. ಆಳ್ವರ ಮಾತಿನಂತೆ, ಯಾವ ವ್ಯಕ್ತಿಗೆ ಕಲೆ, ಸೌಂದರ್ಯವನ್ನು ಆಸ್ವಾದಿಸುವ, ಪ್ರೀತಿಸುವ ಗುಣವಿರುತ್ತದೋ ಆ ವ್ಯಕ್ತಿ ದೇಶದ ಸಂಪತ್ತಾಗಿರುತ್ತಾನೆ. ಕಲೆಯನ್ನು ಆಸ್ವಾದಿಸುವ ಗುಣ ಇಲ್ಲವಾದರೇ ಅ ವ್ಯಕ್ತಿ ದೇಶಕ್ಕೆ ಆಪತ್ತು.
ಸುಮಾರು 350 ಮಕ್ಕಳನ್ನು ವೇದಿಕೆಯಲ್ಲಿ ಪ್ರದರ್ಶನ ನೀಡುವುದು ಸಣ್ಣ ಕಾರ್ಯವಲ್ಲ. ಯಾಕೆಂದರೆ ಮೊನ್ನೆಯ ಕಾರ್ಯಕ್ರಮ ಒಂದಾದ ನಂತರ ಒಂದು ಮೆರಗು ಪಡೆಯುತ್ತಾ ಸಾಗಿತು. ನಾನು ಕಂಡಂತೆ ಯೋಗದೀಪಿಕ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಗಾರ್ಭ ದಾಂಡಿಯಾ, ಮಲ್ಲಕಂಬ ರೋಪ್ ಕಸರತ್ತು, ಡೊಳ್ಳು ಕುಣಿತ, ಬೊಂಬೆಕುಣಿತ ಇವೆಲ್ಲವು ನಡೆಯುವಾಗ ಸೂಜಿ ಬಿದ್ದರು ಶಬ್ದ ಕೇಳದ ರೀತಿಯಲ್ಲಿ ಪ್ರತಿ ಕಾರ್ಯಕ್ರಮವನ್ನು ಸಾವಿರಾರು ಜನರು ಆಸ್ವಾದಿಸಿದರು. ಒಂದೊಂದು ನೃತ್ಯದಲ್ಲಿ ವೇದಿಕೆಯಲ್ಲಿ ಐವತ್ತು ಮಕ್ಕಳು ಬಂದು ಹೋಗುವುದು ತಿಳಿಯುವುದೇ ಇಲ್ಲ.ಗಂಟೆ, ನಿಮಿಷ ಮುಖ್ಯವಲ್ಲ ಬದಲಾಗಿ ಸೆಕೆಂಡ್ ಗಳ ಕಾಲ ವೇದಿಕೆ ಸಿಕ್ಕಿದರೇ ಅದನ್ನು ಹೇಗೆ, ಯಾವ ರೀತಿ ಉಪಯೋಗಿಸಬೇಕು…? ಉಪಯೋಗಿಸಿದರೆ ಏನು ಸಾಧ್ಯ ಎಂಬುದಕ್ಕೆ ನಿಜವಾಗಿಯೂ ಉತ್ತರ ಈ ಕಾರ್ಯಕ್ರಮವೇ ಯಾಕೆಂದರೆ ಪ್ರತಿ ಮಕ್ಕಳು ತನಗೆ ನೀಡಿದ ಅವಕಾಶವನ್ನು ಸಮಯಕ್ಕೆ ಸರಿಯಾಗಿ ಪ್ರದರ್ಶಿಸಿದರು. ಮುಖ್ಯವಾಗಿ ಇದರ ಹಿಂದಿನ ಪರಿಶ್ರಮ, ಸಿದ್ದತೆ, ಸಮಯಪ್ರಜ್ಞೆ, ಇದು ವ್ಯವಸ್ಥೆಯಲ್ಲ ಬದಲಾಗಿ ತಪಸ್ಸು. ಮಕ್ಕಳನ್ನು ಯಾವ ರೀತಿ ಬೆಳೆಸಿದರೆ ಸಮಾಜಕ್ಕೆ ಪೂರಕವಾಗಿ ಬೆಳೆಯುತ್ತಾರೆ ಎಂಬುದಕ್ಕೆ ಈ ಸಾಂಸ್ಕೃತಿಕ ಕಾರ್ಯಕ್ರಮವೇ ಸಾಕ್ಷಿ.
ಆಳ್ವರೇ ಅವಕಾಶ ಇದ್ದರೇ ಪ್ರತಿ ವರ್ಷ, ತಪ್ಪಿದರೆ ಎರಡು ವರ್ಷಗಳಿಗೊಮ್ಮೆಯಾದರು ಈ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜನೆ ಮಾಡಿ. ಇಡೀ ಪುತ್ತೂರು ನಿಮ್ಮ ಜೊತೆಗಿದೆ. ಸಹಕಾರವನ್ನು ನೀಡುತ್ತಾರೆ. ಯಾಕೆಂದರೆ ನಿಮಗೂ ಪುತ್ತೂರಿಗೂ ಒಂದು ಅವಿನಾಭಾವ ಸಂಬಂಧವಿದೆ. ಪುತ್ತೂರಿನಲ್ಲಿ ನಿಮ್ಮನ್ನು ಮಹಾಲಿಂಗೇಶ್ವರ ಹರಸಿ ಹಾರೈಸುತ್ತಾನೆ ಅದರಲ್ಲಿ ಸಂದೇಹ ಬೇಡ. ಮೋಹನ್ ಆಳ್ವರಿಗೆ ಪದ್ಮಶ್ರೀ ಸಿಗುವಂತಾಗಲಿ. ರಾಷ್ಟ್ರ ಮೆಚ್ಚುವಂತಾಗಲಿ. ಮಹಾಲಿಂಗೇಶ್ವರ ಹರಸಲಿ. ಮೊದಲೇ ಹೇಳಿದಂತೆ ಆಳ್ವಾಸ್ ನುಡಿಸಿರಿ ವಿರಾಸತ್ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ ಬದಲಾಗಿ ಮೋಹನ್ ಆಳ್ವರ ತಪಸ್ಸು.
ಬರಹ : ಮನ್ಮಥ ಶೆಟ್ಟಿ ಪುತ್ತೂರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
9741316365
















































































































