ಬಹು ರತ್ನಾನೀ ವಸುಂಧರಾ ಎಂಬ ಆರ್ಯೊಕ್ತಿ ಒಂದಿದೆ. ಅರ್ಥಾತ್ ನಮ್ಮ ಪುಣ್ಯ ಭೂಮಿಯ ಪುಣ್ಯ ಗರ್ಭದಲ್ಲಿ ಅದೆಷ್ಟೋ ಅನರ್ಘ್ಯ ರತ್ನಗಳು ಅಡಕವಾಗಿದ್ದು ಕಾಲ ಕಾಲಕ್ಕೆ ಅವಕಾಶ ಸಾಧಿಸಿ ಪ್ರಕಟವಾಗುತ್ತವೆಯಂತೆ. ನಮ್ಮ ತುಳುನಾಡಿಗಂತೂ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಇದೀಗ ಬಂಟರ ಸಂಘ ಮುಂಬಯಿಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸೂರಜ್ ಶೆಟ್ಟಿ ಅವರು ಬಾಲ್ಯದ ದಿನಗಳಿಂದಲೇ ಧಾರ್ಮಿಕ ಪ್ರವೃತ್ತಿಯವರು. ಕ್ರೀಡೆ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ವಿಶೇಷ ಅಭಿರುಚಿ ಹೊಂದಿದ್ದರು. ಬೆಳೆಯುತ್ತಲೇ ಅವರ ಒಂದೊಂದೇ ಗುಣ ವಿಶೇಷಗಳು ಪ್ರಕಟವಾಗತೊಡಗಿದವು.
ಬಾಲ್ಯದ ದಿನಗಳಿಂದಲೂ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿ ಪ್ರತಿಭಾವಂತರಾಗಿದ್ದ ಸೂರಜ್ ಅವರು ಹಲವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಹೇಗಾದರೂ ವಿದ್ಯಾವಂತನಾಗಬೇಕೆಂಬ ಹಂಬಲದಿಂದ ರಾತ್ರಿ ಹಗಲು ಅಭ್ಯಸಿಸಿ ತನ್ನ ಹೈಸ್ಕೂಲು ಶಿಕ್ಷಣ ಮುಗಿಸಿ ಮುಂದೆ ಏನಾದರೂ ಉದ್ಯೋಗ ಮಾಡುತ್ತಾ ಆರ್ಥಿಕ ಸ್ವಾವಲಂಬಿಯಾಗಬೇಕೆನ್ನುವ ಛಲದಿಂದ ರಾಷ್ಟ್ರದ ವಾಣಿಜ್ಯ ನಗರಿ ಮುಂಬಯಿ ಸೇರಿಕೊಂಡು ಪದವಿ ಪೂರ್ವ ಶಿಕ್ಷಣ ಪೂರೈಸಿದರು. ಮುಂದೆ ತನ್ನ ಉದ್ಯಮಕ್ಕೆ ಅನುಕೂಲವಾಗುವ ವೃತ್ತಿ ಪ್ರವೃತ್ತಿ ಅನುಭವ ಸಂಪಾದಿಸಿ ಕ್ರಮೇಣ ಹೋಟೆಲು ಉದ್ಯಮಿಯಾಗಿ ರೂಪುಗೊಂಡರು.
ಬೆಳ್ಳೂರು ವರಕೋಡಿ ಶ್ರೀ ನಾರಾಯಣ ಶೆಟ್ಟಿ ಮತ್ತು ಕಡೆಕಾರು ಸಣ್ಣಮನೆ ಪ್ರೇಮಾ ನಾರಾಯಣ ಶೆಟ್ಟಿ ದಂಪತಿಯ ಮೂರನೇ ಮಗನಾಗಿ ಜನಿಸಿದ ಸೂರಜ್ ಅವರು ಬೆಂಜನಪದವು ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಬಳಿಕ ಬೆಂಜನಪದವು ಪ್ರೌಡಶಾಲೆಯಲ್ಲಿ ಹೈಸ್ಕೂಲು ಶಿಕ್ಷಣ ಮುಗಿಸಿದರು. ಪದವಿಪೂರ್ವ ಶಿಕ್ಷಣವನ್ನು ಮನೆಕ್ ಜಿ ಕಾಲೇಜು ಜುಹೂ ಕೂಪರ್ ಇಲ್ಲಿ ಮುಗಿಸಿದರು. ತನ್ನ ಕಠಿಣ ಪರಿಶ್ರಮದಿಂದ ಹೋಟೆಲು ಉದ್ಯಮದಲ್ಲಿ ಯಶಸ್ಸು ಸಂಪಾದಿಸುತ್ತಾ ನಗರದ ವಿವಿಧ ಪ್ರದೇಶಗಳಲ್ಲಿ ಹೋಟೆಲುಗಳನ್ನು ಪ್ರಾರಂಭಿಸಿ ಮುಂಬಯಿಯ ಯಶಸ್ವಿ ಹೋಟೆಲು ಉದ್ಯಮಿಗಳ ಸಾಲಿನಲ್ಲಿ ತನ್ನ ಹೆಸರು ದಾಖಲಿಸಿಕೊಂಡರು. ಮೂಲತಃ ಓರ್ವ ಸಾಮಾಜಿಕ ಕಳಕಳಿಯುಳ್ಳ ಪರೋಪಕಾರಿ ಸ್ವಭಾವದ ಧಾರ್ಮಿಕ ಪ್ರವೃತ್ತಿಯ ಸೂರಜ್ ಅನೇಕ ದೇವಾಲಯಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಆರ್ಥಿಕ ಸಹಾಯ ನೀಡಿದರೂ ಎಲ್ಲೂ ಇದರ ಕುರಿತು ಬಹಿರಂಗ ಪಡಿಸಿದವರಲ್ಲ. ಆದರೆ ಇವರಿಂದ ಉಪಕೃತರಾದವರು ಇವರ ಈ ಗುಣವನ್ನು ಹಾಡಿ ಹೊಗಳುತ್ತಾರೆ.
ತನ್ನ ಸ್ವಜಾತಿ ಬಾಂಧವರ ಕುರಿತಂತೆ ವಿಶೇಷ ಮಮಕಾರ ಹೊಂದಿದ ಸೂರಜ್ ಅವರು ಅಂಧೇರಿ ಬಾಂದ್ರಾ ವಲಯದ ಬಂಟ ಸಂಘಟನೆಗಳಲ್ಲಿ ಗುರುತಿಸಿಕೊಳ್ಳುತ್ತಾ ಅನೇಕ ಸಂಘ ಸಂಸ್ಥೆಗಳ ಮೂಲಕ ಎಲೆಮರೆಯ ಕಾಯಿಯಂತೆ ಕಾರ್ಯ ಪ್ರವೃತ್ತರಾಗತೊಡಗಿದರು. ವ್ಯಕ್ತಿಯೊಬ್ಬನ ವಿಶೇಷ ಸಾಮರ್ಥ್ಯ ತನಗರಿವಿಲ್ಲದೆ ಹೋದರೂ ಸಮಾಜದ ಜನ ಅದನ್ನು ಗುರುತಿಸುತ್ತಾರೆ ಎಂಬ ಮಾತಿಗೆ ಉದಾಹರಣೆಯೆಂಬಂತೆ ಸಮಾಜದ ಗಮನಕ್ಕೆ ಬಿದ್ದ ಸೂರಜ್ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಇದರ ಕ್ರೀಡಾ ಸಮಿತಿಗೆ ಸಂಚಾಲಕರಾಗಿ ಆಯ್ಕೆಯಾಗಿ ಬಳಿಕ ಪದಾಧಿಕಾರಿಯಾಗಿ ಅನೇಕ ಕ್ರೀಡಾ ಚಟುವಟಿಕೆಗಳನ್ನು ಸಂಯೋಜಿಸಿ ಸಮಿತಿ ಸದಸ್ಯರ ಸಮಾಜ ಬಾಂಧವರ ಶ್ಲಾಘನೆಗೆ ಪಾತ್ರರಾದರು. ಸೂರಜ್ ಅವರ ಚಟುವಟಿಕೆಗಳನ್ನು ಗಮನಿಸಿದ ಸಮಿತಿ ಮುಂದಿನ ಅವಧಿಗೆ ಅವರನ್ನು ಜೊತೆ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿತು. ಈ ಅವಧಿಯಲ್ಲಿ ಅವರು ತೋರಿಸಿದ ಕಾರ್ಯ ಕ್ಷಮತೆ ಸಂಘಟನಾ ಚಾತುರ್ಯ ಹಾಗೂ ಇತರ ಸಮಾಜಪರ ಚಟುವಟಿಕೆಗಳನ್ನು ಗಮನಿಸಿ 2023-26 ರ ಅವಧಿಗೆ ಅವಿರೋಧವಾಗಿ ಕಾರ್ಯಾಧ್ಯಕ್ಷರನ್ನಾಗಿ ಒಮ್ಮತದಿಂದ ಆಯ್ಕೆ ಮಾಡಿದೆ.
ಅಂಧೇರಿ ಬಾಂದ್ರ ಪ್ರಾದೇಶಿಕ ಸಮಿತಿ ಹಾಗೂ ಪರಿಸರದ ಬಂಟ ಬಾಂಧವರಿಗೆ ಸೂರಜ್ ಅವರಿಂದ ಬಹಳಷ್ಟು ನಿರೀಕ್ಷೆಗಳಿವೆ. ಅವರ ಆಶಯಗಳಿಗೆ ಸ್ಪಂದಿಸುವ ಗುಣ ಸಾಮರ್ಥ್ಯ ಶ್ರೀಯುತರಲ್ಲಿ ಖಂಡಿತಾ ಇದೆ. ತನ್ನ ಉದ್ಯಮದಲ್ಲಿ ಯಶಸ್ಸು ಕಂಡು ಆರ್ಥಿಕ ಸ್ಥಿರತೆ ಸಂಪಾದಿಸಿಕೊಂಡು ತನ್ನದೇ ಉದ್ಯಮ ನಿವೇಶನ ಹೊಂದಿ ಸಂತೃಪ್ತಿಯ ನಿಟ್ಟುಸಿರೆಳೆದ ಸೂರಜ್ ಉತ್ತಮ ಮನೆತನದ ಸಂಸ್ಕಾರಿ ಸುಶಿಕ್ಷಿತೆ ಯುವತಿ ಪುಷ್ಪಲತಾ ಅವರೊಂದಿಗೆ ಸಪ್ತಪದಿ ತುಳಿದು ಗುರು ಹಿರಿಯರು ಬಂಧು ಬಾಂಧವರ ಆಶೀರ್ವಾದ ಪಡೆದು ಗ್ರಹಸ್ಥಾಶ್ರಮ ಪ್ರವೇಶಿಸಿದ ಸೂರಜ್ ಆರತಿಗೊಂದು ಕುವರಿ ಕೀರ್ತಿಗೊಂದು ಪುತ್ರ ಸಂತಾನವನ್ನು ಪಡೆದರು. ಧ್ರುವಿ ಮಗಳು. ಸ್ವಸ್ತಿಕ್ ಮಗ. ಹೀಗೆ ಸುಖ ಸಂಸಾರದ ಎರಡು ಕಣ್ಣುಗಳಂತಿರುವ ಪ್ರತಿಭಾವಂತ ಮಕ್ಕಳು ಪತಿಯ ಮನ ಅರಿತು ನಡೆಯುವ ಸಮಾಜಪರ ಚಟುವಟಿಕೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಕರಾಗಿರುವ ಶ್ರೀಮತಿ ಪುಷ್ಪಲತಾ ಸೂರಜ್ ಶೆಟ್ಟಿ ಅವರೊಂದಿಗಿನ ಸಂತೃಪ್ತ ಸಾಂಸಾರಿಕ ಜೀವನ ಸ್ವಜನ ಬಾಂಧವರ ಸಮಾಜ ಬಾಂಧವರ ಸೇವೆ ಸೂರಜ್ ಶೆಟ್ಟಿ ಅವರಿಗೆ ಭವಿಷ್ಯದ ಚಟುವಟಿಕೆಗಳಲ್ಲಿ ಸದಾ ಪ್ರೇರಣಾ ಶಕ್ತಿಯಾಗಿ ಜೀವನ ಯಶಸ್ಸಿಗೆ ದಾರಿ ದೀಪವಾಗುತ್ತದೆ ಎಂಬಲ್ಲಿ ಸಂಶಯವಿಲ್ಲ. ಸದಾ ಉದ್ಯಮಶೀಲರಾಗಿರುವ, ಗುರು ಹಿರಿಯರಲ್ಲಿ ಅಪಾರ ಭಕ್ತಿ ಇರುವ ಸೂರಜ್ ಅವರಿಗೆ ಸಾಂಘಿಕ, ಸಾರ್ವಜನಿಕ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿ ಉಜ್ವಲ ಭವಿಷ್ಯ ಇದೆ.
ಶ್ರೀಯುತರ ಯೋಚನೆ ಯೋಜನೆಗಳು ಫಲ ನೀಡಲಿ. ಅವರಿಗೆ ಉನ್ನತೋನ್ನತ ಸ್ಥಾನಮಾನಗಳು ಲಭ್ಯವಾಗಲಿ. ಆರೋಗ್ಯ ನೆಮ್ಮದಿ ಸ್ಥಿರವಾಗಿದ್ದು, ಆಯುಷ್ಯ ಮಾನ ವೃದ್ಧಿಯಾಗಲಿ. ತನ್ನ ಮೂಲಕ ಸಮಾಜಕ್ಕೆ ಇನ್ನಷ್ಟು ಸೇವಾ ಭಾಗ್ಯ ಲಭ್ಯವಾಗಲಿ ಎಂಬ ಶುಭ ಹಾರೈಕೆಗಳು. ಜೊತೆಗೆ ಬರಲಿರುವ ಹೊಸ ವರುಷ ಅವರ ಬಾಳಿನಲ್ಲಿ ಸಮೃದ್ಧಿ ಹರ್ಷದ ಹೊಂಬೆಳಕ ಹೊತ್ತು ತರಲೆಂಬ ಹಾರೈಕೆಗಳು.
ಶುಭಂ ಭದ್ರಂ ಮಂಗಲಂ
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು