ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಉದ್ಯೋಗವನ್ನರಸಿಕೊಂಡು ಬಂದ ತುಳು ಕನ್ನಡಿಗರು ಸಮಾಧಾನಕರ ಉದ್ಯೋಗ ಗಿಟ್ಟಿಸಿಕೊಂಡ ಮೇಲೆ ಅಲ್ಲಿಗೇ ಸುಮ್ಮನಾಗುವುದಿಲ್ಲ. ಸದಾ ಉತ್ತಮ ಅವಕಾಶಗಳಿಗಾಗಿ ಹುಡುಕಾಟ ನಡೆಸುತ್ತಲೇ ಇರುತ್ತಾರೆ. ಈ ಮಾತು ಇತರ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ವ್ಯಾಪಾರ ವ್ಯವಹಾರಗಳಿರಲಿ, ಮನರಂಜನೆಯ ಕ್ಷೇತ್ರಗಳಿರಲಿ ಅಥವಾ ವೈದ್ಯಕೀಯ, ತಾಂತ್ರಿಕ, ಕೈಗಾರಿಕಾ ವಿಭಾಗಗಳೇ ಇರಲಿ ತಾವು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಭದ್ರತೆ ಹೊಂದುವವರೆಗೂ ಸಾಧನೆ ಮುಂದುವರಿಯುತ್ತದೆ. ಇನ್ನು ಕೆಲವು ಪದವೀಧರ ಯುವಕರು ತಮ್ಮ ಶಿಕ್ಷಣ ಅರ್ಹತೆಗಳಿಗೆ ಸರಿ ಹೊಂದುವ ಸಾಕಷ್ಟು ಆದಾಯ ವರಮಾನ ತರುವ ಉದ್ಯೋಗ, ಸಿಕ್ಕಿದ ಮೇಲೆ ತಮಗೆ ಬಾಲ್ಯದಿಂದಲೂ ಇದ್ದ ಆಸಕ್ತಿ ಹವ್ಯಾಸಗಳಿಗೆ ಸೂಕ್ತ ವೇದಿಕೆ ಸಿಕ್ಕುವ ನಿರೀಕ್ಷೆ ಹೊಂದಿರುತ್ತಾರೆ. ಸಿಕ್ಕಿತೆಂದರೆ ಅದನ್ನು ಇನ್ನಷ್ಟು ಬೆಳೆಸಿಕೊಂಡು ನಗರದ ಏಕತಾನತೆಯ ಬದುಕು ಬೇಸರ ತರದಂತೆ ತಮ್ಮ ಹವ್ಯಾಸಗಳಲ್ಲಿ ಆನಂದ ಕಾಣುತ್ತಾರೆ.. ಇನ್ನು ಕೆಲವರು ತಮ್ಮ ವಿದ್ಯಾಭ್ಯಾಸ ಮುಂದುವರಿಸಿಕೊಂಡು ಸ್ನಾತಕೋತ್ತರ ಪಿ ಎಚ್ ಡಿ ಅಧ್ಯಯನ ಸಂಶೋಧನೆ ನಡೆಸಿ ಯಶಸ್ಸು ಸಂಪಾದಿಸಿಕೊಂಡು ತಮ್ಮ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ಪಡೆದು ಕೊಳ್ಳುತ್ತಾರೆ. ಇಂಥವರು ಸಮಾಜದಲ್ಲಿ ವಿಶೇಷ ಗೌರವದ ಸ್ಥಾನ ಮಾನಗಳನ್ನು ಪಡೆಯುತ್ತಾರೆ.
ಈ ದಿನದ ವ್ಯಕ್ತಿ ವಿಶೇಷ ಅಂಕಣದಲ್ಲಿ ನಾನು ಪರಿಚಯಿಸ ಹೊರಟಿರುವುದು, ಮುಂಬಯಿ ಸಾಹಿತ್ಯ ವಲಯದಲ್ಲಿ ಸದ್ದುಗದ್ದಲವಿಲ್ಲದೆ ಮೇರು ಸಾಧನೆಗಳ ಮೂಲಕ ಗುರುತಿಸಿಕೊಂಡ ಸಾಹಿತಿ, ಕವಿ, ಕತೆಗಾರ, ಕಲಾವಿದ, ಕೃತಿಪ್ರಕಾಶಕ, ಕನ್ನಡ ಪ್ರಚಾರಕ. ಡಾ. ಕರುಣಾಕರ ಶೆಟ್ಟಿ ಪಣಿಯೂರು ಅವರನ್ನು. ಇಂದಿನ ಉಡುಪಿ ಜಿಲ್ಲೆಯ ಪಣಿಯೂರು ಅದೆಷ್ಟೋ ರಾಜಕೀಯ ಮುಖಂಡರಿಗೆ, ಯಕ್ಷಗಾನ ನಾಟಕ ಕಲಾವಿದರಿಗೆ, ವೈದ್ಯಕೀಯ ಬ್ಯಾಂಕಿಂಗ್ ಕ್ಷೇತ್ರದ ಸಾಧಕರಿಗೆ ಜನ್ಮನೀಡಿದ ಎಲ್ಲೂರು ವಿಶ್ವೇಶ್ವರ, ಕುಂಜೂರು ದುರ್ಗಾಪರಮೇಶ್ವರಿ ಕೃಪಾ ಪೋಷಿತ ಕ್ಷೇತ್ರ ಸಣ್ಣ ಊರು ಪಣಿಯೂರು. ಇಲ್ಲಿನ ಪ್ರತಿಷ್ಠಿತ ಬಂಟ ಕುಟುಂಬದಲ್ಲಿ ಜನ್ಮತಾಳಿ ತನ್ನ ಪದವಿ ಶಿಕ್ಷಣ ಊರಿನಲ್ಲೇ ಮುಗಿಸಿ ಉತ್ತಮ ಉದ್ಯೋಗವನ್ನರಸಿಕೊಂಡು ಬಂದು ಮಹಾನಗರ ಮುಂಬಯಿಯ ಪ್ರತಿಷ್ಠಿತ ಅಭ್ಯುದಯ ಕೋ.ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರುಣಾಕರ ಶೆಟ್ಟರು ತನ್ನ ಬಾಲ್ಯದ ದಿನಗಳಿಂದಲೇ ಸಾಹಿತ್ಯ ಪ್ರೇಮಿಯಾಗಿದ್ದು, ನಾಟಕ ಯಕ್ಷಗಾನ ಕುರಿತಂತೆ ವಿಶೇಷ ಒಲವನ್ನು ಹೊಂದಿದ್ದರು.
ಸರಳ ಶಾಂತ ಸ್ವಭಾವಧ ಶೆಟ್ಟರು ಮಿತ ಆದರೆ ಹಿತ ಭಾಷಿ. ಇವರ ಬರಹ ಸಾಮರ್ಥ್ಯ ಅದ್ಭುತವಾದದ್ದು. ಕರುಣಾಕರ ಶೆಟ್ಟಿ ಅವರು ಹುಟ್ಟೂರಲ್ಲಿ ಹೈಸ್ಕೂಲು, ಪಿ ಯು ತರಗತಿಗಳಲ್ಲಿ ಯಶಸ್ಸು ಸಂಪಾದಿಸಿದ ಬಳಿಕ ಮೂಲ್ಕಿ ವಿಜಯಾ ಕಾಲೇಜು ಮೂಲಕ ಬಿ.ಎ ಪದವಿ ಸಂಪಾದಿಸಿದರು. ಆದರೆ ಅವರಿಗೆ ಕನ್ನಡ ಸಾಹಿತ್ಯ ವಿಷಯದಲ್ಲಿ ಅಧ್ಯಯನ ಮುಂದುವರಿಸಬೇಕೆಂಬ ಇಚ್ಛೆ ಬಲವಾಗಿದ್ದ ಕಾರಣ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರವೇಶ ಪಡೆದು ಎಂ.ಎ ಸ್ನಾತಕೋತ್ತರ ಪದವಿ ಪೂರೈಸಿದ ಮೇಲೂ ಅವರ ಜ್ಞಾನ ತೃಷೆ ಇಂಗಲಿಲ್ಲ. ಮುಂದೆ ಸಾಹಿತ್ಯ ಅಧ್ಯಯನ ಸಂಶೋಧನೆ ನಿರತರಾದ ಅವರಿಗೆ ಪಿ.ಎಚ್.ಡಿ ಸಂಶೋಧನಾ ಗ್ರಂಥ ರಚನೆ ಮುಂದಿನ ಲಕ್ಷ್ಯವಾಗಿತ್ತು. ಬ್ಯಾಂಕ್ ಉದ್ಯೋಗದ ಜೊತೆ ಜೊತೆಯಾಗಿ ಅವರ ಅಧ್ಯಯನ ಬರಹ ಕೃಷಿ ಮುಂದುವರಿದಿತ್ತು. ನಗರದ ಕನ್ನಡ ಮಾಸಿಕ ದೈನಿಕಗಳಲ್ಲಿ ತನ್ನ ಲೇಖನ ಕತೆಗಳು ಬೆಳಕು ಕಾಣುತ್ತಿದ್ದಂತೆ ಬರೆಯುವ ಉತ್ಸಾಹ ತೀವ್ರ ಗತಿ ಪಡೆಯಿತು. ಕರುಣಾಕರ ಶೆಟ್ಟಿ ಅವರು ಓರ್ವ ಹೊರನಾಡಿನ ಬಹುಶ್ರುತ ಸಾಹಿತಿಯಾಗಿ ಗುರುತಿಸಲ್ಪಟ್ಟರು . ಮುಂದೆ ಇವರ ಬರಹದ ಹವ್ಯಾಸ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ವಿಸ್ತಾರ ಗೊಂಡಿತು. ವೈಚಾರಿಕ ಲೇಖನ, ಕತೆ, ಕವಿತೆ, ಲಲಿತ ಪ್ರಬಂಧ ಹೀಗೆ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿಕೊಳ್ಳುತ್ತಲೇ ಸಾಹಿತ್ಯ ಬರಹಗಳಲ್ಲಿ ಹೆಚ್ಚಿನ ಸಾಧ್ಯತೆಗಳನ್ನು ಮನಗಂಡು ಕೃತಿ ರಚನೆಯಲ್ಲೂ ತನ್ನ ಬರಹ ಸಾಮರ್ಥ್ಯವನ್ನು ಪ್ರಕಾಶನಗೊಳಿಸಿದರು.
ಒಳನಾಡು ಹೊರನಾಡುಗಳ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನ ಕತೆ ಕವನಗಳು ಸಹಸ್ರ ಸಂಖ್ಯೆಯಲ್ಲಿವೆ. ಪತ್ರ ಪುಷ್ಪ, ಸ್ನೇಹ ಸೌರಭಗಳಂಥಹ ಜಾತಿ ಸಂಘಟನೆಗಳ ಮುಖವಾಣಿ ಪತ್ರಿಕೆಗಳಲ್ಲಿ ಗೌರವ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬರಹಗಳಲ್ಲಿ ಹೆಚ್ಚಿನವು ವಿವಿಧ ಸಾಹಿತ್ಯಿಕ ಸಂಘಟನೆಳಿಂದ ಪ್ರಶಸ್ತಿ ಪುರಸ್ಕೃತವಾಗಿವೆ. ಕರುಣಾಕರ ಶೆಟ್ಟಿ ಅವರಿಗೆ ಸಾಹಿತ್ಯದ ಜೊತೆಗೆ ನಟನಾ ಕೌಶಲವೂ ಒಲಿದಿದ್ದು, ನಗರ ಜೀವನದ ಆರಂಭದ ದಿನಗಳಲ್ಲಿ ಅನೇಕ ತುಳು ಕನ್ನಡ ನಾಟಕಗಳಲ್ಲಿ ಅಭಿನಯಿಸಿದ್ದಿದೆ. ಕನ್ನಡ ಸಾಹಿತ್ಯ ವಿಷಯದಲ್ಲಿ ಎಂಎ ಎಂಫಿಲ್ ಪಿ.ಎಚ್.ಡಿ ಪದವಿ ಹೊಂದಿರುವ ಇವರ ಕಾರಂತ ಪ್ರೇಮಚಂದ ಸಾಹಿತ್ಯದ ತುಲನಾತ್ಮಕ ಅಧ್ಯಯನ ಎಂಬ ಸಂಶೋಧನೆಗೆ ಡಾಕ್ಟರೇಟ್ ಲಭ್ಯವಾಗಿದೆ.
ಡಾ.ಜಿ.ಡಿ.ಜೋಶಿ ಅವರ ಸಹವಾಸ ಹಾಗೂ ನಿರಂತರ ಪ್ರೋತ್ಸಾಹದಿಂದ ಶೆಟ್ಟಿ ಅವರು ಓರ್ವ ಸಾಹಿತ್ಯ ಲೋಕದ ದಿಗ್ಗಜ ಎಂಬಂತೆ ಗುರುತಿಸಿಕೊಂಡರು. ಇಷ್ಟೆಲ್ಲಾ ಸಾಧನೆಯ ಹಿರಿಮೆ ಇದ್ದರೂ ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ಓರ್ವ ವಿಧೇಯ ವಿದ್ಯಾರ್ಥಿಯಂತೆ ವಿನಮ್ರ ನಡತೆ ಹೊಂದಿರುವ ಕರುಣಾಕರ ಶೆಟ್ಟಿ ಅವರು ಕಲಿಯುತ್ತಲೇ ಬೆಳೆದ ಸಾಹಿತಿ. ಇತರ ಯುವ ಸಾಹಿತಿಗಳನ್ನು ಹೆಚ್ಚೆಚ್ಚು ಬರೆಯುವಂತೆ ಪ್ರೋತ್ಸಾಹಿಸುತ್ತಾರೆ. ಅವರ ಕೃತಿ ರಚನೆಗಳಿಗೆ ಸರ್ವ ವಿಧದ ಸಹಕಾರ ನೀಡುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿಯಾಗಿಯೂ ದುಡಿದ ಹಿರಿಮೆ ಶೆಟ್ಟರಿಗಿದೆ. ಹೆಸರಾಂತ ಸಂಘಟಕ ಪ್ರಾತಃ ಸ್ಮರಣೀಯ ಎಚ್ ಬಿ ಎಲ್ ರಾವ್, ಹಾಡುವ ಕವಿ ಬಿ.ಎಸ್.ಕುರ್ಕಾಲ್ ಮೊದಲಾದವರೊಡನೆ ಆತ್ಮೀಯ ಭಾವ ಹೊಂದಿದ ಶೆಟ್ಟರು ಮನೆ ಮನೆಗಳಲ್ಲಿ ಸಾಹಿತ್ಯ ಸ್ಫಂದನವೆಂಬ ವಿಶಿಷ್ಟ ಕಾರ್ಯಕ್ರಮವನ್ನು ಡಾ.ಜಿ.ಡಿ.ಜೋಶಿ ಅವರ ಮಾರ್ಗದರ್ಶನದಲ್ಲಿ ಸಂಯೋಜಿಸಿಕೊಂಡು ಬಂದಿದ್ದಾರೆ. ಇವರ ಕಥಾ ಸಂಕಲನ, ಕವನ ಸಂಕಲನ, ತುಳು ಕವನ ಸಂಕಲನ, ಶಿಶು ಸಾಹಿತ್ಯ, ವ್ಯಕ್ತಿ ಚಿತ್ರಣಗಳು ಬಹುಸಂಖ್ಯೆಯಲ್ಲಿ ಕೃತಿ ರೂಪದಲ್ಲಿ ಬೆಳಕು ಕಂಡಿವೆ.
ಇಷ್ಟಿದ್ದರೂ ತಾನೋರ್ವ ಶ್ರೇಷ್ಠ ಬರಹಗಾರ ಎಂಬ ಅಹಮಿಕೆಯ ಭಾವ ತೋರದೇ ಸತತ ಅಧ್ಯಯನ ಸಂಶೋಧನಾ ಬರಹದಲ್ಲಿ ಮಗ್ನರಾಗಿರುತ್ತಾರೆ. ಇವರ ಕೆಲವೊಂದು ವಿಮರ್ಶಾ ಕೃತಿಗಳು ಕೂಡಾ ಜನಪ್ರಿಯತೆ ಪಡೆದಿವೆ. ಹಲವಾರು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರಿಗಿದೆ. ಇವರ ಸಂಶೋಧನಾ ಗ್ರಂಥ ಕಾರಂತ ಪ್ರೇಮಚಂದ ಪ್ರಾದೇಶಿಕ ಸಾಹಿತ್ಯ ತುಲನಾತ್ಮಕ ಅಧ್ಯಯನಕ್ಕೆ ಡಾ. ವಿಶ್ವನಾಥ ಕಾರ್ನಾಡ್ ಅವರ ಮಾರ್ಗದರ್ಶನವಿತ್ತು .ಇವರ ಸಾಹಿತ್ಯ ಪಯಣದ ಹಾದಿಯಲ್ಲಿ ಪಡೆದ ಪ್ರಶಸ್ತಿ ಪುರಸ್ಕಾರ ಸಂಮಾನಗಳು ಅನೇಕ ಇವೆ. ಗುಜರಾತ್ ತುಳುನಾಡ ಸಮಾಜ, ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ, ತುಳುನಾಡ ಅಭಿಮಾನಿ ಬಳಗ, ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು, ಗೋರೆಗಾಂ ಕರ್ನಾಟಕ ಸಂಘ, ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಬೆಂಗಳೂರು, ಬೆಳದಿಂಗಳ ಸಾಹಿತ್ಯ ಕೂಟ ಅಜೆಕಾರು, ಸಾಹಿತ್ಯ ಬಳಗ ಮುಂಬಯಿ, ಡಾ. ಜಿ. ಡಿ. ಜೋಶಿ ಪ್ರತಿಷ್ಠಾನ, ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಮುಲುಂಡ್ ಬಂಟ್ಸ್, ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಇನ್ನ, ಕರ್ನಾಟಕ ತುಳು ಸಮಾಜ ಮೀರಜ್, ಜ್ಞಾನ ಮಂದಾರ ಅಕಾಡೆಮಿ ಬೆಂಗಳೂರು ಹೀಗೆ ಇನ್ನೂ ಅದೆಷ್ಟೋ ಕನ್ನಡ ತುಳು ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆ ವತಿಯಿಂದ ಸನ್ಮಾನ ಪ್ರಶಸ್ತಿ ಪತ್ರ ಪುರಸ್ಕಾರ ದೊರೆತಿದೆ.
ಪೊವಾಯಿ ಕನ್ನಡ ಸೇವಾ ಸಂಘದ ವತಿಯಿಂದ ಕನ್ನಡ ಜ್ಯೋತಿ ಬಿರುದು ಪುರಸ್ಕಾರ, ಬಂಟರವಾಣಿ ಲೇಖನ ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನ, ಸಾಫಲ್ಯ ಸೇರಿದಂತೆ ಇತರ ಜಾತಿ ಸಂಘಟನೆಗಳ ಮುಖವಾಣಿಗಳು ಸಂಯೋಜಿಸುವ ಸ್ಪರ್ಧೆಗಳಲ್ಲಿ ಬಹುಮಾನ. ಪಣಿಯೂರ ಪಲ್ಲವಿ ಗೌರವ ಗ್ರಂಥಾರ್ಪಣೆ ಹೀಗೆ ಅದೆಷ್ಟು ಸಂಮಾನ ಪುರಸ್ಕಾರಗಳು!!!!! ಹೀಗೆ ಅನವರತ ಕನ್ನಡ ಭಾಷಾ ಚಿಂತಕರಾಗಿ, ಸಾಹಿತ್ಯ ಆರಾಧಕರಾಗಿ ಸಾಮಾಜಿಕ ಕಳಕಳಿ ಹೊಂದಿರುವ ಶೆಟ್ಟರ ಉದ್ಯೋಗಕ್ಕೆ ವಿರಾಮ ಸಿಕ್ಕಿದರೂ ಸಾಹಿತ್ಯ ಕೃಷಿ ಕಾರ್ಯದಲ್ಲಿ ಅನವರತ ನಿರತರಾಗಿದ್ದಾರೆ. ವಿಭಿನ್ನ ಕಥಾವಸ್ತುಗಳನ್ನು ಹೊಂದಿದ ಕೌಟುಂಬಿಕ ಜೀವನ ಕತೆಗಳು ಮುಂಬಯಿ ಕನ್ನಡಿಗರ ಪ್ರಶಂಸೆಗೆ ಪಾತ್ರವಾಗಿದೆ. ಇವರ ಕೃತಿ ರಚನಾ ಕಾರ್ಯ ನಿರಂತರ ನಡೆಯುತ್ತಿದ್ದು ಇತ್ತೀಚೆಗೆ ಕೆಲವು ಕೃತಿಗಳು ಬಿಡುಗಡೆಗೊಂಡಿವೆ. ಬಹುಶಃ ಮೂವತ್ತಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವ ಕರುಣಾಕರ ಶೆಟ್ಟಿ ಅವರ ಕನ್ನಡ ಪರ ಕಾಯಕ ಅಭಿನಂದನೀಯ. ವೃತ್ತಿ ಪ್ರವೃತ್ತಿಗಳೆರಡರಲ್ಲೂ ಸಮತೋಲನ ಸಾಧಿಸುವುದರ ಜೊತೆಗೆ ಕುಟುಂಬ ಪ್ರೇಮಿಯಾಗಿದ್ದು ತನ್ನ ಸಾಮಾಜಿಕ ಚಿಂತನೆ ಮೂಲಕವೂ ಜನಾನುರಾಗಿಯಾಗಿದ್ದಾರೆ. ಡಾ. ಕರುಣಾಕರ ಶೆಟ್ಟಿ ಅವರದ್ದು ಸಾಹಿತ್ಯ ಅಭಿಮಾನಿ ಹಾಗೂ ಪ್ರೋತ್ಸಾಹಕ ಕುಟುಂಬ. ಪತಿಯ ಮನ ಅರಿತು ವರ್ತಿಸುವ ಧರ್ಮಪತ್ನಿ ಶ್ರೀಮತಿ ಸುಜಾತ ಕರುಣಾಕರ ಶೆಟ್ಟಿ, ಸಾಹಿತ್ಯ ಅಭಿರುಚಿ ಇರುವ ಪುತ್ರಿ ಶ್ರುತಿ ಅಭಿಷೇಕ್ ಶೆಟ್ಟಿ, ಅಳಿಯ ಅಭಿಷೇಕ್ ಶೆಟ್ಟಿ, ಮುದ್ದು ಮೊಮ್ಮಗ ಜೊತೆ ಜೊತೆಗೆ ನೆಮ್ಮದಿಯ ಬಾಳು ಬಾಳುತ್ತಿರುವ ಡಾ. ಶೆಟ್ಟಿ ಅವರ ಭವಿಷ್ಯ ಜೀವನ ಆನಂದಮಯವಿರಲಿ. ಆಯುರಾರೋಗ್ಯ ಭಾಗ್ಯ ಇದ್ದು, ಸಾಹಿತ್ಯ ಕೃಷಿ ಮುಂದುವರಿಯಲಿ. ಅವರಿಗೆ ಅವರ ಕುಟುಂಬಕ್ಕೆ ಭಗವಂತನ ಅನುಗ್ರಹ ಸದಾ ಸರ್ವದಾ ಇರಲಿ ಎಂಬ ಹಾರೈಕೆಗಳು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾಗೂ ಶೆಟ್ಟಿ ಅವರ ಅಭಿಮಾನಿಗಳಿಂದ.
ಶುಭವಾಗಲಿ.. ಜೈ ಶ್ರೀರಾಮ್.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು