ಭಾರತವು ಒಂದು ವೈವಿಧ್ಯಮಯ ರಾಷ್ಟ್ರ. ವೈವಿಧ್ಯತೆಯಲ್ಲಿ ಏಕತೆಯು ಇಲ್ಲಿನ ವೈಶಿಷ್ಟ್ಯವಾಗಿದೆ. ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಕಂಡರಿಯದಷ್ಟು ಜಾತಿ, ಧರ್ಮ, ಭಾಷೆ, ಮತ್ತು ಜೀವನ ವೈವಿಧ್ಯಗಳು ಈ ದೇಶದಲ್ಲಿದೆ. ಆದರೂ ಕೂಡ ಇಂದು ನಾವು ಭಾರತವನ್ನು ಒಂದು ರಾಷ್ಟ್ರವೆಂದೇ ಗುರುತಿಸುತ್ತೇವೆ. ಈ ರೀತಿಯ ರಾಷ್ಟ್ರದಲ್ಲಿ ಜನರನ್ನು ಸಂಘಟಿಸಿ ಆಡಳಿತ ನಡೆಸುವುದು ಅಷ್ಟೊಂದು ಸುಲಭದ ಕಾರ್ಯವಲ್ಲ. ಭಾರತವು ಜಾತ್ಯಾತೀತ ರಾಷ್ಟ್ರವೆಂದು ಕರೆಯಲ್ಪಟ್ಟರೂ ಜಾತೀಯತೆಯು ಇಂದು ಎಲ್ಲಾ ಕಡೆ ಗೋಚರಿಸುತ್ತಿದೆ. ವೈಜ್ಞಾನಿಕ ಪ್ರಗತಿಯಲ್ಲಿ ಮುನ್ನಡೆಯುತ್ತಿರುವ ಈ ರಾಷ್ಟ್ರದಲ್ಲಿಂದು ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಮನೆ ಮಾಡಿಕೊಂಡಿದೆ. ದೇಶದ ಹಿತ ಚಿಂತನೆಯ ಜನರ ಕೊರತೆ ಎದ್ದು ಕಾಣುತ್ತಿದೆ. ಆದುದರಿಂದ ರಾಷ್ಟ್ರವನ್ನು ಒಗ್ಗೂಡಿಸುವಂತಹ ಏಕತಾ ಸೂತ್ರವೊಂದನ್ನು ನಾವಿಂದು ಗುರುತಿಸಬೇಕಾಗಿದೆ. ಇಲ್ಲದೆ ಇದ್ದರೆ ದೇಶಕೆ ಮುಂದೆ ಅಪಾಯ ತಪ್ಪಿದ್ದಲ್ಲ. ಆ ಬಗ್ಗೆ ನಮ್ಮ ಚಿಂತನೆ ಅಗತ್ಯವಲ್ಲವೇ?
ನಮ್ಮ ದೇಶದಲ್ಲಿ ಏಕತಾ ಮನೋಭಾವನೆಯನ್ನು ಪ್ರಚೋದಿಸಬೇಕಾದ ಧರ್ಮದ ವಿಚಾರಗಳು ಇಂದು ವ್ಯಕ್ತಿ ವ್ಯಕ್ತಿಗಳ ಮಧ್ಯೆ ದ್ವೇಷ ಭಾವನೆಯನ್ನು ಉಂಟು ಮಾಡುವ ಅನುಚಿತ ಸಾಧನವಾಗಿದೆ. ಅದರಲ್ಲಿಯೂ ಅದು ಇಂದು ರಾಜಕೀಯ ಪ್ರೇರಿತವಾಗಿರುವುದು ಒಂದು ಅಪಾಯಕಾರಿ ಬೆಳವಣಿಗೆಯಾಗಿದೆ. ಸ್ವಾತಂತ್ರ್ಯ ಪೂರ್ವದ ರಾಜಕಾರಣಿಗಳು ರಾಜಕೀಯವು ಧರ್ಮ ಮೂಲವಾಗಿರಬೇಕೆಂದು ಪ್ರತಿಪಾದಿಸಿದರು. ಧರ್ಮದ ಮೌಲ್ಯಗಳಾದ ಸತ್ಯ, ನ್ಯಾಯ, ನೀತಿ, ಪ್ರಾಮಾಣಿಕತನಗಳನ್ನು ರಾಜಕೀಯದಲ್ಲಿ ಉಪಯೋಗಿಸಿಕೊಂಡು ದೇಶ ಭಕ್ತರೆನಿಸಿಕೊಂಡವರು. ರಾಜಕೀಯವೆಂಬುದು ಒಂದು ಒಳ್ಳೆಯ ಸಮಾಜ ಸೇವೆ ಎಂಬುದನ್ನು ಈ ನಾಡಿಗೆ ತೋರಿಸಿಕೊಟ್ಟರು. ಆದರೆ ಸ್ವಾತಂತ್ರ್ಯ ನಂತರ ಆ ರೀತಿಯ ಗೌರವ ಭಾವನೆಗಳು ಕಡಿಮೆಯಾಗುತ್ತಾ ಬಂದಿತು. ಏಕೆಂದರೆ ರಾಜಕೀಯವು ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡಿತು. ಧರ್ಮದ ಮೌಲ್ಯಗಳನ್ನು ಬದಿಗೊತ್ತಿ ಜಾತೀಯ ಆಧಾರದಲ್ಲಿ ಸಮಾಜವನ್ನು ವಿಂಗಡಿಸುವ ಕೆಲಸವನ್ನು ಮಾಡಿತು. ಆಧುನಿಕ ಕಾಲದಲ್ಲಿ ಇದೊಂದು ‘ಕೋಮುವಾದ’ ಎಂಬ ಹೆಸರಿನೊಂದಿಗೆ ದೇಶಕ್ಕೊಂದು ಸಮಸ್ಯೆಯಾಗಿಯೇ ಉಳಿದುಕೊಂಡಿತು. ಇದು ಮಾನವರಾದ ನಾವು ಸೃಷ್ಠಿಸಿದ ಸಮಸ್ಯೆಯೇ ಹೊರತು ಧರ್ಮದಿಂದುಂಟಾದ ಸಮಸ್ಯೆಯಲ್ಲ.
ಧರ್ಮವು ಜನರ ಹಿತವನ್ನು ಬಯಸುತ್ತದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಾತೊಂದಿದೆ. ಧರ್ಮವನ್ನು ಯಾರು ರಕ್ಷಿಸುತ್ತಾರೋ ಆ ಧರ್ಮ ಅವರನ್ನು ರಕ್ಷಿಸುತ್ತದೆ. ಇದೊಂದು ಅತ್ಯಂತ ಪ್ರಾಚೀನವಾದ ಮಾತಾಗಿದ್ದು ಅಷ್ಟೇ ಸತ್ಯವಾಗಿದೆ. ಧರ್ಮದ ಮೌಲ್ಯಗಳನ್ನು ಅರ್ಥೈಸಿಕೊಂಡು ನಡೆದಾಗ ಜನಗಳಾದ ನಮ್ಮ ಮಧ್ಯೆ ಸಹಬಾಳ್ವೆ ಉಂಟಾಗಬಹುದು. ಏಕೆಂದರೆ ತಾನು ಬದುಕಬೇಕು ಇತರರನ್ನು ಬದುಕಗೊಡಬೇಕು. ತಾನು ಸಂತೋಷಕೊಡಬೇಕು. ಇದು ಧರ್ಮ, ಡಾ. ರಾಧಾಕ್ರಷ್ಣನ್ ರವರ ಮಾತಿನಂತೆ ವ್ಯಕ್ತಿ ವ್ಯಕ್ತಿಗಳನ್ನು ಬೇರ್ಪಡಿಸುವ ಅಡ್ಡಗೋಡೆಗಳನ್ನು ದೂರ ಮಾಡಿ, ಪರಸ್ಪರ ಏಕತಾ ಮನೋಭಾವನೆಯನ್ನು ಬೆಸೆಯುವ ಉದ್ದೇಶವೇ ಧರ್ಮದ್ದಾಗಿದೆ.
ಜಗತ್ತಿನ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಧರ್ಮವು ವೈಯಕ್ತಿಕ ನೆಲೆಯಲ್ಲಿ ಆಚರಿಸಲ್ಪಡುತ್ತಿದೆ ಹೊರತು ದೇಶಕ್ಕೊಂದು ಸಮಸ್ಯೆಯಾಗಿಲ್ಲ. ಆ ದೇಶದ ನಾಗರಿಕರು ತಮ್ಮ ಹಕ್ಕಿನ ಬಗ್ಗೆ ಎಷ್ಟರ ಮಟ್ಟಿಗೆ ತಮ್ಮ ಕರ್ತವ್ಯದ ಬಗ್ಗೆಯು ಗಮನ ಹರಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಧರ್ಮದ ಮೂಲಕ ಶಾಂತಿ ಪ್ರಾಪ್ತವಾಗುವ ಬದಲು ಸಂಘರ್ಷ ಏರ್ಪಟ್ಟಿದೆ. ದೇಶದ ಮಂದಿರುವ ಪಂಜಾಬು ಸಮಸ್ಯೆ, ಕಾಶ್ಮೀರ ಸಮಸ್ಯೆ, ಅಸ್ಸಾಂ ಸಮಸ್ಯೆ, ಗುಜರಾತ್ ಸಮಸ್ಯೆಗಳಲ್ಲದೆ ಆಂತರಿಕ ಕೋಮು ಗಲಭೆಗಳು ಇದಕ್ಕೊಂದು ನಿದರ್ಶನವಾಗಿದೆ. ಆದುದರಿಂದ ಇಂದು ನಾವು ರಾಷ್ಟ್ರೀಯ ಭಾವೈಕ್ಯತೆಯನ್ನು ಬಳಪಡಿಸುವುದು ದೇಶದ ದೇಶದ ಏಕತೆಗೆ ಪೂರಕವಾದ ವಿಚಾರವಾಗಿದೆ. ರಾಷ್ಟೀಯ ಭಾವೈಕ್ಯತೆಯು ಧರ್ಮವು ಸೂಚಿಸಿದ ಸಮಾನತ್ವ, ಸಹೋದರತ ಭಾವನೆ, ಸ್ವಾತಂತ್ರ್ಯ ಪ್ರೇಮ, ಮಾತೃಭೂಮಿಯ ವಾತ್ಸಲ್ಯ, ಅಹಿಂಸಾತ್ಮಕ ಮೌಲ್ಯಗಳನ್ನು ಒಳಗೊಂಡಿದೆ. ಈ ದೇಶದ ಪ್ರಜೆಗಳಾದ ನಾವು ಇವುಗಳನ್ನು ಅರ್ಥೈಸಿಕೊಂಡು ಬದುಕಿದರೆ ದೇಶದಲ್ಲಿ ನಿಜವಾದ ಏಕತೆ ಸಾಧಿಸಲು ಸಾಧ್ಯ.
‘ಜನನಿಯ ಜನ್ಮ ಭೂಮಿಯು ಸ್ವರ್ಗಕ್ಕಿಂತಲೂ ಹಿರಿದು’. ಜನ್ಮ ಕೊಟ್ಟ ತಾಯಿ ಮತ್ತು ಜೀವನಾಧಾರವಾದ ನಾಡು ಇವೆರಡು ಅತ್ಯಂತ ಶ್ರೇಷ್ಠವಾದುದು. ಆದುದರಿಂದ ನಾವು ಈ ದೇಶದ ಕಾನೂನಿಗೆ ಮತ್ತು ಶಿಸ್ತಿಗೆ ಬದ್ಧರಾಗಿ ವ್ಯವಹರಿಸಿದರೆ, ಈ ದೇಶದ ಸಂವಿಧಾನವನ್ನು ಗೌರವಿಸಿ ನಾವೆಲ್ಲ ಸತ್ ಪ್ರಜೆಗಳಾಗಿ ಬದುಕಿದರೆ ಈ ದೇಶದಲ್ಲಿ ಸಮಾನತೆ ಮೂಡುತ್ತದೆ. ಇದು ದೇಶದ ಏಕತೆಗೆ ಪೂರಕವಾದ ವಿಚಾರವಾಗಬಹುದು. ಆದುದರಿಂದ ಈ ದೇಶದಲ್ಲಿ ಏಕಸೂತ್ರವನ್ನು ತರಬಲ್ಲಂತಹ ತತ್ವವೆಂದರೆ ಅದು ಧರ್ಮ, ಅದಕ್ಕೋಸ್ಕರ ಧರ್ಮ ರಕ್ಷಣೆಯ ಮೂಲಕ ದೇಶದ ಏಕತೆಯನ್ನು ಸಾಧಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಾಗಿದೆ.
ರವೀಂದ್ರ ರೈ ಹರೇಕಳ