ರೆಡ್ ಕ್ರಾಸ್ ತನ್ನ ಸಾಂಪ್ರದಾಯಿಕ ಸೇವಾ ಕಾರ್ಯಗಳೊಂದಿಗೆ ಪರಿಸರ ಮಾಲಿನ್ಯದ ವಿರುದ್ಧ ಜಾಗೃತಿ, ಜನರ ಮಾನಸಿಕ ಒತ್ತಡ ನಿವಾರಣೆ ಇತ್ಯಾದಿಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಜಿಲ್ಲಾಧಿಕಾರಿ ಹಳೆ ಕಚೇರಿ ಆವರಣದಲ್ಲಿ ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ರೆಡ್ ಕ್ರಾಸ್ ಶತಮಾನೋತ್ಸವ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ರೆಡ್ ಕ್ರಾಸ್ ನೂರಾರು ಸ್ವಯಂಸೇವಕರಿಗೆ ತರಬೇತಿ ನೀಡಿದ್ದು ವಿಪತ್ತು ನಿರ್ವಹಣೆ, ಪ್ರಾಥಮಿಕ ಜೀವ ರಕ್ಷಣೆಯಂತಹ ವಿಷಯಗಳನ್ನು ನಿಭಾಯಿಸುತ್ತಿದೆ. 160 ಕ್ಕೂ ಅಧಿಕ ದೇಶಗಳಲ್ಲಿ ರೆಡ್ ಕ್ರಾಸ್ ಯುವಜನರು ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಭಾಗೀದಾರಿಕೆಯನ್ನು ಪ್ರೋತ್ಸಾಹಿಸಿರುವುದು ಶ್ಲಾಘನೀಯ ಎಂದರು.

ಜನಜಾಗೃತಿ, ಸಮುದಾಯ ಸೇವೆಗೆ ಕರ್ನಾಟಕದ ರೆಡ್ ಕ್ರಾಸ್ ಘಟಕ ಎರಡು ಬಾರಿ ಪ್ರಶಸ್ತಿ ಗೆದ್ದಿರುವುದು ವಿಶೇಷ. ಸೇವೆ ಪರಮೋಚ್ಛ ಧರ್ಮ ಎನ್ನುವಂತೆ ಹೊಸ ಕಟ್ಟಡವನ್ನು ಜನ ಕಲ್ಯಾಣದ ಕೇಂದ್ರವಾಗಿ ರೂಪಿಸಿ ಎಂದು ಅವರು ಕರೆ ಕೊಟ್ಟರು.
ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಕೇವಲ ರಕ್ತದಾನ ಕೆಲಸವನ್ನಷ್ಟೇ ಮಾಡದೆ ರೆಡ್ ಕ್ರಾಸ್ ದ.ಕ. ಜಿಲ್ಲಾ ಘಟಕವು ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬಿಟ್ಟುವ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕಾನೂನು ಪದವಿ ತರಗತಿಯಲ್ಲಿರುವಾಗ ರಕ್ತದಾನ ಮಾಡಿದ್ದೆ. ರಕ್ತದಾನದಷ್ಟು ದೊಡ್ಡ ದಾನ ಬೇರೆ ಇಲ್ಲ. ಆ ನಿಟ್ಟಿನಲ್ಲಿ ಯುವ ಜನತೆಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕೆಲಸವಾಗಲಿ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಕೋವಿಡ್ ಸಂದರ್ಭ ರೆಡ್ ಕ್ರಾಸ್ ಎಲ್ಲಾ ವರ್ಗದವರಿಗೂ ಸೇವಾಹಸ್ತ ಚಾಚಿತ್ತು. ನೂತನ ಕಟ್ಟಡವು ಇನ್ನಷ್ಟು ಸಮಾಜಮುಖಿ ಕಾರ್ಯಗಳಿಗೆ ಶಕ್ತಿ ತುಂಬಲಿ ಎಂದರು. ಶಾಸಕ ವೇದವ್ಯಾಸ ಕಾಮತ್ ಡಿ., ಐ ಆರ್ ಸಿ ಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಭಾಸ್ಕರ ರಾವ್ ಮುಖ್ಯ ಅತಿಥಿಗಳಾಗಿದ್ದರು.
ರೆಡ್ ಕ್ರಾಸ್ ಜಿಲ್ಲಾ ಘಟಕದ ಚೇರ್ಮನ್ ಶಾಂತರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಶಾಂತರಾಮ ಶೆಟ್ಟಿ ಮತ್ತು ಶತಮಾನೋತ್ಸವ ಕಟ್ಟಡ ಸಮಿತಿ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರನ್ನು ರಾಜ್ಯಪಾಲರು ಸನ್ಮಾನಿಸಿದರು. ‘ಸಮರ್ಪಣ್’ ಸ್ಮರಣ ಸಂಚಿಕೆಯ ಡಿಜಿಟಲ್ ಆವೃತ್ತಿಯನ್ನು ಅನಾವರಣಗೊಳಿಸಲಾಯಿತು.
ರೆಡ್ ಕ್ರಾಸ್ ಜಿಲ್ಲಾ ಸಮಿತಿ ಅಧ್ಯಕ್ಷ ದರ್ಶನ್ ಎಚ್. ವಿ., ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ಸತೀಶ್ ರಾವ್, ಖಜಾಂಚಿ ಮೋಹನ್ ಶೆಟ್ಟಿ ಕೆ., ನಿರ್ದೇಶಕರಾದ ಯತೀಶ್ ಬೈಕಾಂಪಾಡಿ, ಡಾ. ಸಚ್ಚಿದಾನಂದ ರೈ, ಡಾ. ಸುಮನಾ ಬೋಳಾರ್, ಗುರುದತ್ ಎಂ. ನಾಯಕ್, ಎ. ವಿಠ್ಠಲ, ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ಡಾ. ಮಂಜುಳಾ ಶೆಟ್ಟಿ, ರಾಜೇಶ್ವರಿ ಡಿ. ಶೆಟ್ಟಿ ನಿರೂಪಿಸಿದರು.