ವಿದ್ಯಾಗಿರಿ: 83ನೇ ಅಖಿಲ ಭಾರತ ಅಂತರ್ವಿವಿ ಪುರುಷ ಹಾಗೂ ಮಹಿಳೆಯರ ಅಥ್ಲೇಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿವಿ ಸಮಗ್ರ ಚಾಂಪಿಯನ್ಷಿಪ್ ಪಟ್ಟ ಪಡೆದುಕೊಂಡಿತು. ಪುರುಷ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಮಂಗಳೂರು ವಿವಿ 48(ಪುರುಷ) ಹಾಗೂ 56(ಮಹಿಳೆಯರ) ಅಂಕಗಳೊಂದಿಗೆ ಒಟ್ಟು 104 ಅಂಕ ಪಡೆದರೆ, ಕ್ಯಾಲಿಕಟ್ ವಿವಿ ಪುರುಷರಲ್ಲಿ 53 ಅಂಕ ಹಾಗೂ ಮಹಿಳೆಯರಲ್ಲಿ 41 ಅಂಕ ಪಡೆದು ಒಟ್ಟು 94 ಅಂಕ ಗಳಿಸಿ ರನ್ನರ್ಸ್ಅಪ್ ಸ್ಥಾನ ಪಡೆಯಿತು.
ಮಂಗಳೂರು ವಿವಿ ಎರಡು ವಿಭಾಗಗಳಲ್ಲಿ ಒಟ್ಟು 4 ಚಿನ್ನ, 3 ಬೆಳ್ಳಿ, 7 ಕಂಚಿನ ಪದಕ ಪಡೆದುಕೊಂಡಿತು. ಪದಕ ಪಡೆದ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ಪುರುಷ ಹಾಗೂ ಮಹಿಳೆಯರ ಮಂಗಳೂರು ವಿವಿ ತಂಡದ
ಒಟ್ಟು 72 ಜನರ ಆಟಗಾರರಲ್ಲಿ 59 ಕ್ರೀಡಾಪಟುಗಳು ಆಳ್ವಾಸ್ನ ವಿದ್ಯಾರ್ಥಿಗಳಾಗಿದ್ದರು.
ಚೆನ್ನೈನ ತಮಿಳನಾಡು ಫಿಸಿಕಲ್ ಎಜ್ಯೂಕೇಷನ್ ಆ್ಯಂಡ್ ಸ್ಪೋಟ್ರ್ಸ ವಿವಿಯಲ್ಲಿ ಶನಿವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಪುರುಷರ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ 48 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ರನ್ನರ್ಸ್ ಅಪ್ ಸ್ಥಾನ ಪಡೆಯಿತು. ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳೊಂದಿಗೆ ಒಟ್ಟು ಏಳು ಪದಕಗಳನ್ನು ಆಳ್ವಾಸ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ಪಡೆದಿದ್ದಾರೆ.
ಇದಕ್ಕೂ ಮುನ್ನ ಒಡಿಶಾದ ಭುವನೇಶ್ವರದಲ್ಲಿ ಶುಕ್ರವಾರ ಮುಕ್ತಾಯಗೊಂಡ 83ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ಮಹಿಳಾ ಕ್ರೀಡಾಕೂಟದಲ್ಲಿ 56 ಅಂಕಗಳನ್ನು ಪಡೆದ ಮಂಗಳೂರು ವಿಶ್ವವಿದ್ಯಾಲಯವು ಚಾಂಪಿಯನ್
ಪಟ್ಟ ಅಲಂಕರಿಸಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.