ಪ್ರಸಂಗ ಮುಹೂರ್ತ ಪೂಜೆ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕನ್ನಡ ಸಂಘ ಬಹರೈನ್ ಸಭಾಂಗಣದಲ್ಲಿ ನೆರವೇರಿತು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ಕೆ.ಭಂಡಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಕೋರಿದರು. ಅರ್ಚಕರಾದ ಶ್ರೀಕೃಷ್ಣ ಅಡಿಗ ಕದ್ರಿ, ಶ್ರೀ ಸತ್ಯ ಶಂಕರ ಬರೆ ಆಶೀರ್ವಚನ ನೀಡಿದರು. ಪಟ್ಲ ಸಂಭ್ರಮ 2023 ಮುಂಬರುವ ಅಕ್ಟೋಬರ್ 20 ಕ್ಕೆ ಅದ್ದೂರಿಯಾಗಿ ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ. ಈ ವರ್ಷದ ಯಕ್ಷಗಾನ ಅಭ್ಯಾಸಕ್ಕೆ ಪ್ರಸಂಗ ಮುಹೂರ್ತವು ನೆರವೇರಿತು. ಬಹರೈನ್ ಸೌದಿಯ ಯಕ್ಷಗಾನ ಕಲಾವಿದರು, ಅತಿಥಿಕಲಾವಿದರನ್ನೊಳಗೊಂಡು ಅಭಿನವ ವಾಲ್ಮೀಕಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಿರಿಕಂಠದ ಭಾಗವತಿಕೆಯೊಂದಿಗೆ ತಾಯ್ನಾಡ ತೆಂಕುಬಡಗಿನ ಸುಪ್ರಸಿದ್ಧ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ , ಖ್ಯಾತ ಹಿರಿಯ ಕಲಾವಿದ ಶೇಖರ್ ಡಿ.ಶೆಟ್ಟಿಗಾರ್ ದುಬೈ, ಹಿಮ್ಮೇಳವಾದಕ ರೋಹಿತ್ ಉಚ್ಚಿಲ ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ.
ಘಟಕದ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತಾಡಿದರು. ನೂರಾರು ಜನ ಕಲಾಭಿಮಾನಿಗಳು ನೆರೆದಿದ್ದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶ್ರೀ ಸುಭಾಶ್ಚಂದ್ರ, ಕನ್ನಡ ಸಂಘದ ಅಧ್ಯಕ್ಷ ಶ್ರೀ ಅಮರನಾಥ್ ರೈ ಮೊದಲಾದ ಗಣ್ಯರು ಪಟ್ಲ ಸಂಭ್ರಮ 2023 ಕಾರ್ಯಕ್ರಮಕ್ಕೆ ಶುಭಕೋರಿದರು.
ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್ ರಾವ್ ಪೇಜಾವರ ಸ್ವಾಗತಿಸಿ ನಿರೂಪಿಸಿದರು. ಉಪಕಾರ್ಯದರ್ಶಿ ಶ್ರೀ ನವೀನ್ ಭಂಡಾರಿ ವಂದನಾರ್ಪಣೆಗೈದರು.