ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ಬಹು ವಿಜೃಂಭಣೆಯಿಂದ ನಡೆದಿವೆ. ಇದರ ಯಶಸ್ಸಿಗೆ ಶ್ರಮಿಸಿದ ಸರ್ವ ಸದಸ್ಯರು ಹಾಗೂ ಮುಂದಾಳತ್ವ ವಹಿಸಿದ್ದ ಅಧ್ಯಕ್ಷರಾದ ಇನ್ನಾ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ. ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಿದ ಅಧ್ಯಕ್ಷರನ್ನು ಇಂದು ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ಸ್ ಫೋರಮಿನ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಹೇಳಿದರು. ಅವರು ಜು.1 ರಂದು ಸಂಸ್ಥೆಯು ಮೀರಾರೋಡ್ ರೈಲ್ವೆ ಸ್ಟೇಶನ್ ಬದಿಯಲ್ಲಿರುವ ಸುರಭಿ ಹೋಟೇಲಿನ ಸಭಾಗೃಹದಲ್ಲಿ ಆಯೋಜಿಸಿದ್ದ ಕೌಟಂಬಿಕ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡುತ್ತಾ ಅಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಸರ್ವರ ಸಹಕಾರದಿಂದ ನಿಭಾಯಿಸಿದ್ದೇನೆಂಬ ಸಂತೃಪ್ತಿ ಇದೆ. ಎಲ್ಲಾದರೂ ಅಪ್ಪಿತಪ್ಪಿ ತಿಳಿಯದೆ ತಪ್ಪಾಗಿದ್ದರೆ ಕ್ಷಮಿಸಿ ಮುಂದಿಗೂ ತಮ್ಮ ಸಹಕಾರವಿರಲಿ ಎಂದು ಹೇಳಿದರು.
ಆರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಪ್ರಾರ್ಥನೆ, ಹರೀಶ್ ಶೆಟ್ಟಿ ಕಾಪುರವರ ಮುಂದಾಳತ್ವದಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಇನ್ನಾ ಚಂದ್ರಹಾಸ್ ಕೆ. ಶೆಟ್ಟಿ, ಗೀತಾ ಚಂದ್ರಹಾಸ ಶೆಟ್ಟಿ ಹಾಗೂ ಮಕ್ಕಳಾದ ನಿಧಿ, ಯಶ್ ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಮತಿ ಎಜುಕೇಶನ್ ಟ್ರಸ್ಟಿನ ಕಾರ್ಯಧ್ಯಕ್ಷ ಅರುಣೋದಯ ರೈ ಬೆಳಿಯೂರುಗುತ್ತು, ಸಂಸ್ಥೆಯ ಮಾಜಿ ಅಧ್ಯಕ್ಷ ಡೆಲ್ಟಾ ಶಿವರಾಮ್ ಶೆಟ್ಟಿ, ಮಾಜಿ ಸಲಹೆಗಾರ ಕಿಶೋರ್ ಶೆಟ್ಟಿ ಕುತ್ಯಾರು, ಸಂಚಾಲಕ ದಿವಾಕರ್ ಎಮ್. ಶೆಟ್ಟಿ ಶಿರ್ಲಾಲ್, ಉಪಾಧ್ಯಕ್ಷ ಉಪಾಧ್ಯಕ್ಷ ಮನ್ಮಥ ಕಡಂಬ, ಗೌರವ ಕಾರ್ಯದರ್ಶಿ ಹರ್ಷಕುಮಾರ್ ಡಿ. ಶೆಟ್ಟಿ, ಕೋಶಾಧಿಕಾರಿ ರಮೇಶ್ ಎ. ಶೆಟ್ಟಿ, ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜತೆ ಕೋಶಾಧಿಕಾರಿ ಸತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಮತಿ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಧ್ಯಕ್ಷ ಉದಯ್ ಶೆಟ್ಟಿ ಮಲಾರ್ ಬೀಡು, ಹರೀಶ್ ಶೆಟ್ಟಿ ಕಾಪು, ದಾಮೋದರ್ ಶೆಟ್ಟಿ ಉಪಸ್ಥಿತರಿದ್ದರು.
ಸ್ನೇಹ ಕೂಟದಲ್ಲಿ ಉಪಸ್ಥಿತರಿದ್ದ ಸದಸ್ಯರಲ್ಲಿ ಅಧೃಷ್ಟ ಚೀಟಿ ತೆಗೆದು ಇಬ್ಬರಿಗೆ ವಸಾಯಿ ಕೌಶಿಕಿ ಸಿಲ್ಕ್ ಎನ್. ಎಕ್ಸ್ ವತಿಯಿಂದ ಪ್ರಥಮ ಹಾಗೂ ದ್ವಿತೀಯ ಕಾಂಜೀವರಂ ಸೀರೆಯ ಬಹುಮಾನಗಳನ್ನು ನೀಡಲಾಯಿತು ಹಾಗೂ ಎಲ್ಲಾ ಸದಸ್ಯರಿಗೆ ರಿಯಾಯಿತಿ ದರದ ಸೀರೆ ಖರೀದಿಯ ಕೂಪನನ್ನು ಹಂಚಲಾಯಿತು. ಗೌರವ ಕಾರ್ಯದರ್ಶಿ ಹರ್ಷ ಕುಮಾರ್ ಡಿ. ಶೆಟ್ಟಿ ಸ್ವಾಗತಿಸಿ ಜತೆ ಕಾರ್ಯದರ್ಶಿ ಅನಿಲ್ ಶೆಟ್ಟಿ ವಂದಿಸಿದರು. ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.