ಅಮೇರಿಕಾದ ಪ್ರತಿಷ್ಠಿತ ತುಳು ಸಂಸ್ಥೆ ಆಲ್ ಅಮೇರಿಕಾ ತುಳು ಅಸೋಸಿಯೇಷನ್ (ರಿ) AATA ದ ನೂತನ ಅಧ್ಯಕ್ಷರಾಗಿ ಫ್ಲೋರಿಡಾದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
AATA ಸಂಸ್ಥೆಯ ವಾರ್ಷಿಕ ಬಿಸು ಪರ್ಬದ-2023 ಸಂದರ್ಭಕ್ಕೂ ಮುನ್ನ ಈ ಆಯ್ಕೆ ಪ್ರಕ್ರಿಯೆಯನ್ನು ಪ್ರತಿಜ್ಞಾ ವಿಧಿ ಸ್ವೀಕರಿಸುವುದರೊಂದಿಗೆ ಅಂತಿಮಗೊಳಿಸಲಾಯಿತು. ಅಂತರ್ಜಾಲ ತಾಣ ವೇದಿಕೆಯಲ್ಲಿ ನಡೆದ ಬಿಸು ಪರ್ಬ-2023 ಆಚರಣೆಯ ನೆನಪಲ್ಲಿ ಗೌರವ ಅತಿಥಿಯಾಗಿ ನಿಟ್ಟೆ ವಿಶ್ವವಿದ್ಯಾಲಯದ ತುಳು ಅಧ್ಯಯನ ಪೀಠದ ಮುಖ್ಯಸ್ಥೆ ಡಾ. ಸಾಯೀಗೀತ ಅವರು ಅಬ್ಬಕ್ಕ ಗೇನದ ಚಾವಡಿ ಹೆಸರಿನಲ್ಲಿ ತುಳು ಅಂತರ್ಜಾಲ ಗ್ರಂಥಾಲಯವನ್ನು ಉದ್ಘಾಟಿಸಿ ”ಜ್ಞಾನಸುಧೆಯು ದಶದಿಕ್ಕುಗಳಿಂದ ಹರಿದು ಬರಲಿ , ತುಳುವಿನ ಶ್ರೇಷ್ಠ ಜ್ಞಾನವು ವಿಶ್ವದೆಲ್ಲೆಡೆ ಪಸರಿಸಲಿ” ಎಂದು ಹಾರೈಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಸಾಫ್ಟ್ವೇರ್ ಉದ್ಯಮಿ, ಎಂ ರಿಸಲ್ಟ್ ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಶೇಖರ್ ನಾಯ್ಕ್ ಮಾತನಾಡಿ, ”ಕಠಿಣ ಶ್ರಮ ಹಾಗೂ ಧ್ರಡ ನಿರ್ಧಾರ ಯಶಸ್ಸಿನ ಹಾದಿಯನ್ನು ಸುಗಮಗೊಳಿಸುತ್ತದೆ” ಎಂದರು. ಪ್ರಖ್ಯಾತ ಸಂಶೋಧಕ ಹಾಗೂ ಯಕ್ಷಗಾನ ಕಲಾವಿದ ಇಂಡಿಯಾನಾದ ಡಾ. ರಾಜೇಂದ್ರ ಕೆದ್ಲಾಯ ಮಾತನಾಡಿ ಮುಂದಿನ ಪೀಳಿಗೆ ಕಲೆಯನ್ನು ಅರಿತು, ತನ್ನದಾಗಿಸುತ್ತದೆ ಎನ್ನುವ ಆಶಯದೊಂದಿಗೆ ಇಂಗ್ಲಿಷ್ ನಲ್ಲಿ ಯಕ್ಷಗಾನ ಕಲಿಕೆ ಆರಂಭಿಸಿರುವುದಾಗಿ ಹೇಳಿದರು. ಹಾಲಿವುಡ್ ನಲ್ಲಿ ತನ್ನದೇ ಆದ ಛಾಪು ಹೊಂದಿರುವ ಶ್ರೀ ರಘುರಾಮ್ ಶೆಟ್ಟಿಯವರು ಮಾತನಾಡಿ, ‘ತಾಯ್ನಾಡಿನ ಕಲೆಗಳನ್ನು ಅಂತರರಾಷ್ತ್ರೀಯ ಮಟ್ಟದಲ್ಲಿ ಪರಿಚಯಿಸುತ್ತಿರುವ ತಮ್ಮ ಪ್ರಯತ್ನದ ಬಗ್ಗೆ ತಿಳಿಸಿದರು.
ನಿರ್ಗಮನ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಭಾಸ್ಕರ್ ಶೇರಿಗಾರ್ ಕಳೆದ ಎರಡು ವರ್ಷಗಳಲ್ಲಿ ಅಮೇರಿಕಾ ಹಾಗೂ ಕೆನಡಾದ ಮಕ್ಕಳಿಗೆ ಹಾಗು ಹಿರಿಯರಿಗೆ ತುಳು ಭಾಷಾ ಕಲಿಕೆ, ತುಳು ಲಿಪಿ ಕಲಿಕೆ, ಬಿಸು ಹಬ್ಬ ಆಚರಣೆ, ತುಳು ಉಚ್ಚಯ, ಕಾಲೇಜು ಅಭ್ಯಾಸದ ಕುರಿತ ತರಬೇತಿ, ಮಕ್ಕಳಿಗೆ ವೈಜ್ಞಾನಿಕ ಹಾಗು ವೈದ್ಯಕೀಯ ವಿಷಯಗಳ ಅರಿವು ಮೂಡಿಸುವುದು, ತುಳುನಾಡಿನ ಅಡಿಗೆ ಪಾಕ ಮೊದಲಾದ ಪರಿಣಾಮಕಾರಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಯಿತು ಎಂದು ತಿಳಿಸಿದರು.
ತುಳು ಲಿಪಿಯಲ್ಲಿರುವ ತಾಳೆಗರಿ ಗ್ರಂಥಗಳ ಅಧ್ಯಯನ ಹಾಗೂ ಭಾಷಾಂತರ ಇನ್ನೊಂದು ಬಹು ಮುಖ್ಯ ಸಾಧನೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆರಂಭವಾಗಿರುವ ರಾಣಿ ಅಬ್ಬಕ್ಕ ತುಳು ಆನ್ಲೈನ್ ಲೈಬ್ರರಿ, ತುಳು ಭಾಷೆಯಲ್ಲಿರುವ ಎಲ್ಲ ಸಾಹಿತ್ಯ ಸಂಪತ್ತನ್ನು ಕಾಯ್ದುಕೊಳ್ಳುವ ಒಂದು ಪ್ರಯತ್ನವಾಗಿದೆ ಎಂದು ತಮ್ಮ ಅಧ್ಯಕ್ಷ ಕಾಲಾವಧಿಯ ಕಾರ್ಯಕ್ರಮಗಳ ವಿವರ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟಲ್ ಅವರು ತನ್ನ ಅವಿರೋಧ ಆಯ್ಕೆಯ ಆ ಬಗ್ಗೆ ಆಭಾರಿಯಾಗಿರುವುದಾಗಿ ತಿಳಿಸಿ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಶ್ರೇಷ್ಠತೆಯನ್ನು ಕಾಯ್ದುಕೊಳ್ಳುವುದು ತನಗೆ ಒಂದು ಸವಾಲು ಆದರೂ ಎಲ್ಲ ಸದಸ್ಯರ ಮತ್ತು ತುಳುವರ ಸಹಕಾರದೊಂದಿಗೆ ಆಟ ಸಂಸ್ಥೆಯನ್ನುಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಸುಭಾಷ್ ಶೆಟ್ಟಿ, ಪ್ರಸನ್ನ ಲಕ್ಷ್ಮಣ್ , ಅನಿತಾ ನಾಯಕ್ ಡಾ. ರೋಷನ್ ಪಾಯಸ್, ರಾಮದಾಸ್ ಕುಲಾಲ್ ಮತ್ತು ಫ್ರೆಡ್ ಫೆರ್ನಾಂಡಿಸ್ ಅವರುಗಳು ನೂತನ ಪದಾಧಿಕಾರಿಗಳಾಗಿ ನೇಮಕ ಗೊಂಡರು.
ಉಳಿದಂತೆ ಉಪಾಧ್ಯಕ್ಷರಾಗಿ ಶಿರೀಶ್ ಶೆಟ್ಟಿ ಮತ್ತು ಸುದರ್ಶನ್ ಶೆಟ್ಟಿ , ಕಾರ್ಯದರ್ಶಿಯಾಗಿ ಪೂಜಾ ಶೆಟ್ಟಿ , ಸಹ ಕಾರ್ಯದರ್ಶಿಯಾಗಿ ರಂಜನಿ ಅಸೈಗೋಳಿ, ಖಜಾಂಜಿಯಾಗಿ ಸಂತೋಷ್ ಶೆಟ್ಟಿ, ಸಹ ಖಜಾಂಜಿಯಾಗಿ ಸುದೀಪ್ ಹೆಬ್ಬಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿವಸ್ವಾನ್ ಶೆಟ್ಟಿ , ಯುವ ರಾಯಬಾರಿಯಾಗಿ ಆರ್ಯಮಾನ್ ಶೆಟ್ಟಿ ಮತ್ತು ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿ ಡಾ. ಮೋಹನಚಂದ್ರ ಅವರು ಆಯ್ಕೆಯಾಗಿದ್ದಾರೆ.
ಸಭಾ ಕಾರ್ಯಕ್ರಮವನ್ನು ಪ್ರಸನ್ನ ಲಕ್ಷ್ಮಣ್ ಹಾಗು ಲಾವಣ್ಯ ಲಕ್ಷ್ಮಣ್ ನಿರೂಪಿಸಿದರೆ , ಸಾಂಸ್ಕೃತಿಕ ಕಾರ್ಯಕ್ರಮಡಾ ನಿರೂಪಕರಾಗಿ ಸುಷ್ಮಾ ಜಯಚಂದ್ರ ಗಮನಸೆಳೆದರು. ಶಾಲಿನಿ ಕೆ.ಪಿ. ಶೆಟ್ಟಿಯವರ ಪ್ರಾರ್ಥಿಸಿದರೆ ಡಾ. ಶ್ರೀಧರ್ ಆಳ್ವ ಸ್ವಾಗತಿಸಿದರು . ಪ್ರಕಾಶ್ ಉಡುಪ ಅವರು ಧನ್ಯವಾದ ಸಮರ್ಪಿಸಿದರು. ಆಟದ ಸದಸ್ಯ ವರ್ಗದಿಂದ ತುಳುನಾಡಿನ ಸೊಬಗಿನ ಮನರಂಜನಾ ಕಾರ್ಯಕ್ರಮಗಳು ಚೇತೋಹಾರಿಯಾಗಿ ನಡೆದವು.