ವಕೀಲ ವೃತ್ತಿಯ ಜತೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರವೃತ್ತಿಯನ್ನು ಮೈಗೂಡಿಸಿಕೊಂಡ ವಿಶೇಷ ವ್ಯಕ್ತಿಯೋರ್ವರನ್ನು ನಾವು ಪರಿಚಯಿಸುತ್ತಿದ್ದೇವೆ.
ಸಾಮಾಜಿಕ ಸಂಘಟಕ, ಯಕ್ಷಸಾಧಕ, ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಹಾಗೂ ಸದ್ಯ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಮಜಿಬೈಲ್ ನ ಹಿರಿಮೆಯ ಗರಿ ನ್ಯಾಯವಾದಿ ಯಂ. ದಾಮೋದರ ಶೆಟ್ಟಿಯವರು ಮಂಜೇಶ್ವರದ ಮೂಡಂಬೈಲು ದಿ. ಲಕ್ಷಣ ಮತ್ತು ದಿ.ತಿಮ್ಮಕ್ಕ ದಂಪತಿಗಳ ಸುಪುತ್ರನಾಗಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲ್ ಶಾಲೆ, ಪ್ರೌಡ ಶಿಕ್ಷಣವನ್ನು ಮೀಯಪದವು ಶಾಲೆ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೆನರಾ ಕಾಲೇಜು ಉರ್ವ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜಿನಲ್ಲಿ ಪೂರೈಸಿದರು. ಜೀವನ ನಿರ್ವಹಣೆಗಾಗಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ದುಡಿದು ನಂತರ ಕಲಿತಂತಹ ಕಾನೂನು ಪದವಿಯನ್ನು ಸದುಪಯೋಗಪಡಿಸುವ ಉದ್ದೇಶದಿಂದ ವಕೀಲ ವೃತ್ತಿಯನ್ನು ತೊಡಗಿಸಿಕೊಂಡು ಓರ್ವ ಆದರ್ಶ ಕಾನೂನು ತಜ್ಞರಾಗಿ ಸೇವಾಕೈಂಕರ್ಯವನ್ನು ಮುಂದುವರಿಸುತ್ತಿದ್ದಾರೆ.
ಯಕ್ಷ ಸಾಧನೆ : ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಇವರು ಕಾಲೇಜು ದಿವಸಗಳಲ್ಲಿ ಯಕ್ಷಗಾನದ ಪ್ರೌಢ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಉಪ್ಪಳ ದಿ. ಕೃಷ್ಣ ಮಾಸ್ಟರ್ ರವರಿಂದ ಯಕ್ಷಗಾನ ನಾಟ್ಯವನ್ನು, ಮಾಂಬಾಡಿ ಸುಬ್ರಹ್ಮಣ್ಯ ಭಟ್ ಮತ್ತು ಬೆಳಿಂಜ ವೆಂಕಪ್ಪ ರೈಯವರಿಂದ ಭಾಗವತಿಕೆಯನ್ನು ಹಾಗು ಪೆರುವಾಯಿ ನಾರಾಯಣ ಶೆಟ್ಟಿಯವರಿಂದ ಬಣ್ಣಗಾರಿಕೆಯನ್ನು ಕಲಿತರು. ಮುಮ್ಮೇಳ- ಹಿಮ್ಮೇಳ ಪ್ರಾವೀಣ್ಯತೆಯನ್ನು ಪಡೆದು ರಾವಣ, ಅತಿಕಾಯ, ಅರ್ಜುನ, ದೇವೇಂದ್ರ, ಶುಂಭ, ಕಂಸ, ದಶರಥ, ರಕ್ತಬೀಜ, ಇಂದ್ರಜಿತ್, ಕರ್ಣ ಹೀಗೆ ಹತ್ತು ಹಲಾವರು ವೇಷಗಳಿಗೆ ಜೀವ ತುಂಬಿ ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಅಭಿಮಾನಿಗಳ ತಂಡವನ್ನೇ ರೂಪಿಸಿಕೊಂಡಿದ್ದಾರೆ. ಉತ್ತಮವಾದ ವಾಕ್ತಚುರ್ಯವನ್ನು ಹೊಂದಿರುವ ಶೆಟ್ಟರು ತಾಳಮದ್ದಳೆಯ ಅರ್ಥದಾರಿಯಾಗಿ ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜನ ಪಾತ್ರದಲ್ಲಿ ಮಿಂಚಿ ಕಲಾರಸಿಕರ ಮನಗೆದ್ದಿದ್ದಾರೆ.
ಸಂಘ- ಸಂಸ್ಥೆಗಳ ಸಕ್ರಿಯತೆ :
ಇತಿಹಾಸ ಪ್ರಸಿದ್ಧವಾದ ಮಂಜೇಶ್ವರದ ಜಯ ವಿಜಯ ಜೋಡುಕರೆ ಕಂಬಳ ಸಮಿತಿಯ ಮಾಜಿ ಅದ್ಯಕ್ಷರಾಗಿ, ಕರ್ನಾಟಕ ಸರಕಾರದ ಕರ್ನಾಟಕ ಯಕ್ಷಗಾನ ಅಕಾಡೆಮಿಗೆ ಸತತ ಎರಡು ಬಾರಿ ಸದಸ್ಯರಾಗಿ, ಕಾಸರಗೋಡು ಜಿಲ್ಲಾ ಬಂಟರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ, ರಾಮಕೃಷ್ಣ ವಿದ್ಯಾಲಯದ ಮಾಜಿ ಕಾರ್ಯದರ್ಶಿ, ಬಂಟ್ಸ್ ಮಜಿಬೈಲ್ ಹಾಗೂ ಗೆಳೆಯರ ಬಳಗ (ರಿ) ಬಲ್ಲಂಗುಡೇಲ್ ನ ಗೌರವ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ. ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತಿ ಕ್ಷೇತ್ರದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕಳೆದ ಹಲವಾರು ವರ್ಷಗಳಿಂದ ಬಯಲಾಟ, ತಾಳಮದ್ದಳೆ ಕೂಟಗಳನ್ನು ಸೇವಾಕರ್ತರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಅದೇಷ್ಟೋ ಜನ ಕಲಿತು ನಗರ ಪ್ರದೇಶಕ್ಕೆ ಹೋಗಿ ವೃತ್ತಿ ಜೀವನದ ಸುಖಲೋಲುಪತೆಯನ್ನು ಅನುಭವಿಸುವವರಿದ್ದಾರೆ. ಆದರೆ ಸರಳ ಸಜ್ಜನಿಕೆಯಿಂದ ತಾನು ಹುಟ್ಟಿದ ನಾಡಿಗಾಗಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಅಹರ್ನಿಶಿ ಸೇವೆ ನೀಡುತ್ತಿರುವ
ಯಂ.ದಾಮೋದರ ಶೆಟ್ಟಿಯವರದ್ದು ಅಪರೂಪದ ವ್ಯಕ್ತಿತ್ವವಾಗಿದೆ.
ಪತ್ನಿ ರಾಜಶ್ರೀ ಶೆಟ್ಟಿ ಮಕ್ಕಳಾದ
ಡಾ. ಪ್ರಜ್ವಲ್ ಶೆಟ್ಟಿ (ದಂತ ವೈದ್ಯ),
ಕಾರ್ತಿಕ್ ಶೆಟ್ಟಿ ( ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ) ಜತೆ ಸೋಯಿಪಕಲ್ಲು ಎಂಬಲ್ಲಿ ಸಂತೃಪ್ತ ಸಂಸಾರ ಸಾಗಿಸುವ ಇವರಿಗೆ ನಮ್ಮ ಮಾಧ್ಯಮದ ವತಿಯಿಂದ ಶುಭಾಶಯಗಳು.
ವಿಜಯ್ ಕುಮಾರ್ ಶೆಟ್ಟಿ, ಗಾಣದಮೂಲೆ ಮಜಿಬೈಲ್ (ದುಬೈ)