ಐಕಳ ಶ್ರೀ ಹರೀಶ್ ಶೆಟ್ಟಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಎಂಬ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದು ಇಂದು ವಿಶ್ವ ವಿಖ್ಯಾತರಾಗಿದ್ದಾರೆ. ಕಾರಣ ಐಕಳ ಹರೀಶ್ ಶೆಟ್ಟಿ ಅವರ ಅಸಾಧಾರಣ ಸಂಘಟನಾ ಚಾತುರ್ಯ, ಅಪ್ರತಿಮ ಸಂಘ ನೇತೃತ್ವ ಹಾಗೂ ದೂರಾಲೋಚನೆಯ ಕಾರ್ಯಪಟುತ್ವ. ಎರಡು ಗುತ್ತು ಮನೆತನಗಳ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದ್ದ ರಾಮಣ್ಣ ಶೆಟ್ಟಿ ದೇವಕಿ ಶೆಟ್ಟಿ ದಂಪತಿಯರಿಗೆ ಪುತ್ರನಾಗಿ ಜನಿಸಿದ ಐಕಳ ಅವರು ಬಾಲ್ಯದ ದಿನಗಳಿಂದಲೇ ವಿಶಿಷ್ಟ ಗುಣ ಸ್ವಭಾವವನ್ನು ಹೊಂದಿದ್ದು ಓರಗೆಯ ಮಕ್ಕಳಿಗಿಂತ ಭಿನ್ನವಾಗಿ ಗುರುತಿಸಲ್ಪಡುತ್ತಿದ್ದರು.
ಆಕರ್ಷಕ ಕಂಗಳ ಗುಂಗುರು ಕೂದಲಿನ ಗೌರವ ವರ್ಣದ ಐಕಳ ಅವರು ಸ್ಫುರದ್ರೂಪಿಯಾಗಿದ್ದರು. ಬೆಳೆಯುತ್ತಿದ್ದಂತೆ ಹುಡುಗರ ಗುಂಪಿಗೆ ಮುಖಂಡನಾಗಿ, ಆಟ ಪಾಠಗಳೆರಡರಲ್ಲೂ ಮುಂದಿದ್ದು ಶಿಕ್ಷಕ ವರ್ಗದ ಪ್ರೀತಿಗೆ ಪಾತ್ರರಾಗಿದ್ದರು. ತನ್ನ ದೇಹ ಸೌಷ್ಠವವನ್ನು ಕಾಪಾಡುವುದರಲ್ಲಿ ಮೊದಲ ಆದ್ಯತೆ ನೀಡುತ್ತಿದ್ದ ಕಾರಣ ಕಾಲೇಜು ಮೆಟ್ಟಿಲು ಹತ್ತುವ ವೇಳೆಗೆ ಮಧ್ಯಮ ಆಳ್ತನ ಆಕರ್ಷಕ ಮೈಕಟ್ಟು. ಮುಖದಲ್ಲಿ ಮಿನುಗುವ ಆತ್ಮ ವಿಶ್ವಾಸದ ಮಂದಹಾಸದಿಂದ ಚಿತ್ರ ನಟರೊಬ್ಬರನ್ನು ಹೋಲುತ್ತಿದ್ದರು. ಕಾಲೇಜು ಅಂತರ್ ಕಾಲೇಜು ವಿಶ್ವವಿದ್ಯಾಲಯ ಮಟ್ಟದ ದೇಹದಾರ್ಢ್ಯತೆ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ, ಮುಂದೆ ರಾಷ್ಟ್ರಮಟ್ಟದ ಭಾರತ ಕಿಶೋರ್ ಸ್ಫರ್ಧೆ ವಿಜೇತರಾದ ಕಾರಣ ಕಾಲೇಜು ಜೀವನದಲ್ಲಿ ಹರೀಶ್ ಶೆಟ್ಟಿಯವರು ಅತ್ಯಂತ ಪ್ರಸಿದ್ಧರಾದರು. ಅವರ ಈ ಯಶಸ್ಸು ಮುಂದೆ ವಿಜಯಾ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದವಿಗೇರುವುದಕ್ಕೆ ಕಾರಣವಾಯಿತು. ಆ ಹೊತ್ತಿನ ವಿದ್ಯಾರ್ಥಿ ಸಂಘಟನೆ ಐಕಳ ಅವರನ್ನು ಜಿಲ್ಲಾ ವಲಯ ಹಾಗೂ ಸರ್ವಕಾಲೇಜು ವಿದ್ಯಾರ್ಥಿ ಸಂಘಗಳ ಪದಾಧಿಕಾರಿಯಾಗಿ ಆಯ್ಕೆಯಾಗುವಂತೆ ಅವಕಾಶ ನೀಡಿತು.
ಕಾಲೇಜು ಜೀವನದಲ್ಲಿ ಇನ್ನೊಬ್ಬ ಸಂಘಟಕ ಕರ್ನಿರೆ ವಿಶ್ವನಾಥ್ ಶೆಟ್ಟಿ ಅವರ ಆತ್ಮೀಯ ಮಿತ್ರರಾಗಿದ್ದರು. ಅವರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದರು. ಅವರ ಸ್ನೇಹ ವಿಶ್ವಾಸ ಇಂದಿನ ದಿನದವರೆಗೂ ಮುಂದುವರಿದಿದೆ. ಕರ್ನಿರೆ ವಿಶ್ವನಾಥ್ ಶೆಟ್ಟಿ ಐಕಳ ಅವರಿಗೆ ಹೆಗಲೆಣೆಯಾಗಿ ಅವರ ಪ್ರತಿ ಕಾರ್ಯದಲ್ಲಿ ಸಹಕರಿಸುತ್ತಿದ್ದಾರೆ. ಕಾಲೇಜು ಶಿಕ್ಷಣ ಮುಗಿಸಿ ಮುಂಬಯಿ ಸೇರಿದ ಐಕಳ ಪ್ರಾರಂಭದಲ್ಲಿ ಪ್ರತಿಷ್ಠಿತ ನಿರ್ಲಾನ್ ಕಂಪನಿಯಲ್ಲಿ ಉದ್ಯೋಗ ಪಡೆದರು. ಕೆಲ ಸಮಯ ಅಲ್ಲಿ ದುಡಿದ ಬಳಿಕ ತನ್ನದೇ ಆದ ಹೊಟೆಲ್ ಉದ್ಯಮ ಆರಂಭಿಸಿದರು. ಅವರ ಉದ್ಯಮಗಳಲ್ಲಿ ಮಿತ್ರ ಕರ್ನಿರೆ ಅವರು ಜೊತೆಯಾಗಿದ್ದರು.
ಬಳಿಕ ಆಗಲೇ ತನ್ನ ನಾಯಕತ್ವ ಸಂಘಟನಾ ಚಾತುರ್ಯದಿಂದ ಹೆಸರು ಗಳಿಸಿದ್ದ ಐಕಳ ಸಾಯಿ ಸಂಧ್ಯಾ ಆರ್ಟ್ಸ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಅನೇಕ ಸಮಾನ ಆಸಕ್ತ ಯುವಕರನ್ನು ಒಟ್ಟುಗೂಡಿಸಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದರು. ಇವರ ಸಂಘಟನಾ ಕೌಶಲ್ಯ ನಾಯಕತ್ವದ ವಿಶೇಷ ಗುಣಗಳನ್ನು ಸೂಕ್ಷ್ಮವಾಗಿ ಗಮನಿಸಿದ ಭುಜಂಗ ಶೆಟ್ಟಿ ಅವರು ಆಗಿನ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾಗಿದ್ದ ಮನಮೋಹನ ಶೆಟ್ಟರಿಗೆ ಅವರನ್ನು ಪರಿಚಯಿಸಿ ಸಮಿತಿಯಲ್ಲಿ ಕ್ರೀಡಾಸಮಿತಿ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಸಲಹೆ ನೀಡುತ್ತಾರೆ. ಆ ಸಮಯ ಅವರ ಸಂಘಟನೆಯ ಚಾಣಾಕ್ಷತನ ಮುಂಬಯಿಯ ಸರ್ವ ಸಮುದಾಯದ ತುಳು ಕನ್ನಡಿಗರಿಗೆ ಪರಿಚಯಿಸಲ್ಪಟ್ಟಿತು. ಬಳಿಕ ಐಕಳ ಹಿಂದಿರುಗಿ ನೋಡಲಿಲ್ಲ. ಬಂಟರ ಸಂಘ ಅವರ ಸಂಘಟನಾ ಸಾಮರ್ಥ್ಯ ಪ್ರಕಟನೆಗೆ ವೇದಿಕೆಯಾಯಿತು. ಬಳಿಕ ಮುಂಬಯಿ ಬಂಟರ ಸಂಘದ ಉನ್ನತ ಹುದ್ದೆಗಳನ್ನು ಅಲಂಕಲರಿಸುತ್ತಾ ಅನತಿ ಅವಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಅವರ ಕಾರ್ಯಾವಧಿ ಬಂಟರ ಸಂಘದ ಸುವರ್ಣ ಯುಗವೆನಿಸಿತು. ಬಡ ವರ್ಗದ ಮಧ್ಯಮ ವರ್ಗದ ಬಂಟರಿಗೆ ಬಂಟರ ಸಂಘದ ದ್ವಾರ ಮುಕ್ತವಾಯಿತು. ಒಂಬತ್ತು ಪ್ರಾದೇಶಿಕ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ಬಂಟರ ಸಂಘ ವಿಶ್ವ ಪ್ರಸಿದ್ಧಿ ಪಡೆಯಿತು. ಕ್ರೀಡೆಗೆ ಅಪೂರ್ವ ಪ್ರೋತ್ಸಾಹ, ಬಂಟ ಸದಸ್ಯರ ಹಾಗೂ ಅವರ ಮಕ್ಕಳ ಪ್ರತಿಭೆಯ ಪ್ರಕಾಶನಕ್ಕೆ ಬಂಟರ ಸಂಘ ವೇದಿಕೆಯಾಯಿತು.
ಬಂಟರ ಸಂಘದ ಪರಿಸರ ಹೊಸಕಳೆಯಿಂದ ಜೀವ ತುಂಬಿ ನಗರದ ಬಂಟ ಬಾಂಧವರು ಅಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸತೊಡಗಿದರು. ಇವರ ಅವಧಿಯಲ್ಲಿ ಸಂಘಟಿಸಿದ್ದ ಬಂಟರ ಕ್ರೀಡೋತ್ಸವಗಳು ನಗರದ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಜನರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ಸಮಿತಿಗೆ ಸಶಕ್ತ ಕ್ರಿಯಾಶೀಲ ವ್ಯಕ್ತಿಗಳ ಆಯ್ಕೆಯೂ ನಡೆಯುತ್ತಿತ್ತು.
ಆರ್ಥಿಕವಾಗಿ ಹಿಂದುಳಿದ ಸಮುದಾಯದ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹಧನ, ಪ್ರತಿಭಾವಂತ ಮಕ್ಕಳಿಗೆ ವಿಶೇಷ ಸಹಾಯ, ರಕ್ತದಾನ ಶಿಬಿರ, ವೈವಿಧ್ಯಮಯ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳು ಎಡೆ ಬಿಡದೆ ನಡೆಯುತ್ತಿದ್ದವು. ವಿವಿಧ ಹಬ್ಬ ಹರಿದಿನಗಳ ಆಚರಣೆ, ಬಂಟರ ಸಾಂಪ್ರದಾಯಿಕ ಆಚರಣೆಗಳು, ಧಾರ್ಮಿಕ ಕಾರ್ಯಕ್ರಮಗಳು ಎಗ್ಗಿಲ್ಲದೆ ನಡೆಯತೊಡಗಿದವು. ಬಂಟರ ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಯ ಸದಸ್ಯರು ಉತ್ಸಾಹದಿಂದ ಭಾಗವಹಿಸತೊಡಗಿದರು. ಈ ಅವಧಿಯಲ್ಲಿ ಕರ್ನಿರೆ ವಿಶ್ವನಾಥ್ ಶೆಟ್ಟಿ ಸೇರಿದಂತೆ ಇತರ ಸದಸ್ಯರ ಯೋಗದಾನವೂ ಉಲ್ಲೇಖನೀಯವಾಗಿತ್ತು.
ಮುಂಬಯಿ ನಗರದ ಅನ್ಯ ಸಮುದಾಯದ ಜನತೆ ಐಕಳ ಅವರ ಕ್ರಿಯಾಶೀಲ ಸಂಘಟನೆ, ಸರಳ ಸ್ವಭಾವ, ವಿನಮ್ರ ನಡೆ ನುಡಿಗಳಿಂದ ಪ್ರಭಾವಿತರಾಗಿದ್ದರು. ಆ ಸಮಯ ವಿವಿಧ ಕಡೆಗಳಿಂದ ರಾಜಕೀಯ ಪಕ್ಷ ಸೇರಿಕೊಳ್ಳುವಂತೆ ಆಹ್ವಾನಗಳು ಬಂದಿದ್ದರೂ ಐಕಳ ಅವರು ನಯವಾಗಿ ನಿರಾಕರಿಸಿದ್ದರು. ಮುಂಬಯಿಯ ಪ್ರತಿಷ್ಠಿತ ಕರ್ನಾಟಕ ಸಂಘ ಅವರಿಗೆ ಹೃದಯವಂತರು ಪ್ರಶಸ್ತಿ ನೀಡಿ ಗೌರವಿಸಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಅವರ ಮುಡಿಗೇರಿತು. ಮೂಲ್ಕಿ ಸುಂದರರಾಮ್ ಶೆಟ್ಟಿ ಸಂಸ್ಮರಣ ಪ್ರಶಸ್ತಿಯೂ ದೊರಕಿತು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಸಾರ್ವಭೌಮ ಎಂಬ ಗೌರವ ಗ್ರಂಥ ಪ್ರಕಟಿಸಿ ಅದ್ದೂರಿಯಾಗಿ ಸಂಮಾನಿಸಿತು. ಮುಂಬಯಿಯ, ಹೊರ ನಾಡಿನ, ಹುಟ್ಟೂರಿನ ಅನೇಕ ಸಂಘಟನೆಗಳು ವಿವಿಧ ಬಿರುದು ಪ್ರಶಸ್ತಿಗಳೊಂದಿಗೆ ಗೌರವದ ಸಂಮಾನ ನೀಡಿ ಪ್ರೋತ್ಸಾಹಿಸಿದವು.
ಕ್ರಮೇಣ ಐಕಳ ಅವರು ಪ್ರಪಂಚದ ಎಲ್ಲಾ ಬಂಟ ಸಂಘಟನೆಗಳ ಏಕೀಕರಣಕ್ಕೆ ಶ್ರಮಿಸತೊಡಗಿದರಲ್ಲದೆ ಬಂಟ ಬಾಂಧವರು ಎಲ್ಲೆಲ್ಲಿ ಹಬ್ಬಿ ಹರಡಿಕೊಂಡಿರುವರೋ ಅವರ ಸಂಪರ್ಕ ಸಾಧಿಸಿ ಸಮುದಾಯದ ಪ್ರಬಲ ಸಂಘಟನೆಗೆ ಟೊಂಕ ಕಟ್ಟಿ ಶ್ರಮಿಸತೊಡಗಿದರು. ಅಖಂಡ ಕರ್ನಾಟಕ, ದುಬೈ ಹಾಗೂ ಇತರ ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಬಂಟರನ್ನೂ ಬಂಟರ ಸಂಘದ ಜೊತೆ ಜೋಡಿಸತೊಡಗಿ ವಿಶ್ವವ್ಯಾಪಿ ಬಂಟ ಸಂಘಟನೆಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದರು. ಪಾಶ್ಚಾತ್ಯ ದೇಶಗಳಲ್ಲಿ ವಾಸಿಸುತ್ತಿರುವ ಬಂಟರೂ ಐಕಳ ಅವರ ಸಂಘಟನಾ ಸಾಮರ್ಥ್ಯದಿಂದ ಪ್ರಭಾವಿತರಾಗತೊಡಗಿದರು. ಪರಿಣಾಮ ಸ್ವರೂಪ ವಿಶ್ವ ಬಂಟರ ಸಂಘಟನೆಗಳ ಒಕ್ಕೂಟವೊಂದು ಸಶಕ್ತವಾಗಿ ಕಾರ್ಯ ನಿರ್ವಹಿಸುವಂತಾಗಲು ಅದರ ಮುಂದಾಳತ್ವ ವಹಿಸಲು ಐಕಳ ಅವರಿಗೆ ಬೇಡಿಕೆ ಬಂದ ಕಾರಣ ಐಕಳ ಹರೀಶ್ ಶೆಟ್ಟಿ ಜೀವನ ಸಾಧನೆಯ ಹೊಸ ಶಕ ಆರಂಭವಾಯಿತು. ಐಕಳ ಅವರು ಜಾಗತಿಕ ಬಂಟರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದರು. ಬಂಟರ ಸಮಗ್ರ ಪ್ರಗತಿಯ ಕನಸು ಕಂಡು ಅಧ್ಯಕ್ಷ ಗಾದಿಯೇರಿದ ಐಕಳ ಬಳಿಕ ವಿಶ್ರಾಂತಿ ಪಡೆಯಲಿಲ್ಲ.
ಸತತ ಪ್ರವಾಸ, ಬಡ ಬಂಟ ಬಾಂಧವರ ಯೋಗ ಕ್ಷೇಮ ವಿಚಾರಣೆ, ಆರ್ತರಿಗೆ, ಅಶಕ್ತರಿಗೆ, ಕಾಯಿಲೆ ಬಿದ್ದವರಿಗೆ ಆರ್ಥಿಕ ಸಹಾಯ ನೀಡಿದರಲ್ಲದೆ ನೈತಿಕ ಬಲ ತುಂಬಿದರು. ಸಮಾಜದ ಆಗರ್ಭ ಶ್ರೀಮಂತರನ್ನು ಹುಡುಕಿ ಅವರಿಂದ ದಾನ ಪಡೆದು ಬಡ ಬಂಟರಿಗೆ ವಿವಿಧ ಕಾರಣಗಳಿಂದ ಪೀಡಿತರಿಗೆ ಆರ್ಥಿಕ ಸಹಾಯ ನೀಡತೊಡಗಿದರು. ವಾಸಿಸಲು ಮನೆಯಿಲ್ಲದ ಬಂಧುಗಳಿಗೆ ಮನೆ ಕಟ್ಟಿಸಿ ಕೊಡುವಲ್ಲಿ ಅಹರ್ನಿಶಿ ದುಡಿದರು. ಇಂದು ಐಕಳ ಅವರು ಸಮಗ್ರ ಬಂಟ ಸಮುದಾಯದ ಪ್ರಭಾವಿ ನಾಯಕ. ತನಗೆ ಯೋಗ್ಯರೆಂದು ಕಂಡವರನ್ನು ಸಮಿತಿಗೆ ಆರಿಸಿ ಅವರಿಂದ ಫಲಿತಾಂಶ ನಿರೀಕ್ಷಿಸುತ್ತಾರೆ. ಸಮರ್ಥರಿಗೆ ಪದೋನ್ನತಿಗೆ ಪ್ರೋತ್ಸಾಹಿಸುತ್ತಾರೆ. ಐಕಳ ಅವರ ಪ್ರಸಕ್ತ ಟೀಮ್ ಸಶಕ್ತವಾಗಿದೆ. ಸಮರ್ಥವಾಗಿದೆ. ಕ್ರಿಯಾಶೀಲವಾಗಿದೆ. ಎಂತೆಂಥ ಪ್ರಭಾವಿಗಳೂ ಐಕಳ ಮಾತಿಗೆ ಮಣಿಯುವಂತೆ ಅವರು ಬೆಳೆದು ನಿಂತಿದ್ದಾರೆ. ಇವರು ಬಂಟ ಸಂಘಟನೆಗಳ ಪದವಿಗಳಿಗೆ ಚುನಾವಣೆ ನಡೆಸುವುದನ್ನು ವಿರೋಧಿಸುತ್ತಾರೆ. ಸಂಘಕ್ಕೆ ಸಮುದಾಯಕ್ಕೆ ಯಾವುದೇ ಯೋಗದಾನವಿಲ್ಲದ ಕೆಲವರ ಟೀಕೆ ಟಿಪ್ಪಣಿ ನಿಂದನೆಗಳಿಗೆ ಸಾತ್ವಿಕ ಕೋಪ ವ್ಯಕ್ತಪಡಿಸಿ ಅವರ ಕೃತಘ್ನತೆ ಕುರಿತಂತೆ ವೇದಿಕೆಗಳಲ್ಲಿ ಮಾತಾಡುತ್ತಿರವಂತೆ ಕೆಂಡ ಕಾರುತ್ತಾರೆ. ಮರುಕ್ಷಣ ಗದ್ಗದಿತರಾಗುತ್ತಾರೆ. ಇಂಥ ವಿರಳಾತಿ ವಿರಳ ವ್ಯಕ್ತಿತ್ವದ ನಾಯಕ ನಮ್ಮ ಐಕಳ ಹರೀಶ್ ಶೆಟ್ಟಿ ಅವರು.
ಇವರು ಇತ್ತೀಚೆಗೆ ಉಡುಪಿ ಅಜ್ಜರಕಾಡಿನಲ್ಲಿ ಸಂಘಟಿಸಿದ ವಿಶ್ವ ಬಂಟರ ಸಮ್ಮೇಳನವು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಯಶ ಕಂಡು ಸಂಪನ್ನಗೊಂಡಿದೆ. ವಿಶ್ವದ ಬಂಟರು ಮಾತ್ರವಲ್ಲದೆ ಅನ್ಯ ಸಮಾಜ ಬಂಧುಗಳೂ ಮೂಗಿಗೆ ಬೆರಳೇರಿಸಿದರು. ಮಹಾದಾನಿಗಳ ಸಹಕಾರದೊಂದಿಗೆ ಜರಗಿದ ಈ ಎರಡು ದಿನಗಳ ಸಮ್ಮೇಳನ ಬಂಟರ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಲು ಯೋಗ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಯ ಸಂಶೋಧನಾ ವಿದ್ಯಾರ್ಥಿಗಳಿಗೆ ಐಕಳ ಅವರ ಜೀವನ ಸಾಧನೆ ಅಧ್ಯಯನಕ್ಕೆ ಆಕರವಾಗಬಲ್ಲುದು.
ತನ್ನ ಪ್ರತಿ ಕಾರ್ಯಗಳಲ್ಲೂ ನಿರಂತರ ಪ್ರೋತ್ಸಾಹ ನೀಡುವ ಮನೋ ಅನುಕೂಲೆ ಸುಶೀಲೆ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿ ಅವರ ವಿಶೇಷ ಯೋಗದಾನವೂ ಉಲ್ಲೇಖನೀಯ. ಅರ್ಜುನ್, ಸನ್ನಿಧಿ ಎಂಬೆರಡು ವಂಶದ ಕುಡಿಗಳೊಂದಿಗೆ ಸಂತೃಪ್ತಿಯ ಸಂಸಾರ ನಡೆಸುವ ಐಕಳ ಹರೀಶ್ ಶೆಟ್ಟಿಯವರು ಹೊಟೇಲ್ ಹಾಸ್ಪಿಟಾಲಿಟಿ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಇಂದು ಐಕಳ ಅವರು ‘ಅಭಿನವ ದೇವುಪೂಂಜ’ ಎಂಬ ಹೆಗ್ಗಳಿಕೆಯ ಬಿರುದಿಗೆ ಪಾತ್ರರಾಗಿದ್ದಾರೆ. ಶ್ರೀಯುತರ ಭವಿಷ್ಯ ಜೀವನ ಶಾಂತಿ, ಯಶಸ್ಸು, ಸಮೃದ್ಧಿ, ನೆಮ್ಮದಿಯಿಂದ ತುಂಬಿರಲೆಂದು ನಾವೆಲ್ಲ ಹೃದಯ ತುಂಬಿ ಹಾರೈಸೋಣ.
ಅರುಣ್ ಶೆಟ್ಟಿ ಎರ್ಮಾಳ್