ಬೆಳಪು, ಎಲ್ಲೂರು ಮತ್ತು ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ 1948ರಲ್ಲಿ ಸ್ಥಾಪಿತವಾದ ಬೆಳಪು ವ್ಯವಸಾಯ ಸಹಕಾರಿ ಸಂಘವು ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಅಮೃತ ಮಹೋತ್ಸವದ ಸವಿನೆನಪಿಗಾಗಿ ಉಚ್ಚಿಲದಲ್ಲಿ ನಿರ್ಮಿಸಲಾದ ನೂತನ ಸಹಕಾರಿ ಮಹಲ್ ನ ಉದ್ಘಾಟನೆ ಮತ್ತು ಸಹಕಾರಿ ಧುರೀಣ ಡಾ. ಎಂ.ಎನ್. ಆರ್ ಅವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 2 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉಚ್ಚಿಲದಲ್ಲಿ ನಿರ್ಮಿಸಲಾಗಿರುವ ಸಂಘದ ನವೀಕೃತ ಶಾಖೆ ಮತ್ತು ನೂತನ ಸಹಕಾರಿ ಮಹಲ್ ಕಟ್ಟಡ ಹಾಗೂ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಕಾನ್ಪರೆನ್ಸ್ ಹಾಲ್, ಸಮೃದ್ಧಿ ಸಭಾಂಗಣ, ರೈತ ಬಂಧು ಕೃಷಿ ಸಲಕರಣೆ ಕೇಂದ್ರ, ರೈತ ಮಾರುಕಟ್ಟೆ ಮತ್ತು ಗೋದಾಮು ಹಾಗೂ ಪಡಿತರ ವಿತರಣಾ ವಿಭಾಗ, ಸಹಕಾರಿ ಸಭಾಂಗಣ, ನವೋದಯ ಸಭಾಂಗಣ, ನವೀಕೃತ ಹವಾನಿಯಂತ್ರಿತ ಬ್ಯಾಂಕಿಂಗ್ ಶಾಖೆ, ಸೇಫ್ ಲಾಕರ್ – ಭದ್ರತಾ ಕೊಠಡಿ ಉದ್ಘಾಟನೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಿಂದ ಉಚ್ಚಿಲ ಸಹಕಾರಿ ಮಹಲ್ವರೆಗೆ ಸಹಕಾರಿ ಮೆರವಣಿಗೆ ನಡೆಯಲಿದೆ ಎಂದರು.
ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಮತ್ತು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ನೂತನ ಸಹಕಾರಿ ಮಹಲ್ನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಸಹಕಾರಿ ಸಭಾಂಗಣವನ್ನು ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ನವೋದಯ ಸಭಾಂಗಣವನ್ನು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಡಾ. ಎಂ.ಎನ್.ಆರ್ ಕಾನ್ಪರೆನ್ಸ್ ಹಾಲ್ನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಅಮೃತ ದರ್ಪಣ ಸ್ಮರಣ ಸಂಚಿಕೆಯನ್ನು ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್ನ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನಬಾರ್ಡ್ ಡಿಡಿಎಂ ಸಂಗೀತಾ ಎಸ್. ಕರ್ತಾ, ಸಹಕಾರಿ ಸಂಘಗಳ ಉಪನಿಬಂಧಕ ಹೆಚ್.ಎನ್. ರಮೇಶ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಅಶೋಕ್ ಕುಮಾರ್ ಶೆಟ್ಟಿ, ರಾಜೇಶ್ ರಾವ್ ಪಾಂಗಾಳ, ಬಡಾ ಗ್ರಾ. ಪಂ. ಅಧ್ಯಕ್ಷ ಶಿವ ಕುಮಾರ್ ಮೆಂಡನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಹಕಾರಿ ಮಹಲ್ನ ವೈಶಿಷ್ಟ್ಯಗಳು : ನಬಾರ್ಡ್ ಯೋಜನೆಯಡಿ ಸುಮಾರು 3.70 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಹಕಾರಿ ಮಹಲ್ ಬೆಳಪು ವ್ಯವಸಾಯ ಸಹಕಾರಿ ಸಂಘದ ಕೀರ್ತಿಯನ್ನು ಹೆಚ್ಚಿಸಲಿದೆ. ಸದ್ರಿ ಮಹಲ್ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆ ಸ್ಥಾಪನೊಳ್ಳಲಿದ್ದು ಸಾರ್ವಜನಿಕ ಸೇವಾ ಮನೋಭಾವನೆಯೊಂದಿಗೆ ಪ್ರಧಾನ ಮಂತ್ರಿ ಜನೌಷಧಾಲಯ ಪ್ರಾರಂಭಗೊಳ್ಳಲಿದೆ.
ಸಂಘ ನಡೆದು ಬಂದ ದಾರಿ: 1948ರಲ್ಲಿ ಗ್ರಾಮದ ಹತ್ತು ಮಂದಿ ಹಿರಿಯರು ಒಗ್ಗೂಡಿ ಪಣಿಯೂರಿನಲ್ಲಿ ಸಣ್ಣ ಕಟ್ಟಡದೊಂದಿಗೆ ಪ್ರಾರಂಭಿಸಿದ ಸಹಕಾರಿ ಸಂಘವು ಇಂದು ಪ್ರಧಾನ ಕಚೇರಿ ಸಹಿತ ಐದು ಶಾಖೆಗಳನ್ನು ಹೊಂದಿದೆ. ಪಣಿಯೂರು ಪ್ರಧಾನ ಕಚೇರಿಯಲ್ಲಿ ಸಹಕಾರಿ ಸೌಧ, ಬೆಳಪು ಶಾಖೆಯಲ್ಲಿ ಸಹಕಾರಿ ಸಂಭ್ರಮ, ಮೂಳೂರಿನಲ್ಲಿ ಸಹಕಾರಿ ಬಂಧು, ಎಲ್ಲೂರಿನಲ್ಲಿ ಸಹಕಾರಿ ಮಿತ್ರ ಹಾಗೂ ಉಚ್ಚಿಲದಲ್ಲಿ ಹೊಸದಾಗಿ ಸಹಕಾರಿ ಮಹಲ್ ಕಟ್ಟಡ ನಿರ್ಮಾಣಗೊಂಡಿದ್ದು ಎಲ್ಲ ಕಡೆಗಳಲ್ಲೂ ಸ್ವಂತ ಕಟ್ಟಡ ಸಹಿತವಾಗಿ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಕಂಪ್ಯೂಟರೀಕೃತ ಸೌಕರ್ಯದೊಂದಿಗೆ ಆಧುನಿಕತೆಗೆ ಹೊಂದಿಕೊಂಡು ಸೇವೆ ಕೊಡುತ್ತಿರುವುದು ಸಂಘದ ಬೆಳವಣಿಗೆಯ ಹಾದಿಯನ್ನು ಎತ್ತಿ ತೋರಿಸುತ್ತಿದೆ.
ಸಾಧನೆಯ ಮೆಟ್ಟಿಲು: ಬೆಳಪು ವ್ಯವಸಾಯ ಸಹಕಾರಿ ಸಂಘವು ಸ್ವತಂತ್ರವಾಗಿ ಕಾರ್ಯಾಚರಣೆ ಮಾಡುತ್ತಿರುವ ಸಹಕಾರಿ ಸಂಘವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈವರೆಗೆ 4350 ಸದಸ್ಯ ಬಲದೊಂದಿಗೆ 60 ಕೋಟಿ ರೂಪಾಯಿ ಠೇವಣಾತಿಯನ್ನು ಹೊಂದಿದ್ದು 100 ಕೋಟಿ ರೂಪಾಯಿ ಠೇವಣಾತಿಯ ಗುರಿ ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಘವು, ಸತತ 25 ವರ್ಷಗಳಿಂದ ಎ ಶ್ರೇಣಿಯ ಬ್ಯಾಂಕಿಂಗ್ ಎಂಬ ಮಾನ್ಯತೆ ಹೊಂದಿದ್ದು ಸಂಘದ ಒಟ್ಟು ಸಾಧನೆಗಳಿಗಾಗಿ ಸತತ 16 ವರ್ಷಗಳಿಂದ ಅತ್ಯುತ್ತಮ ಸಹಕಾರಿ ಎಂಬ ಕಿರೀಟವನ್ನೂ ಮುಡಿಗೇರಿಸಿಕೊಂಡಿದೆ.
ಡಾ. ಎಂ.ಎನ್. ಆರ್ ಗೆ ಸಹಕಾರಿ ಧ್ರುವ ಪ್ರಶಸ್ತಿ: ಸಹಕಾರಿ ಕ್ಷೇತ್ರದ ಅದ್ವಿತೀಯ ನಾಯಕ, ಅಜಾತಶತ್ರು, ಸಹಕಾರಿಗಳ ಆಪದ್ಬಾಂಧವರೆಂದು ಹೆಗ್ಗಳಿಕೆ ಗಳಿಸಿರುವ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಧ್ರುವ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಗುವುದು.
ಆಡಳಿತ ಮಂಡಳಿಯ ನಿರ್ದೇಶಕರಾದ ಪಾಂಡು ಶೆಟ್ಟಿ, ಗೋಪಾಲ ಪೂಜಾರಿ, ಸೈಮನ್ ಡಿ ಸೋಜ, ಪಾಂಡು ಎಂ. ಶೇರಿಗಾರ್, ಅಲಿಯಬ್ಬ, ದ್ಯುಮಣಿ ಆರ್. ಭಟ್, ಬಾಲಕೃಷ್ಣ ಎಸ್. ಆಚಾರ್ಯ, ಶೋಭಾ ಬಿ. ಭಟ್, ಮೀನಾ ಪೂಜಾರ್ತಿ, ವಿಮಲ ಅಂಚನ್, ಅನಿತಾ ಆನಂದ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಬಾಲಕೃಷ್ಣ ಭಟ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ಸಂಘಟಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.