ಮುಂಬಯಿ ವಿಶ್ವವಿದ್ಯಾಲಯವು ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಎಂ.ಎ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ವಿಭಾಗದ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ನೂತನ ಪಠ್ಯ ಕ್ರಮದಂತೆ ಸವಿತಾ ಅರುಣ್ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಬೆಳಕಿಂಡಿ (ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯ ಅವಲೋಕನ )” ಎಂಬ ಸಂಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿರುತ್ತಾರೆ. ಅವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದಿಂದ ಕೊಡಮಾಡುವ ‘ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ’ ಚೊಚ್ಚಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಮೂಲತಃ ಕಾರ್ಕಳ ತಾಲೂಕಿನ ಬೋಳ ಗ್ರಾಮದವರಾದ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಸ್ನಾತಕ ಪದವಿಯನ್ನು ಪಡೆದಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ನಂದಿಕೂರು ಹೊಸಮನೆ ದಿ. ಪಾಂಡು ಎಂ. ಶೆಟ್ಟಿ ಮತ್ತು ಬೋಳ ಕುರೇದು ದಿ. ಜಾನಕಿ ಶೆಡ್ತಿ ಅವರ ಪುತ್ರಿ ಹಾಗೂ ನವಿಮುಂಬಯಿಯ ಉದ್ಯಮಿ ಅರುಣ್ ಶೆಟ್ಟಿ ಅವರ ಪತ್ನಿ. ಮುಂಬಯಿ ವಿವಿ ಕೊಡಮಾಡುವ ಎಂ. ಬಿ. ಕುಕ್ಯಾನ್ ಬಂಗಾರ ಪದಕಕ್ಕೂ ಸವಿತಾ ಅರುಣ್ ಶೆಟ್ಟಿ ಅವರು ಅರ್ಹತೆ ಸಾಧಿಸಿದ್ದಾರೆ ಎಂಬುದಾಗಿ ವಿಭಾಗದ ಪ್ರಕಟಣೆ ತಿಳಿಸಿದೆ.