ಬ್ರಹ್ಮಾವರ ನ. 09: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ತಾನ್ಯ ಶೆಟ್ಟಿ ಮತ್ತು ಹರ್ಷ ಪೂಜಾರಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಹೈಸ್ಕೂಲ್ ಶಿಕ್ಷಣದ ನಂತರ ಮುಂದೇನು? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ವಿವಿಧ ವೃತ್ತಿಗಳು, ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಬೇಕಾಗುವ ಸಾಫ್ಟ್ ಸ್ಕಿಲ್ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಸಾಧನೆಗೆ ಕೌಶಲಗಳು ತುಂಬಾ ಮುಖ್ಯ. ಜಿ ಎಮ್ ಕಲಿಕೆಯ ಜೊತೆಗೆ ಕೌಶಲಾಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದೆ. ನೀವೆಲ್ಲರೂ ಜೀವನದಲ್ಲಿ ಸಾಧನೆಯನ್ನು ಮಾಡುತ್ತೀರಿ. ಇದಕ್ಕೆ ಇಂದಿನಸಂಪನ್ಮೂಲ ವ್ಯಕ್ತಿಗಳೇ ಸಾಕ್ಷಿ ಎಂದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇಂದು ಜಿ ಎಮ್ ನಲ್ಲಿ ಕಲಿತ ಮಕ್ಕಳೆಲ್ಲರೂ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಅವರೆಲ್ಲರೂ ಸಂಸ್ಥೆಯ ಮೇಲಿನ ಅಭಿಮಾನ, ಪ್ರೀತಿಯಿಂದ ಇಲ್ಲಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಸಿಗುವ ಆನಂದ ಬೇರೆ ಯಾವುದರಲ್ಲೂ ಸಿಗುವುದಿಲ್ಲ ಎಂದರು. ಕಾರ್ಯಾಗಾರದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಆದರ್ಶ್ ಆಚಾರ್ಯ, ಕುಮಾರಿ ದೀಕ್ಷಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.