ಸೋತರೂ ಸಲಹುವ ಮಹಿಳೆ: ಡಾ.ಪದ್ಮಜಾ ಶೆಟ್ಟಿ ವಿದ್ಯಾಗಿರಿ: ಮಹಿಳೆ ಸೋತರೂ ಸಲಹುತ್ತಾಳೆ. ಶಕ್ತಿಯಾಗಿ ನಿಲ್ಲುತ್ತಾಳೆ ಎಂದು ಧವಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಪದ್ಮಜಾ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ಇಂಗ್ಲಿಷ್ ವಿಭಾಗವು ಶುಕ್ರವಾರ ಹಮ್ಮಿಕೊಂಡ ‘ಎ ಡಾಲ್ಸ್ ಹೌಸ್’ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆನ್ರಿಕ್ ಹಿಪ್ಸನ್ ಬರೆದ ‘ಎ ಡಾಲ್ಸ್ ಹೌಸ್’ ಎಂಬ ಪುಸ್ತಕವು ಮಹಿಳೆಯ ಶಕ್ತಿ ಮತ್ತು ಸಾಮಥ್ರ್ಯವನ್ನು ತಿಳಿಸುತ್ತದೆ. ಮಹಿಳೆಯರು ಬದುಕಿನುದ್ದಕ್ಕೂ ಹೋರಾಡುತ್ತಾರೆ. ಯಾರಿಲ್ಲದಿದ್ದರೂ ಮತ್ತು ಎಲ್ಲರೂ ಇದ್ದರೂ ಧೈರ್ಯದಿಂದ ಮುನ್ನುಗ್ಗಬೇಕು ಎಂಬ ಆಶಯವನ್ನು ಕತೆ ಬಿಂಬಿಸುತ್ತದೆ ಎಂದರು. ಮಹಿಳೆಯರಿಗೆ ಜೀವನದ ಹಾದಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಅದುವೇ ಅವರನ್ನು ಗೆಲ್ಲಿಸುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ಬೇರೆ ಬೇರೆ ವಿಷಯಗಳನ್ನು ಕಲಿಯುವ ಮನಸ್ಸಿರಬೇಕು. ಅಂತಹ ಆಲೋಚನೆ ಪ್ರತಿಯೊಬ್ಬರಲ್ಲೂ ಬರಬೇಕು. ಸಾಹಿತ್ಯವು ವಿಶ್ಲೇಷಣೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತದೆ. ಏಕದೃಷ್ಟಿಯ ಅಭಿವೃದ್ಧಿಯಿಂದ ಮಾತ್ರ ಬೆಳವಣಿಗೆ ಸಾಧ್ಯವಿಲ್ಲ. ವೈವಿಧ್ಯಮಯ ದೃಷ್ಟಿಕೋನ ಅವಶ್ಯ’ ಎಂದರು.
ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪದವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಮಚ್ಛೇಂದ್ರ ಬಿ., ಕಾರ್ಯಕ್ರಮ ಸಂಯೋಜಕರಾದ ಹರ್ಷಿಣಿ ಪಿಂಟೊ, ಆಡಳಿತ ನಿರ್ವಹಣಾ ವಿಭಾಗದ ಡೀನ್ ಸುರೇಖಾ ರಾವ್ ಇದ್ದರು. ವಿದ್ಯಾರ್ಥಿನಿ ವೃಂದಾ ಕಾರ್ಯಕ್ರಮ ನಿರೂಪಿಸಿದರು.