ಭಾರತೀಯ ಸಂಸ್ಕೃತಿ, ಸಂಪ್ರದಾಯ, ಆಚಾರ- ವಿಚಾರಗಳಲ್ಲಿ ಸೀರೆಗೆ ಪ್ರತ್ಯೇಕವಾದ ಗೌರವಾದರವಿದೆ. ಕೈಮಗ್ಗದ ವೈಭವ, ಪರಂಪರೆ, ವಿಶಿಷ್ಟತೆ, ಉತ್ಕೃಷ್ಟ ಗುಣಮಟ್ಟ ಮತ್ತು ವೈವಿಧ್ಯತೆಯೊಂದಿಗೆ ಕರಾವಳಿಯ ನೇಕಾರರು ದೇಶೀ ಸಂಸ್ಕೃತಿ ಸಂಪ್ರದಾಯಗಳೊಂದಿಗೆ ಪರಂಪರೆಯ ಸಂಕೇತವಾಗಿರುವ ಪರಿಸರ ಸ್ನೇಹಿ ಉಡುಪಿ ಸೀರೆಯನ್ನು ನೇಯುವ ನೇಕಾರಿಕೆಗೆ ಮರು ಜೀವ ತುಂಬುತ್ತಿದ್ದಾರೆ. ಉಡುಪಿ ಸೀರೆ ನಮ್ಮ ಹೆಮ್ಮೆ. ಜಿ ಐ ಮಾನ್ಯತೆ ಪಡೆದ ಶತಮಾನದಷ್ಟು ಹಳೆಯ ಸೀರೆ. ಉಡುಪಿ ಸೀರೆ ಉಳಿಸಿ ಅಭಿಯಾನಕ್ಕೆ ಶ್ರಮಿಸುತ್ತಿದೆ ಕದಿಕೆ ಟ್ರಸ್ಟ್. ಹತ್ತು ಹಲವು ಬ್ರಾಂಡ್ ಗಳ ನಡುವೆಯೂ ಸರಿ ಸಾಟಿಯಾಗಿ ನಿಲ್ಲುವ ಕೈಮಗ್ಗದ ಕೊಡುಗೆ ನೇಪಥ್ಯಕ್ಕೆ ಸರಿದ ಉಡುಪಿ ಸೀರೆ ಈಗ ಮೆಲ್ಲಗೆ ತಲೆಯೆತ್ತಿದೆ. ಗ್ರಾಮೀಣ ಸೊಗಡಿನ ಸೀರೆಗೆ ಕಾಯಕಲ್ಪ ನೀಡುವ ಪ್ರಯತ್ನ ಭರದಿಂದ ಸಾಗುತ್ತಿದೆ. ವಿವಿಧ ಹಂತಗಳಲ್ಲಿ ತಯಾರುಗೊಳ್ಳುವ ಈ ಸೀರೆಯ ಹಿಂದೆ ನೇಕಾರರ ಶ್ರಮವಿದೆ. ದೇಶೀ ಕಲೆಯಾದ ನೇಕಾರಿಕೆ ಬದುಕಿನ ದಾರಿ, ಹೊಟ್ಟೆ ಪಾಡಿಗೆ ಮಾರ್ಗವಾದರೂ ನಮ್ಮ ಸಂಸ್ಕೃತಿ ಪರಂಪರೆಯ ಜೊತೆಗೆ ಪ್ರಕೃತಿಗೆ ಪೂರಕವಾದ ಉದ್ಯಮವಿದು.
ಉಡುಪಿ ಸೀರೆ ಉಳಿಸಿ ಅಭಿಯಾನದ ಅಂಗವಾಗಿ ದೇಶದಾದ್ಯಂತ ಮಾರುಕಟ್ಟೆ ಕಲ್ಪಿಸಲು ಹಗಲಿರುಳು ಕದಿಕೆ ಟ್ಟಸ್ಟ್ ಹಾಗೂ ನೇಕಾರರು ಶ್ರಮಿಸುತ್ತಿದ್ದಾರೆ. ಇದರ ಮುಖ್ಯ ರೂವಾರಿ ಮಮತಾ ರೈ. ಉಡುಪಿ ಸೀರೆ ಪ್ರಚಾರ ಜಾಗ್ರತಿಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಉಡುಪಿ ಸೀರೆಯ ಪುನರುಜ್ಜೀವನಕ್ಕಾಗಿ ಅಭಿಯಾನ ಪ್ರಾರಂಭಿಸಿ ಸಿನಿ ತಾರೆಯರು ಮಾಡೆಲ್ ಗಳು ಇದರಲ್ಲಿ ಸಹಕರಿಸಿದ್ದರು. ಮೂಲೆ ಗುಂಪಾಗಿದ್ದ ಉಡುಪಿ ಸೀರೆ ಈಗ ಹೊಸ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಉಡುಪಿ ಸೀರೆ ಮೈಬಣ್ಣ ತಿಳಿಯಾಗಿದ್ದು, ಸೆರಗು ಮತ್ತು ಅಂಚಿನ ಬಣ್ಣ ಗಾಢವಾಗಿರುತ್ತದೆ. ತಾಳೆ ಮರದಿಂದ ತಯಾರಾದ ಬ್ರಷ್ ನಿಂದ ಸೀರೆ ತಯಾರಾಗುವಾಗಲೇ ಗಂಜಿ ಹಾಕುವುದು ವಿಶೇಷ. ಈ ಸೀರೆ ಯಾವುದೇ ಕಾರ್ಖಾನೆಗಳಲ್ಲಿ ಕಂಪನಿಯಲ್ಲಿ ತಯಾರಾಗದೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ – ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಮಗ್ಗದಲ್ಲಿ ಶ್ರದ್ಧೆಯಿಂದ ನೇಯಲಾಗುತ್ತದೆ.
ನಮ್ಮ ಉಡುಪಿಯ ಹೆಮ್ಮೆಯ ಪ್ರತೀಕವಾಗಿದ್ದ ಉಡುಪಿ ಸೀರೆ ಆಧುನಿಕತೆಯ ಸೀರೆಗಳ ಭರಾಟೆಯಲ್ಲಿ ಮೂಲೆ ಗುಂಪಾಗಿ ನೇಪಥ್ಯಕ್ಕೆ ಸರಿದಿತ್ತು. ಆದರೆ ಈಗ ಜನಮೆಚ್ಚುಗೆ ಗಳಿಸಿದ ಈ ಸೀರೆ ಕಡು ಬಣ್ಣದ ಅಂಚುಗಳು ತಿಳಿಬಣ್ಣ, ಸೆರಗಿನ ಮಧ್ಯೆ ಸಣ್ಣ ಸಣ್ಣ ಕಡ್ಡಿಗಳ ವಿನ್ಯಾಸ, ಕಣ್ಣಿಗೂ ಮೈಗೂ ಹಿತವೆನಿಸುವ ಮೃದುವಾದ ಹತ್ತಿಯನ್ನು ಲೀನ ಸೀರೆ 80 ಕಾಂಟ್ ಮತ್ತು 60 ಕಾಂಟ್ (ನೂಲಿನ ದಪ್ಪ) ನೇಯುವ ಉಡುಪಿ ಸೀರೆಯ ಸೆರಗು ಅಂಚುಗಳ ಬಣ್ಣ ಸೀರೆಯ ಮೈಬಣ್ಣ ಒಂದಕ್ಕೊಂದು ತದ್ವಿರುದ್ಧವಾಗಿರುವುದು ಕೂಡ ಸೀರೆಯ ವಿಶೇಷತೆ. ಹಿಂದೆ ಉಡುಪಿ ಸೀರೆ 120 ಕಾಂಟ್ (ನೂಲಿನ ದಪ್ಪ) ಸೀರೆ ತಯಾರಿಸುತ್ತಿದ್ದರು. ಈಗ ಅದು 80 ಹಾಗೂ ಅರವತ್ತು ಕಾಂಟ್ ಗೆ ಸೀಮಿತವಾಗಿದೆ. ಅರವತ್ತು ಕಾಂಟ್ ಸೀರೆಗೆ 650 ರಿಂದ 800 ರೂಪಾಯಿ ಬೆಲೆ ಇದೆ. 80 ಕಾಂಟ್ ಸೀರೆಗೆ 1000 ದಿಂದ 1500 ರೂಪಾಯಿ ಇದೆ. ಸೀರೆಗಳಲ್ಲಿ ಎಷ್ಟೇ ವೈವಿಧ್ಯತೆಗಳು ಬಂದರೂ ತಲೆತಲಾಂತರಗಳಿಂದ ಬಂದ ಕೈಮಗ್ಗದ ಸೀರೆ ಸೊಬಗು ಎಂದಿಗೂ ಮಾಸುವುದಿಲ್ಲ. ಜಗತ್ತು ಎಷ್ಟೇ ಆಧುನೀಕತೆಯತ್ತ ದಾಪುಗಾಲು ಹಾಕಿದರೂ ಕೆಲವೊಂದು ಸಾಂಪ್ರದಾಯಿಕತೆ ಎಂದಿಗೂ ಮರೆಯಲಾಗುವುದಿಲ್ಲ. ನಮ್ಮ ಉಡುಪಿ ಸೀರೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು, ರಾಷ್ಟ್ರದಾದ್ಯಂತ ಮಾರುಕಟ್ಟೆಯನ್ನು ರೂಪಿಸುವುದು ಎಲ್ಲರ ಕರ್ತವ್ಯ. ನೇಕಾರರ ಪರಿಕಲ್ಪನೆಯಲ್ಲಿ ಮೂಡಿಬಂದ ಕೈಮಗ್ಗದ ಸೀರೆಗಳು ಸಮಕಾಲೀನ ಫ್ಯಾಷನ್ ಗೆ ಸೆಡ್ಡು ಹೊಡೆಯುವಂತಿದೆ. ಉಡುಪಿ ಸೀರೆ ನೇಯುವಾಗಲೇ ನೂಲಿಗೆ ಗಂಜಿ ಹಾಕಲಾಗುತ್ತದೆ. ಹಾಸು ತಯಾರಿ ನಂತರ ಸೆರಗಿಗೆ ಟ್ಯೆ ಆ್ಯಂಡ್ ಡೈ ತಂತ್ರಜ್ಞಾನದಲ್ಲಿ ಪ್ರತ್ಯೇಕವಾಗಿ ಬಣ್ಣ ಹಾಕಲಾಗುತ್ತದೆ. ನೇಕಾರರ ನೇಯ್ಗೆಯ ಶ್ರಮ, ನಿಪುಣತೆ ಈ ಸೀರೆಯ ಪ್ರತಿ ಎಳೆಯಲ್ಲೂ ಕಾಣಸಿಗುತ್ತದೆ. ಉಡುಪಿ ಸೀರೆ ತನ್ನ ಪ್ರಾದೇಶಿಕ ವೈಶಿಷ್ಟ್ಯತೆಗಾಗಿ 2016 ರಲ್ಲಿ ಜಿ.ಐ.ಟ್ಯಾಗ್ ಪಡೆದಿದೆ. ಈ ಕೈಮಗ್ಗದ ಸೀರೆಗೆ ಹೊಸ ಕಾಯಕಲ್ಪ ಕೊಡುವ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ.
ಉಡುಪಿ ಸೀರೆ ನೇಯುವುದನ್ನು ನೋಡುವ ಕುತೂಹಲದಿಂದ ಉಡುಪಿ ಸೀರೆ ಉಳಿಸಿ ಅಭಿಯಾನದ ರೂವಾರಿ ಮಮತಾ ರೈ ಅವರಲ್ಲಿ ನಾನು ದಿನ ಹಾಗೂ ಸಮಯ ನಿಗದಿಪಡಿಸಿಕೊಂಡು ಕಿನ್ನಿಗೋಳಿಯ ತಾಳಿಪಾಡಿ ಪ್ರಾಥಮಿಕ ನೇಕಾರರ ಸಂಘಕ್ಕೆ ಭೇಟಿ ನೀಡಿದೆ. ಮಗ್ಗದಿಂದ ಬರುತ್ತಿರುವ ಚಟಪಟ ಸದ್ದು ದಾರ ಸುತ್ತುತ್ತಿರುವ ಗುಂಯಿ ಎಂಬ ಶಬ್ದ, ಕೈಮಗ್ಗದಲ್ಲಿ ಸೀರೆ ನೇಯುವುದನ್ನು ಅದಕ್ಕಾಗಿ ಚರಕದಲ್ಲಿ ನೂಲು ಬಿಡಿಸುವುದು. ನೂಲಿಗೆ ಬಣ್ಣ ಹಾಕುವುದು, ಸೀರೆ ತಯಾರಿಸುವಾಗ ಸೀರೆಗೆ ಗಂಜಿ ಹಾಕುವ ಪರಿ ಒಂದೇ ಎರಡೇ. ವಿವಿಧ ಹಂತಗಳಲ್ಲಿ ತಯಾರಾಗುತ್ತಾ ಹೆಂಗಳೆಯರ ಮನ ಮೆಚ್ಚುವ ಸೀರೆ ನೇಯುವುದನ್ನು ನೋಡಿ ನನಗನ್ನಿಸಿತು ಉಡುಪಿ ಸೀರೆ ಉಳಿಸಿ ಅಭಿಯಾನ ಅರ್ಥ ಪೂರ್ಣ, ಉತ್ತಮ ಗುಣಮಟ್ಟದ ಕಚ್ಚಾ ಸಾಮಾಗ್ರಿ ಬಳಸಿ ಕೈಯಲ್ಲಿ ನೇಯ್ಗೆ ಮಾಡುವ ಈ ಸೀರೆ ಸಂಪ್ರದಾಯ ಮತ್ತು ಸಮಕಾಲೀನ ಎರಡೂ ಮನೋಭಾವದ ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ. ಈಗ ಪುನಃ ಉಡುಪಿ ಸೀರೆ ಮಹಿಳೆಯರಿಗೆ ಆಪ್ತ ವಾಗುತ್ತಿರುವುದು ಸಂತಸದ ವಿಚಾರ.
ಕದಿಕೆ ಟ್ರಸ್ಟ್ ಕಾರ್ಕಳ ಇದರ ಉಸ್ತುವಾರಿ ಹಾಗೂ ಸ್ಥಾಪಕರು ಉಡುಪಿ ಸೀರೆ ಉಳಿಸಿ ಅಭಿಯಾನದ ರೂವಾರಿ ಮಮತಾ ರೈ ತಮ್ಮ ಅನಿಸಿಕೆಯನ್ನು ಹೇಳಿದ್ದು ಹೀಗೆ “ಕೈಮಗ್ಗವನ್ನು ಕಲಾ ಕುಸುರಿಯಂತೆ ಪರಿಗಣಿಸಬೇಕು. ನೇಕಾರರಲ್ಲಿರುವ ಕೀಳರಿಮೆ ದೂರಾಗಿ ಅದೊಂದು ಗೌರವಯುತವಾದ ವೃತ್ತಿ ಎಂಬ ಭಾವನೆ ಬರುವಂತೆ ಮಾಡಬೇಕು. ಅದಕ್ಕಾಗಿ ಮೂರು ನಾಲ್ಕು ತಿಂಗಳಿಗೊಮ್ಮೆ ಉತ್ತಮ ನೇಕಾರರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಯುವ ಪೀಳಿಗೆಯವರಿಗೆ ಕೈಮಗ್ಗ ನೇಕಾರಿಕೆಯ ಬಗ್ಗೆ ತರಬೇತಿ ನೀಡಬೇಕು. ನಮ್ಮ ಸಂಸ್ಕೃತಿಯ ಕೊಂಡಿ ಕಳಚದಂತೆ ಕೈಮಗ್ಗವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮೂರಿನ ಹೆಮ್ಮೆಯಾದ ಕೈಮಗ್ಗದ ಉಡುಪಿ ಸೀರೆ ಉಳಿಸುವುದು ನಮ್ಮ ಜವಾಬ್ದಾರಿಯಾಗಬೇಕು. ಪ್ರಸ್ತುತ ಕೈಮಗ್ಗ ನೇಕಾರಿಕೆ ಅಳಿವಿನಂಚಿನಲ್ಲಿ ಇದ್ದರೂ ಪ್ರಾದೇಶಿಕ ವೈಶಿಷ್ಟ್ಯತೆಗೆ ಜಿಐ ಟ್ಯಾಗ್ ದೊರೆತ ಸೀರೆಗೆ ರಾಜ್ಯ ಹೊರ ರಾಜ್ಯಗಳಿಂದ ಬೇಡಿಕೆಯಿದೆ. ಉಡುಪಿ ಸೀರೆ ತಯಾರಿಕಾ ಸಂಘಗಳು ಹೆಗ್ಗೋಡಿನ ಚರಕ ಸಂಸ್ಥೆಯ ಸಹಕಾರದಲ್ಲಿ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ಸೀರೆಗಳನ್ನು ತಯಾರಿಸುತ್ತಿವೆ. ಪಾರಂಪರಿಕ ಜ್ಞಾನ ದಾಖಲೆ, ಕೌಶಲ್ಯಾಭಿವೃದ್ಧಿ ಸಂರಕ್ಷಣೆಯೊಂದಿಗೆ ಉಡುಪಿ ಸೀರೆಗೆ ಪುನಶ್ಚೇತನದ ಜೊತೆಗೆ ಮಾರುಕಟ್ಟೆ ಕಲ್ಪಿಸಿ ಉತ್ತಮ ದರ, ಗೌರವ ಒದಗಿಸುವ ಯತ್ನ ನಡೆದಿದೆ. ನೇಕಾರಿಕಾ ಪರಂಪರೆ ಕಣ್ಮರೆಯಾಗದಿರಲಿ.
ಕರಾವಳಿ ಜಿಲ್ಲೆಗಳಲ್ಲಿ ದಶಕದ ಹಿಂದೆ ಇದ್ದ 3,000 ಕೈಮಗ್ಗಗಳ ಸಂಖ್ಯೆ ಈಗ 30 ಕ್ಕೆ ಇಳಿದಿದೆ. ನೇಕಾರರ ಸಂಖ್ಯೆಯಲ್ಲಿ ವಿಪರೀತ ಕುಸಿತವಾಗಿದೆ. ಯುವ ಪೀಳಿಗೆಯಂತೂ ಈ ವೃತ್ತಿಯಿಂದ ದೂರ ಸಾಗುತ್ತಿದೆ. ಒಂದು ಕಾಲದಲ್ಲಿ ನೇಕಾರಿಕೆಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಸಮುದಾಯದ ಹೊಸ ತಲೆಮಾರು ಇತ್ತ ಗಮನ ಹರಿಸದೇ ನೇಕಾರರೇ ಇಲ್ಲದೆ ಎಷ್ಟೋ ನೇಕಾರ ಸಂಘಗಳು ತಮ್ಮ ಚಟುವಟಿಕೆ ಸ್ಥಗಿತಗೊಳಿಸಿವೆ. ಸಾವಿರಾರು ಸಂಖ್ಯೆಯಲ್ಲಿ ಉಡುಪಿ ಸೀರೆ ನೇಯುತ್ತಿದ್ದ ನೇಕಾರರು ಇಂದು ಬೆರಳೆಣಿಕೆಯಲ್ಲಿ ಇದ್ದಾರೆ. ಈಗ ಸುಮಾರು 40 ನೇಕಾರರು ಉಡುಪಿ ಸೀರೆ ನೇಯುತ್ತಿದ್ದು ಅವರು ವೃದ್ಧರಾಗಿ ಇರುವುದರಿಂದ ಈ ಪರಂಪರೆಯೂ ಕಣ್ಮರೆಯಾಗುವ ಅಪಾಯದಲ್ಲಿದೆ. ಆಧುನೀಕತೆಯ ಅಟ್ಟಹಾಸದಲ್ಲಿ ನೇಕಾರಿಕೆ ಹಾಗೂ ಕೈಮಗ್ಗದ ಸದ್ದು ಕ್ಷೀಣಿಸುತ್ತಿದೆ. ವಿದ್ಯುತ್ ಮಗ್ಗಗಳು ಪೈಪೋಟಿ ನೀಡುತ್ತಿದೆ. ಸಾಂಪ್ರದಾಯಿಕ ಕೈಮಗ್ಗಗಳು ಈಗ ಅಪರೂಪವಾಗುತ್ತಿವೆ. ೧೯೮೫ ರ ಆಸುಪಾಸಿನಲ್ಲಿ ಉಡುಪಿ ಜಿಲ್ಲೆ ಒಂದರಲ್ಲೆ 650 ಕೈ ಮಗ್ಗಗಳಿದ್ದವು. ಆಗ ನೇಕಾರರ ಸಂಖ್ಯೆ ನಾಲ್ಕರಿಂದ ಐದು ಸಾವಿರದಷ್ಟಿತ್ತು. ಬಳಿಕ ಕೈಮಗ್ಗದ ಜೊತೆಗೆ ನೇಕಾರರ ಸಂಖ್ಯೆಯೂ ಕುಸಿಯುತ್ತಲೇ ಹೋಯಿತು. ಉಡುಪಿ ಜಿಲ್ಲೆಯಲ್ಲಿ ಕೇವಲ 203 ಕೈಮಗ್ಗಗಳು ಇದ್ದು 2006 ರ ಹೊತ್ತಿಗೆ ಕಾರ್ಯನಿರತ ಕೈ ಮಗ್ಗ ಅವಿಭಜಿತ ದಕ್ಷಿಣ ಕನ್ನಡದಲ್ಲಿ 833 ಹಾಗೂ ಎರಡು ಜಿಲ್ಲೆಗಳಲ್ಲಿ ನೇಕಾರಿಕೆ ವೃತ್ತಿ 75 ರಿಂದ 80 ಮಂದಿಗೆ ಮಾತ್ರ ಸೀಮಿತವಾಗಿದೆ. ಪ್ರಾಯ ಮೀರಿದ ಹಿರಿಯ ಜೀವಿಗಳು ಇದರಲ್ಲಿ ಹೆಚ್ಚು. ಒಟ್ಟಾರೆ ಮೂರು ದಶಕದಲ್ಲಿ ಹೆಚ್ಚಿನ ನೇಕಾರಿಕೆ ನೆಲ ಕಚ್ಚಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳು ಕೈಮಗ್ಗ ವ್ಯವಹಾರದಲ್ಲಿ ನಿರತವಾಗಿ ಇವುಗಳ ಪೈಕಿ ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರಿ ಸಂಘ, ಉಡುಪಿ ಮತ್ತು ಶಿವಳ್ಳಿ ಸಂಘಗಳು ಉಡುಪಿ ಸೀರೆಯನ್ನು ಬ್ರಹ್ಮಾವರ ಸಂಘದಲ್ಲಿ ಕೇವಲ ಇಬ್ಬರು ಯಕ್ಷಗಾನಕ್ಕೆ ಬೇಕಾದ ಕಸೆ ಸೀರೆ ನೇಯ್ಗೆ ಮತ್ತು ಪಾಣಿ ಪಂಚಿ ನೇಯ್ಗೆ ಮಾಡುತ್ತಿದ್ದಾರೆ. ಬಸ್ರೂರಿನ ಸಂಘ ಬೈರಾಸು, ಬಾತ್ ಟವಲ್ ಉತ್ಪಾದಿಸುತ್ತದೆ. ಮಂಗಳೂರು ಸಂಘದಲ್ಲಿ ಸೀರೆ ಮಾರಾಟ ಮಾತ್ರ ಇದ್ದು ಪಣಂಬೂರು ಹಳೆಯಂಗಡಿ ಸೊಸೈಟಿಯಲ್ಲಿ ಕೆಲ ನೇಕಾರರು ದಾರ ಪೂರೈಕೆ ಜೊತೆಗೆ ಬಣ್ಣ ಹಾಕುವುದರಲ್ಲಿ ನಿಪುಣರಿದ್ದಾರೆ. 60 ಕಾಂಟ್ ನ ತಿಳಿ ಬಣ್ಣದ ಸೀರೆಗಳನ್ನು ನೇಯವ ನಾಗಪ್ಪ ಅವರು ನೇಕಾರಿಕೆ ಜೀವನದಲ್ಲಿ ಕದಿಕೆ ಟ್ರಸ್ಟ್ ನ ಪೋತ್ಸಾಹದಲ್ಲಿ ಬುಟ್ಟಿ ಇರುವ ಸೀರೆಗಳನ್ನು ಆರಂಭಿಸಿದ್ದಾರೆ. ಸರಳ, ಸುಂದರ ಉಡುಪಿ ಸೀರೆಯನ್ನು ಉಡಲು ಮನಸ್ಸು ಮಾಡಿದರೆ ನೇಕಾರರ ಕಲಾ ಕೌಶಲ್ಯಕ್ಕೆ ಬೆಲೆ ಬಂದಂತಾಗುತ್ತದೆ. ಉಡುಪಿ ಸೀರೆಗೆ ಬೇಡಿಕೆ ಹೆಚ್ಚಿದರೆ ನೇಕಾರರ ಜೀವನಕ್ಕೂ ಬಲ ಬರುತ್ತದೆ. ನೈಸರ್ಗಿಕ ಬಣ್ಣದ ಉಡುಪಿ ಸೀರೆ ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಹೊಸ ಅವಕಾಶಕ್ಕೆ ನೆರವಾಗಿದೆ. ಉಡುಪಿ ಸೀರೆಗೆ ಪ್ರಸ್ತುತ ಲೋಗೊ ಬಳಸಲಾಗುತ್ತಿದ್ದು ಹಳೆಯಂಗಡಿ ಹಾಗೂ ಕಿನ್ನಿಗೋಳಿಯಲ್ಲಿ ಸೀರೆಗೆ ಲೋಗೋ ಬಳಸಿ ಅದರಲ್ಲಿ ನೇಕಾರರ ಭಾವಚಿತ್ರ ಹಾಗೂ ಹೆಸರನ್ನು ಬಳಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾ ದೇವಿ ಚಟ್ಟೋಪಾಧ್ಯಾಯ ಎಪ್ಪತ್ತರ ದಶಕದಲ್ಲಿ ಬ್ರಹ್ಮಾವರದ ಹಿರಿಯ ನೇಕಾರಿಂದ 8 ಕಸೆ ಸೀರೆ ಖರೀದಿಸಿದ್ದರು. ಅದರಲ್ಲಿ ಒಂದು ಸೀರೆ ಆಗಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ನೀಡಿದ್ದರು. ಹಾಗೆಯೇ ಬೆಂಗಳೂರು ಹೈದರಾಬಾದ್ ಮೈಸೂರಿನಿಂದಲೂ ಉಡುಪಿ ಸೀರೆಗೆ ಹೆಚ್ಚಿನ ಬೇಡಿಕೆ ಇದೆ.
ಇತ್ತೀಚೆಗೆ ಕೋಲ್ಕತ್ತಾದ ಇಕೋ ಪಾರ್ಕ್ ನ್ಯೂಟನ್ನಲ್ಲಿ ಜರಗಿದ ಗ್ರಾಹಕ ತಯಾರಿಕಾ ಸಮ್ಮೇಳನ ಮತ್ತು ಕೈಮಗ್ಗದ ಬಟ್ಟೆಗಳ ಪ್ರದರ್ಶನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಕರ್ನಾಟಕ ಇವರ ಕೋರಿಕೆಯ ಮೇರೆಗೆ ಉಡುಪಿ ಸೀರೆಯ ನೇಕಾರರ ಸಂಘಗಳು ಭಾಗವಹಿಸಿದ್ದು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯವು ಭಾರತೀಯ ಚೇಂಬರ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಪ್ರದರ್ಶನದಲ್ಲಿ ದಕ್ಷಿಣ ಕನ್ನಡ ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರ ಸಂಘದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ನೇಕಾರರ ಸಂಘ ಪ್ರತಿನಿಧಿಸಿದ್ದವು. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕಿಂತ ಹೆಚ್ಚಿನ ದೇಶಗಳು ಭಾಗವಹಿಸಿದ್ದು ಒಟ್ಟಿನಲ್ಲಿ ನಮ್ಮ ನಾಡಿನ ಪರಂಪರಾಗತ ನೇಕಾರಿಕೆ ವೃತ್ತಿ ಮರೆಯಾಗಬಾರದು. ಆ ನಿಟ್ಟಿನಲ್ಲಿ ಕಣ್ಣಿಗೆ ಹಿತ ಆರಾಮದಾಯಕವಾದ ಹತ್ತಿ ನೂಲಿನಿಂದ ಕೈಯಲ್ಲೇ ನೇಯುವ ನಮ್ಮ ಉಡುಪಿ ಸೀರೆ ನಮ್ಮ ಸಂಸ್ಕೃತಿಯ ಪ್ರತಿ ನಿಧಿಗಳಾಗಿ ನಾವೆಲ್ಲರೂ ಯಾಕೆ ಕಾಣಿಸಿಕೊಳ್ಳಬಾರದು. ಅಳಿವಿನಂಚಿನಲ್ಲಿದ್ದ ಉಡುಪಿ ಕೈಮಗ್ಗ ನೇಕಾರಿಕೇಗೆ ಮರು ಜೀವಬಲ ತುಂಬಿದ್ದು ಕಾರ್ಕಳ ಕದಿಕೆ ಟ್ರಸ್ಟ್ ಮೂರು ವರ್ಷದ ಹಿಂದೆ ರೂಪಿಸಿದ ಉಡುಪಿ ಸೀರೆ ನೇಕಾರಿಕೆ ಉಳಿಸಿ ಅಭಿಯಾನದಂಗವಾಗಿ 5 ಯುವ ನೇಕಾರ ಸಹಿತ 10 ಮಂದಿ ಸೇರಿದ್ದಾರೆ. ಉಡುಪಿ ಸೀರೆ ಇನ್ ಸ್ಟಾಗ್ರಾಮ್ ಟ್ವಿಟರ್ ಪೇಜ್ ಪೂರಕ ಕೊಡುಗೆ ನೀಡಿದೆ. ಪರ್ಯಾಯ ಅದಮಾರು ಶ್ರೀ ಈಶ ಪ್ರಿಯತೀರ್ಥ ಶ್ರೀ ಪಾದರು ಗಣ್ಯರಿಗೆ, ಅತಿಥಿಗಳಿಗೆ ಕೈಮಗ್ಗ ಸೀರೆಗಳ ಉಡುಗೊರೆ ರೂಪದಲ್ಲಿ ನೀಡಿ ನೇಕಾರರಿಗೆ ಸಹಕರಿಸಿದ್ದಾರೆ. ಅಷ್ಟೇ ಅಲ್ಲದೆ ತಾಳಿಪಾಡಿ ನೇಕಾರರ ಸಂಘದಿಂದ ವಿಶಿಷ್ಟ ಯೋಜನೆಯಲ್ಲಿ ತಯಾರಿಸಿದ ಕೈಮಗ್ಗದ ಶಾಲನ್ನು ನಿರಂತರ ಖರೀದಿಸಿ ನೇಕಾರರಿಗೆ ಪ್ರೊತ್ಸಾಹ ತೋರಿದ್ದಾರೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ