ಮಂಗಳೂರಿನ ರಥಬೀದಿಯ ಕಡಬ ಸಂಸ್ಮರಣಾ ಸಮಿತಿ ವತಿಯಿಂದ ನೀಡಲ್ಪಡುವ ಚತುರ್ಥ ವಾರ್ಷಿಕ ‘ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ -2023’ ಕ್ಕೆ ಹಿರಿಯ ಭಾಗವತರಾದ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಆಯ್ಕೆಯಾಗಿದ್ದಾರೆ. ಅ.29ರಂದು ಮಧ್ಯಾಹ್ನ 2ಕ್ಕೆ ಮುಂಬಯಿಯ ಗೋರೆಗಾಂವ್ (ಪಶ್ಚಿಮ) ಆರೇ ರೋಡ್, ಅಂಬಾಬಾಯಿ ದೇವಸ್ಥಾನದ ಬಳಿಯ ಕೇಶವ ಗೋರೆ ಸಭಾಗೃಹದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಸಂದರ್ಭ ಯಕ್ಷಗಾನ -ನಾಟ್ಯ ವೈಭವ ಹಾಗೂ ವಾಲಿಮೋಕ್ಷ ತಾಳಮದ್ದಳೆ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುರತ್ಕಲ್ ಮೇಳದಲ್ಲಿ ಹೆಸರಾಂತ ಹಿಮ್ಮೇಳ ವಾದಕರಾದ ಕಡಬ ನಾರಾಯಣ ಆಚಾರ್ಯ ಅವರು 3 ದಶಕಗಳ ಕಾಲ ಕಲಾ ಸೇವೆಗೈದು 2008ರಲ್ಲಿ ತನ್ನ 51 ನೇ ವಯಸ್ಸಿನಲ್ಲಿ ಕಲಾಲೀನರಾಗಿದ್ದಾರೆ. ತಂದೆಯಷ್ಟೇ ಪ್ರತಿಭಾನ್ವಿತರಾಗಿದ್ದ ಅವರ ಪುತ್ರ ಕಡಬ ವಿನಯ ಆಚಾರ್ಯ ಅವರು ಅತೀ ಕಿರಿಯ ವಯಸ್ಸಿನಲ್ಲಿ ಸುಮಾರು 15 ವರ್ಷಗಳ ಕಾಲ ಹಿರಿಯ ಕಲಾವಿದರೊಡಗೂಡಿ ಉತ್ತಮ ಮದ್ದಳೆಗಾರನಾಗಿ ಜನಮೆಚ್ಚುಗೆ ಗಳಿಸುತ್ತಿರುವ ಸಂದರ್ಭ ತನ್ನ 34 ನೇ ವಯಸ್ಸಿನಲ್ಲಿ 2019 ರಲ್ಲಿ ಅನಾರೋಗ್ಯದಿಂದ ಅಕಾಲಿಕವಾಗಿ ಇಹಲೋಕ ತ್ಯಜಿಸಿದರು. ಈ ಮಹಾನ್ ಕಲಾವಿದರ ಕಾರ್ಯಗಳು ಅಳಿದರೂ ಅವರ ಕೀರ್ತಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ, ಸಮಾಜದ ಗಣ್ಯರು, ಕಲಾವಿದರು, ಅಭಿಮಾನಿ ಬಂಧು ಬಳಗ ಒಟ್ಟು ಸೇರಿ ‘ಕಡಬ ಸಂಸ್ಮರಣಾ ಸಮಿತಿ’ ಎಂಬ ಸಂಸ್ಥೆ ಸ್ಥಾಪಿಸಿ ಇವರಿಬ್ಬರ ಸ್ಮರಣಾರ್ಥವಾಗಿ ಪ್ರತೀ ವರ್ಷ ಯಕ್ಷಗಾನ ಕ್ಷೇತ್ರದ ಓರ್ವ ಹಿರಿಯ ಸಾಧಕರನ್ನು ಗುರುತಿಸಿ ನಗದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಓರ್ವ ಸಮರ್ಥ ವೇಷಧಾರಿಯಾಗಿ ಉಭಯ ತಿಟ್ಟುಗಳ ಪ್ರತಿಭಾವಂತ ಭಾಗವತರಾಗಿ ತನ್ನನ್ನು ತಾನು ಯಕ್ಷಗಾನ ಕಲೆಗೆ ಅರ್ಪಿಸಿಕೊಂಡ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರು ಉದ್ಯೋಗ ನಿಮಿತ್ತ ಮುಂಬಯಿಯನ್ನು ತನ್ನ ಕರ್ಮಭೂಮಿಯನ್ನಾಗಿಸಿಕೊಂಡು ಸುಮಾರು ಮೂರುವರೆ ದಶಕಗಳಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾ ಸೇವೆಗೈದು ಆಟ ಕೂಟಗಳೆರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿ ಯಕ್ಷರಂಗದಲ್ಲಿ ಕ್ರಾಂತಿಯನ್ನುಂಟು ಮಾಡಿ ತಾರಾ ಮೌಲ್ಯ ತಂದುಕೊಟ್ಟವರು. ಯಕ್ಷಗಾನವನ್ನು ಮುಂಬಯಿಯಲ್ಲಿ ಉಳಿಸಿ ಬೆಳೆಸುವಲ್ಲಿ ಅವಿರತವಾಗಿ ದುಡಿಯುತ್ತಾ ಯಕ್ಷಗಾನದ ವಿಮಾನ ಭಾಗವತರೆಂದೇ ಪ್ರಸಿದ್ದಿಯಾಗಿದ್ದಾರೆ.