ಕನ್ನಡ ವೆಲ್ಫೇರ್ ಸೊಸೈಟಿ (ರಿ) ಘಾಟ್ಕೋಪರ್ ಇದರ 48ನೇ ವಾರ್ಷಿಕ ಮಹಾಸಭೆಯು ನವೆಂಬರ್ 15ರ ರವಿವಾರ ಘಾಟ್ಕೋಪರ್ ರ್ಪೂರ್ವ ಪಂತ ನಗರದಲ್ಲಿರುವ ಕನ್ನಡ ವೆಲ್ಫೇರ್ ಸೊಸೈಟಿ ಮಹೇಶ್ ಎಸ್ ಶೆಟ್ಟಿ (ಬಾಬಾ ಗ್ರೂಪ್ಸ್) ಸಭಾಂಗಣದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ (ರಿ) ಘಾಟ್ಕೋಪರ್ ನ ಅಧ್ಯಕ್ಷ ನವೀನ್ ಶೆಟ್ಟಿಇನ್ನ ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 2026 -29ನೇ ಸಾಲಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಲಾಯಿತು. ಅದರಂತೆ 2016 ರಿಂದ ನಿರಂತರ 10 ವರ್ಷ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸಂಘದ ಏಳಿಗೆಗಾಗಿ ಮಹತ್ತರ ಯೋಗದಾನವನ್ನು ನೀಡಿದ ನವೀನ್ ಶೆಟ್ಟಿ ಇನ್ನ ಬಾಳಿಕೆಯವರ ಸ್ಥಾನದಲ್ಲಿ ಕಳೆದ ಮೂರು ವರ್ಷಗಳಿಂದ ಗೌರವ ಕೋಶಾಧಿಕಾರಿಯಾಗಿ ಕಾರ್ಯನಿರತರಾಗಿದ್ದ ಹರೀಶ್ ಎಂ ಶೆಟ್ಟಿಯವರನ್ನು ಮುಂದಿನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ನೇಮಕ ಮಾಡಲಾಯಿತು.





ನವೀನ್ ಶೆಟ್ಟಿ ಇನ್ನ ಬಾಳಿಕೆ ಅಧ್ಯಕ್ಷತೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ, ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಸುಜಲಾ ಅಜಿತ್ ಶೆಟ್ಟಿಯವರನ್ನು ಮಹಿಳಾ ವಿಭಾಗದ ಮುಂದಿನ ಕಾರ್ಯಾಧ್ಯಕ್ಷೆಯಾಗಿ ಅವಿರೋಧವಾಗಿ ಮರು ನೇಮಕ ಮಾಡಲಾಯಿತು. ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ವೈದೇವಿ ಶೆಟ್ಟಿಯವರನ್ನು ನೇಮಿಸಲಾಯಿತು. ಅದೇ ರೀತಿ ನವೀನ್ ಶೆಟ್ಟಿ ಇನ್ನ ಬಾಳಿಕೆಯವರನ್ನು ಗೌರವಾಧ್ಯಕ್ಷರನ್ನಾಗಿಯೂ, ಸಂಘದ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುವ ಮಹೇಶ್ ಎಸ್ ಶೆಟ್ಟಿಯವರನ್ನು ಮತ್ತು ರವೀಂದ್ರನಾಥ ಭಂಡಾರಿಯವರನ್ನು ಮುಖ್ಯ ಸಲಹೆಗಾರರನ್ನಾಗಿ ಸರ್ವಾನುಮತದೊಂದಿಗೆ ನೇಮಿಸಲಾಯಿತು.


















































































































