ವ್ಯಕ್ತಿ ವಿಕಾಸವೇ ರಾಷ್ಟ್ರ ವಿಕಾಸದ ಶಕ್ತಿ, ಗ್ರಾಮ ವಿಕಾಸವೇ ರಾಷ್ಟ್ರದ ವಿಕಾಸ, ಗ್ರಾಮ ವಿಕಾಸದೊಂದಿಗೆ ದೇಶ ಕಟ್ಟುವ ಕಾಯಕವನ್ನು ಮಾಡಬೇಕು. ದೇಶದ ಪ್ರಗತಿಗಾಗಿ ನೈತಿಕತೆಯ ಭದ್ರ ಬುನಾದಿಯ ಅಗತ್ಯವಿದೆ. ಸಹ ಜೀವನ, ಸಹ ಬಾಳ್ವೆ, ನಿಷ್ಠೆ, ಪರೋಪಕಾರ, ಪ್ರಾಮಾಣಿಕತೆ, ಸಹನೆ, ಪಾರದರ್ಶಕತೆ, ಸಮಾನತೆ, ಸಹಕಾರ ತತ್ವಗಳನ್ನು ಮೈಗೂಡಿಸಿಕೊಂಡು ಮೌಲ್ಯಾದಾರಿತವಾಗಿ ಸುಂದರ ಬದುಕು ರೂಪಿಸಿಕೊಳ್ಳಬಹುದು. ಶಾಂತಿ ತಾಳ್ಮೆಯ ಪ್ರತೀಕ. ಪ್ರಕೃತಿಯನ್ನು ಪೂಜಿಸುವ ಮತ್ತು ಗೌರವಿಸುವ ಗುಣ ನಮ್ಮಲ್ಲಿರಲಿ. ಬದುಕು ಕಟ್ಟಿಕೊಳ್ಳುವಾಗ ಉತ್ತಮ ವಿಚಾರಗಳಿಗೆ ಒತ್ತು ನೀಡಿ. ಇಚ್ಛಾ ಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಗೆ ಹೊಂದಿಕೊಂಡು ಸಾಗಬೇಕು. ನಕಾರಾತ್ಮಕ ಸೂತ್ರಗಳನ್ನು ಬದಿಗಿಟ್ಟು ಸಕಾರಾತ್ಮಕವಾಗಿ ಸಂಸ್ಕಾರವಂತರಾಗಿ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬದುಕುವುದನ್ನು ಕೂಡಾ ಕಲಿಯಬೇಕು. ಸಂಸ್ಕಾರ ಇಲ್ಲದ ಬದುಕು ನೀರಿಲ್ಲದ ಮೀನಿನಂತೆ ಎಂಬುದನ್ನು ಅರಿಯಿರಿ. ಲೌಕಿಕ ಮತ್ತು ಅಲೌಕಿಕ ಮೌಲ್ಯಗಳನ್ನು ಅರಿತು ಮಾಡುವ ಕಾರ್ಯದಲ್ಲಿ ಕರ್ಮಫಲದ ಜಯ ಎಂಬುದೂ ಯಾವತ್ತೂ ಧರ್ಮದ ಕಡೆಯೇ ಇರುತ್ತದೆ. ಭಕ್ತಿ, ಶ್ರದ್ದೆ, ಸತ್ಸಂಗ, ಸತ್ಯ ಧರ್ಮದೊಂದಿಗೆ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಅಗಬೇಕು. ಧರ್ಮ ಎಂಬುದು ಚಲನಶೀಲವಾದುದು. ಜಗತ್ತಿನಲ್ಲಿ ಧರ್ಮ ಜಾಗೃತಿ ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಅಗತ್ಯತೆ ಇದೆ. ನಮ್ಮನ್ನು ನಾವು ತಿಳಿದುಕೊಂಡು ಸಮಾಜದಲ್ಲಿ ಉತ್ತಮ ಕಾರ್ಯ ಸಿದ್ಧಿಯೊಂದಿಗೆ ಸೇವಾ ಮನೋಭಾವದಿಂದ ನಡೆದರೆ ಶ್ರೇಷ್ಠನಾಗಬಹುದು. ಸಮಾಜಕ್ಕೆ ಆದರ್ಶವಾಗಬಹುದು. ಮಕ್ಕಳು ಚಾರಿತ್ರ್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಧರ್ಮ ಸಂಸ್ಕ್ರತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ ಜೊತೆಯಲ್ಲಿ ಧರ್ಮ ಸಂಸ್ಕ್ರತಿಯ ಜ್ಞಾನ ಪ್ರಜ್ಞೆಯನ್ನು ಮೂಡಿಸಬೇಕು. ಇದರಲ್ಲಿ ಮಾತೆಯರ ಕಾರ್ಯ ಬಹಳ ದೊಡ್ಡದು. ಇಲ್ಲಿಯ ಸೇವಾ ಬಳಗ ವಜ್ರಮಾತ ಮಾತೆಯರ ಭಕ್ತಿ, ಶ್ರದ್ದೆ, ಶಿಸ್ತುವನ್ನು ಗುರುತಿಸುವಂತಿದೆ. ಜೀವ ಭಾವ, ದೇವ ಭಾವ ಎರಡು ಭಾವದಂತೆ ಸೇವಾ ಭಾವ ಮನೋಭಾವನೆ ನಮ್ಮಲ್ಲಿರಬೇಕು ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಿದರು.






ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ 23ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಭಾಷೆ ಮತ್ತು ಸಂಸ್ಕ್ರತಿಯ ಸಮನ್ವಯತೆ ಆಗಬೇಕು, ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ತತ್ವಗಳು, ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಎಂಬ ಐದು ಪಂಚಭೂತಗಳೊಂದಿಗೆ ಕೂಡಿಕೊಂಡು ನಮ್ಮ ಬದುಕು ನಡೆಯುತ್ತದೆ. ಸಮಾಜಮುಖಿ ಸೇವಾ ಮನೋಭಾವದೊಂದಿಗೆ ಪರೋಪಕಾರ ಭಾವ ಹೊಂದಿರುವ ಸಂಘಟನೆಯೇ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರಗಳು 23 ವರ್ಷಗಳಿಂದ ಧಾರ್ಮಿಕ ಸಾಮಾಜಿಕ ಸೇವೆಯಲ್ಲಿ ಇಲ್ಲಿ ಇದೆ. ಇಲ್ಲಿ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕ್ರತಿ, ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ ಹಾಗೂ ಭಕ್ತಿಯ ಮಾರ್ಗ ಮತ್ತು ಶ್ರದ್ದೆ ಮೂಡುವಂತೆ ಧಾರ್ಮಿಕ ಕಾರ್ಯಗಳು ಉತ್ತಮವಾಗಿ ನಡೆಯುತ್ತಿರಲಿ. ಭಗವದ್ಭಕ್ತರಿಗೆ ಶ್ರೀ ದತ್ತಾತ್ರೇಯ ಶ್ರೀ ಹನುಮಂತನ ಕೃಪೆ ಸದಾ ಇರಲಿ ಎಂದು ನುಡಿದರು. ಧಾರ್ಮಿಕ ಸಭಾ ವೇದಿಕೆಯಲ್ಲಿ ಸಾದ್ವಿ ಶ್ರೀ ಮಾತಾನಂದಮಯಿ, ಮುಖ್ಯ ಅಥಿತಿಗಳಾಗಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ಸಮಾಜ ಸೇವಕ ಜಗದೀಶ್ ಶೆಟ್ಟಿ, ಗೌರವ ಅತಿಥಿಗಳಾದ ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸತೀಶ್ ರೈ ಕಲ್ಲಂಗಳ ಗುತ್ತು ಹಾಗೂ ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು ಹಾಗೂ ಪುಣೆ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ ವಿ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತು, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ದಾಮೋದರ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿಯವರು ಉಪಸ್ಥಿತರಿದ್ದರು.



ಗುರುದೇವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತುರವರು ಸ್ವಾಗತಿಸಿದರು. ಅಥಿತಿ ಗಣ್ಯರನ್ನು ಬಳಗದ ಪ್ರಮುಖರು ಫಲ, ತಾಂಬೂಲ ನೀಡಿ ಗೌರವಿಸಿದರು. ಪ್ರಭಾಕರ ವಿ ಶೆಟ್ಟಿಯವರು ಬಳಗದ ಸೇವಾ ಕಾರ್ಯಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾದ್ವಿ ಶ್ರೀ ಮಾತಾನಂದಮಯಿ ಅಶೀರ್ವಚನ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳನ್ನಾಡಿದರು. ಪೂಜ್ಯ ಸ್ವಾಮಿಜಿಯವರು ಅಥಿತಿಗಣ್ಯರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಈ ಸಂದರ್ಭದಲ್ಲಿ ಬಳಗದ ಪ್ರಮುಖ ಸೇವಾಕರ್ತರಾದ ಸುಧಾಕರ ಶೆಟ್ಟಿಯವರನ್ನು ಗೌರವಿಸಲಾಯಿತು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳನ್ನು ಹಾಗೂ ವಿವಿಧ ಕ್ಷೇತ್ರದ ಗಣ್ಯರು ಶ್ರೀಗಳಿಗೆ ಹಾರಾರ್ಪಣೆಗೈದರು ಹಾಗೂ ಶ್ರೀಗಳು ಮಂತ್ರಾಕ್ಷತೆ ನೀಡಿ ಹರಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ, ಕುಣಿತ ಭಜನೆ, ಶೈಲಜಾ ಮದುಸೂಧನ್ ಮುಂಬಯಿ ತಂಡದವರಿಂದ ಜಗನ್ಮೋಹನನೇ ಕೃಷ್ಣ ಎಂಬ ನೃತ್ಯರೂಪಕ ವಿಶೇಷ ಕಾರ್ಯಕ್ರಮ ನಡೆಯಿತು. ಮುಂಬಯಿ ಬಳಗದ ಭಕ್ತರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿದರು. ಈ ವಾರ್ಷಿಕೋತ್ಸವದ ಯಶಸ್ವಿಗೆ ಪುಣೆ ಬಳಗದ ಸದಸ್ಯರು ಹಾಗೂ ಮಹಿಳಾ ಕೇಂದ್ರದ ಸದಸ್ಯೆಯರು ಶ್ರಮಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ


















































































































