ನಾನು 2016ರಲ್ಲಿ ಈ ಸಂಸ್ಥೆಯ ಅಧ್ಯಕ್ಷನಾಗಿ ನೇಮಕಗೊಂಡು ಅಧಿಕಾರವನ್ನು ಕೈಗೆತ್ತಿಕೊಂಡಿದ್ದೆ.
ಅಂದಿನಿಂದ ಇಂದಿನವರೆಗೆ ತಮ್ಮೆಲ್ಲರ ಒಮ್ಮತದ ಸಹಕಾರ ಹಾಗೂ ದಾನಿಗಳ ತುಂಬು ಹೃದಯದ ಪ್ರೋತ್ಸಾಹ ಅನುಗ್ರಹದಿಂದ ನಮ್ಮ ಈ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಏರಿಸಲು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೇನೆ ಮತ್ತು ಈ ಸಂಸ್ಥೆ ಈ ಮಟ್ಟಕ್ಕೇರಲು ಸಾಧ್ಯವಾಗಿದೆ ಎನ್ನಲು ಹೆಮ್ಮೆ ಎನಿಸುತ್ತಿದೆ. ಈ ಹಾದಿಯಲ್ಲಿ 50ರ ಸುವರ್ಣ ಮಹೋತ್ಸವ ಆಚರಣೆಯನ್ನು ಒಂದು ವಿಭಿನ್ನ ರೀತಿಯಲ್ಲಿ ಮಾಡುವ ಸೌಭಾಗ್ಯ ನನ್ನ ಪಾಲಿಗೆ ಬಂದಿತ್ತು. ಅದೇ ರೀತಿ ವಜ್ರ ಮಹೋತ್ಸವ ಆಚರಿಸುವ ಅನುಗ್ರಹ ಕೂಡಾ ಕಳೆದ ಫೆಬ್ರವರಿಗೆ ಬಹಳ ವಿಜೃಂಭಣೆಯಿಂದ ನಡೆಸುವ ಸಂದರ್ಭ ಕೂಡಿ ಬಂದಿತ್ತು. ಸಂಘ ಯಾವ ಮಟ್ಟದಲ್ಲಿತ್ತು ಇಂದು ಯಾವ ಮಟ್ಟಕ್ಕೇರಿದೆ ಎಂದು ತಮಗೆಲ್ಲರಿಗೂ ತಿಳಿದಂತಹ ವಿಷಯವಾಗಿದೆ. ಸಂಘದಲ್ಲಿ ಚರ್ಚಿಸಬೇಕು ಆದರೆ ಆ ಚರ್ಚೆ ಸಂಘದ ಉನ್ನತಿಗಾಗಿ ಇರಬೇಕು. ಇನ್ನೂ ಕೂಡಾ ನಾನು ಸಂಘಕ್ಕೆ ದುಡಿಯುತ್ತೇನೆ. ನನ್ನಿಂದ ಆಗುವ ಎಲ್ಲಾ ಕಾರ್ಯ ಕಲಾಪವನ್ನು ಮಾಡುತ್ತೇನೆ. ಎಲ್ಲರೂ ಒಗ್ಗಟ್ಟು ಒಮ್ಮತದಿಂದ ಇರಬೇಕು ಎನ್ನುವುದೇ ನನ್ನ ಆಶಯವಾಗಿದೆ. ಹತ್ತು ವರ್ಷ ಈ ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ದಕ್ಕಿರುವುದು ನನ್ನ ಪಾಲಿನ ಸೌಭಾಗ್ಯವಾಗಿದೆ ಎಂದು ಕನ್ನಡ ವೆಲ್ಫೇರ್ ಸೊಸೈಟಿ (ರಿ) ಘಾಟ್ಕೋಪರ್ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ನುಡಿದರು. ಅವರು ನವೆಂಬರ್ 15ರ ರವಿವಾರ ಬೆಳಗ್ಗೆ ಘಾಟ್ಕೋಪರ್ ಪೂರ್ವ ಪಂತ ನಗರದಲ್ಲಿರುವ ಕನ್ನಡ ವೆಲ್ಫೇರ್ ಸೊಸೈಟಿ ಮಹೇಶ್ ಎಸ್ ಶೆಟ್ಟಿ (ಬಾಬಾ ಗ್ರೂಪ್ಸ್) ಸಭಾಂಗಣದಲ್ಲಿ ಜರಗಿದ ಕನ್ನಡ ವೆಲ್ಫೇರ್ ಸೊಸೈಟಿ (ರಿ) ಘಾಟ್ಕೋಪರ್ ಇದರ 48ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡುತ್ತಿದ್ದರು.





ಇದೇ ಸಂದರ್ಭದಲ್ಲಿ ನವೀನ್ ಶೆಟ್ಟಿ ಇನ್ನ ಬಾಳಿಕೆಯವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕಗೊಂಡ ಹರೀಶ್ ಶೆಟ್ಟಿಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು ಮತ್ತು ಅವರಿಗೂ ತಾವೆಲ್ಲರ ಒಮ್ಮತದ ಸಹಕಾರವನ್ನು ನೀಡಬೇಕು. ಮುಂಬಯಿ ಮಹಾನಗರದಲ್ಲಿ ನಾಮಾಂಕಿತ ಸಂಸ್ಥೆಯ ಸಾಲಿನಲ್ಲಿ ನಮ್ಮ ಸಂಸ್ಥೆ ರಾರಾಜಿಸುತ್ತಿರಬೇಕು ಎಂದೆನ್ನುತ್ತಾ ತನ್ನ ಕಾರ್ಯಾವಧಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಮಹೇಶ್ ಎಸ್ ಶೆಟ್ಟಿಯವರಿಗೆ, ಅದೇ ರೀತಿ ತನ್ನ ಎಲ್ಲಾ ಕೆಲಸ ಕಾರ್ಯಗಳಿಗೆ ಒಮ್ಮತದಿಂದ ಸಹಕರಿಸಿದ ರವೀಂದ್ರನಾಥ ಎಂ ಭಂಡಾರಿ ಅವರಿಗೆ ಹೃದಯಾಂತರಾಳದ ಕೃತಜ್ಞತೆಯನ್ನು ಸಲ್ಲಿಸಿದರು ಮತ್ತು ಸಹಕರಿಸಿದ ದಾನಿಗಳನ್ನು ಸ್ಮರಿಸಿ ಅವರಿಗೂ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಹಾಗೂ ಕಾರ್ಯಾಧ್ಯಕ್ಷೆ ಸುಜಲ ಅಜಿತ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಎಲ್ಲಾ ಸದಸ್ಯರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಸಭಿಕರ ಭಾಷಣದಲ್ಲಿ ಮಾಜಿ ಕಾರ್ಯಾಧ್ಯಕ್ಷ ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಮಹಿಳಾ ವಿಭಾಗದ ವಿಮಲಾ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.


ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ ಮತ್ತು ಸಂಘದ ಪದಾಧಿಕಾರಿಗಳು ದೀಪ ಬೆಳಗಿಸಿ ವಾರ್ಷಿಕ ಮಹಾಸಭೆಗೆ ಚಾಲನೆಯನ್ನು ನೀಡಿದರು. ಮಲ್ಲಿಕಾ ಆರ್ ಶೆಟ್ಟಿ ಪ್ರಾರ್ಥನೆಗೈದರು. ಗೌರವ ಪ್ರಧಾನ ಕಾರ್ಯದರ್ಶಿ ತಿಮ್ಮ ದೇವಾಡಿಗ ಸಭೆಯನ್ನು ಸ್ವಾಗತಿಸಿ, ಗತ ವರ್ಷದ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಎಲ್ಲರೂ ಸರ್ವಾನುಮತದಿಂದ ಸಹಮತವನ್ನು ನೀಡಿದರು. 2025 -26ರ ಲೆಕ್ಕಪತ್ರವನ್ನು ಕೋಶಾಧಿಕಾರಿ ಹರೀಶ್ ಶೆಟ್ಟಿ ಮಂಡಿಸಿದರು. ಎಲ್ಲರೂ ಸರ್ವಾನುಮತದಿಂದ ಸಹಮತವನ್ನು ನೀಡಿದರು. ಕೊನೆಯದಾಗಿ ಗೌರವ ಪ್ರಧಾನ ಕಾರ್ಯದರ್ಶಿ ತಿಮ್ಮ ದೇವಾಡಿಗ ಧನ್ಯವಾದ ಸಮರ್ಪಿಸಿದರು.


















































































































