ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಮಹಿಳಾ ಸಬಲೀಕರಣ ಘಟಕದ ಜಂಟಿ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯ ಅಂಗವಾಗಿ ನವೆಂಬರ್ 4ರಂದು ಮುಳ್ಳುಗುಡ್ಡೆಯ ಸೌಪರ್ಣಿಕಾ ಗೇರುಬೀಜ ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರಿಗಾಗಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವವನ್ನು ವಿವರಿಸುವ ಪವರ್ ಪಾಯಿಂಟ್ ಪ್ರಸ್ತುತಿಯನ್ನು ನೀಡಿದರು. ವೈಯಕ್ತಿಕ ಸ್ವಚ್ಛತೆ, ಕೈತೊಳೆಯುವ ಸರಿಯಾದ ವಿಧಾನ, ಆರೋಗ್ಯಕರ ಆಹಾರ ಪದ್ಧತಿ, ಮುಟ್ಟಿನ ಸಮಯದ ನೈರ್ಮಲ್ಯ ಹಾಗೂ ಕೆಲಸದ ಸ್ಥಳದಲ್ಲಿ ವಹಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ಹಂಚಿಕೊಂಡರು. ಜೊತೆಗೆ ವಿದ್ಯಾರ್ಥಿಗಳು ಕಿರು ಪ್ರಹಸನದ ಮೂಲಕ ನೈರ್ಮಲ್ಯ ಮತ್ತು ಆರೋಗ್ಯದ ಕುರಿತು ಅರಿವು ಮೂಡಿಸಿದರು. ಈ ಚಟುವಟಿಕೆ ಮಹಿಳಾ ಕಾರ್ಮಿಕರಿಗೆ ದೈನಂದಿನ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡಿತು. ಕಾಲೇಜಿನ ಪ್ರಾಂಶುಪಾಲ ಡಾ| ಕೆ ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲ ಡಾ| ಚೇತನ್ ಶೆಟ್ಟಿ ಕೋವಾಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಿ ಭಟ್ ಕಾರ್ಯಕ್ರಮ ಸಂಯೋಜಿಸಿದರು. ಈ ಸಂದರ್ಭ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ದೀಪಾ ಪೂಜಾರಿ, ಪ್ರೀತಿ ಶೆಟ್ಟಿ ಹಾಗೂ ಕನ್ನಡ ವಿಭಾಗದ ರಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.





















































































































