ಸೆ. 05 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯಂದು ಶಾಲಾ ಆಡಳಿತ ಮಂಡಳಿಯು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಲ್ಲಾ ಪ್ರಧಾನ ಶಿಕ್ಷಕರಿಗೂ ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಕಳ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸುರೇಶ್ ಮರಕಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಾಜಿ ರಾಷ್ಟ್ರಪತಿ ದಿ. ಡಾ. ಶಂಕರ್ ದಯಾಳ್ ಶರ್ಮಾ ರವರು ತನ್ನ ಶಿಷ್ಯ ಅರಬ್ ದೇಶದ ದೊರೆಯಿಂದ ವಿದೇಶದಲ್ಲಿ ರಾಜ ಮರ್ಯಾದೆಯನ್ನು ಪಡೆದುಕೊಂಡಿದ್ದರು. ಇದು ಗುರು ಮತ್ತು ಶಿಷ್ಯರ ಉತ್ತಮ ಸಂಬಂಧಕ್ಕೆ ಉದಾಹರಣೆಯಾಗಿದೆ. ಜಿ ಎಮ್ ಒಂದು ಅತ್ಯದ್ಭುತ ವಿದ್ಯಾ ಸಂಸ್ಥೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಅದೃಷ್ಟವಂತರು. ಇಲ್ಲಿನ ಮಕ್ಕಳ ಶಿಸ್ತು, ಸಂಸ್ಕಾರವನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಂದು ಮಗುವಿನ ಯಶಸ್ಸಿನ ಹಿಂದೆ ಶಿಕ್ಷಕರು ಇರುತ್ತಾರೆ. ತಂದೆ ತಾಯಿಯರು ನಮ್ಮ ಮೊದಲ ಗುರುಗಳು. ಶಿಕ್ಷಕರ ಮೇಲೆ ಗೌರವ, ಪ್ರೀತಿ ಸದಾಕಾಲ ಇರಬೇಕು ಎಂದರು. ಜಿ ಎಮ್ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಕಟ್ಟಲು ಒಂದಾಗಿ ದುಡಿಯುವ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಶಿಕ್ಷಕರಿಂದ ಪ್ರತಿಜ್ಞೆ ಯನ್ನು ಸ್ವೀಕರಿಸಿ ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು, ಮುದ್ದು ಮಕ್ಕಳನ್ನು ತಿದ್ದಿ ತೀಡಿ ಅವರ ಜೀವನವನ್ನು ರೂಪಿಸುತ್ತಿರುವ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಪಾಠ ಬೋಧನೆ ಮಾಡಿ ಶಿಕ್ಷಕ ವೃತ್ತಿಯ ಅನುಭವ ಪಡೆದುಕೊಂಡರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಲಿಬಾಲ್, ಹಗ್ಗಜಗ್ಗಾಟ ಪಂದ್ಯಾಕೂಟವನ್ನು, ಶಿಕ್ಷಕರಿಗೆ ವಿವಿಧ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋರಂಜನೆಯ ರಸದೌತಣವನ್ನು ಉಣಬಡಿಸಿತು.