ಮುಂಬೈ,ಜು:25: ಧಾರಣೆಗೆ ಯೋಗ್ಯವಾಗಿರುವಂಥದ್ದು ಧರ್ಮ. ಧರ್ಮವಿರುವುದೇ ಅನುಷ್ಠಾನ ಮಾಡವುದಕ್ಕಾಗಿ. ಮನುಷ್ಯ ಮಾನವ ಧರ್ಮವನ್ನು ಬಿಟ್ಟರೆ ದಾನವನಾಗುತ್ತಾನೆ. ಮನುಷ್ಯ ಮಾಡುವ ಸತ್ಕರ್ಮಗಳಿಗೆ ಸತ್ಪಲ ಹಾಗೂ ದುಷ್ಕರ್ಮಗಳಿಗೆ ದುಷ್ಪಲ ಸಿಗುತ್ತದೆ. ಮನುಷ್ಯನ ಜೀವನವೇ ಒಂದು ರಥ. ಆ ರಥಕ್ಕೆ ಒಂದು ಪಥವೆಂದರೆ ಅದು ಧರ್ಮ. ಧರ್ಮ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕೃತಿ ಬೆಳೆಯಲು ಧರ್ಮ ಬೇಕು. ಸಂಸ್ಕೃತಿಯನ್ನು ಉಳಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು. ಅವರು ಜುಲೈ 22 ರಂದು ಕಲಿನಾ ಕ್ಯಾಂಪಸ್, ಜೆ.ಪಿ.ನಾಯಕ್ ಸಭಾಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ “ಸಂಸ್ಕೃತಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ “ಧರ್ಮ ಮಾನವ ಧರ್ಮ” ಎಂಬ ವಿಷಯದ ಕುರಿತು ಮಾತನಾಡಿದರು.
ತ್ಯಾಗ, ಸೇವೆ ಎನ್ನುವುದು ಭಾರತದ ರಾಷ್ಟ್ರೀಯ ಆದರ್ಶವಾಗಿವೆ. ಮನುಷ್ಯ ಧರ್ಮಯುಕ್ತವಾಗಿ ಗಳಿಸಬೇಕು. ಧರ್ಮಯುಕ್ತವಾಗಿ ಅದನ್ನು ಬಳಸಬೇಕು. ಧರ್ಮಯುಕ್ತವಾಗಿ ಉಳಿಸಬೇಕು. ಆಗ ಯಾವುದೇ ಅಪಾಯವೂ ಬರಲಾರದು. ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಬೇಕಾಗಿರುವಂತಹ ಸಾಧನವೇ ಸಾಹಿತ್ಯ. ಸಾಹಿತ್ಯ ಎಂದಿಗೂ ಸಾರ್ವಕಾಲಿಕವಾಗಿರಬೇಕು. ರಾಮಾಯಣ ಹಾಗೂ ಮಹಾಭಾರತ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ. ಧರ್ಮವನ್ನು ಬಿಟ್ಟವನು ಮಾನವನಲ್ಲ. ಮಾನವ ಆನಂದಮಯ. ಕೋಶಕ್ಕೆ ಹೋಗುವುದು ಅನ್ನಮಯದಿಂದ. ಆದ್ದರಿಂದ ಅನ್ನದ ಕಣವನ್ನು ಮತ್ತು ಆನಂದದ ಕ್ಷಣವನ್ನು ವ್ಯರ್ಥ ಮಾಡಬಾರದು. ನಮ್ಮ ಭಾಷೆ ಹಾಗೂ ಧರ್ಮವನ್ನು ಉಳಿಸುವಂತಹ ಜವಾಬ್ದಾರಿ ನಮ್ಮದಾಗಬೇಕು. ನಾವು ಏನೇ ಆಗಿದ್ದರೂ ಮೊದಲು ಮಾನವರಾಗಿರಬೇಕು ಎಂಬ ಮೌಲ್ಯಯುತ ಚಿಂತನೆಯ ನುಡಿಗಳನ್ನಾಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್ ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಶತಮಾನಗಳಿಂದ ನಮ್ಮ ದೇಶದ ಮೇಲೆ ಪರಕೀಯರ ದಾಳಿ ನಡೆದರೂ ಕೂಡ ನಮ್ಮ ದೇಶ ತನ್ನತನವನ್ನು ಕಳೆದುಕೊಂಡಿಲ್ಲ. ನಾವು ಬಹು ಪರಂಪರೆಯಿಂದ ಬಂದವರು. ಭಾರತೀಯ ಪರಂಪರೆ ಉಳಿದಿರುವುದೇ ಭಕ್ತಿ ಪರಂಪರೆಯಿಂದ. ಮಠಮಾನ್ಯಗಳು ಪ್ರವಚನದ ಜೊತೆಜೊತೆಗೆ ಏಕಕಾಲದಲ್ಲಿ ಆತ್ಮ ಕಲ್ಯಾಣ ಹಾಗೂ ಸಮಾಜ ಕಲ್ಯಾಣದ ಕಾರ್ಯ ಮಾಡಿ ಜನರಲ್ಲಿ ಜಾಗೃತ ಪ್ರಜ್ಞೆಯನ್ನು ಮೂಡಿಸುತ್ತಿವೆ. ಮಠಾಧಿಪತಿಗಳು ಪ್ರಗತಿಶೀಲ ಚಿಂತಕರು ಹಾಗೂ ಜನರಲ್ಲಿ ಧನಾತ್ಮಕ ಚಿಂತನೆಯನ್ನು ಬಿತ್ತಬೇಕು ಎಂದರು.
ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಅವರು ಮಾತನಾಡುತ್ತಾ,” ನಿಜವಾದ ಶಿಕ್ಷಣವೆಂದರೆ ಅದು ಬದುಕು ಕೊಡುವ ಶಿಕ್ಷಣ. ಶಿಕ್ಷಣ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುವಂತಹ ಶಿಕ್ಷಣವನ್ನು ನಾವು ಪಡೆಯಬೇಕು. ನಾವು ನೈತಿಕತೆಯನ್ನು ನಮ್ಮೊಳಗೆ ಅಳವಡಿಸಿಕೊಂಡರೆ ಅದು ನಮ್ಮ ಬೆಳವಣಿಗೆಗೆ ಪ್ರೇರಕವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಮನುಷ್ಯತ್ವ ಉಜ್ವಲವಾಗಬೇಕು ಎಂದರು. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಜಾಗತಿಕ ಮಟ್ಟದಲ್ಲಿ ಶ್ರೇಯಸ್ಸನ್ನು ಪಡೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಜಿ .ಎನ್ .ಉಪಾಧ್ಯ ಅವರ ‘ಶ್ರೀ ಸಿದ್ದರಾಮ ಶಿವಯೋಗಿ’ ಕೃತಿಯನ್ನು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು. ಡಾ.ಜಿ.ಎನ್. ಉಪಾಧ್ಯ ಅವರು ಒಡಿಯೂರು ಶ್ರೀ ಸ್ವಾಮೀಜಿಯವರಿಗೆ ಶಾಲು ಹೊದಿಸಿ ಫಲ ಪುಷ್ಪ ತುಳಸಿಹಾರ ನೀಡಿ ಗೌರವಿಸಿದರು. ಒಡಿಯೂರು ಸಂಸ್ಥಾನ ಮುಂಬೈ ಘಟಕದ ಅಧ್ಯಕ್ಷರಾದ ದಾಮೋದರ ಶೆಟ್ಟಿ ಹಾಗೂ ಕಾರ್ಯದರ್ಶಿ ಪೇಟೆ ಮನೆ ಪ್ರಕಾಶ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ, ಕೃತಿಯೊಂದಿಗೆ ಗೌರವಿಸಲಾಯಿತು . ಒಡಿಯೂರು ಸಂಸ್ಥಾನದ ವತಿಯಿಂದ ಅದರ ಪದಾಧಿಕಾರಿಗಳು ಡಾ.ಜಿ.ಎನ್.ಉಪಾಧ್ಯ ಅವರಿಗೆ ಶಾಲು ಹೊದಿಸಿ ಗೌರವಿಸಿದರು.
ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್ ಹಾಗೂ ನಳಿನಾ ಪ್ರಸಾದ್ ಅವರು ‘ಅನುಭಾವ ಸುಧೆ -ಭಕ್ತಿ ಲಹರಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಒಡಿಯೂರು ಸಂಸ್ಥಾನ ಮುಂಬೈ ಘಟಕದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ನಿರೂಪಿಸಿದರು. ಸಂಶೋಧನ ವಿದ್ಯಾರ್ಥಿ ನಳಿನಾ ಪ್ರಸಾದ್ ವಂದಿಸಿದರು. ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾದ ಮಧುಸೂಧನ,, ಕೆ. ಎಂ. ಸುವರ್ಣ. ಕರುಣಾಕರ ಉದ್ಯಾವರ, ಸದಾನಂದ ಶೆಟ್ಟಿ. ರೋಹಿತ್ ಸುವರ್ಣ ಮೊದಲಾಗಿ ಅನೇಕ ತುಳು ಕನ್ನಡಿಗರು, ಒಡಿಯೂರು ಸಂಸ್ಥಾನ ಮುಂಬೈ ಘಟಕದ ಪದಾಧಿಕಾರಿಗಳು, ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ವಿದ್ಯಾ ರಾಮಕೃಷ್ಣ,ಸುರೇಖಾ ಹರಿಪ್ರಸಾದ್ ಶೆಟ್ಟಿ, ಸುರೇಖಾ ದೇವಾಡಿಗ, ಆಶಾ ಸುವರ್ಣ, ಸವಿತಾ ಶೆಟ್ಟಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.