ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷ್ಮಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಎಸ್. ವಿ. ಎಚ್. ಪ.ಪೂ ಕಾಲೇಜಿನ ಸಭಾಭವನದಲ್ಲಿ ನಡೆಯಿತು.
2022-2023 ನೇ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ 4,08,675.72 ರೂ. ಯನ್ನು ವಿಂಗಡಣೆ ಮಾಡಲಾಯಿತು. ಶೇ 15 ಶೇರು ಡಿವಿಡೆಂಟ್ ಘೋಷಿಸಲಾಯಿತು. ಸದ್ರಿ ವರ್ಷದಲ್ಲಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ 1,75,721 ರೂ. ಬೋನಸ್ ವಿತರಿಸಲಾಯಿತು. ಶೇ 1 ರಂತೆ 85,784 ರೂ. ಪ್ರೋತ್ಸಾಹ ಧನ ವಿತರಿಸಲಾಯಿತು.
ಸಂಘದ ಸಕ್ರಿಯ ಹಿರಿಯ ಸದಸ್ಯರಾದ ವೇದಾವತಿ ಪೂಜಾರ್ತಿ, ಸಂಜೀವಿ ಮತ್ತು ವಿಟ್ಟಲ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಇನ್ನಂಜೆ ಅಂಚೆ ಕಚೇರಿಯಲ್ಲಿ 11 ವರ್ಷ ಸೇವೆ ಸಲ್ಲಿಸಿ ಮುಂಬಡ್ತಿ ಹೊಂದಿರುವ ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಎಲಿಜಬೆತ್ ಡಿ‘ಸೋಜಾ – ಪ್ರಥಮ ಆಶಾ – ದ್ವಿತೀಯ ಮತ್ತು ಜಯಂತಿ ಕೆ. ಶೆಟ್ಟಿ – ತೃತೀಯ ಬಹುಮಾನ ನೀಡಿ ಗೌರವಿಸಲಾಯಿತು. ದ್ವೀತಿಯ ಪಿಯುಸಿಯಲ್ಲಿ ಶೇ 85 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮತ್ತು ಕ್ರೀಡೆಯಲ್ಲಿ ಸಾಧನೆಗೈದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಪ್ರಸಕ್ತ ಸಾಲಿನಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಾದ ಸುಜಾತ ಕುಲಾಲ್, ಶಾರದಮ್ಮ ಅವರಿಗೆ ಸಂತಾಪ ಸೂಚಿಸಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್ ಹಾಲಿನ ಗುಣಮಟ್ಟದ ಬಗ್ಗೆ ಮತ್ತು ಲಾಭದಾಯಕ ಹೈನುಗಾರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ನಾಗರಾಜ ಮುಚ್ಚಿನ್ನಾಯ, ಜಯ ಕೆ. ಪೂಜಾರಿ, ಶಿವರಾಮ ಶೆಟ್ಟಿ, ರಾಮ ಕೆ. ಶೆಟ್ಟಿ, ಉಮೇಶ್ ಆಚಾರ್ಯ, ಸುಮತಿ ಪಿ. ಅಂಚನ್ ,ಬೇಬಿ ಎಂ. ಪೂಜಾರ್ತಿ, ಸಂಘದ ಸಿಬ್ಬಂದಿಯಾದ ಶಂಕರ ದೇವಾಡಿಗ, ಯಶೋದಾ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸವಿತಾ ಎಚ್. ಎಸ್. ವರದಿ ವಾಚಿಸಿ,ಕಾರ್ಯಕ್ರಮ ನಿರೂಪಿಸಿ ವಂದಿಸಿದರು.