ಭಾರತದ ಭವ್ಯ ಪರಂಪರೆ ಬಿಂಬಿಸುವ ರಾಷ್ಟ್ರಧ್ವಜ ಹಾರಿಸುವ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ದೇಶ ಪ್ರೇಮದ ಭಾವಾನಾತ್ಮಕ ಜಾಗೃತಿ ಮತ್ತು ಐಕತ್ಯೆಯ ಪ್ರಾಮಾಣಿಕ ಸದ್ದುದೇಶ ಮೂಡಿಸಲು ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕಳೆದ ವರ್ಷ ಪ್ರಾರಂಭವಾದ ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನವು ಈ ವರ್ಷದ ಅಗಸ್ಟ್ 13 ರಿಂದ 15 ರ ವರೆಗೆ ಪ್ರತಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ (ಹರ್ ಘರ್ ತಿರಂಗಾ )ಹಾರಾಡಲಿದೆ.
ದೇಶದ ನಾಗರಿಕರು ಸ್ವಾತಂತ್ರ್ಯಕ್ಕಾಗಿ ಯೋಧರ ತ್ಯಾಗ ಮತ್ತು ಬಲಿಧಾನ ಮಾಡಿದ ಮಹನೀಯರನ್ನು ಸ್ಮರಿಸುತ್ತಾ, ದೇಶದ ಸಮಗ್ರತೆ, ಸಾಮರಸ್ಯ ಸಮಾನತೆಗಳನ್ನು ಹಾಗೂ ರಾಷ್ಟ್ರಧ್ವಜದಲ್ಲಿರುವ ಚಕ್ರ ಮತ್ತು ಬಣ್ಣಗಳು ತ್ಯಾಗ ಧೈರ್ಯ, ಸತ್ಯ, ಶಾಂತಿ, ಸಮೃದ್ದಿ, ಪ್ರಗತಿ ಮತ್ತು ಪ್ರಕೃತಿ ಇವುಗಳ ಮಹತ್ವದ ಅರಿವಿನ್ನೊಂದಿಗೆ ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನ ಈ ವರ್ಷವೂ ಆಚರಣೆಯಲ್ಲಿದೆ. ಈ ಪರಿಕಲ್ಪನೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದವರು ಹುಬ್ಬಳ್ಳಿ ನಿವಾಸಿ ದೀಪಕ್ ಪರಶುರಾಮ ಬೋಚಗೇರಿ ಎಂಬುದು ಕನ್ನಡಿಗರಿಗೆ ಹೆಮ್ಮೆ.
ಬ್ರಿಟೀಷರ ಕಪಿ ಮುಷ್ಟಿಯಿಂದ ಭಾರತ ಮಾತೆ ಬಿಡುಗಡೆಯಾದ ದಿನ ಅಂದರೆ ನಮ್ಮ ದೇಶದ ಜನರಿಗೆ ಒಂದು ಸಂಭ್ರಮ. ಸಾರ್ವಜನಿಕರು ತಾವು ಮನೆಯ ಮೇಲೆ ಹಾರಿಸಿದ ಬಾವುಟವನ್ನು ಹರ್ ಘರ್ ತಿರಂಗ ವೆಬ್ ಸೈಟ್ ನಲ್ಲಿ ಪೋಟೋ ಹಾಕಿ ತಮ್ಮ ದೇಶ ಪ್ರೇಮವನ್ನು ವ್ಯಕ್ತಪಡಿಸಬಹುದು.
ಧ್ವಜ ಸಂಹಿತೆ : ಧ್ವಜಾರೋಹಣ ಸಮಯದಲ್ಲಿ ರಾಷ್ಟ್ರಧ್ವಜ ಸಂಹಿತೆಯ ಅಂಶಗಳನ್ನು ಜನಸಾಮಾನ್ಯರು ನೆನಪಿನಿಂದ ಅನುಸರಿಸಬೇಕಾದುದು ಮುಖ್ಯ ವಿಷಯ. ಧ್ವಜದ ಆರೋಹಣ ಅವರೋಹಣದಲ್ಲಿ ಅನುಸರಿಸಬೇಕಾದ ಕ್ರಮ ಮತ್ತು ಧ್ವಜವನ್ನು ನಿಯಮ ಬದ್ದವಾಗಿ ಕಟ್ಟುವ ವಿಧಾನದ ಬಗ್ಗೆ ಅರಿವು ಅಗತ್ಯವಿದೆ. ರಾಷ್ಟ ಧ್ವಜ ನಿರ್ವಹಣೆ ಕ್ರಮಗಳ ಪಾಲನೆ ಬಹುಮುಖ್ಯ.
ಧ್ವಜವನ್ನು ವಿರೂಪಗೊಳಿಸುವುದಾಗಲಿ, ಬೆಂಕಿ ತಾಗಿಸುವುದಾಗಲಿ, ಧ್ವಜ ತಲೆಕೆಳಗಾಗದಂತೆ ಎಚ್ಚರವಹಿಸಬೇಕು. ಕಾಲಡಿಯಲ್ಲಿ ಹಾಕುವುದಾಗಲಿ ಅಥವಾ ಯಾವುದೇ ಅಗೌರವ ತೋರುವ ರೀತಿಯಲ್ಲಿ ನಡೆದುಕೊಳ್ಳುವಂತಿಲ್ಲ. ರಾಷ್ಟ್ರಧ್ವಜದ ಅವಹೇಳನ, ರಾಷ್ಟ್ರದ್ರೋಹವಾಗಿದ್ದು ಶಿಕ್ಷಾರ್ಹ ಅಪರಾಧ. ಧ್ವಜ ಅವರೋಹಣದ ನಂತರ ಮೂರು ಬಣ್ಣಗಳು ಸಮವಾಗಿರುವಂತೆ ಹಾಗೂ ನೀಲಿ ಚಕ್ರಕ್ಕೆ ಹಾನಿಯಾಗದಂತೆ ಮಡಚಿ ಇಡಬೇಕು. ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಮಾತ್ರ ರಾಷ್ಟ್ರಧ್ವಜ ಹಾರಿಸಬೇಕು ಎಂಬ ನಿಯಮ ಸಡಿಲಗೊಳಿಸಿದ್ದು ಕೇಂದ್ರ ಸರಕಾರ ರಾಷ್ಟ್ರಧ್ವಜ ಸಂಹಿತೆಯಲ್ಲಿ ಮಹತ್ವದ ತಿದ್ದುಪಡಿ ತಂದು ಹಗಲು – ರಾತ್ರಿ ಧ್ವಜ ಹಾರಿಸಲು ಅನುಮತಿ ನೀಡಿದೆ. (ಹರ್ ಘರ್ ತಿರಂಗಾಕ್ಕೆ) ಭಾರತದ ರಾಷ್ಟ್ರಧ್ವಜ ಸಂಹಿತೆ 2002 ರ ಪ್ರಕಾರ ಧ್ವಜವನ್ನು ಖಾದಿ ಮತ್ತು ರೇಷ್ಮೆಯಿಂದ ಮಾತ್ರ ತಯಾರಿಸಲು ಅನುಮತಿ ಇತ್ತು. ಖಾದಿ ಎಂದರೆ ಸ್ವಾವಲಂಬನೆ, ಸರಳತೆ, ಸ್ವಾಭಿಮಾನ ಏಕತೆಯ ಸಂಕೇತವೆಂಬುದು ನಿತ್ಯಸತ್ಯ.
2022 ರಲ್ಲಿ ಧ್ವಜ ಸಂಹಿತೆಗೆ ಪುನಃ ತಿದ್ದುಪಡಿ ತಂದು ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ ಯಂತ್ರದಿಂದ ತಯಾರಿಸಿದ ಬಟ್ಟೆ ಹಾಗೂ ಹತ್ತಿ, ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜ ಮಾಡಬಹುದು ಎಂಬ ತಿದ್ದುಪಡಿ ತರಲಾಯಿತು. ಪ್ಲಾಸ್ಟಿಕ್ ಮತ್ತು ಕಾಗದದಿಂದ ತಯಾರಿಸಿದ ರಾಷ್ಟ್ರಧ್ವಜ ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ನಾಗರಿಕರು ಅದನ್ನು ಬಳಸುವುದು ಅಷ್ಟು ಸರಿ ಅಲ್ಲ . ಇದರಿಂದಾಗಿ ಖಾದಿ ಧ್ವಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಬ್ರಿಟಿಷರನ್ನು ಭಾರತದದಿಂದ ಬಹಿಷ್ಕಾರ ಹಾಕಲು ಬಳಸಿದ ಮಹಾತಂತ್ರಗಳಲ್ಲಿ ಖಾದಿಯು ಒಂದು. ಮನುಷ್ಯರ ಮೃತ ಶರೀರವನ್ನು ಪಂಚಭೂತದಲ್ಲಿ ಲೀನಮಾಡುವ ವಿಶೇಷ ಕ್ರಮದಂತೆ ರಾಷ್ಟ್ರಧ್ವಜ ಹರಿದುಹೊದರೆ ಅಥವಾ ಹಾಳಾದರೆ ಧ್ವಜವನ್ಮುನಾಲ್ವರು ಗಣ್ಯರ ಸಮ್ಮುಖದಲ್ಲಿ ಗುಂಡಿ ತೆಗೆದು ಅದರಲ್ಲಿ ಮುಚ್ಚಬೇಕು ಅಥವಾ ಸುಟ್ಟಲ್ಲಿ ಬೂದಿಯನ್ನು ನದಿಯಲ್ಲಿ ತೇಲಿ ಬಿಡಬೇಕು ಎಂಬ ನಿಯಮವಿದೆ ಎನ್ನುತ್ತಾರೆ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ.
ಕೇಂದ್ರ ಸರಕಾರದ ಜಾಲತಾಣದಲ್ಲಿ ಹರ್ ಘರ್ ತಿರಂಗಾ ಕುರಿತು ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದಂತೆ ಬ್ಯಾನರ್ ಮತ್ತು ಪೊಸ್ಟರ್ ಗಳಲ್ಲಿ ಮಾಹಿತಿ ನೀಡಲಾಗಿದೆ. ರಾಷ್ಟ್ರಧ್ವಜ ಹಾರಿಸಲು ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರ ಹಂಚಲಾಗುತ್ತಿದೆ. ಮನೆ ಮನೆಗಳಲ್ಲಿ ತಿರಂಗ ಅಭಿಯಾನಕ್ಕೆ ಹಂಚಿದ ಕೆಲವು ರಾಷ್ಟ್ರಧ್ವಜಗಳು ದೋಷಪೂರಿತವಾಗಿದೆ ಎಂಬ ದೂರು ಬಂದಿದ್ದು ಅವುಗಳನ್ನು ವಾಪಾಸು ಪಡೆಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಧ್ವಜದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣಗಳು ಸಮಪ್ರಮಾಣದಲ್ಲಿ ಇಲ್ಲದೆ ಅಶೋಕ ಚಕ್ರ ವೃತ್ತಾಕಾರವಾಗಿಲ್ಲದೆ ಇರುವಂತ ದೋಷ ಪೂರಿತ ಧ್ವಜ ಹಾರಿಸಬಾರದು.
ನಮ್ಮ ಹೆಮ್ಮೆ ಬೆಂಗೇರಿ : ಭಾರತದಲ್ಲಿ ರಾಷ್ಟ್ರಧ್ವಜ ತಯಾರಿಸುವ ಏಕೈಕ ರಾಜ್ಯ ಕರ್ನಾಟಕ. ಗ್ರಾಮ ಪಂಚಾಯತಿಯಿಂದ ಕೆಂಪು ಕೋಟೆಯವರೆಗೆ ಅಂದರೆ ದೇಶದಾದ್ಯಂತ ಹಾರಾಡುವ ಸ್ವಾಭಿಮಾನ ಮತ್ತು ಸ್ವಾತಂತ್ರ್ಯದ ಪ್ರತೀಕವಾದ ರಾಷ್ಟ್ರಧ್ವಜ ತಯಾರಾಗುವ ಸಂಸ್ಥೆ ಇರುವುದು ಗಂಡು ಮೆಟ್ಟಿದನಾಡು ಹುಬ್ಬಳ್ಳಿಯ ಬೆಂಗೇರಿಯಲ್ಲಿ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಂದ ಪ್ರಮಾಣಿಕರಿಸಿದ ದೇಶದ ಏಕೈಕ ಸಂಸ್ಥೆ ರಾಷ್ಟ್ರಧ್ವಜ ತಯಾರಿಸುವ ಹೆಮ್ಮೆಯ ಗರಿಯನ್ನು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ತನ್ನ ಮುಡಿಗೇರಿಸಿಕೊಂಡಿದೆ.
1957 ನವೆಂಬರ್ ಒಂದರಂದು ಹುಬ್ಬಳ್ಳಿಯಲ್ಲಿ ದಿ. ವೆಂಕಟೇಶ ಟಿ. ಮಾಗಡಿ ಅಸ್ತಿತ್ವಕ್ಕೆ ತಂದ ಕೇಂದ್ರವಿದು. ಈ ಸಂಸ್ಥೆ ಎಲ್ಲಾ ನಿಯಮಾವಳಿಗಳನ್ನು ಕಟಿಬದ್ದವಾಗಿ ಪಾಲಿಸುವ ಮೂಲಕ ರಾಷ್ಟ್ರಧ್ವಜ ತಯಾರಿಸಿ ದೇಶಸೇವೆಯ ಕೆಲಸಕ್ಕೆ ಪಾದಾರ್ಪಣೆ ಮಾಡುತ್ತಿರುವಾಗ ಜನಸಾಮಾನ್ಯರು ಪಾಲಿಸ್ಟರ್ ಬಟ್ಟೆ, ಪ್ಲಾಸ್ಟಿಕ್ ಗಳನ್ನು ಬಳಸಿದ ಧ್ವಜವನ್ನು ಬಳಸುವುದಕ್ಕಿಂತ ಕೇವಲ ಖಾದಿ ಬಟ್ಟೆಯಿಂದ ತಯಾರಿಸಿದ ಧ್ವಜಕ್ಕೆ ಆದ್ಯತೆ ಕೊಡಬೇಕು ಎಂದು ಖಾದಿ ಗ್ರಾಮೋದ್ಯೋಗ ಕೇಂದ್ರಗಳು ಅಗ್ರಹಿಸಿಕೊಂಡಿದೆ.
ಹಳ್ಳಿಯಿಂದ ದೆಹಲಿ ಕೆಂಪು ಕೋಟೆಯವರೆಗಿನ ಎಲ್ಲಾ ಸರ್ಕಾರಿ ಸಂಘ ಸಂಸ್ಥೆಯಲ್ಲಿ ರಕ್ಷಣಾ ಇಲಾಖೆ, ವಿಧಾನ ಸೌಧ, ರಾಜಭವನದಲ್ಲಿ ಹಾರಾಡುತ್ತಿರುವ ರಾಷ್ಟ್ರಧ್ವಜ ತಯಾರಾಗುವುದು ಹುಬ್ಬಳ್ಳಿಯ ಬೆಂಗೇರಿಯಲ್ಲಿ ಎಂಬುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಕಿರೀಟವಿದ್ದಂತೆ.
ತಿರಂಗ ತಯಾರಾಗುವ ಪರಿ : ಚಿತ್ರದುರ್ಗದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಸೆಂಟ್ರಲ್ ಸ್ಲೈವರ್ ಪ್ಲಾಂಟ್ ನಿಂದ ಹತ್ತಿ ಅರಳೆ ಖರೀದಿಸಿ ಬಾಗಲಕೋಟೆಯಲ್ಲಿರುವ ಉತ್ಪಾದನಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಅಲ್ಲಿನ ಕಾರ್ಮಿಕರು ಹತ್ತಿಯನ್ನು ದಾರರೂಪಕ್ಕೆ ತಂದು ನೇಯ್ಗೆ ಮಾಡಿ ವಸ್ತ್ರ ತಯಾರಿಸಿ ಹುಬ್ಬಳ್ಳಿಯ ಬೆಂಗೇರಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿ ಬಟ್ಟೆಗಳ ಕೊಳೆ ತೆಗೆದು ಅಪ್ಪಟ ಖಾದಿ ಬಟ್ಟೆಗೆ ಕೇಸರಿ ಮತ್ತು ಹಸಿರು ಬಣ್ಣ ಯಂತ್ರದ ಮೂಲಕ ಲೇಪಿಸಿ ನಂತರ ಒಣಗಿಸಿ ತಿರಂಗ ತಯಾರಿಕಾ ಕೇಂದ್ರದಲ್ಲಿ ಸರಿಯಾದ ಅಳತೆಗೆ ಬಟ್ಟೆಗಳನ್ನು ಕತ್ತರಿಸಿ ಬಿಳಿ ಬಟ್ಟೆಯ ಮೇಲೆ ಕಡು ನೀಲಿ ಬಣ್ಣದ ಅಶೋಕ ಚಕ್ರ ಮುದ್ರಿಸಲಾಗುತ್ತದೆ. ನಂತರ ದರ್ಜಿಗಳು ತ್ರಿವರ್ಣದ ಬಟ್ಟೆಗಳನ್ನು ಹೊಲಿಯುತ್ತಾರೆ. ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ತಲುಪಿಸಲಾಗುತ್ತದೆ. ಸರ್ಕಾರದ ನಿಯಮಾವಳಿಯಂತೆ ಖಾದಿ ಬಟ್ಟೆಯಲ್ಲಿ ಧ್ವಜದ ಅಳತೆಗೆ ತಕ್ಕಂತೆ ಅಶೋಕ ಚಕ್ರ ಹೊಂದಾಣಿಕೆ ಮಾಡಲಾಗುತ್ತದೆ. ದೇಶದ ತುಂಬೆಲ್ಲಾ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಾಭಿಮಾನದಿಂದ ಬೀಗುವ ರೋಮಾಂಚನ ಭರಿತ ಸ್ಪೂರ್ತಿಯ ಸೆಲೆಯಾದ ರಾಷ್ಟ್ರಧ್ವಜ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಘ ನಿರ್ಮಾಣ ಮಾಡುತ್ತದೆ.
ಬೆಂಗೇರಿಯ ಈ ಕೇಂದ್ರದಲ್ಲಿ ರಾಷ್ಟ್ರಧ್ವಜ ತಯಾರಿಸುವ ವಿವಿಧ ಹಂತಗಳಾದ ಖಾದಿ ಬಟ್ಟೆಗೆ ಬಣ್ಣ ಲೇಪಿಸಿ, ಡೈಯಿಂಗ್ ಯಂತ್ರದ ಮೂಲಕ ಒಣಗಿಸುವುದು, ಧ್ವಜಕ್ಕೆ ಹಗ್ಗ ಮತ್ತು ಕುಣಿಕೆ ಹಾಕುವುದನ್ನು ಕಣ್ಣಾರೆ ಕಾಣಬಹುದು. ಹುಬ್ಬಳ್ಳಿಗೆ ಭೇಟಿ ನೀಡುವ ಹೊರ ರಾಜ್ಯದ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಆದರೆ ಕರ್ನಾಟಕದವರು ಬರುವುದು ಅತೀ ವಿರಳ ಎಂದು ಇಲ್ಲಿನ ಕಾರ್ಮಿಕರು ಬೇಸರ ವ್ಯಕ್ತಪಡಿಸುತ್ತಾರೆ. ಈ ಕೇಂದ್ರ ಇಡೀ ದೇಶದ ಹೆಮ್ಮೆಯ ಪ್ರತೀಕ. ಅಭಿಮಾನದಿಂದ ಭೇಟಿ ನೀಡಬೇಕಾದ ಸ್ಥಳ. 17 ಎಕರೆ ಪ್ರದೇಶದಲ್ಲಿ ಕೇಂದ್ರ ಕಚೇರಿ ರಾಷ್ಟ್ರಧ್ವಜ ತಯಾರಿಸುವ ಕೇಂದ್ರವಿದ್ದು ಇದರಲ್ಲಿ ಮುಖ್ಯವಾಗಿ ವರ್ಣಲೇಪಿತ ಕೇಂದ್ರ ಮತ್ತು ವಸ್ತ್ರಗಾರ ಕಟ್ಟಡಗಳನ್ನು ಒಳಗೊಂಡಿದೆ. 210 ಮಗ್ಗಗಳು, 450 ಚರಕಗಳಿವೆ. ನೂಲುವರು ನೇಯ್ಗೆಯವರು ಇದ್ದಾರೆ. ಇಲ್ಲಿನ ಕೆಲಸಗಾರಲ್ಲಿ ರಾಷ್ಟ್ರಧ್ವಜ ತಯಾರಿಕೆಯೊಂದಿಗೆ ತಮ್ಮ ಬದುಕು ಕಟ್ಟಿಕೊಂಡದ್ದಕ್ಕೆ ಆತ್ಮ ತೃಪ್ತಿ ಇದ್ದು ಹೆಮ್ಮೆ ಪಡುತ್ತಾರೆ .
ತ್ರಿವರ್ಣ ಧ್ವಜ : ನಮ್ಮ ತಿರಂಗ ರಾಷ್ಟ್ರದ ಏಕತೆ ಅಖಂಡತೆಯ ಗೌರವದ ಪ್ರತೀಕ. ತ್ರಿವರ್ಣ ಧ್ವಜದಲ್ಲಿರುವ ಆಶೋಕ ಚಕ್ರ ನಮ್ಮ ದೇಶದ ಐಕ್ಯತೆ ಮತ್ತು ಅನನ್ಯತೆಯ ಸಂಕೇತ. ಧ್ವಜದಲ್ಲಿ ಇರುವ 3 ಬಣ್ಣಗಳು ಕೇವಲ ಚಂದಕ್ಕಾಗಿ ಅಲ್ಲ. ಇದರ ಕೇಸರಿ ಬಣ್ಣ ಸಾಹಸ, ಶೌರ್ಯ, ತ್ಯಾಗ, ಬಲಿದಾನದ ಪ್ರತೀಕವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತವರ ದೇಶಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿದೆ. ಬಿಳಿ ಬಣ್ಣವು ಸತ್ಯ ಮತ್ತು ಪಾವಿತ್ರ್ಯತೆ ನಿಷ್ಕಾಮತೆ ಹಾಗೂ ಸತ್ಯ ನಿಷ್ಠ, ಸಾಹಸಿಯಾಗುವ ಪ್ರೇರಣೆ ನೀಡುತ್ತದೆ. ಹಸಿರು ಬಣ್ಣ ದೇಶದ ಸಮೃದ್ದಿ, ಬಡತನ ನಿವಾರಣೆ ಮಾಡುವ ಸೂಚನೆಯಾಗಿದೆ. ನಡುವೆ ನೀಲಿ ಬಣ್ಣದ ಎಳೆಗಳನ್ನು ಹೊಂದಿರುವ ಅಶೋಕ ಚಕ್ರ ಸಾಮ್ರಾಟ ಅಶೋಕನ ಕಾಲದ ಸಂಚಿಸ್ತೂಪದಿಂದ ಸ್ಪೂರ್ತಿ ಪಡೆದಿದೆ. ರಾಷ್ಟ್ರಧ್ವಜ ನಿರ್ಮಾಣವನ್ನು ತೆಲುಗು ಭಾಷಿಕರಾದ ವೆಂಕಯ್ಯ ಪಿಂಗಳಿಯು ರೂಪಿಸಿದ್ದರು. ಇದೀಗ ರಾಷ್ಟ್ರ ಧ್ವಜ ಮನೆ ಮನೆಯ ಮೇಲೆ ಹಾರಾಡುವುದು ಕೂಡ ಹೆಮ್ಮೆ ಎನ್ನಬಹುದು. ಆದರೆ ಬರೆ ತೊರಿಕೆಯ ಪ್ರದರ್ಶನವಾಗದೆ ಗೌರವ ಹಾಗೂ ದೇಶ ಭಕ್ತಿಯೊಂದಿಗೆ ರಾಷ್ಟ್ರಧ್ವಜ ಹಾರಾಡಲಿ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ