ಶುದ್ಧ ಭಾರತೀಯ ಸಾಂಪ್ರದಾಯಿಕ ಉಡುಗೆ ಧೋತಿ ಎಂದರೆ ಹಳೆಯ ಕಾಲದ ಧಿರಿಸು ಎಂದು ಮೂಗು ಮುರಿಯುತ್ತಿರುವ ಕಾಲ ಬದಲಾಗಿದೆ. ಇತ್ತೀಚೆಗಂತು ಧೋತಿ ಪ್ಯಾಶನ್ ಲೋಕದಲ್ಲಿ ಮಿಂಚುತ್ತಿದ್ದು ಸಂಪ್ರದಾಯ ಬದ್ಧ ಉಡುಗೆಯಾದರೂ ಮಾಡರ್ನ್ ಲುಕ್ ಪಡೆದುಕೊಂಡಿದೆ. ಧೋತಿ ಸಂಪ್ರದಾಯದ ಚೌಕಟ್ಟಿನೊಳಗೆ ನಲಿಯುತ್ತಿರುವ ಕಾಲದಲ್ಲೇ ಪ್ಯಾಶನ್ ಜಗತ್ತಿಗೂ ಲಗ್ಗೆ ಇಟ್ಟಿದ್ದು ವಿಶೇಷ. ಚಿಣ್ಣರಿಂದ ವೃದ್ದರವರೆಗೂ ಎಲ್ಲರೂ ಇಷ್ಟ ಪಡುವ ಧೋತಿ ಆಧುನಿಕತೆಯ ಅಟ್ಟಹಾಸದಲ್ಲಿ ನಲುಗಿ ಹೋಗದೆ ದಿನೆ ದಿನೆ ಹೆಚ್ಚು ಮಾನ್ಯತೆ ಪಡೆಯುತ್ತಿರುವುದು ಆಶ್ಚರ್ಯವಾದರೂ ವಾಸ್ತವ. ಪ್ಯಾಶನ ಪ್ರಿಯರ ಅಭಿರುಚಿಗೆ ಒಪ್ಪುವಂತಹ ಡಿಸೈನ್ ಬಟ್ಟೆಗಳು ಯಶಸ್ಸು ಪಡೆಯುತ್ತಿದ್ದರೂ ಈ ಎಲ್ಲವುದರ ನಡುವೆಯು ಸರಳತೆ, ಸ್ವಚ್ಛತೆ, ಶಿಸ್ತು, ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಗರಿಗೆದರಿ ಆದಿಯಿಂದಲೂ ತನ್ನ ಸ್ಥಾನ ಉಳಿಸಿಕೊಂಡ ಧೋತಿ ಅಪಾರ ಬೇಡಿಕೆ ಗಿಟ್ಟಿಸಿಕೊಂಡಿದೆ. ಈಗಂತೂ ಪ್ಯಾಶನ್ ಲೋಕದಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹರಿದಾಡಿದರೂ ಧೋತಿ ಬಗ್ಗೆ ಜನರಿಗೆ ಹೊಸ ಆಕರ್ಷಣೆ ಹಾಗೂ ಆಸಕ್ತಿ ಮೂಡಿರುವುದು ಈ ಉದ್ಯಮದ ಪ್ರಗತಿಯ ಗುಟ್ಟು.
ಧೋತಿ ನೋಡಲು ಸರಳವಾಗಿದ್ದರೂ ಉಟ್ಟಾಗ ಅದರ ಗತ್ತೇ ಬೇರೆ. ರಿಚ್ ಲುಕ್ ನೊಂದಿಗೆ ಗೌರವದ ನೋಟವನ್ನು ನೀಡುತ್ತದೆ. ದೇಶಿ ಸಂಸ್ಕೃತಿ, ಸಂಪ್ರದಾಯಗಳೊಂದಿಗೆ ಆರಾಮದಾಯಕವಾಗಿ ಕಾಣುವ ಧೋತಿ ನಮ್ಮ ದೇಶದ ವಿಭಿನ್ನ ಪ್ರದೇಶದಲ್ಲಿ ತನ್ನದೇ ಆದ ಬೇರೆ ಬೇರೆ ಶೈಲಿಯಲ್ಲಿ ಜನಸಾಮಾನ್ಯರಿಂದ ಶ್ರೀಮಂತರವರೆಗೂ, ಕೂಲಿ ಕಾರ್ಮಿಕರಿಂದ ಸಿನೇಮಾ ತಾರೆ ಸೆಲೆಬ್ರಿಟಿಯವರಿಗೂ ಅಚ್ಚು ಮೆಚ್ಚಿನ ಧೋತಿ ಇತ್ತೀಚಿನ ಕೆಲ ವರ್ಷಗಳಿಂದ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ನಮ್ಮ ಸಂಪ್ರದಾಯವನ್ನು ಎತ್ತಿ ತೋರಿಸುವ ಧೋತಿಗೆ ಗೌರವದ ಉಡುಗೆ ಎಂಬ ಬಿರುದು ಇರುವುದು ಗಮನಿಸಬೇಕಾದ ವಿಚಾರ. ದೋತಿ ಪಂಚೆ ನಮ್ಮ ಹೆಮ್ಮೆಯ ಉಡುಪು. ದೋತಿಯದು ಬೃಹತ್ ಪರಂಪರೆ ಅದಕ್ಕೆ ರಾಷ್ಟ್ರೀಯ ವಸ್ತ್ರದ ಮಾದರಿ ಗೌರವ ದೊರೆತು 100 ವರ್ಷ ಕಳೆಯಿತು. ಮಹಾತ್ಮ ಗಾಂಧಿ ತಮಿಳುನಾಡಿನಲ್ಲಿ ತಮ್ಮ ನಿತ್ಯದ ವಸ್ತೃವಾಗಿ ಪಂಚೆಯನ್ನು ಸ್ವೀಕರಿಸಿ ಗೌರವ ನೀಡಿದ ವರ್ಷ 1921.
ಗಾಂಭೀರ್ಯ ಹಾಗೂ ಸೌಂದರ್ಯ ಹೆಚ್ಚಿಸುವ ಶುಭ್ರ, ಸ್ವಚ್ಛ ಧಿರಿಸು ವಿಶೇಷ ಸಭೆ, ಮದುವೆ ಸಮಾರಂಭಗಳಲ್ಲಿ ಗ್ರ್ಯಾಂಡ್ ಲುಕ್ ನೀಡುವ ಸಂಸ್ಕೃತಿ ಬಿಂಬಿಸುವ ಉಡುಗೆ. ಇತ್ತೀಚೆಗೆ ಮದುವೆಯಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುಟ್ಟ ಮಕ್ಕಳಿಂದ ಹಿರಿಯರ ತನಕ ಭೇದವಿಲ್ಲದೆ ಪಂಚೆ ಉಡುತ್ತಾರೆ. ಸೀದಾ ಸಾದಾ ಧೋತಿಗೆ ಕೂಡ ಹೊಸ ಕಳೆ ನೀಡಿ ಸಾಂಪ್ರದಾಯಿಕ ನೋಟ ಮತ್ತು ಆಕರ್ಷಕವಾಗಿ ಕಾಣುವುದು ಮೆಚ್ಚುವ ವಿಚಾರ. ಶುಭ್ರವಾದ ಜರಿ ಅಂಚಿನ ಧೋತಿ ಶರ್ಟಿನ ಮೇಲೆ ಹೆಗಲಿಂದ ಕೆಳಗೆ ಇಳಿ ಬಿಟ್ಟು ಜರಿ ಶಾಲು ಧರಿಸಿ ನಡೆದರಂತೂ ಅದರ ಗತ್ತೇ ಬೇರೆ. ಪ್ಯಾಶನ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಆದರೆ ಧೋತಿ ಇಂದಿಗೂ ಪ್ಯಾಶನ್ ಹಾಗೂ ಸಂಪ್ರದಾಯ ಎರಡರಲ್ಲೂ ತನ್ನ ತನ ಉಳಿಸಿಕೊಂಡು ಸೈ ಎನಿಸಿಕೊಂಡಿದೆ.
ನಮ್ಮ ದೇಶದಲ್ಲಿ ಧೋತಿ ಉತ್ಪಾದನೆ ಮತ್ತು ಮಾರಾಟದ ಕ್ಷೇತ್ರ ಬಹು ವಿಶಾಲವಾಗಿದೆ. ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ಉಡುಪು ಇದು. ಯುವಕರು ತಮ್ಮ ಕಾಲೇಜ್ ಡೇ, ಸಾಂಸ್ಕೃತಿಕ ಉತ್ಸವಗಳಲ್ಲಿ ಸಂತಸದಿಂದ ತೊಡುತ್ತಾರೆ. ಆದರೆ ಪರ್ಸ್ ಇಟ್ಟುಕೊಳ್ಳಲು ಅವಕಾಶವಿಲ್ಲ. ಬೆಲ್ಟ್ ಧರಿಸಲು ಸಾಧ್ಯವಾಗುತ್ತಿಲ್ಲ ಎಂಬ ಅನಾನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ಧೋತಿ ಒಳಗಡೆ ಜೇಬು ಹಾಗೂ ಬೆಲ್ಟ್ ಇರುವ ಧೋತಿ ಸಿದ್ಧ ಉಡುಪುಗಳಂತೆ ತಯಾರಿಸಿ ಧರಿಸುವುದು ಸುಲಭ ಎನ್ನುವುದನ್ನು ಗಮನಿಸಿ ಇಂತಹ ಧೋತಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಾಟನ್ , ಲಿನನ್ ಹಾಗೂ ರೇಷ್ಮೆ ಧೋತಿಗಳ ಜೊತೆ ಅರ್ಧ ತೋಳಿನ ಅಂಗಿ ಧರಿಸಿದರಂತೂ ರಾಜ ಮಹಾರಾಜರ ಗಾಂಭಿರ್ಯ ಎದ್ದು ಕಾಣುತ್ತದೆ. ನಮ್ಮ ಭವ್ಯ ಪರಂಪರೆಯ ಉಡುಗೆ ತೊಡುಗೆಗಳನ್ನು ಎತ್ತರಕ್ಕೆ ಹಬ್ಬಿಸಬೇಕಾದ ಜವಾಬ್ದಾರಿ ಹೊತ್ತ ಯುವ ಪೀಳಿಗೆಯು ಸಾಂಪ್ರದಾಯಿಕ ಉಡುಗೆಯಾದ ಧೋತಿ ಉಡುವಲ್ಲಿ ಉತ್ಸಾಹ ಕಾಣಿಸುತ್ತಿರುವುದು ಶ್ಲಾಘನೀಯ.
ಕೆಲ ವರ್ಷಗಳ ಹಿಂದೆ ಧೋತಿ ಉಟ್ಟವರನ್ನು ಕೀಳಾಗಿ ಕಂಡ ನಿದರ್ಶನಗಳಿವೆ. ಸಭೆ ಸಮಾರಂಭಗಳಲ್ಲಿ ಧೋತಿ ಉಟ್ಟ ಕಾರಣಕ್ಕೆ ನಿರ್ಲಕ್ಷ್ಯ ತೋರಿಸಿದ್ದಾರೆ ಎಂಬ ಪತ್ರಿಕೆಯ ವರದಿ ಓದಿದ ನೆನಪು. ಧೋತಿ ಉಟ್ಟ ಕಾರಣಕ್ಕೆ ಮದ್ರಾಸ್ ಹ್ಯೆಕೋಟ್ ನ್ಯಾಯ ಮೂರ್ತಿಯೊಬ್ಬರಿಗೆ ಕ್ಲಬ್ ನೊಳಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಇನ್ನೊಮ್ಮೆ ಇಂತಹ ನಡೆ ಕೇಳಿ ಬಂದರೆ ಕ್ಲಬ್ ನ ಪರವಾನಿಗೆ ರದ್ದು ಪಡಿಸಲಾಗುವುದು ಎಂದು ಸರಕಾರದ ಆದೇಶವೂ ಆಗಿತ್ತು. ಅಷ್ಟೇ ಅಲ್ಲದೆ ತಮಿಳುನಾಡಿನ ಸರಕಾರಿ ಅನುದಾನಿತ “ಅಹೋಬಿಲಾ ಮಠ ಓರಿಯಂಟಲ್ ಸೆಕಂಡರಿ ಸ್ಕೂಲ್ “ನಲ್ಲಿ ವಿದ್ಯಾರ್ಥಿಗಳಿಗೆ ಧೋತಿ ಮತ್ತು ಬಿಳಿ ಅಂಗಿ ಹುಡುಗರಿಗೆ ಸಮವಸ್ತ್ರ. 1953 ರಲ್ಲಿ ಶಾಲೆ ಸ್ಥಾಪನೆ ಆದ ದಿನ ದಿಂದಲೂ ಈ ನಿಯಮ ಜಾರಿಯಲ್ಲಿದೆ. ವಿದ್ಯಾರ್ಥಿಗಳು ಧೋತಿ ಉಡುವುದಕ್ಕೆ ಯಾವುದೇ ತರದ ಟೀಕೆಗಳು ವ್ಯಕ್ತವಾಗುವುದಿಲ್ಲವೇ ಎಂದು ಪತ್ರಕರ್ತರು ಕೇಳಿದ್ದಕ್ಕೆ ನಮ್ಮ ಸಂಸ್ಕೃತಿಗೆ ಇದು ಗೌರವವಾಗಿರುವುದರಿಂದ ಭವ್ಯ ಪರಂಪರೆಯ ಧೋತಿಗೆ ಸಾಂಪ್ರದಾಯಿಕ ಹಿನ್ನೆಲೆಯಿದ್ದು ದೇಶಿ ಸಂಸ್ಕತಿ ಸಂಪ್ರದಾಯಗಳೊಂದಿಗೆ ವಿದ್ಯಾಭ್ಯಾಸಕ್ಕೆ ಇಲ್ಲಿ ಅವಕಾಶವಿದೆ ಎಂದಿದೆ ಶಾಲಾ ಆಡಳಿತ ಮಂಡಳಿ.
ಧೋತಿ ಒಂದು ವಿಶಿಷ್ಟ ಉಡುಗೆ. ಎಲ್ಲಾ ತರದ ಅಂದರೆ ಅಧಿಕ ದೇಹತೂಕ ಹೊಂದಿದವರು, ಎತ್ತರದವರು, ಕುಳ್ಳಗಿನ ಶರೀರದವರಿಗೂ ಸರಿ ಹೊಂದುವಂತದ್ದು. ಧೋತಿ ಧರಿಸುವಲ್ಲಿ ಭಿನ್ನತೆ ಇದೆ. ಧೋತಿ ಚೆನ್ನಾಗಿ ಉಡುವುದು ಒಂದು ಕಲೆ. ಕಚ್ಚೆ ಹಾಕಿ ಪಂಚೆ ಉಡಬೇಕಾದರೂ ಸರಿಯಾದ ಅನುಭವ ಬೇಕು. ಧೋತಿಯಲ್ಲಿ ಬಿಳುಪಿನ ಹಾಗೂ ಕ್ರೀಂ ಬಣ್ಣದ ಧೋತಿಗಳಿಗೆ ಹೆಚ್ಚು ಬೇಡಿಕೆ ಇದೆ. ಇಂದಿನ ಯುವಕರಿಗೆ ಧೋತಿ ಉಟ್ಟು ಸಂಭಾಳಿಸಿಕೊಂಡು ನಡೆಯಲು, ಜಾರದಂತೆ ಎಚ್ಚರ ವಹಿಸಲು ಬಾರದಿದ್ದರೂ ಅವರ ನೆಚ್ಚಿನ ಉಡುಪುಗಳಲ್ಲಿ ಧೋತಿ ಇದೆ ಎನ್ನುವುದು ಮೆಚ್ಚುಗೆಯ ವಿಚಾರ.
ನನಗೆ ಬಾಲ್ಯದಲ್ಲಿ ಅಪ್ಪಯ್ಯ ತೆಗೆದಿರಿಸಿದ ಧೋತಿಯನ್ನೊಮ್ಮೆ ಉಟ್ಟು ಮನೆ ತುಂಬಾ ತಿರುಗಾಡುವ ಅಭ್ಯಾಸ ಇತ್ತು. ಅಮ್ಮ “ಹುಚ್ಚು ಹುಡುಗಿ” ಎಂದು ಗದರಿಸಿದ ನಂತರ ಧೋತಿ ತೆಗೆದಿರಿಸುತ್ತಿದ್ದೆ. ಇಂದಿಗೂ ನನಗೆ ಧೋತಿ ಉಟ್ಟ ಗಂಡಸರು ರಾಜ ಮಹಾರಾಜ, ಮಹಾ ಪುರುಷರಂತೆ ಕಾಣಿಸುತ್ತಾರೆ. ಅದಕ್ಕಾಗಿ ತಾನೇ ಧೋತಿ ಸಂಪ್ರದಾಯಕ್ಕೂ ಸೈ ಪ್ಯಾಶನ್ ಗೂ ಸೈ ಎಂಬ ಹೆಗ್ಗಳಿಕೆ ಹೊಂದಿರುವುದು.
-ಲತಾ ಸಂತೋಷ ಶೆಟ್ಟಿ ಮುದ್ದುಮನೆ