ಕರ್ನಾಟಕ ಸಂಪದ್ಭರಿತ ಕಾನನ ಹಾಗೂ ಜೀವ ಜಂತುಗಳನ್ನು ಹೊಂದಿರುವ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅದರಲ್ಲೂ ಹಾವುಗಳಂತೂ ರೈತ ಸ್ನೇಹಿ ಜೀವಿಗಳು. ಪ್ರಕೃತಿ ನಮಗೆ ಕೊಟ್ಟ ಉಡುಗೊರೆ. ದುರಾದೃಷ್ಟವೆಂದರೆ ಹಲವು ವರ್ಷಗಳಿಂದ ಹಾವುಗಳ ಪ್ರಬೇಧಗಳು ನಶಿಸಿದೆ. 2024 ರ ಹೊತ್ತಿಗೆ ಮತ್ತಷ್ಟು ಹದಗೆಡುವ ಸಾಧ್ಯತೆಯ ಬಗ್ಗೆ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ನಿಸರ್ಗ ಸ್ನೇಹಿಯಾಗಿದ್ದ ಮಾನವ ಬದುಕು ಬದಲಾಗಿ ಪರಿಸರ ಸಮತೋಲನದ ಸ್ಥಿತಿಯ ಲಯ ತಪ್ಪಲು ಕಾರಣವಾಗುತ್ತಿದೆ. ಮನುಷ್ಯನ ಸ್ವಾರ್ಥ, ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಜನಸಂಖ್ಯೆ ಹೆಚ್ಚಳ, ನಗರೀಕರಣದ ಅಬ್ಬರ, ಕಾಡು ನಾಶ, ಶರವೇಗದಲ್ಲಿ ನಡೆಯುತ್ತಿರುವ ನಗರೀಕರಣ, ಹಸಿರನ್ನು ನುಂಗಿ ಜೀವ ವೈವಿಧ್ಯತೆಗೆ ಕೊಡಲಿ ಪೆಟ್ಟು ನೀಡುತ್ತಿದೆ. ಪ್ರಕೃತಿಯ ಸಮತೋಲನ ಕಾಯ್ದುಕೊಳ್ಳುವಲ್ಲಿ ಹಾವುಗಳ ಸೂಕ್ತ ರಕ್ಷಣೆ ಅನಿವಾರ್ಯ ಹಾಗೂ ಅವುಗಳ ಸಂತತಿ ಉಳಿಸಿ ನಿಸರ್ಗ ಸ್ನೇಹಿ ಬದುಕನ್ನು ರೂಪಿಸಿಕೊಳ್ಳಲು ನಾವಿಂದು ದಾಪುಗಾಲು ಇಡ ಬೇಕಾಗಿದೆ. ಈಗಾಗಲೇ ಕಾಲ ಮೀರಿದೆ. ಮತ್ತಷ್ಟು ವಿಳಂಬವಾದರೆ ಪ್ರಕೃತಿ ಮುನಿದು ಸೇಡು ತೀರಿಸಿಕೊಳ್ಳಲು ಅಣಿಯಾಗಬಹುದು. ಪ್ರಕೃತಿಯ ಸಮತೋಲನಕ್ಕಾಗಿ ಹಾವುಗಳ ಸಂರಕ್ಷಣೆ ನಮ್ಮೆಲ್ಲರ ಗುರಿಯಾಗಿರಲಿ.
ಹಾವುಗಳ ಬಗ್ಗೆ ಜನಸಾಮಾನ್ಯರಲ್ಲಿ ಅನಗತ್ಯ ಭಯ ಹಾಗೂ ಅವುಗಳ ಸಂತತಿಯ ಉಳಿವಿಗಾಗಿ ಜಾಗೃತಿ ಮೂಡಿಸಲು ವಿಶ್ವ ಹಾವುಗಳ ದಿನಾಚರಣೆ ಮೊದಲ ಬಾರಿಗೆ 1967 ರ ಜುಲಾಯಿ 16 ರಂದು ಅಮೇರಿಕಾದಲ್ಲಿ ಸ್ನೆಕ್ ಫಾಂಮ್ ಎಂಬ ಸಂಸ್ಥೆ ವಿಶ್ವ ಹಾವುಗಳ ದಿನ ಆಚರಿಸಲು ಆರಂಭಿಸಿದರು. ಹಾವು ಪರಿಸರದ ಸಮತೊಲದ ಮುಖ್ಯ ಕೊಂಡಿ. ತನ್ನಿಮಿತ್ತ ಈ ಬರಹ.
ಹಾವು ಹಾಗೂ ಕತ್ತಲೆಗೆ ಅತಿಯಾಗಿ ಹೆದರುವ ನಾನು ಹಾವು – ನಾವು ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಧುರ ಚೆನ್ನ ದತ್ತಿ ನಿಧಿ ಪ್ರಶಸ್ತಿ ಗಳಿಸಿದ, ಹಾವಿನೊಂದಿಗಿನ ಬದುಕಿನ ಒಂದೊಂದು ಕ್ಷಣವನ್ನು ಲಿಖಿತವಾಗಿ ದಾಖಲಿಸಿ ಹಾವು- ನಾವು: ನಂಬಿಕೆ-ವಾಸ್ತವ ಮತ್ತು ನಾಗ ಬೀದಿಯೊಳಗಿಂದ ಎಂಬ ಕೃತಿಗಳನ್ನು ರಚಿಸಿದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತು ಹಲವಾರು ಲೇಖನಗಳಲ್ಲದೇ ಹಾವುಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಸೂಕ್ತವಾದ ವೈಜ್ಞಾನಿಕ ಕಾರಣಗಳೊಂದಿಗೆ ವಿವರಿಸುವ ಉಡುಪಿಯ ಅಂಬಾಗಿಲು ಸಮೀಪದ ಪುತ್ತೂರಿನ ಉರಗ ತಜ್ಞ ಗುರುರಾಜ್ ಸನಿಲ್ ರ ಹಾವಿನ ಮನೆಗೆ ಭೇಟಿ ನೀಡುವಾಗ ಭಯದಲ್ಲಿದ್ದೆ. ಮನೆ ಒಳ ಹೊಕ್ಕು ಹಾವು ಎಲ್ಲಿ ? ಹಾವುಗಳು ಇಲ್ಲೆಲ್ಲ ಹರಿದಾಡುತಿದೆಯಾ ಎಂದು ಗುರುರಾಜ್ ಸನಿಲ್ ರನ್ನು ಕೇಳಿದಾಗ ಅವರಿಗೆ ನನ್ನ ಭಯದ ಅರಿವಾಗಿ ಹಾವಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಎಲ್ಲರೂ ಹೆದರುತ್ತಾರೆ. ನಾನು ಕೂಡ ಮೊದ ಮೊದಲು ಹಾವಿಗೆ ಹೆದರುತ್ತಿದ್ದೆ ಈಗ ನೋಡಿ ಎಂದು ನನ್ನೊಂದಿಗಿದ್ದ ನನ್ನ ಮಗನ ಕೈಯಲ್ಲಿ ಜೀವಂತ ಹಾವು ಕೊಟ್ಟು ಕೆಲವು ಹಾವುಗಳನ್ನು ಆತನ ಮೈಮೇಲೆ ಹರಿಯ ಬಿಟ್ಟರು.
ಹಾವಿಗೆ ತೊಂದರೆ ಕೊಟ್ಟರೆ ಅಷ್ಟೇ ಅದು ಕಚ್ಚುವುದು ಎನ್ನುತ್ತಾ, ಆರಾಮವಾಗಿ ಶರೀರದ ಮೇಲೆ ಹರಿದಾಡುವ ಹಾವುಗಳನ್ನು ತೋರಿಸುತ್ತಾ ನೋಡಿ ಹಾವು ಏನು ಮಾಡೋಲ್ಲ ಎಂದು ಗುರುರಾಜ್ ಸನಿಲ್ ಹಾವಿನ ಬಗ್ಗೆ ವಿವರಣೆ ಕೊಡುತ್ತಾ ನನ್ನ ಕೈಗೂ ಹಾವು ನೀಡಲು ಬಂದವರಿಗೆ ಹಾವಿನ ಹಲ್ಲು ಕಿತ್ತಿದ್ದೀರಾ ಎಂದು ಕೇಳಿದೆ. ಇಲ್ಲಾ ಹಲ್ಲು ಕಿತ್ತರೆ ಹಾವಿಗೆ ತೊಂದರೆ ಕೊಟ್ಟಂತೆ ಎಂದು ತರ ತರದ ಹಾವುಗಳನ್ನು ಇದು ನೀರು ಹಾವು, ಕನ್ನಡಿ ಹಾವು, ನಾಗರ ಹಾವು ಎಂದು ಹಲವಾರು ಹಾವುಗಳನ್ನು ತೋರಿಸಿದರು.
ಇಷ್ಟು ದೂರದಿಂದ ಬಂದು ಹಾವನ್ನು ಕೈಯಲ್ಲಿ ಹಿಡಿಯದಿದ್ದರೆ ಹೇಗೆ ಹಾವಿಗೆ ಕೋಪಾ ಬಂದಾಗ ಮಾತ್ರ ತನ್ನ ರಕ್ಷಣೆಯ ಗೊಂದಲದಲ್ಲಿ ಕಚ್ಚುವುದು ಎಂದು ಸನಿಲ್ ಹೇಳುತ್ತಿದ್ದರು. ಆದರೆ ಹಾವಿನ ಕೋಪ ನಾನೇನು ಬಲ್ಲೆ ನನ್ನ ಕೋಪದ ಅರಿವೆ ನನಗಿರೋಲ್ಲಾ ಅಂತ ಯೋಚಿಸುತ್ತಾ ಅಂತೂ ಸನಿಲ್ ಹಾವಿನ ಬಗ್ಗೆ ನೀಡಿದ ವೈಜ್ಞಾನಿಕ ಕಾರಣ, ಜೀವಶಾಸ್ತ್ರದ ಅನುಸಾರ ನೀಡಿದ ಮಾಹಿತಿ ಹಾಗೂ ಹಾವಿನ ಮನಸ್ಸು ಚೆನ್ನಾಗಿ ತಿಳಿದು ನೀಡಿದ ಎಲ್ಲಾ ವಿವರಣೆ ಕೇಳಿ ಸ್ವಲ್ಪ ಧೈರ್ಯ ವಹಿಸಿ ಅತೀ ಸಾದು ಸ್ವಭಾವದ ಇರ್ತಲೆ ಹಾವನ್ನು ಕೈಯಲ್ಲಿ ಹಿಡಿದೆ.
ಇರ್ತಲೆ ಹಾವುಗಳ ಸತ್ಯತೆ : – ಭಾರತದಾದ್ಯಂತ ಇತರ ಹಾವುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಜನರ ಮೌಢ್ಯಕ್ಕೆ ಬಲಿಯಾಗುತ್ತಿರುವುದು ಇರ್ತಲೆ ಹಾವುಗಳು ವಿಷರಹಿತ, ನಿರುಪದ್ರವಿ ಹಾವುಗಳ ಕುರಿತು ಚಿತ್ರ-ವಿಚಿತ್ರ ಅರ್ಥವಿಲ್ಲದ ತಪ್ಪು ನಂಬಿಕೆಗಳ ಪಟ್ಟಿಯೇ ಇದೆ. ಸಾಧು ಸ್ವಭಾವದ ಆಲಸಿ ಹಾವುಗಳನ್ನು ಕೆಣಕಿದಾಗ ತಮ್ಮ ಮೊಂಡು ಬಾಲವನ್ನು ಇನ್ನೊಂದು ತಲೆಯಂತೆ ಪ್ರದರ್ಶಿಸುವ ಮೂಲಕ ಶತ್ರುವಿನಲ್ಲಿ ಭಯ ಹುಟ್ಟಿಸುತ್ತವೆ. ನಾನು ಇರ್ತಲೆ ಹಾವನ್ನು ಕೈಯಲ್ಲಿ ಹಿಡಿದು ನೋಡಿದ್ದೆ ಇವುಗಳಿಗೆ ಎರಡು ತಲೆ ಇಲ್ಲ. ಆದರೆ ಜನಸಾಮಾನ್ಯರಲ್ಲಿ ಇದು ಎರಡು ತಲೆಯ ಹಾವು ಎಂಬ ಬಲವಾದ ನಂಬಿಕೆ ನೆಲೆಯೂರಿದೆ.
ನಾಗರ ಹಾವು :- ನಾಗರ ಹಾವಿನ ಮೇಲಿರುವಷ್ಟು ದೈವೀಕ ಹಾಗೂ ಮೌಢ್ಯತೆಗಳಿಂದ ಕೂಡಿದ ನಂಬಿಕೆಗಳು, ಕಾಲ್ಪನಿಕ ಕತೆಗಳು ಬಹುಶಃ ಇತರ ಜೀವಿಗಳ ಮೇಲೆ ಇರಲಾರದು. ನಿಸರ್ಗದ ಸಮಸ್ತ ಜೀವರಾಶಿಗಳು ಒಂದನ್ನೊಂದು ಅವಲಂಬಿಸಿ ಬದುಕು ಸಾಗಿಸುತ್ತಿರುವುದು ಪ್ರಕೃತಿಯ ವೈಶಿಷ್ಟ್ಯಗಳಲ್ಲೊಂದು. ಆದರೆ ಈ ಜೀವರಾಶಿಗಳಲ್ಲಿ ಬುದ್ದಿ ಜೀವಿ ಮಾನವ ನಿಸರ್ಗ ನಿಯಮಕ್ಕೆ ವಿರುದ್ದವಾಗಿ ಜೀವಿಸುತ್ತಿರುವುದು ನಿಜಕ್ಕೂ ದುರಂತ. ನಾಗರ ಹಾವಿನ ಕುರಿತು ಏನೊಂದು ಕಾಳಜಿ ಇಲ್ಲದೆ ಬರೀ ಮೌಢ್ಯಾಚರಣೆಯಲ್ಲಿ ಮುಳುಗಿರುವುದಕ್ಕೆ ಬೇಸರವೆನಿಸುತ್ತದೆ.
ನಾಗರ ಹಾವಿನ ಪರಿಚಯವಿಲ್ಲದವರೆ ವಿರಳ ಎನ್ನಬಹುದು. ಕೆಣಕಿದಾಗ ತನ್ನ ಅಗಲವಾದ ಹೆಡೆಯನ್ನರಳಿಸಿ ಉಗ್ರವಾಗಿ ಪೂತ್ಕರಿಸಿ ಎದುರಾಳಿಯ ಜಂಘಾಬಲವನ್ನು ಅಡಗಿಸಿಬಿಡುವ ಆತ್ಮರಕ್ಷಣಾ ಕಲೆಯನ್ನು ಪ್ರದರ್ಶಿಸುವ ನಾಗ ಮೂಲತಃ ಶಾಂತ ಸ್ವಭಾವವಂತೆ. ತೊಂದರೆ ಮಾಡದೆ ಕಚ್ಚುವುದಿಲ್ಲ ವಿಷ ಜಂತುವಾದ ಕಾರಣ ಹಾವು ಕಚ್ಚಿದಾಗ ಸೂಕ್ತ ಚಿಕಿತ್ಸೆ ಪಡೆಯಲೇ ಬೇಕು.
ಗುರುರಾಜ್ ಸನಿಲ್ ಹೇಳುವಂತೆ ನಾಗರ ಹಾವುಗಳಿಗೆ ತಾನು ಹುಟ್ಟಿ ಬದುಕಿ ಸಾಯುವವರೆಗೆ ಸುತ್ತಲಿನ ಶತ್ರುಗಳೊಂದಿಗೆ ಹೋರಾಡುತ್ತಲೇ ಜೀವಿಸಬೇಕಾದ ಅನಿವಾರ್ಯತೆಯನ್ನು ಪ್ರಕೃತಿನೀಡಿದೆ. ಯಾವ ಪ್ರದೇಶದಲ್ಲಿ ತನಗೆ ಆಹಾರ, ನೀರು, ಸಂಗಾತಿ ದೊರಕುತ್ತದೆಯೋ ಅಂಥ ಪರಿಸರವನ್ನು ಆಯ್ದು ಬದುಕುವ ಸ್ವಭಾವ ಹೊಂದಿರುತ್ತದೆ. ಗಂಡು ನಾಗರ ಹಾವು ಸುಮಾರು 7 ಅಡಿ, ಹೆಣ್ಣು ಹಾವು 5 ಅಡಿಗಳಷ್ಟು ಉದ್ದ ಬೆಳೆಯಬಲ್ಲದು. ದ್ವೇಷ, ರೋಷಗಳಂತ ಮಾನವ ಸಹಜವಾದ ಗುಣ ಹಾವಿನಲ್ಲಿ ಇಲ್ಲ, ಜನಿಸಿದ ಮೂರು- ನಾಲ್ಕು ವರ್ಷದೊಳಗೆ ಪ್ರೌಢಾವಸ್ಥೆಗೆ ಬರುತ್ತವೆ. ನಾಗರ ಹಾವಿನ ಸಂತಾನೋತ್ಪತ್ತಿ ಪ್ರಕ್ರಿಯೆ ನಿಸರ್ಗದ ಫಲವಂತಿಕೆಯ ಸಂಕೇತ. ಹೆಣ್ಣು ಹಾವು ವರ್ಷದ ನಿರ್ದಿಷ್ಟ ಋತುವಿನಲ್ಲಿ ಮೈಥುನಕ್ಕೆ ಅಣಿಯಾಗುವುದನ್ನು ತನ್ನದೇ ಪ್ರಬೇಧದ ಗಂಡು ಹಾವುಗಳಿಗೆ ಸೂಚಿಸಲು ಶರೀರದ ಗ್ರಂಥಿಗಳಿಂದ ವಾಸನಾ ದ್ರವ್ಯವನ್ನು ಸ್ರವಿಸುತ್ತದೆ. ಈ ವಾಸನೆಯನ್ನು ಗಾಳಿಯ ಮೂಲಕ ಗ್ರಹಿಸಿ ಅದೇ ಪ್ರಬೇಧದ ಹಲವು ಗಂಡು ಹಾವುಗಳು ಹೆಣ್ಣು ಹಾವುಗಳನ್ನರಸಿ ಬಂದು ಹಲವು ದಿನಗಳವರೆಗೆ ಹೆಣ್ಣು ಹಾವನ್ನು ಸೇರುತ್ತವೆ. ಈ ಪ್ರಕ್ರಿಯೆಯಲ್ಲಿ ಗರ್ಭ ಧರಿಸಿದ ಹೆಣ್ಣು ಹಾವು ಸುಮಾರು 40 ರಿಂದ 50 ರಷ್ಟು ಮೊಟ್ಟೆಗಳನ್ನಿಡುತ್ತವೆ.
ಭಾರತದ ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972 ರ ಪ್ರಕಾರ ಎಲ್ಲಾ ಪ್ರಭೇದದ ಹಾವುಗಳು ರಕ್ಷಿತ ಉರಗಗಳೆಂದು ಘೋಷಿಸಲ್ಪಟ್ಟಿದೆ. ಆದ್ದರಿಂದ ಯಾವುದೇ ಹಾವನ್ನು ಹಿಡಿಯುವುದು, ಹಿಂಸಿಸುವುದು, ಕೊಲ್ಲುವುದು, ಸಾಕುವುದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು ಕಾನೂನು ಬಾಹಿರವಾಗಿದೆ. ವನ್ಯಜೀವಿ ಕಾಯಿದೆಯನ್ವಯ ತಪ್ಪತಸ್ಥರಿಗೆ ಒಂದರಿಂದ ಆರು ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿವರೆಗಿನ ದಂಡ ವಿಧಿಸಲಾಗುತ್ತದೆ. ಹಾವುಗಳ ಬಗ್ಗೆ ಅಧ್ಯಯನ ಮಾಡುವವರು ಕಡ್ಡಾಯವಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿದೆ.
ಹಾವಿನ ದಿನಾಚರಣೆಗಿಂತಲೂ ಕಲ್ಲಿನ ಹಾವಿಗೆ ಹಾಲೆರವಲ್ಲಿ ನಮ್ಮ ಜನತೆ ಆಸಕ್ತಿ ಹೆಚ್ಚು ತೋರುತ್ತಿದ್ದಾರೆ.. ಆದ್ದರಿಂದ ನಮ್ಮ ದೇಶದಲ್ಲಿ ಈ ದಿನಾಚರಣೆ ಹೆಚ್ಚು ಪ್ರಚಲಿತದಲ್ಲಿ ಇಲ್ಲ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ