ಕುಂದ ವರ್ಮನೆಂಬ ಅರಸ ಪಂಚ ಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದು, ಅದರಿಂದಾಗಿ ಕುಂದಾಪುರವೆಂದು ಹೆಸರು ಬಂತು ಎನ್ನಲಾಗುವ ಪರಂಪರೆಯನ್ನು ಮೈಗೂಡಿಸಿಕೊಂಡ ದೇವಸ್ಥಾನ ದೈವಸ್ಥಾನಗಳ ನೆಲೆ ಬೀಡು. ಕಡಲು ನದಿಗಳ ಸುಂದರ ಸಂಗಮ, ಆಕಾಶಕ್ಕೆ ಸಡ್ಡು ಹೊಡೆದು ನಿಂತ ಗುಡ್ಡ ಬೆಟ್ಟಗಳಿಂದ ಆವೃತವಾದ ನಯನ ಮನೋಹರ ಪಶ್ಚಿಮ ಘಟ್ಟಗಳ ದಟ್ಟ ಹಸಿರ ನಿಸರ್ಗದ ಮಡಿಲಲ್ಲಿ ಜಲಧಾರೆಯಾಗಿ ಹರಿವ ನದಿ ತೊರೆಗಳ ನಾಡು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನರ್ಘ ರತ್ನಗಳನ್ನು ನೀಡಿದ ವಿಶಿಷ್ಟತೆಯ ತವರು ಕುಂದಾಪುರ. ನಾಟಕ, ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಹೀಗೆ ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಕಂಗೊಳಿಸುವ ಕುಂದಾಪುರದ ಆಡು ಭಾಷೆ ಕುಂದಾಪ್ರ ಕನ್ನಡ. ಆಷಾಢ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆಯಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಸಂಭ್ರಮ. ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯ ಸಂಭ್ರಮದಲ್ಲಿ ಮನದಂಗಳದ ಭಾಷೆ ಕುಂದ ಕನ್ನಡದ ಸೊಬಗು.
ಕುಂದಾಪ್ರ ಕನ್ನಡ ಭಾಷಿ ಅಲ್ಲ ಬದ್ಕ್ ಎಂಬ ಘೋಷ ವಾಕ್ಯವೇ ಇಲ್ಲಿನ ಜನರ ಭಾಷಾ ಪ್ರೀತಿಯನ್ನು ತೋರುತ್ತದೆ. ಭಾಷಾ ಕಂಪನ್ನು ಪಸರಿಸುವ ನಿಟ್ಟಿನಲ್ಲಿ ಹೊಸ ತಲೆಮಾರಿಗೂ ಇದರ ಸವಿಯ ಉಳಿಸಲು ಭಾಷೆಗೆ ಕುಂದು ಬರದೆ ಹಬ್ಬಲಿ ಎಂಬ ಮನೋಭಾವದೊಂದಿಗೆ ವಿಶ್ವ ಕುಂದಾಪ್ರ ಕನ್ನಡ ಆಚರಣೆ ಕುಂದ ಕನ್ನಡಿಗರಿಂದ ಆಯೋಜಿಸಲ್ಪಡುತ್ತಿದೆ.
ಪಶ್ಚಿಮಕ್ಕೆ ಕಲ್ಯಾಣಪುರ ಹೊಳೆ ದಕ್ಷಿಣಕ್ಕೆ ಹೆಬ್ರಿ, ಉತ್ತರಕ್ಕೆ ಬ್ಯೆಂದೂರು ಶಿರೂರಿನಿಂದ ಮಾಬುಕಳ ಹೊಳೆಯವರೆಗೆ ಮೂಡಣ ಪರ್ವತ ಹಾಗೂ ಪಡುವಣ ಕಡಲ ತಡಿಯವರೆಗಿನ ಊರುಗಳಲ್ಲಿ ಕುಂದಾಪ್ರ ಕನ್ನಡ, ಕುಂದಗನ್ನಡ ಎಂದೆಲ್ಲಾ ಕರೆವ ಸೊಗಸಿನ ಭಾಷೆ ಮಾತಾಡುತ್ತಾರೆ. ಇದು ಉಪ ಭಾಷೆಯಾದರೂ ಭಾಷಾ ಶ್ರೀಮಂತಿಕೆ ಅಗಾಧವಾಗಿದೆ.
ಕುಂದಾಪುರ ಕನ್ನಡ ಸೀಮಿತ ಪ್ರಾಂತ್ಯ ಭಾಷೆಯಾದರು ಇದು ಕೇವಲ ಮಾತಿನ ಯಾಂತ್ರಿಕ ಕ್ರಿಯೆ ಅಲ್ಲ, ಚುರುಕಿನ ಭಾಷೆ. ಧ್ವನಿಯಲ್ಲಿ ಏರಿಳಿತವು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದು ದೊಡ್ಡ ಪದಗಳ ಸಮೂಹವನ್ನು ಚಿಕ್ಕದು ಗೊಳಿಸಿ ಹೋಗುತ್ತೇನೆ ಎನ್ನಲು “ಹ್ವಾತೆ” ಕುಳಿತುಕೊಳ್ಳು ಎನ್ನುವುದಕ್ಕೆ” ಕೂಕೊ” ಅಷ್ಟೇ ಅಲ್ಲದೆ “ಉ” ಕಾರ ಹೆಚ್ಚಾಗಿ ಕೇಳಸಿಗುತ್ತದೆ. ಉದಾಹರಣೆಗೆ ಕೇಂಬುದು, ಬಪ್ಪುದು, ಕಾಂಬುದು, ಜಂಬುನಾಥು ಇಂತಹ ಪದಗಳ ಬಳಕೆ ಹೆಚ್ಚಿದೆ.
ನಮ್ಮ ಭಾಷೆ ನಮ್ಮ ಹೆಮ್ಮೆ :
ಕುಂದಾಪ್ರ ಕನ್ನಡದಲ್ಲಿ ಹಾಸ್ಯ ಪ್ರಜ್ಞೆ ವಿಪರೀತ ಅಡಗಿದೆ. ಹೆಣ್ಣು ಮಕ್ಕಳಿಗೆ ತಮಾಷೆಯಾಗಿ ಆ ಊರು ಈ ಊರು ಕೋಡಿ ಕುಂದಾಪುರ್, ತಗ್ಗಿನಲಿದ್ದೂರು ಬಸ್ರೂರು ಹೆಣ್ಮಕ್ಳ ಹುಬ್ಬಿನ್ ಮ್ಯಾಲಿತ್ ಹೊಯಿಮಲಿ ಎನ್ನುವುದು. ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳ ಸ್ವಭಾವಕ್ಕೆ ತಕ್ಕಂತೆ ಹೇಳುವ ಪ್ರತ್ಯೇಕ ಶಬ್ದಗಳಲ್ಲಿ “ಹರ್ಮಯಿಕೊ ಮಾಡ್ ತಳ್ಳು, ಮಿಡಕ್ಕಾಣಿ ಇಂತಹ ಕುಂದಾಪ್ರ ಕನ್ನಡ ಶಬ್ದ ಎಷ್ಟು ಶ್ರೀಮಂತವಾಗಿದೆ ಎಂದರೆ ಅದರ ಸಮಾನ ಶಬ್ದಗಳು ಬೇರೆ ಭಾಷೆಯಲ್ಲಿ ಸಿಗದು. ಕೆಲ ಸ್ವಾರಸ್ಯಕರ ಪದ ಬಳಕೆಯಲ್ಲಿ ಮೋಸ ಮಾಡಿದರು ಅನ್ನದೆ ಆ ಜನ ಕೈ ಕೊಟ್ಟದ್ದ್ ಅಲ್ಲದೆ ಭಾಷಿ ಇತ್ತಾ ಮರಾಯ್ರೆ ಎನ್ನುವುದು. ಅವನ್ ಜಾಪ್ ಕಾಣಿ ಲಾಯ್ಕ ಆಯ್ತ. ಕೈಕೋಚ್ ಒಂದ್ ಇತಿ ಮಿತಿ ಇಲ್ಯಾ, ಗುರ್ಟತಾ ಕೂಕಂತಿಯ್ಯಾ ಎನ್ನುವ ತನ್ನತನವನ್ನು ಬಿಟ್ಟುಕೊಡದ ಭಾಷೆ.
ಭಾಷಾ ಸೌಂದರ್ಯ :
ಕುಂದಾಪ್ರ ಕನ್ನಡ ಭಾಷಾ ಸೌಂದರ್ಯ ಅಗೆದಷ್ಟು, ಬಗೆದಷ್ಟು ಮೊಳಗುತ್ತದೆ. ಗ್ರಾಮೀಣ ಜನರು ತಮ್ಮ ಜೀವನ ಅನುಭವದಿಂದ ಕಂಡ ವಿಚಾರಗಳಲ್ಲಿ “ಕಡಿಯಕ್ಕಿ ಕೂಳ್ ಚಂದೊ, ಕಡದ್ ಮಜ್ಜಿಗಿ ಚಂದೊ, ಕಡಲಂಗ್ ಬಪ್ಪ ತೆರೆ ಚಂದೊ ನಮ್ಮ ಮಂದರ್ತಿ ತೇರ್ ಬಪ್ಪುದ್ ಕಾಂಬುದ್ ಚಂದೊ ಇಂತಹ ಅನೇಕ ಹಾಡುಗಳು, ಭತ್ತ ಕುಟ್ಟುವ, ತೊಟ್ಟಿಲು ತೂಗುವ ಹಾಡು, ಶೋಭಾನೆ ಹಾಡುಗಳು, ಗಾದೆಗಳು ಎಲ್ಲದರಲ್ಲೂ ಬರುವ ಒಂದೊಂದು ಶಬ್ದಗಳು ತಳಿರು ತೋರಣ ಕಟ್ಟಿ ಶೃಂಗರಿಸಿದಂತೆ. ಬಾಯಿಯಿಂದ ಬಾಯಿಗೆ ಹರಿದಾಡಿ ಅಳಿಯದ ಮೌಕಿಕ ಭಾಷೆ ಇದು. ಭಾಷೆ ಉಳಿಯಬೇಕಾದರೆ ಅದು ಮೊದಲು ಮನೆ ಮನೆಯಲ್ಲಿ ಮೊಳಗಬೇಕು.
“ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು”ಎಂಬ ಕುವೆಂಪು ಅವರ ನುಡಿ ಮುತ್ತುಗಳನ್ನು ಕುಂದಾಪುರದವರು ಶಿರಸಾ ಪಾಲಿಸಿದಂತೆ ಕಾಣುತ್ತಿದೆ. ನಮ್ಮದು ಬಹು ಭಾಷಾ ದೇಶ. ಇಲ್ಲಿ ಎಲ್ಲಾ ಮಾತೃ ಭಾಷೆ ಬೆಳೆಯಬೇಕು, ಭಾಷೆ ಕೊರಗದೆ ಕಂಪು ಪಸರಿಸುತ್ತಿರಬೇಕು. ಕುಂದಾಪ್ರ ಕನ್ನಡದ ಶ್ರೀಮಂತಿಕೆಗೆ ದ್ಯೋತಕವಾಗಿ ಈ ಊರಿನ ಜನರ ಭಾಷಾ ಪ್ರೀತಿ ಇದರ ಉಳಿವಿಗೆ ಕಾರಣ. ಇದು ಕೇವಲ ಭಾಷೆ ಅಲ್ಲ ಇಲ್ಲಿನ ಮಣ್ಣಿನ ಸಾಂಸ್ಕೃತಿಕತನವನ್ನು ಪ್ರತಿ ನಿಧಿಸುವ ಮಾಧ್ಯಮ. ಹೃದಯದ ಭಾಷೆಯಾಗಿ, ಭಾವನಾತ್ಮಕವಾಗಿ ಸ್ಪಂದಿಸಲು ಕುಂದಾಪ್ರ ಕನ್ನಡವೇ ನಮಗೆಲ್ಲ ಸೇತುವೆ.
ಕುಂದಾಪ್ರ ಕನ್ನಡ ಶಾಲೆ, ಉದ್ಯೋಗಕ್ಕೆ ಮಾನದಂಡವಲ್ಲ. ಇದು ಮನದಂಗಳದ ಭಾಷೆ. ಮನೆ ಮನೆಯ ಭಾಷೆ, ಒಡಳಾಳದ ಭಾಷೆ. ಇದು ಕೇವಲ ಭಾಷೆ ಅಷ್ಟಕ್ಕೆ ಸೀಮಿತವಲ್ಲ ಒಂದು ಸಂಸ್ಕ್ರತಿಯ ತಳಹದಿ. ಈ ಭಾಷೆಗೆ ಅಳಿವಿಲ್ಲ. ಮಾನವ ಸಂಘ ಜೀವಿ ಮಾತಾಡದೇ ಇರಲಾರ. ಬಾಯಿಯಿಂದ ಬಾಯಿಗೆ ಹರಿದಾಡುವ ಕುಂದಾಪ್ರ ಕನ್ನಡ ನಮ್ಮೊಳಗೆ ಬಾಂಧವ್ಯ ಬೆಸೆಯುತ್ತದೆ. ನಮ್ಮಭಾಷೆ ನಮ್ಮ ಹೆಮ್ಮೆ.
ಕುಂದಾಪ್ರ ಕನ್ನಡದ ನಿಘಂಟು : ಕುಂದಾಪ್ರ ಕನ್ನಡಕ್ಕೊಂದು ಉಪಯುಕ್ತ ನಿಘಂಟು ತರಲು ಪ್ರಯತ್ನಿಸಿದ ಪಂಜು ಗಂಗೊಳ್ಳಿ ಹಾಗೂ ತಂಡದ ಸಾಹಸಕ್ಕೆ ಮೆಚ್ಚುಗೆ ನೀಡಬೇಕು. ಕುಂದಾಪ್ರ ಕನ್ನಡದ ಯಾವುದೇ ಶಬ್ದ ಅರ್ಥವಾಗಿಲ್ಲ ಅಂದರೆ ಈ ನಿಘಂಟು ಸಹಾಯಕವಾಗಲಿದೆ. ಕುಂದಾಪ್ರ ಕನ್ನಡ ಶಬ್ದಗಳ ಅರ್ಥದೊಂದಿಗೆ ಅವುಗಳ ಚಾರಿತ್ರಿಕ, ಸಾಮಾಜಿಕ ಹಿನ್ನೆಲೆ ಕಟ್ಟುಪಾಡು, ಆಚಾರ ವಿಚಾರಗಳಲ್ಲಿ ಬಳಸುವ ಶಬ್ದಗಳ ಬಳಕೆ ಕ್ರಮವನ್ನು ಉದಾಹರಣೆ ಸಹಿತ ನಿಘಂಟಿನಲ್ಲಿ ತೋರಿಸಲಾಗಿದೆ. ಆಡುಭಾಷೆ, ಉಪಭಾಷೆ ಮೌಖಿಕ ಭಾಷೆಯಾಗಿದ್ದರೂ ಇದಕ್ಕೊಂದು ನಿಘಂಟು ಇರುವುದು ನಮಗೆಲ್ಲ ಹೆಮ್ಮೆ.
ಮೂಲತಃ ಕುಂದಾಪುರ ಜನತೆ ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿ ಬದುಕು ಕಟ್ಟಿಕೊಂಡವರು. ಅಲ್ಲಿನ ಭಾಷೆಯೊಂದಿಗೆ ಬೆರೆತರೂ ಬಾಯಿ ಚಪ್ಪರಿಸಿ ಮಾತಾಡುವುದು ಕುಂದಾಪ್ರ ಕನ್ನಡದಲ್ಲಿ. ಪ್ರಪಂಚದ ಯಾವುದೇ ಮೂಲೆಯಲ್ಲಿ ಕುಂದಾಪುರದವರು ಇದ್ದರೂ, ಇದೇ ನಮ್ಮ ಮಾತೃಭಾಷೆ ಎಂಬ ಗೌರವದೊಂದಿಗೆ ಭಾಷೆ ಬಳಸಿದರೆ ಅದೆ ನಾವು ತಾಯಿ ನುಡಿಗೆ ನೀಡುವ ಗೌರವ. ಹೊಯಿಕ್ ಬರ್ ಕ್ ಕನ್ನಡ ಎಂದು ತಮಾಷೆ ಮಾಡುವವರ ಎದುರು ದ್ವನಿ ಎತ್ತಿ ಮಾತಾಡಲು ಕೀಳರಿಮೆ ಬೇಡಾ. ಆತ್ಮ ವಿಶ್ವಾಸದಿಂದ ಮಾತಾಡೋಣ.
ಇತ್ತೀಚೆಗೆ ಕುಂದಾಪ್ರ ಕನ್ನಡ ಆಡುವ ಕೆಲವರು ಭಾಷೆಯ ಮೂಲ ಬೇರನ್ನು ಅಲುಗಾಡಿಸುತ್ತಿದ್ದು, ಭಾಷೆಯನ್ನು ಅಲ್ಲಲ್ಲಿ ತಿರುಚುತ್ತಾ, ಪರಭಾಷಾ ಶಬ್ದವನ್ನು ಕುಂದಾಪ್ರ ಕನ್ನಡದೊಳಗೆ ತುರುಕಿಸಿ ಭಾಷೆಯ ಅಂದಗೆಡಿಸಿದ್ದು ಅಲ್ಲದೇ ಆಗಲೇ ಸಿದ್ದವಾಗಿರುವ ಪ್ರಚಲಿತದಲ್ಲಿರುವ ಭಾಷೆಯ ಸ್ವರೂಪ ಕೆಡದಂತೆ ಎಚ್ಚರ ವಹಿಸಬೇಕು. ಕೆಲವೊಂದು ಶಬ್ಬಗಳು ಮಾಯವಾಗುತ್ತಿದೆ, ಉದಾಹರಣೆಗೆ “ಅಬ್ಬಿ” ಎಂಬ ಶಬ್ದದ ರಸವೇ ಬತ್ತಿ ಅಬಾ, ಅಬ್ಬಿ ಎಂದು ಕರೆಸಿಕೊಳ್ಳಲು ಇಚ್ಚಿಸುವವರೆ ಇಲ್ಲ. ಕುಂದಾಪ್ರ ಕನ್ನಡ ತನ್ನ ಶೈಲಿಯನ್ನು ಕಳೆದುಕೊಳ್ಳಬಾರದು . ಅನೇಕ ವಸ್ತು ಬಳಕೆಯಲ್ಲಿ ಇಲ್ಲದ ಕಾರಣ ಅವುಗಳ ಹೆಸರು ಮರೆಯಾಗುತ್ತಿದೆ. ಉದಾಹರಣೆಗೆ ಚನ್ನೆಮಣಿ, ಒರಲ್, ಒನಕಿ, ಕೊಪ್ಪರಿಗಿ, ಕಡುಕಲ್ಲು ಹೀಗೆ ಅನೇಕ ಶಬ್ದಗಳು ಕೇಳ ಸಿಗದೆ ಭಾಷೆ ಕೊರಗುವ ಸಾಧ್ಯತೆ ಇದೆ.
ಕುಂದಾಪುರ ಕನ್ನಡ ಹಾಗೂ ನನ್ನ ಕನಸು :
ಮಾತೃ ಭಾಷೆ ಎನ್ನುವುದು ನಮ್ಮೊಳಗೆ ಆಳವಾಗಿ ಹೊಕ್ಕಿರುತ್ತದೆ. ನನಗೆಂದೂ ಪರಭಾಷೆಯಲ್ಲಿ ಕನಸು ಬಿದ್ದದ್ದೆ ಇಲ್ಲ . ಕೆಲವು ವರ್ಷಗಳ ಹಿಂದೆ ಮುಂಬಯಿ ಶಿಕ್ಷಣ ತಜ್ಞೆ, ಹಿರಿಯ ಸಾಹಿತಿ, ಡಾ . ಸುನೀತಾ ಶೆಟ್ಟಿಯವರು ನನ್ನ ಕನಸಿನಲ್ಲಿ ಬಂದಾಗ ತುಳುವಲ್ಲಿ ಮಾತಾಡುತ್ತಿದ್ದರು. ಆದರೆ ನಾನು ಅವರಿಗೆ ಕುಂದಾಪ್ರ ಕನ್ನಡದಲ್ಲಿ ಉತ್ತರಿಸುತ್ತಿದ್ದೆ. ಅದು ಯಾಕೆ ಹಾಗೆ ಎನ್ನುವುದು ನನಗಿನ್ನು ಯಕ್ಷ ಪ್ರಶ್ನೆ. ನಾವಿಬ್ಬರು ಯಾವಾಗಲೂ ತುಳುವಿನಲ್ಲಿ ಮಾತಾಡುವವರು ಹಾಗಿದ್ದ ಮೇಲೆ ನಾನು ಕನಸಿನಲ್ಲಿ ತುಳುವಲ್ಲಿ ಮಾತಾಡಬೇಕಿತ್ತಲ್ಲ. ಅದು ಅಲ್ಲದೇ ಸುನೀತಕ್ಕರವರಿಗೆ ಕುಂದಾಪ್ರ ಕನ್ನಡ ಬರುದಿಲ್ಲ. ಹಾಗಿದ್ದರೂ ಕನಸು ಯಾಕೆ ಕುಂದಾಪ್ರ ಕನ್ನಡದಲ್ಲಿ ಬಂತು. ಇನ್ನೊಂದು ಆಶ್ಚರ್ಯ ವಿಚಾರವಿದೆ, ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ನಾನು ಮತ್ತು ಮೀನಾ ಕಾಳವರ ಇಬ್ಬರು ಸೇರಿ ಅಲ್ಲಿನ ಸಿಬ್ಬಂದಿಗಳಲ್ಲಿ ಕುಂದಾಪ್ರ ಕನ್ನಡದಲ್ಲಿ ವ್ಯವಹರಿಸಿದ ಕನಸು ಯೋಚಿಸಿದರೆ ಇಂದಿಗೂ ನಗು ಬರುತ್ತದೆ. ಒಟ್ಟಿನಲ್ಲಿ ನಮ್ಮೆಲ್ಲರ ಕನಸು ಮನಸಿನಲ್ಲಿ ಕುಂದಾಪ್ರ ಕನ್ನಡದ ಕಂಪು ತುಂಬಿರಲಿ. ಕುಂದಾಪ್ರ ಕನ್ನಡ ದಿನಕ್ಕೊಂದು ಜೈ.
ಲತಾ ಸಂತೋಷ ಶೆಟ್ಟಿ ಮುದ್ದಮನೆ.