ಹಳ್ಳಿಯ ಸೊಗಡು ಪಚ್ಚೆ ಪೈರಿನ ಪರಿಸರ. ದಿನನಿತ್ಯ ಶಿವನ ಧ್ಯಾನ, ಕೈ ಮುಗಿದು ಮುನ್ನಡೆದರೆ ಯಶಸ್ಸಿನ ಸಿಂಚನ. ಅರ್ಜುನಾಪುರದಲ್ಲಿ ನಿತ್ಯ ಜನಜಾತ್ರೆ. ಊರಿನಲ್ಲಿ ಕಳೆಗಟ್ಟಿದೆ ಸಂಭ್ರಮ. ದೇವರುಗಳ ನಾಡು ಮುಡುಬಿದಿರೆಯ ಹೃದಯ ಭಾಗದಿಂದ ಹನ್ನೊಂದೂವರೆ ಕಿ.ಮೀ ದೂರದ ಅರ್ಜುನಾಪುರದಲ್ಲಿ ನೆಲೆನಿಂತು ನಂಬಿ ಬಂದ ಭಕ್ತರ ಮೊಗದಲ್ಲಿ ನಗೆಯ ಅಲೆ ತೋರ್ಪಡಿಸುವ ಶ್ರೀ ಮಹಾಲಿಂಗೇಶ್ವರನ ಸಾನಿಧ್ಯ ತುಳುನಾಡಿನ ಜನರ ಚಿತ್ತದಲ್ಲಿ ನಾಟಿ ನಿಂತಿದೆ.
ಶಿರ್ತಾಡಿ ಗ್ರಾಮದ ಗಡಿಭಾಗದಲ್ಲಿ ವಾಲ್ಪಾಡಿ ಗ್ರಾಮಕ್ಕೆ ತಾಗಿಕೊಂಡು ಬೆಳೆದು ನಿಂತಿರುವ ಸಂಪೂರ್ಣ ಶಿಲಾಮಯ ದೇಗುಲ ಆಸ್ತಿಕ ಭಕ್ತರ ಕೇಂದ್ರ ಬಿಂದು. ಅರ್ಜುನಾಪುರದ ಈ ಕ್ಷೇತ್ರದಲ್ಲಿ ಮಧ್ಯಮ ಪಾಂಡವ ಅರ್ಜುನ ತಪಸ್ಸು ಮಾಡಿರುವನೆಂಬುದು ಪ್ರತೀತಿ. ಐದು ಸಾವಿರ ವರ್ಷಗಳ ಹಿಂದೆಯೂ ಜನವಸತಿ ಪ್ರದೇಶವಾಗಿ ಈ ಭಾಗ ಗುರುತಿಸಲ್ಪಟ್ಟಿತ್ತು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಲಿಂಗರೂಪಿಯಾಗಿ ಆರಾಧನೆಗೊಳ್ಳುತ್ತಾ ನಂಬಿದವರಿಗೆ ಇಷ್ಟಾರ್ಥ ಸಿದ್ಧಿಯನ್ನು ಕಲ್ಪಿಸುತ್ತಾ ಬಂದಿರುವ ಅರ್ಜುನಾಪುರದ ಮಹಾಲಿಂಗೇಶ್ವರನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.
ವಿಜಯನಗರದ ಶ್ರೀ ಕೃಷ್ಣದೇವರಾಯ ವೈಭವದಿಂದ ಆಡಳಿತ ನಡೆಸುತ್ತಿದ್ದ 1529 – 30 ರ ಕಾಲದಲ್ಲಿ 75 ಹೊನ್ನಿನ ವರಹಗಳ ವೆಚ್ಚದೊಂದಿಗೆ ಸಮಗ್ರ ಜೀರ್ಣೋದ್ದಾರ ಮಾಡಿರುವುದಾಗಿ ದಾಖಲೆ ತಿಳಿಸುತ್ತದೆ. ಪುಣ್ಯ ಕ್ಷೇತ್ರವಾಗಿ ಜನರ ಮನಸ್ಸಿನಲ್ಲಿ ಅರಳಿ ನಿಂತಿರುವ ಪ್ರಾಚೀನ ಕ್ಷೇತ್ರ ಅರ್ಜುನಾಪುರ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಶೃಂಗಾರಗೊಳ್ಳುತ್ತಿದೆ. ಶ್ರೀ ಕ್ಷೇತ್ರದಲ್ಲಿ ಜನವರಿ 17 ರಿಂದ 26ರವರೆಗೆ ಶ್ರೀ ದೇವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರಧಾನ ದೇವರಾದರೆ ಪರಿವಾರ ಶಕ್ತಿಗಳಾಗಿ ದೇವಸ್ಥಾನದೊಳಗೆ ಗಣಪತಿ, ದುರ್ಗೆ ಸ್ಥಾನಗಳಿವೆ. ಪ್ರಧಾನ ದೈವಗಳಾದ ಶ್ರೀ ಕುಕ್ಕಿನಂತಾಯ, ಶ್ರೀ ಕೊಡಾಮಣಿತಾಯ ದೈವಗಳು ಒಳಾಂಗಣದ ಗುಡಿಯಲ್ಲಿ ಆರಾಧನೆಗೊಳ್ಳುತ್ತಿದ್ದಾರೆ. ಹೊರಭಾಗದಲ್ಲಿ ವೀರಭದ್ರ, ಬ್ರಹ್ಮ, ನಾಗ ದೇವರುಗಳ ಪ್ರತಿಷ್ಠೆ ನಡೆಯಲಿದೆ. ವೀರಭದ್ರನ ಬೃಹತ್ ಮರದ ಮೂರ್ತಿಯು ಜನಾಕರ್ಷಣೆ ಮೂಡಿಸಲಿದೆ. ರಕ್ತೇಶ್ವರಿ, ಕ್ಷೇತ್ರಪಾಲ, ನಂದಿಗೋಣ ಶಕ್ತಿಗಳಿಗೆ ಕಟ್ಟೆ ನಿರ್ಮಿಸಲಾಗಿದೆ.
ದೈವಸ್ಥಾನದ ಗರ್ಭಗುಡಿ ಆಕರ್ಷಣೀಯವಾಗಿ ಮೂಡಿಬಂದಿದೆ. ತಾಮ್ರದ ಮೇಲ್ಚಾವಣಿ, ಹಿತ್ತಾಳೆ ಧರಿ ಮನಮೋಹಕವಾಗಿದೆ. ತೀರ್ಥ ಮಂಟಪಕ್ಕೆ ತಾಮ್ರ ಹೊದಿಸಲಾಗಿದೆ. ಎದುರು ಮುಖಮಂಟಪ, ಬಲಿಪೀಠ, ದೀಪಸ್ತಂಭ, ವಸಂತಕಟ್ಟೆಯನ್ನೂ ನಿರ್ಮಿಸಲಾಗಿದೆ. ಒಳಭಾಗದಲ್ಲಿ ನೈವೇದ್ಯ ಕೋಣೆ, ಅರ್ಚಕರ ಕೊಠಡಿ, ಅಂಕುರ ಕೊಠಡಿ, ಭದ್ರತಾಕೊಠಡಿ, ಪ್ರಸಾದ ಕೋಣೆ, ಆಡಳಿತ ಕಚೇರಿಯಿದೆ. ತುಳಸಿಕಟ್ಟೆ ಸೇರಿದಂತೆ ದೇವಳದ ಶಿಲ್ಪ ವಿನ್ಯಾಸಗಳು ಜನಮನ ಸೆಳೆಯುತ್ತಿದೆ. ದೈವ ದೇವರಿಗೆ ಹೊಸದಾಗಿ ಪರಿಕರಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನವನ್ನು ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿಗೊಳಪಡಿಸಲಾಗಿದೆ. ತೀರ್ಥಬಾವಿ, ಹೊರಾಂಗಣದ ಬಾವಿಯನ್ನು ನವೀಕರಿಸಲಾಗಿದೆ. 13 ಲಕ್ಷ ರೂ ವೆಚ್ಚದಲ್ಲಿ ಸ್ವಾಗತ ಗೋಪುರ ಸುಂದರ ವಿನ್ಯಾಸದೊಂದಿಗೆ ಆಕರ್ಷಿಣೀಯವಾಗಿ ಮೂಡಿ ಬಂದಿದೆ. ಪಕ್ಕದಲ್ಲೇ ನಂದಿಯು ಸರ್ವರನ್ನು ಸ್ವಾಗತಿಸುತ್ತಿದೆ. ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಕ್ಕೆ ಸುಮಾರು ಆರೂವರೆ ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ. ದೇವಸ್ಥಾನದ ಹಿಂಭಾಗದ ಜಾಗದಲ್ಲಿ ಸುಸಜ್ಜಿತ ಶೌಚಾಲಯ, ಸುತ್ತಲೂ ತಡೆಗೋಡೆ, ಮುಂಭಾಗದ ಮೆಟ್ಟಿಲು, ಹೂದೋಟ, ಆವರಣ ನಿರ್ಮಿಸಲಾಗಿದೆ. ಜಾಗವನ್ನು ಸಮತಟ್ಟುಗೊಳಿಸಿ ಭವಿಷ್ಯದ ಕಾರ್ಯಗಳಿಗಾಗಿ ಸಜ್ಜುಗೊಳಿಸಲಾಗಿದೆ. ಬ್ರಹ್ಮ ಕಲಶೋತ್ಸವದ ಸಂಭ್ರಮಕ್ಕಾಗಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶ, ಶಿರ್ತಾಡಿ ಪೇಟೆ, ಪ್ರಮುಖ ರಸ್ತೆ ಹಾಗೂ ಆಸುಪಾಸಿನಲ್ಲಿ ಅಲಂಕರಿಸಲಾಗಿದೆ. ಬಂಟಿಂಗ್ಸ್, ವಿದ್ಯುತ್ ಅಲಂಕಾರಿಕ ದೀಪಗಳನ್ನು ಅಳವಡಿಸಿ ಸುಂದರಗೊಳಿಸಲಾಗಿದೆ.