ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಂವಿಧಾನ ದಿನಾಚರಣೆಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರಿನ ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಅಧ್ಯಕ್ಷ ಡಾ. ವಿ. ಸುದೇಶ್, ಸಂವಿಧಾನವು ಒಂದು ದೇಶದ ಮೂಲಭೂತ ಕಾನೂನು. ಸಂವಿಧಾನವು ತಟಸ್ಥವಾಗಿದೆ ಮತ್ತು ರಾಷ್ಟ್ರದ ನ್ಯಾಯ ವ್ಯವಸ್ಥೆ, ಸ್ವಾತಂತ್ರ್ಯ ಮತ್ತು ಪ್ರಮುಖ ಮೌಲ್ಯಗಳನ್ನು ಸ್ಥಾಪಿಸಲು ನ್ಯಾಯಯುತ ಸಾಧನವಾಗಿದೆ. ಸಂವಿಧಾನವು ಹಕ್ಕುಗಳು ಮತ್ತು ಜವಾಬ್ದಾರಿಗಳು, ಆಡಳಿತ ಮಂಡಳಿ ಮತ್ತು ದೇಶದ ಮೌಲ್ಯಗಳು ಹಾಗೂ ಸಂವಿಧಾನದ ಮೂಲ ತತ್ವಗಳ ನಡುವಿನ ಸಂಬಂಧವನ್ನು ಸ್ಥಾಪಿಸುತ್ತದೆ ಎಂದರು. ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯದ ವಕೀಲ ಆಕಾಶ್ ವೈ ರಾಜ್ ಮಾತನಾಡಿ, ಭಾರತೀಯ ಸಂವಿಧಾನವು ಭಾರತದ ನಾಗರಿಕರಿಗೆ ಮೂಲಭೂತ ಹಕ್ಕುಗಳ ವಿಸ್ತೃತ ಪಟ್ಟಿಯನ್ನು ಒದಗಿಸಿದೆ. ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ದೇಶದ ಸಂವಿಧಾನ ಜಗತ್ತಿನಲ್ಲೇ ಬಹಳ ಶ್ರೇಷ್ಠವಾದದ್ದು. ವಿಜ್ಞಾನ ತಂತ್ರಜ್ಞಾನಗಳ ಆವಿಷ್ಕಾರದ ಸಾಧನೆಗಳೆಷ್ಟೇ ಇದ್ದರೂ ಸಂವಿಧಾನದ ಉದ್ದೇಶಗಳು ಸಾಕಾರಗೊಳ್ಳದೆ ಇದ್ದರೆ ಯಾವುದೇ ಸಾಧನೆಗೂ ಬೆಲೆಯಿಲ್ಲ. ಸುರಕ್ಷೆ, ನ್ಯಾಯ, ಸ್ವತಂತ್ರ ಮತ್ತು ಸಮಾನತೆ ಸಂವಿಧಾನದ ಮೂಲ ಆದರ್ಶಗಳು. ನಾವು ಸಂವಿಧಾನವನ್ನು ಅನುಸರಿಸಿ ಅದರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯ”ಎಂದರು.
ಈ ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ರಮೇಶ್ ಗೊರಬಾಲ್, ಆಶ್ರಿತ್ ಆರ್,
ದೀಕ್ಷಿತಾ ಕೆ, ಆಲ್ಫಾ, ವೈಷ್ಣವಿ ನಾಯಕ್ ಇವರು ಮೊದಲ 5 ಸ್ಥಾನವನ್ನು ಗಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ ಎಸ್ ಮತ್ತು ವಿವಿಧ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿ ಚಂದನಾ ಕಾರ್ಯಕ್ರಮ ನಿರೂಪಿಸಿದರು. ಪ್ರಕೃತಿ ಸ್ವಾಗತಿಸಿ, ಕೃಷ್ಣಪ್ರಿಯಾ ವಂದಿಸಿದರು.