ಪ್ರಕೃತಿಯನ್ನು ಮಾತೆಯನ್ನಾಗಿ ಆರಾಧಿಸುತ್ತಾ ಬಂದಿರುವ ಪರಂಪರೆ ನಮ್ಮದು. ಪ್ರಕೃತಿಯಲ್ಲೇ ಹುಟ್ಟಿ ಪ್ರಕೃತಿಯಲ್ಲೇ ಲೀನವಾಗುವ ಎಂಬತ್ತ ನಾಲ್ಕು ಲಕ್ಷ ಜೀವರಾಶಿಯ ಬಾಳು ಅವ್ಯಕ್ತವಾದುದು. ಪಂಚಭೂತಗಳಿಂದ ಆವೃತವಾಗಿರುವ ಪ್ರಕೃತಿಯ ಹಂಗು-ಋಣದಲ್ಲಿ ಮತ್ತು ಪ್ರಕೃತಿ ಮಾತೆಗೆ ಕೃತಜ್ಞರಾಗಿರಬೇಕಾಗಿರುವುದು ಇಲ್ಲಿನ ಜೀವಿಗಳ ಪರಮ ಕರ್ತವ್ಯ. ನಿಸರ್ಗದ ಎಲ್ಲಾ ಜೀವಿಗಳಲ್ಲಿ ತನ್ನ ಬುದ್ಧಿಮತ್ತೆ, ವಿವೇಚನೆಯಿಂದ ಉಳಿದ ಜೀವಿಗಳಿಗಿಂತ ವಿಶಿಷ್ಟ ಮತ್ತು ಭಿನ್ನನಾಗಿರುವ ಮಾನವನ ಪ್ರಕೃತಿಯೊಂದಿಗಿನ ಒಡನಾಟ ಪ್ರಸ್ತುತ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದನ್ನು ಪ್ರಶ್ನಿಸುವ ಹಂತಕ್ಕೆ ಬಂದು ನಾವಿಂದು ನಿಂತಿದ್ದೇವೆ.
ಪ್ರಕೃತಿಯ ವೈಚಿತ್ರ್ಯ, ಕೊಡುಗೆ ವರ್ಣನೆಗೆ ಸಿಗುವಂತಹುದಲ್ಲ, ಉಪಮೆಗೂ ನಿಲುಕುವಂತಹುದಲ್ಲ. ಪ್ರಕೃತಿ ಏನು ತಾನೇ ಕೊಟ್ಟಿಲ್ಲ. ವಾಸಿಸಲು ನಿರ್ಮಲ ಭೂಮಿ, ಉಸಿರಾಡಲು ಪರಿಶುದ್ಧ ಗಾಳಿ, ಕುಡಿಯಲು ಶುದ್ಧ ನೀರು, ನಿಸರ್ಗದತ್ತ ಆಹಾರ ವೆೃವಿಧ್ಯ… ಹೀಗೆ ನಾವೆಲ್ಲರೂ ಸಮಗ್ರವಾಗಿ ಬದುಕಲು ಪೂರಕ, ಪ್ರೇರಕವಾದ ಸುಂದರ ವ್ಯವಸ್ಥೆಯನ್ನು ಈ ಪ್ರಕೃತಿ ರೂಪಿಸಿಕೊಟ್ಟಿದೆ. ಇಂಥ ಪ್ರಕೃತಿ ನಮಗೆಲ್ಲರಿಗೂ ಮಾತೃ ಸಮಾನ. ಹಾಗೆಂದು ನಾವು ನಮ್ಮ ನಿಸರ್ಗವನ್ನು ಹಬ್ಬಹರಿದಿನಗಳ ಆಚರಣೆ ಸಂದರ್ಭದಲ್ಲೋ ಪೂಜಿಸುತ್ತೇವೆ ಮತ್ತು ಭಾಷಣದ ಸಂದರ್ಭದಲ್ಲಿ ಅಣಿ ಮುತ್ತುಗಳನ್ನು ಉದುರಿಸುತ್ತಿರುತ್ತೇವೆ. ಆದರೆ ನೈಜವಾಗಿ ನಾವಿಂದು ಪ್ರಕೃತಿಯ ಮೇಲೆ ಸವಾರಿ ಮಾಡುತ್ತಿದ್ದೇವೆ. ಇದರ ಪ್ರತಿಫಲವನ್ನು ಕೂಡ ಉಣ್ಣುತ್ತಿದ್ದೇವೆ. ಪ್ರಕೃತಿ ಇಲ್ಲದೆ ಸಕಲ ಜೀವರಾಶಿಗಳ ಜೀವನವಿದೆಯೇ?, ಸಾಧ್ಯವೇ?. ಆದರೆ ದುರಂತವೆಂದರೆ ವಿವೇಚನಾಯುಕ್ತ ಮಾನ ವನೇ ಈ ರಮಣೀಯ ಸೃಷ್ಟಿಯ ನಾಶಕ್ಕೆ ಹೊರಟಿರುವುದು.
ಕ್ಷಮಾಧರಿತ್ರಿ ಎಂದು ಪೂಜಿಸಲ್ಪಡುವ ಭೂಮಾತೆಯನ್ನು ಮಾನವ ದಂಧೆಯಾಗಿ, ಕೊಳಚೆ, ದುರ್ಗಂಧಮಯವನ್ನಾಗಿ ಮಾಡುವತ್ತ ಹೊರಟಿದ್ದಾನೆ. ನದಿ-ತೊರೆ- ಜಲಾಶಯ-ಸಾಗರಗಳು ಆಧುನಿಕ ಪರಿ ಕರಗಳಿಂದ ತುಂಬಿ ಮಲಿನಗೊಂಡಿವೆ. ಮಾನ ವನ ಆಧುನಿಕ ಮತ್ತು ಯಾಂತ್ರಿಕ ಜೀವನ ಶುದ್ಧ ಗಾಳಿಯನ್ನು ನಮ್ಮಿಂದ ಕಸಿಯುವತ್ತ ಸಾಗುತ್ತಿದೆ. ಸಸ್ಯ ಶ್ಯಾಮಲೆಯ ರಾಶಿ ದುರಾಶೆಗೆ ಬಲಿಯಾಗುತ್ತಿದೆ. ಇತರ ಜೀವರಾಶಿಗಳ ಮೇಲೆ ಮಾನವ ಸವಾರಿಗೈಯ್ಯುತ್ತಿದ್ದಾನೆ… ಹೀಗೆ ಸಮಗ್ರ ಪಂಚಭೂತಗಳ ಪ್ರಕೃತಿ ಮಾನವನ ದುರಹಂಕಾರ, ದುರಾಶೆ, ಮದ, ಆಧುನಿಕ ಜೀವನದ ಭರಾಟೆಗೆ ಬಲಿ ಯಾಗುತ್ತಿದೆ. ಮಾನವನ ಇವೆಲ್ಲ ಘಾತಕ-ವಿಕೃತ ಶಕ್ತಿಗೆ ಪ್ರಕೃತಿ ಮುನಿಸಲಾರಳೇ? ತತ್ ಪರಿಣಾಮವೇ ವರ್ತಮಾನಗಳಲ್ಲಿ ಘಟಿಸುವ ಪ್ರಕೃತಿ ವಿಕೋಪದ ಭೀಷಣ ರೂಪಗಳು.
ಸಿರಿವಂತ ರಾಜನೋರ್ವ ಮನಮೋಹಕ ಉದ್ಯಾನವನ ನಿರ್ಮಿಸಿದ್ದ. ಫಲ ಪುಷ್ಪಗಳ ಸಂದೋಹಗಳ ಈ ಉದ್ಯಾನವನದಲ್ಲಿ ಪಕ್ಷಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಇನ್ನು ಮಕ್ಕಳು ಉದ್ಯಾನದಲ್ಲಿ ಆಟವಾಡಿ ಫಲಪುಷ್ಪ ಕಿತ್ತುಕೊಂಡು ಹೋಗುತ್ತಿದ್ದರು. ಇದರಿಂದ ವಿಚಲಿತನಾದ ರಾಜ ಸುಂದರ ಉದ್ಯಾನವನವನ್ನು ಪಕ್ಷಿಗಳು ಮತ್ತು ಮಕ್ಕಳು ಹಾಳುಗೆಡವುತ್ತಿದ್ದಾರೆ ಎಂದು ಆಕ್ರೋಶಗೊಂಡು ಯಾರನ್ನು ಉದ್ಯಾನವನಕ್ಕೆ ಬಿಡಬಾರದೆಂದು ಆಜ್ಞಾಪಿಸಿ, ಬೇಲಿ-ತಡೆಗೋಡೆ ನಿರ್ಮಿ ಸುತ್ತಾನೆ. ಕೆಲವೇ ವಾರಗಳಲ್ಲಿ ಉದ್ಯಾನವನ ಯಾರ ಒಡನಾಟ ಇಲ್ಲದೇ ಸೊರಗಲು ಆರಂಭವಾಗುತ್ತದೆ. ಫಲ-ಪುಷ್ಪಗಳ ಉತ್ಪತ್ತಿಯೇ ನಿಂತು ಬಿಡುತ್ತದೆ. ಉದ್ಯಾನವನ ಬರಡಾಗತೊಡಗುತ್ತದೆ.
ರಾಜ ಈ ಬೆಳವಣಿಗೆಯಿಂದ ನೊಂದು ಬಳಲುತ್ತಾನೆ. ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಿರ್ಬಂಧಗಳನ್ನೆಲ್ಲ ಹಿಂಪಡೆಯಲು ಆದೇಶಿಸುತ್ತಾನೆ. ಉದ್ಯಾನವನಕ್ಕೆ ಮತ್ತೆ ಮಕ್ಕಳು, ಪಕ್ಷಿಗಳೆಲ್ಲ ಬರಲಾರಂಭಿಸಿ ಉದ್ಯಾನವನ ಮತ್ತೆ ಹಿಂದಿನಂತೆ ಫಲ-ಪುಷ್ಪಗಳಿಂದ ಸಮೃದ್ಧವಾಗುತ್ತದೆ. ರಾಜನೂ ಆನಂದ ತುಂದಿಲನಾಗುತ್ತಾನೆ.
ಈ ಕಥೆಯಲ್ಲಿ ಪ್ರಕೃತಿಯ ಜೀವರಾಶಿಯ ನಡುವಿನ ಪ್ರೇಮ ಪಾಠದ ಜತೆಗೆ ಅಹಂಕಾರದ ವರ್ತನೆಗೆ ತಕ್ಕ ಶಾಸ್ತಿಯ ಎಚ್ಚರವೂ ಅಡಕವಾಗಿದೆ. ಪ್ರಕೃತಿಯೊಂದಿಗಿನ ಹೊಂದಾಣಿಕೆ-ಸಹಜೀವನವನ್ನು ಎತ್ತಿ ಹಿಡಿಯುತ್ತದೆ ಈ ಕಥೆ. ಇಂದು ನಮ್ಮ ಸುತ್ತಮುತ್ತ ಘಟಿಸುವ ಪ್ರಕೃತಿ ಸಂಬಂಧಿತ ಭೂಕುಸಿತ, ಪ್ರವಾಹ, ಕಡಲ ಪ್ರತಾಪ, ಗಾಳಿಯ ಅಬ್ಬರ ಇನ್ನು ಕೆಲವು ನಿಸರ್ಗ ವಿಕೋಪಗಳು ಕಥೆಯಲ್ಲಿನ ರಾಜನ ವರ್ತನೆಯಂತೆ ಮಾನವನ ದುರ್ವರ್ತನೆಯ ಅಟ್ಟಹಾಸದಿಂದಲೇ.
“ಬಹು ಚಿತ್ರ ಜಗತ್ತ ಬಹುದಾಕರಣ ಪರಶಕ್ತಿ ಅನಂತಗುಣ ಪರಮಹ’ ಎಂಬಂತೆ ಪ್ರಕೃತಿ ಮಾತೆಯ ಈ ಮಹಿಮೆಯನ್ನು ಅಂತಃಕರಣದಲ್ಲಿರಿಸಿ ನಿಸರ್ಗವನ್ನು ಸ್ವತ್ಛ- ಶುದ್ಧವನ್ನಾಗಿಸಿ, ಒಡನಾಟವನ್ನು ನಿತ್ಯ-ಸತ್ಯವನ್ನಾಗಿರಿಸಿ, ಅನ್ಯ ಜೀವರಾಶಿಗಳತ್ತ ಲಕ್ಷ್ಯವಿರಿಸಿ ಪ್ರಕೃತಿ ಮಾತೆಯನ್ನು ಅರ್ಚಿಸುತ್ತಾ ಆಕೆಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲದ ಪ್ರಕೃತಿ ಮಾತೆಗೆ ಆಭಾರಿಯಾಗಿರೋಣ.