ಮಳೆಯೆಂದರೆ ಏನೋ ಪುಳಕ, ವರುಣನ ಆರ್ಭಟಕ್ಕೆ ಭೂರಮೆ ಹಸಿರುಗೊಂಡು ನಲಿವ ಸಂತಸದ ಕಾಲದಲ್ಲಿ ಮುಂಗಾರು ಆಗಮನದೊಂದಿಗೆ ಇಡೀ ವಾತಾವರಣ ತೇವಾಂಶದಿಂದ ಕೂಡಿದ್ದು ಕಾಡಂಚಿನ ಹಳ್ಳಿಯ ತಂಪಾದ ವಾತಾವರಣದಲ್ಲಿ ಸಾಧಾರಣ ಸಿಡಿಲು ಮಳೆಯ ಹಿನ್ನೆಲೆಯೊಂದಿಗೆ ಅಬ್ಬರಿಸುವ ಗುಡುಗಿಗೆ ಬೆಚ್ಚಿ ಬಿದ್ದು ಎದ್ದು ಬರುವಂತೆ ಮಳೆಗಾಲದ ಅಪರೂಪದ ಅತಿಥಿ ಅಣಬೆ. ಅಣಬೆ ಫಸಲು ಬರುವುದಕ್ಕೂ ಮಳೆಗಾಲಕ್ಕೂ ಅವಿನಾಭಾವ ನಂಟು. ನಿಸರ್ಗದ ಸೋಜಿಗ ಅಣಬೆಗಳು ನಾನಾ ಗಾತ್ರ ವಿವಿಧ ರೂಪದಲ್ಲಿ ಉದ್ಬವಿಸುವ ದುಂಡಗೆ, ತೆಳ್ಳಗೆ, ಛತ್ರಿ ಹಾಗೂ ಟೋಪಿಯಾಕಾರದಲ್ಲಿ ಹಲವು ಪದರಗಳ ಗುಚ್ಚದಂತೆ ವಿವಿಧ ಆಕಾರದಲ್ಲಿ ಬೆಳವಣಿಗೆ ಹೊಂದುತ್ತದೆ. ಪ್ರಕೃತಿಯ ಈ ವೈಚಿತ್ರ್ಯಕ್ಕೆ ಬೆರಗುಗೊಳ್ಳಲೇಬೇಕು. ಸೃಷ್ಟಿ ಸೌಂದರ್ಯಕ್ಕೂ ಸೈ ಬಾಯಿ ರುಚಿಗೂ ಸೈ ಎನ್ನಬಹುದಾದ ಅಣಬೆ ಕಡಿಮೆ ಅವಧಿಯಲ್ಲಿ ನಾಶವಾಗುವುದಾದರೂ ಜನ ಮೆಚ್ಚುಗೆ ಗಳಿಸಿದೆ.
ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು ನಗರಗಳತ್ತಾ ಬಂದಾಗ ನಮ್ಮೂರಿನ ತಿನಿಸುಗಳು ಆಯಾಕಾಲಕ್ಕೆ ನೆನಪಾಗುವುದು ಸಹಜ. ಬಾಲ್ಯದಲ್ಲಿ ತಮ್ಮ ಮತ್ತು ತಂಗಿಯವರೊಂದಿಗೆ ಅಣಬೆ ಆರಿಸಲು ಹೋಗಿದ್ದ ನೆನಪು ಮರುಕಳಿಸಿ ಮಳೆಗಾಲದಲ್ಲಿ ಊರಲ್ಲಿದ್ದ ಕಾರಣ ಕಲ್ಲಣಬೆಗಳ ದರ್ಶನ ಭಾಗ್ಯ ದೊರೆಯಿತು. ಚಿಕ್ಕಂದಿನಲ್ಲಿ ಅಣಬೆ ಹೆಕ್ಕಿ ತಂದು ಅಭ್ಯಾಸವಿದ್ದ ಕಾರಣ ಎಲ್ಲೆಲ್ಲಿ ಅಣಬೆ ಮೂಡಿರಬಹುದೆಂಬ ಅರಿವು ನನಗಿತ್ತು. ಇತ್ತೀಚೆಗೆ ಗುಡ್ಡ ಕಾಡು ಕಡಿಮೆಯಾಗಿ ಹವಾಮಾನ ವೈಪರೀತ್ಯದಿಂದಾಗಿ ಪ್ರಕೃತಿ ನಾಶದಿಂದಲೋ ಅಣಬೆ ಕಣ್ಣಿಗೆ ಸಿಗುವುದು ಬಲು ಅಪರೂಪವಾಗಿದೆ. ಹಿಂದೆ ಹೇರಳವಾಗಿ ಕಾಣಸಿಗುತ್ತಿದ್ದ ಅಣಬೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆಯಾಗಿದೆ.
ಹಳ್ಳಿಯ ಹಿರಿಯ ಅನುಭವಿಗಳಿಗೆ ಎಷ್ಟು ಮಳೆ ಬಂದರೆ ಯಾವ ಅಣಬೆ ಹುಟ್ಟಿ ಕೊಳ್ಳುತ್ತದೆ ಎಂಬ ಅನುಭವವು ಇರುತ್ತದೆ. ಹಾಗಾಗಿ ಮಳೆ ಪ್ರಾರಂಭವಾದ ದಿನದಿಂದಲೇ ಲೆಕ್ಕಹಾಕಿ ವಾತಾವರಣವನ್ನು ಅನುಸರಿಸಿಕೊಂಡು ಅಣಬೆ ಆರಿಸಲು ಕಾಡು, ಗುಡ್ಡ, ಬಯಲಿನಲ್ಲಿ ಅಣಬೆಗಾಗಿ ಅಲೆಯುತ್ತಾರೆ. ಮಳೆಯಿಂದ ಕೊಳೆಯುತ್ತಿರುವ ಬಿದ್ದ ಮರ ಮಟ್ಟುಗಳಲ್ಲಿ, ಒದ್ದೆ ಆದ ಒಣ ಹುಲ್ಲುಗಳಲ್ಲಿ, ಗೊಬ್ಬರದ ಗುಂಡಿಯಲ್ಲಿ ತೋಟದ ಬದಿಯಲ್ಲಿ ಸಿಗುವ ನೈಸರ್ಗಿಕ ಅಣಬೆಗಳನ್ನು ಹಳ್ಳಿಗರು ಹೆಚ್ಚು ಬಳಕೆ ಮಾಡುತ್ತಾರೆ. ತಿನ್ನಲು ಸಾಧ್ಯಾವಾಗದ ವಿಷಕಾರಿ ಅಣಬೆಗಳು ಬಹಳಷ್ಟು ಬೆಳೆದು ಇದು ಕಾಡಿನ ಹಾವು, ಹೆಗ್ಗಣ, ಕ್ರಿಮಿ ಕೀಟಗಳಿಗೆ ಆಹಾರವಾಗುತ್ತದೆ.
ಅಣಬೆಗಳಲ್ಲಿ ಹಲವು ವಿಧಗಳಿವೆ. ನುಚ್ಯಣಬೆ, ಜಾಲಣಬೆ, ಹುತ್ತದ ಅಣಬೆ, ಮರದ ದಿಮ್ಮಿಗಳಲ್ಲಿ ಬೆಳೆಯುವ ಅಣಬೆ, ಕಲ್ಲಣಬೆ, ಹೆಗ್ಗಲು ಅಣಬೆ ಇನ್ನೂ ಅನೇಕಾನೇಕ ಸ್ವತ್ರಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲು ಬೇಕಾದ ಪತ್ರ ಹರಿತ್ತನ್ನು ಹೊಂದಿಲ್ಲದ ಸಸ್ಯ ವರ್ಗಕ್ಕೆ ಸೇರಿದ ಅಣಬೆ ಅತ್ಯುತ್ತಮ ಪೌಷ್ಟಿಕಾಂಶಗಳನ್ನು ಒಳಗೊಂಡ ಪ್ರೋಟೀನ್ ಯುಕ್ತ ನೈಸರ್ಗಿಕ ಸಸ್ಯ ಆಹಾರ. ಅಣಬೆಯನ್ನು ಹೆಚ್ಚಿನವರು ಮಾಂಸಹಾರ ಎಂಬ ಕಾರಣಕ್ಕೆ ಸಸ್ಯಹಾರಿಗಳು ಸೇವಿಸುವುದಿಲ್ಲ. ಅಣಬೆ ಸಸ್ಯ ಆಹಾರವೋ ಮಾಂಸ ಆಹಾರವೋ ಎಂಬ ಜಿಜ್ಞಾಸೆ ಇಂದಿಗೂ ಇದೆ. ಅಮೇರಿಕಾ ಸರ್ಕಾರದ ಕೃಷಿ ಇಲಾಖೆ ಅಣಬೆ ಸಸ್ಯವೆಂದು ಘೋಷಿಸಿದೆ. ಆದರೂ ಕೆಲವರು ಮಾಂಸಹಾರವೆಂದು ಮೂಗು ಮುರಿಯುತ್ತಾರೆ.
ಕಲ್ಲಣಬೆ : ಮುಂಗಾರು ಮಳೆ ಬೀಳುತ್ತಿದಂತೆ ನಮ್ಮೂರಿನ ಏರು ಪ್ರದೇಶಗಳಲ್ಲಿ ವಿವಿಧ ಅಣಬೆಗಳು ಏಳುತ್ತವೆ. ಸಾಮಾನ್ಯವಾಗಿ ಕಾಡಿನ ಜೌಗು ಪ್ರದೇಶಗಳಲ್ಲಿ ಗುಡುಗು – ಮಿಂಚಿನ ರಭಸಕ್ಕೆ ಕಲ್ಲಣಬೆ ಮರಳು ಮಿಶ್ರಿತ ಪ್ರದೇಶದಲ್ಲಿ ಮೂಡಿಬರುತ್ತದೆ. ಮನೆಯ ಹಿರಿಯರು ಗುಡುಗು ಶಬ್ದಗಳನ್ನು ಆಲಿಸಿಯೇ ಹೇಳುತ್ತಾರೆ. ಈ ಗುಡುಗಿನ ಶಬ್ದಕ್ಕೆ ಕಲ್ಲಣಬೆ ಮೂಡಿ ಸಿಡಿಲು,ಗುಡುಗು, ಬಂದಾಗ ಭೂಮಿ ಅಡಿಯಿಂದ ಮೇಲೆ ಬರುತ್ತದೆ ಎನ್ನುತ್ತಾರೆ. ಕಲ್ಲಣಬೆಗಳು ಗೋಲಾಕಾರದಲ್ಲಿ ಇದ್ದು ಹೊರಗೆ ಕವಚ ಒಳಗೆ ಮೃದುವಾಗಿದ್ದು ಬಹಳ ರುಚಿಕರವಾದ ಖಾದ್ಯ ತಯಾರಿಸಬಹುದಾದ ಈ ಅಣಬೆ ಭೂಮಿಯಿಂದ ಹೊರ ಬಂದು 4 ದಿನಗಳ ಒಳಗೆ ತಿನ್ನಬೇಕು ನಂತರ ಇದರ ಒಳಭಾಗ ಕಪ್ಪಾಗಿ ಅಂದರೆ ಹಾಳಾಗುತ್ತದೆ ಅದು ತಿನ್ನಲು ಯೋಗ್ಯವಲ್ಲ.
ಸರಿ ಸಾಟಿ ಇಲ್ಲದ ರುಚಿಗೆ ಹೆಸರು ವಾಸಿ ನೈಸರ್ಗಿಕ ಕಲ್ಲಣಬೆ ಹುಡುಕಾಟಕ್ಕೆ ತೊಡಗಿ 2 ಗಂಟೆಯೊಳಗೆ ನೀರಿಕ್ಷೆಯಂತೆ ಅಣಬೆ ಸಂಗ್ರಹಿಸಿದ್ದೆ. ಅಜ್ಞಾತವಾಗಿರುವ ಅಣಬೆಗಳನ್ನು ಬಗ್ಗಿ ಹುಡುಕಬೇಕು. ಕಲ್ಲು ಮಿಶ್ರಿತ ಮಣ್ಣಿನಲ್ಲಿ ಅಡಗಿರುವ ಅಣಬೆಗಳನ್ನು ಹಾಳಾಗದಂತೆ ಭೂಮಿಯಿಂದ ತೆಗೆಯಬೇಕು ಸಣ್ಣ ಗಾತ್ರ ಹೊಂದಿರುವ ಕಲ್ಲಣಬೆ ಕಲ್ಲಿನಂತೆ ಕಾಣುವುದರಿಂದ ಹುಡುಕಲು ಸೂಕ್ಷ್ಮತೆ ಬೇಕು. ಅಣಬೆ ಇರುವ ಸುತ್ತಲಿನ ಮಣ್ಣು ಮೃದುವಾಗಿರುವುದು ಗಮನಿಸಬೇಕಾದ ವಿಚಾರ. ಜೊತೆ ಜೊತೆಯಾಗಿ ಒಟ್ಟೊಟಿಗೆ ಒಂದಿಷ್ಟು ಕಲ್ಲಣಬೆ ಹುಟ್ಟುತ್ತವೆ. ಮುಂಗಾರು ವಿಳಂಬವಾದರೆ ಕಲ್ಲಣಬೆ ಕೂಡ ತಡವಾಗಿ ಹುಟ್ಟುತ್ತದೆ. ಹೆಚ್ಚಾದ ಪರಿಸರ ನಾಶ, ಅರಣ್ಯ ವಿನಾಶಗಳಿಂದ ಮುಂದಿನ ಪೀಳಿಗೆಗೆ ನೈಸರ್ಗಿಕ ಅಣಬೆಗಳು ನೋಡ ಸಿಗುತ್ತದೋ ಇಲ್ಲವೋ?. ಕಲ್ಲಣಬೆ ಮಳೆಗಾಲದಲ್ಲಿ ಒಮ್ಮೆಯಾದರು ತಿನ್ನಬೇಕೆನ್ನುವ ಆಸೆ ಇದ್ದವರು ಒಂದೋ ಪರಿಸರದಲ್ಲಿ ಹುಡುಕಾಡಿ ಅಥವಾ ಮಾರುಕಟ್ಟೆಯಲ್ಲಿ ಕಲ್ಲಣಬೆ ಕೆ.ಜಿ ಗೆ 750 ರಿಂದ 850 ರೂಪಾಯಿ ಮೌಲ್ಯವಿದ್ದರೂ ಖರೀದಿಸಿ ಇದರ ರುಚಿ ಸವಿಯುತ್ತಾರೆ.
ವಾಡಿಕೆಯಂತೆ ಸಿಡಿಲು ಸಹಿತ ಮಳೆ ಆರಂಭವಾಗಿ ತರಲೆಗಳು ಕೊಳೆಯವ ಸ್ಥಿತಿ ತಲುಪುತಿದ್ದಂತೆ ಈ ಅಣಬೆಗಳು ಹುಟ್ಟಿ ಕೊಳ್ಳುತ್ತವೆ. ಗ್ರಾಮಿಣ ಪ್ರದೇಶಗಳಲ್ಲಿ ಸಿಗುವ ಕಲ್ಲಣಬೆಗೆ ಸಾಕಷ್ಟು ಬೇಡಿಕೆ ಇದೆ. ತಾಪಮಾನ ವೈಪರೀತ್ಯದಿಂದಾಗಿ ನಿರೀಕ್ಷೆಯಷ್ಟು ಕಲ್ಲಣಬೆ ಇತ್ತೀಚೆಗೆ ಮೂಡಿ ಬಂದಿಲ್ಲವಾದರೂ ಅಪರೂಪದ ಕಲ್ಲಣಬೆ ಸುಕ್ಕ ಮತ್ತು ಗಸಿಯೊಂದಿಗೆ ನೀರು ದೋಸೆ, ಪುಂಡಿ ಬಾಯಿ ಚಪ್ಪರಿಸಿಕೊಂಡು ತಿನ್ನಲು ಒಳ್ಳೆಯ ಕಾಂಬಿನೇಷನ್.
ಹೆಗ್ಗಲು ಅಣಬೆ : ತಿನ್ನಲು ರುಚಿಕರವಾದ ಹೆಗ್ಗಲು ಅಣಬೆ ನಂಜು ತಂಪು ಮಿಶ್ರಿತ. ಹೆಗ್ಗಲು ಅಂದರೆ ಕಾಲು ಉದ್ದವಾಗಿರುವ ಎಂದರ್ಥ. ಈ ಅಣಬೆ ಬೇರು ಆಳ ನೆಲದಲ್ಲಿ ಹುದುಗಿರುತ್ತದೆ. ಒಂದೇ ಸ್ಥಳದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯವ ಈ ಅಣಬೆ ಹೆಚ್ಚಾಗಿ ಹುತ್ತದ ಅದಿ ಬದಿಯಲ್ಲಿ ಬೆಳೆಯುತ್ತದೆ. ಹೆಗ್ಗಲು ಆಣಬೆ ಬೆಳೆಯುವ ಪ್ರದೇಶದಲ್ಲಿ ನಾಗರ ಹಾವು ಹರಿದಾಡುತ್ತಿರುತ್ತವೆ. ಅದಕ್ಕಾಗಿ ಹೆಗ್ಗಲು ಅಣಬೆ ಕೀಳಲು ಒಬ್ಬರೆ ಹೋಗಬಾರದು ಅನ್ನುತ್ತಾರೆ. ಹೆಗ್ಗಲು ಅಣಬೆ ಎದ್ದಿದ್ದರೆ ೪ ಜನರನ್ನು ಕರೆದು ತೋರಿಸಿಕೊಳ್ಳಬೇಕಂತೆ. ಅಷ್ಟೇ ಅಲ್ಲದೇ ಈ ಅಣಬೆಗಳು ಏಳುವ ತಳಭಾಗದಲ್ಲಿ ಧನ ಕನಕ ಅಂದರೆ ಕೊಪ್ಪರಿಗೆ ಕಾಯುತ್ತಾನೆ ನಾಗ ಎಂಬ ಪ್ರತೀತಿಯು ಇದೆ. ವೈಜ್ಞೌನಿಕವಾಗಿ ಹೇಳುವುದಾದರೆ ಹೆಗ್ಗಲು ಅಣಬೆಯ ವಿಶೇಷ ಪರಿಮಳ ಮತ್ತು ರುಚಿ ನಾಗರಹಾವಿಗೆ ಪ್ರಿಯ. ಆದ್ದರಿಂದ ಆ ಜಾಗಗಳಲ್ಲಿ ಹಾವು ಇರುವ ಸಾದ್ಯತೆ ಹೆಚ್ಚು. ಭೂಮಿ ಸರಿಯಾಗಿ ತೇವಗೊಂಡು ಮಣ್ಣಿನಲ್ಲಿ ನೀರಿನ ಪಸೆ ಏಳುವ ಸಮಯದಲ್ಲಿ ಅಂದರೆ ಅರ್ಧ ಮಳೆಗಾಲ ಮುಗಿದ ನಂತರ ಅತ್ತ ಜೋರು ಅಲ್ಲ ಇತ್ತ ಕಡಿಮೆ ಆಗದ ರೀತಿಯಲ್ಲಿ ಸುರಿವ ಮಳೆಯ ನಡುವೆ ಹೆಗ್ಗಲು ಅಣಬೆ ಹುಟ್ಟುತ್ತದೆ.
ಮಳೆಗಾಲದಲ್ಲಂತೂ ಅಣಬೆಯಿಂದ ರುಚಿ ರುಚಿಕರವಾದ ಅಣಬೆ ರಸ, ಸೂಫ್, ಪುಲವ್, ಪಕೊಡಾ, ಉಪ್ಪಿನ ಕಾಯಿ, ಪಲ್ಯ, ಮಂಚೂರಿ, ಸಾಂಬರ್, ಅಣಬೆ ಚಟ್ನಿ, ರಸಂಪುಡಿ, ಇನ್ನೂ ಅನೇಕ ಆಹಾರ ಪದಾರ್ಥ ಅಣಬೆಯಿಂದ ತಯಾರಿಸಬಹುದು. ಅಣಬೆಯಿಂದ ತಯಾರಿಸಿದ ಆಹಾರವನ್ನು ಅದೇ ದಿನ ಸೇವಿಸುವುದು ಉತ್ತಮ. ಇದರಲ್ಲಿ ಪ್ರೋಟೀನ್ ಹಾಗೂ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ಮರು ದಿನ ಬಿಸಿ ಮಾಡಿ ತಿಂದಾಗ ಜೀರ್ಣಕ್ರಿಯೆಗೆ ತೊಂದರೆಯಾಗಬಹುದು.
ಒಟ್ಟಿನಲ್ಲಿ ಗುಡ್ಡ ಗಾಡು ಪ್ರದೇಶದಲ್ಲಿ ತಡಕಾಡಿ ಅಣಬೆ ಸಂಗ್ರಹಿಸಿದ್ದ ಹಳೆಯ ನೆನಪು ಮರುಕಳಿಸಿ ಲೇಖನಕ್ಕೆ ವಸ್ತುವಾಯಿತು. ಬಾಯಿ ಚಪ್ಪರಿಸಿಕೊಂಡು ತಿನ್ನಬಹುದಾದ ಅಣಬೆಯ ಹೀಗೊಂದು ಅಣಬೆ ಪುರಾಣ ಓದುಗರಿಗಾಗಿ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ