ಊಹೆಗೂ ನಿಲುಕದ ಆಶ್ಚರ್ಯಗಳು, ಇಲ್ಲಿ ಕಾಲಿಟ್ಟ ಕೂಡಲೇ ಎತ್ತ ನೋಡಿದರೂ ಬೆಚ್ಚಿ ಬೀಳಿಸುವ ವೈವಿಧ್ಯಮಯ ಪ್ರಾಣಿ, ಪಕ್ಷಿ, ಹಾಗೂ ಮನುಷ್ಯರ ಅಗಾಧ ಅಸ್ಥಿಪಂಜರಗಳ ಸಮೂಹ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲ ಇಲ್ಲಿನ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರಕ್ಕೆ ಸಂಬಂಧದ ಪಟ್ಟ ಸಂಗ್ರಹಾಲಯ “ಮಣಿಪಾಲ ಮ್ಯೂಸಿಯಂ ಆಫ್ ಅನಾಟಮಿ ಮತ್ತು ಪೈಥಾಲಜಿ” ಸಾರ್ವಜನಿಕರಿಗೆ ಸಂದರ್ಶಿಸಲು ಅವಕಾಶವಿರುವ ಭಾರತದ ಕೆಲವೇ ಕೆಲವು ಅನಾಟಮಿ ಮ್ಯೂಸಿಯಂಗಳಲ್ಲಿ ಇದು ಒಂದು. ಮಾನವ ತಲೆಬುರುಡೆಯಿಂದ ಕಾಲ ಬೆರಳವರೆಗಿನ ಶರೀರದ ವಿವಿಧ ಅಂಗಗಳ ಸಂಗ್ರಹ ಇಲ್ಲಿದೆ. ಅಪರೂಪದ ಈ ಸಂಗ್ರಹಾಲಯ ನೋಡುವ ಅನುಭವ ತುಸು ವಿಶಿಷ್ಟ. ಲೆಕ್ಕಾ ಹಾಕುತ್ತ ಹೋದರೆ ಅಂಗ ರಚನಾಶಾಸ್ತ್ರ ಮತ್ತು ರೋಗ ಶಾಸ್ತ್ರಕ್ಕೆ ಸಂಬಂಧಿಸಿದ 3,000 ಕ್ಕೂ ಹೆಚ್ಚಿನ ಶರೀರದ ವಿವಿಧ ಭಾಗಗಳ ಅಪಾರ ಸಂಗ್ರಹ ಇಲ್ಲಿದೆ. ಕುತೂಹಲದ ಕಣ್ಣಿಗೆ ಹೊಸ ನೋಟವನ್ನು, ಆಸಕ್ತಿಯ ಮನಕ್ಕೆ ಅನೇಕ ವಿಚಾರಗಳನ್ನು ತುಂಬಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರವಾಸಿಗರಿಗೆ ವೈದ್ಯ ವಿಜ್ಞಾನದ ಅಚ್ಚರಿಗಳೊಂದಿಗೆ ಹೊಸ ಅನುಭವ ನೀಡಲು ವೈಜ್ಞಾನಿಕವಾಗಿ ಜೋಡಿಸಿದ ಅಸ್ಥಿ ಶಿಲ್ಪದ ತಾಣವಿದು. ಈ ಮ್ಯೂಸಿಯಂ ಕೇವಲ ವಸ್ತು ಸಂಗ್ರಹಾಲಯವಾಗಿರದೆ ಅಧ್ಯಯನ ಆಸಕ್ತರಿಗೆ ತಾವು ಕಂಡರಿಯದ ಜೀವಿಗಳ ಮೂಳೆಗಳ ರಚನೆಯನ್ನು ಹತ್ತಿರದಿಂದ ನೋಡಿ ತಿಳಿದು ಕೋಳ್ಳಲು ಅವಕಾಶವಿರುವ ಸಂಶೋಧನೆಗೆ ಹಾಗೂ ಶೈಕ್ಷಣಿಕ ಜ್ಞಾನ ಕೇಂದ್ರವು ಆಗಿದೆ.
ಅಸ್ಥಿಪಂಜರಗಳೆಂದರೆ ಸಾಮಾನ್ಯವಾಗಿ ಎಲ್ಲರಿಗೂ ನೋಡುತ್ತಲೆ ಭಯ. ಆದರೆ ಇಲ್ಲಿನ ಅಸ್ಥಿ ಪಂಜರದಲ್ಲಿ ಭಯಕ್ಕಿಂತ ಕಲಿಕೆಯ ಅನುಭವದ ಕುತೂಹಲಕರ ವಿಚಾರವಿದೆ. ಮಾನವ ಶರೀರದ ಆರೋಗ್ಯದ ಗುಟ್ಟನ್ನು ತಿಳಿಸುವ ವಿಜ್ಞಾನದ ಅರಿವು ಮೂಡಿಸುವ ಜ್ಞಾನ ಭಂಡಾರವಿದೆ. ಮಾನವ ಶರೀರವೇ ಹಾಗೆ ಕೌತುಕ, ರಹಸ್ಯಗಳ ಆಗರ ಇದೊಂದು ಮಹಾನ್ ಯಂತ್ರ . ಶರೀರದ ಬೇರೆ ಬೇರೆ ಅಂಗಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಂತೆ ಒಂದೇ ಸಮೂಹದಲ್ಲಿ ಕೆಲಸ ಮಾಡುವ ಆರೋಗ್ಯವಂತ ಶರೀರ ಅನೇಕ ರಾಸಾಯನಿಕ ಮೂಲವಸ್ತುಗಳು ಹಾಗೂ ಇತರ ದ್ರವ್ಯಗಳನ್ನು ಯಾವ ತರದಲ್ಲಿ ಹೊಂದಿರುತ್ತವೆ ಎಂಬುದು ಇಲ್ಲಿ ಕಾಣಸಿಗುತ್ತವೆ. ಮೃತ ಶರೀರ ಅಸ್ಥಿ ಪಂಜರವಾಗಿ ಹೇಗೆ ಗೋಚರಿಸುತ್ತದೆ ಎಂಬುದನ್ನು ಇಲ್ಲಿ ಕಾಣಬಹುದು. ಮನುಷ್ಯನ ದೇಹದ ಪ್ರತಿಯೊಂದು ಭಾಗಗಳು ನಿಜವಾದ ಆಸ್ತಿ ಎಂಬ ಅರಿವು ಮೂಡಲಿದೆ ಇಲ್ಲಿ. ಮಣಿಪಾಲ ಮ್ಯುಸಿಯಂ ಆಫ್ ಅನಾಟಮಿ ಮತ್ತು ಪೈಥಾಲಜಿ. ಎಸ್. ಎಸ್ ಗೋಡ ಬೋಲೆ ಅವರ ಕನಸಿನ ಕೂಸು .ಮಣಿಪಾಲ ಕೆ ಎಂ ಸಿ ಯ ಮೊದಲ ಅಂಗರಚನಾಶಾಸ್ತ್ರ ಪ್ರಾಧ್ಯಾಪಕರು ಜೀವಿಗಳ ಅದ್ಯಯನಕ್ಕೆ ಬಳಸಿದ ಪದ್ದತಿ, ಜೀವಿಗಳ ಮೃತ ದೇಹವನ್ನು ಕಾಪಾಡಿಡಲು ಕಂಡು ಕೊಂಡ ವಿಧಾನಗಳು ಇಂದಿಗೂ ಇಲ್ಲಿನ ಕಲಿಕಾ ವಿಭಾಗದಲ್ಲಿ ಚಾಲನೆಯಲ್ಲಿದೆ ಯಂತೆ. ಡಾ. ಎಸ್. ಎಸ್ ಗೋಡಬೋಲೆ ಅವರು ತಮ್ಮ ವ್ಯಯಕ್ತಿಕ ಸಂಗ್ರಹದಿಂದ ಸಾದಾರಣ 700 ಮಾದರಿಗಳನ್ನು ಈ ಸಂಗ್ರಹಾಲಯಕ್ಕೆ ದಾನ ಮಾಡಿದ್ದಾರೆ. ಇಂದಿಗೂ ಇಲ್ಲಿ ಅವರೆ ಸಂರಕ್ಷಿಸಿ ಅಳವಡಿಸಿದ ವಿಧಾನವಾದ ಅಂಗಾಂಶಗಳನ್ನು ಎಚ್ಚರಿಕೆಯಿಂದ ಕಲಾತ್ಮಕವಾದ ತಂತ್ರಗಳನ್ನು ಅನುಸರಿಸಲಾಗುತ್ತದೆ. ಈ ಸಂಗ್ರಹಾಲಯವನ್ನು ಸಾರ್ವಜನಿಕರಿಗಾಗಿ ತೆರವುಗೊಳಿಸಿದ್ದು ಅವರೆ.
ಅನಾಟಮಿ ಮ್ಯೂಸಿಯಂ ಒಳಗಡೆ ಏನಿದೆ? ಮಣಿಪಾಲ ಮ್ಯೂಸಿಯಂ ಆಫ್ ಅನಾಟಮಿ ಮತ್ತು ಪೈಥಾಲಜಿಯಲ್ಲಿ ಮಾನವ ಶರೀರದ ವಿವಿಧ ಅಂಗಗಳ ಪ್ರದರ್ಶಿಸುವುದಲ್ಲದೆ ದೇಹದ ಮೇಲೆ ಪರಿಣಾಮ ಬೀರ ಬಹುದಾದ ಜೀವನ ಶ್ಯೆಲಿ ಪ್ರೇರಿತ ಕಾಯಿಲೆಗಳ ಬಗ್ಗೆ ವಿವರಣೆಯೊಂದಿಗೆ ಕಾಯಿಲೇ ಪೀಡಿತ ಶರೀರದ ವಿವಿಧ ಅಂಗಗಳನ್ನು ನೋಡಬಹುದು. ಮಾನವ ಅಂಗರಚನೆಯ ಒಳನೋಟ ಬೀರುವ ಅಂಗಗಳು, ಅಸ್ಥಿ, ತಲೆಬುರುಡೆ, ಮೆದುಳು, ಬೆನ್ನು ಹುರಿ ಮತ್ತು ನರಮಂಡಳ ಅಲ್ಲದೇ ಶರೀರದ ರಚನೆ ಅಂದರೆ ಮಾನವ ಶರೀರದ ಚೌಕಟ್ಟಿನಂತಿದ್ದು ವಯಸ್ಸಿಗನು ಗುಣವಾಗಿ ಅಸ್ಥಿ ಪಂಜರದ ಮೂಳೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಂತೆ ವಯಸ್ಕರಿಗಿಂತ ಮಕ್ಕಳಲ್ಲಿ ಹೆಚ್ಚು ಮೂಳೆಗಳಿರವುದನ್ನು ಇಲ್ಲಿ ಗಮನಿಸ ಬಹುದು. ಮಧ್ಯ ಕಿವಿಯಲ್ಲಿರುವ ಶರೀರದ ಮೂರು ಅತಿ ಚಿಕ್ಕ ಮೂಳೆಗಳು, ಸೊಂಟದಲ್ಲಿರುವ ಅತಿಭಾರದ ಮೂಳೆಗಳು ಇಲ್ಲಿ ನೋಡಸಿಗಲಿದೆ. ಜೀವ ಜಗದ ವೈವಿಧ್ಯಗಳನ್ನು ಇಲ್ಲಿ ಕಲೆ ಹಾಕಲಾಗಿದೆ. ಎದೆ, ಪಕ್ಕೆಲುಬು, ಬೆನ್ನೆಲುಬು ಮಾನವ ವಿಕಾಸದ ಪಳೆಯುಳಿಕೆಗಳನ್ನು ತೋರಿಸುವ ಅಮೂಲ್ಯ ಸಾಕ್ಷ್ಯಾವನ್ನು ಒದಗಿಸುವ ಮನುಷ್ಯರ ಮೂಳೆಗಳು, ಅಸ್ಥಿ ಪಂಜರ, ವನ್ಯಜೀವಿ, ಸಾಕು ಪ್ರಾಣಿ, ಸರೀಸೃಪಗಳ ಬೇರೆ ಬೇರೆ ಭಾಗಗಳು ಇಲ್ಲಿದೆ.
ಸಂಸ್ಕರಿಸಿದ ಮಾನವ ದೇಹ, ಆನೆಯ ತಲೆಬುರುಡೆ, ತಿಮಿಂಗಲದ ತಲೆ ಬುರುಡೆ, ಮುಖ ಮತ್ತು ಕುತ್ತಿಗೆಯ ಎಲುಬು ಹಾಗೂ ಮಾಂಸ ಖಂಡಗಳು ಕೈ ಮತ್ತು ಕಾಲಿನ ಭಾಗದ ಎಲುಬು ಮತ್ತು ಮಾಂಸ ಖಂಡಗಳು ರಕ್ತ ಪರಿಚಲನ ವ್ಯೂಹದ ಎಲ್ಲಾ ಭಾಗಗಳು, ಹೃದಯ ರಚನಾ ವ್ಯವಸ್ಥೆ ರಕ್ತವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಮಾನವ ಶರೀರ ರಚನೆ ನೋಡುತ್ತಿರುವಂತೆ ಕುತೂಹಲ ಹುಟ್ಟಿಸುತ್ತದೆ. ಪಕ್ಕೆಲುಬು, ಬೆನ್ನೆಲುಬು, ಎದೆಮೂಳೆ, ರಕ್ತ ಪರಿಚಲನೆ ಮುಖ್ಯವಾಗಿ ಹೃದಯ ,ರಕ್ತ ಮತ್ತು ರಕ್ತ ನಾಳಗಳು, ರಕ್ತ ಶರೀರದ ಎಲ್ಲಾ ಭಾಗಗಳಿಗೆ ಹರಡಲು ಸಾದ್ಯವಾಗುವ ಒಂದು ಮುಷ್ಟಿಯಷ್ಟು ಗಾತ್ರದ ಹೃದಯದ ಹೃತ್ಕರ್ಣ ಹೃತ್ಕುಕ್ಷಿಗಳ ಭಾಗವನ್ನು ಗಾಜಿನ ಆವರಣದಲ್ಲಿ ಇರಿಸಲಾಗಿದೆ. ಮಾನವ ಮೆದುಳಿನ ಭಾಗ, ಶ್ವಾಸಕೋಶವಸ್ಥೆ ಜೀರ್ಣಾಂಗ ವ್ಯೂಹ, ಜನನಾಂಗ ವ್ಯೂಹ, ಪಾರಾಥೈರಾ ಯ್ಡಗಂಥ್ರಿ, ಕ್ಯಾಲ್ಸಿಯಂ ಸ್ರವಿಸುವಿಕೆಯನ್ನು ನಿಯಂತ್ರಿಸು ವ ಗ್ರಂಥಿಗಳು, ಶ್ವಾಸನಾಳಗಳ ಮೇಲಿರುವ ಸಾಮಾನ್ಯ ಥೈರಾಯ್ಡ್ ಗಳು, ಎಡ ಮತ್ತು ಬಲ ಮೂತ್ರ ಜನಕಾಂಗದ ಗ್ರಂಥಿ ಮೂತ್ರಪಿಂಡದ ಮೂತ್ರ ಜನಕಾಂಗದ ಸಾಮಾನ್ಯ ನೋಟ ಶರೀರದ ಭಾಗಗಳು ಇಲ್ಲಿ ವಿವರಣೆ ಸಹಿತವಾಗಿವೆ.
ಕೋಟ್ಯಾಂತರ ಜೀವ ಕೋಶಗಳಿಂದ ರಚನೆ ಗೊಂಡಿರುವ ಮಾನವ ಶರೀರ ಒಂದು ಯಂತ್ರವಿದ್ದಂತೆ ಅದರ ವಿವಿಧ ರಚನೆಗಳು ಜೀವನ ಕ್ರಿಯೆಯನ್ನು ಚಾಚುತಪ್ಪದೆ ಪಾಲಿಸುತ್ತದೆ. ನರಗಳ ಜಾಲ ಶರೀರದ ಕ್ರಿಯೆ ನಿಯಂತ್ರಿಸುತ್ತದೆ. ಇಂತಹ ವಿವಿಧ ಅಂಗಗಳ ರಚನೆಯನ್ನು ವಿಜ್ಞಾನದ ಮಾಹಿತಿಯೊಂದಿಗೆ ನೋಡಬಹುದು. ಅಲ್ಲದೇ ಆನೆ, ತಿಮಿಂಗಿಲಗಳ ಬುರುಡೆ, ನಾಗರ ಹಾವಿನ ಅಸ್ಥಿ ಪಂಜರ, ದೀರ್ಘ ಕಾಲದ ಕಾಯಿಲೆಗಳಿಗೆ ಒಳಗಾದ ದೇಹದ ವಿವಿಧ ಭಾಗಗಳಾದ ಜಠರ, ಸ್ತನದ ಗಡ್ಡೆ, ಮೆದುಳು ಮತ್ತು ನರ ಮಂಡಳ ಮೆದುಳಿನಲ್ಲಿ ರಕ್ತ ಹೆಪ್ಪು ಗಟ್ಟಿರುವುದು. ಕೊಬ್ಬು ಸಂಗ್ರಹಿಸಿದ ಶರೀರದ ವಿವಿಧ ಭಾಗಗಳು, ರಕ್ತ ನಾಳದಲ್ಲಿ ಕೊಬ್ಬು. ಹೃದಯ ರಕ್ತನಾಳದಲ್ಲಿ ಕೊಲೆ ಸ್ಟಾಲ್ ಸಂಗ್ರಹದ ಅಂಗಗಳು ಅಷ್ಟೇ ಅಲ್ಲದೇ ದೀರ್ಘ ಕಾಲದ ಸಕ್ಕರೆ ಕಾಯಿಲೆಯಿಂದ ಶರೀರದ ಬೇರೆ ಬೇರೆ ಭಾಗಗಳಿಗೆ ಆದ ತೊಂದರೆ ಅಥವಾ ಕಾಯಿಲೆ ಹೊಂದಿದ ಶರೀರದ ಭಾಗಗಳು ವಿಜ್ಞಾನದ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನಕ್ಕೆ ಅನುಕೂಲವಾದ ಭಾಗಗಳನ್ನು ಇಲ್ಲಿನ ಸಂಗ್ರಹಾಲಯದಲ್ಲಿದೆ. ಜೀವನ ಶೈಲಿಗೆ ಸಂಬಂಧಿತ ರೋಗಗಳಿಂದ ನಾರುಗಟ್ಟಿದ ಪಿತ್ತಜನಕಾಂಗ ದೀರ್ಘಕಾಲ ಮದ್ಯಪಾನ ಸೇವಿಸುವುದರಿಂದ ಶರೀರದ ಹಲವು ಅಂಗಗಳಿಗೆ ಕಾಯಿಲೆ ಹಬ್ಬಿದ ಭಾಗವನ್ನು , ಮೂತ್ರಾಂಗ ವ್ಯೂಹ, ಭ್ರೂಣ ಶಾಸ್ತ್ರದಲ್ಲಿನ ಅನೇಕ ವಿವರಣೆಯೊಂದಿಗೆ ಭ್ರೂಣದ ಭಾಗವನ್ನು ಇಲ್ಲಿ ಇರಿಸಲಾಗಿದೆ.
ಹಾವು, ಕುದುರೆ, ಹಕ್ಕಿಗಳ ಎಲುಬಿನ ಗೂಡು, ಸಮುದ್ರ ಜೀವಿ ಆಮೆಯ ಹೃದಯ, ದನ ಹಾಗೂ ಕರುವಿನ ಗರ್ಭವಸ್ಥೆ, ಒಣಗಿಸಿ ಇಟ್ಟ ಕುದುರೆಯ ಹೊಟ್ಟೆಯ ಭಾಗ, ಆನೆಮರಿಗಳ ಎಲುಬು. ಸಂಸ್ಕೃರಿಸಿದ ಮಾನವನ ಇಡಿ ಶರೀರ. ಒಂದೇ ಎರಡೆ ಮೂರು ಗಂಟೆಗಳ ಕಾಲ ನೋಡುತ್ತಾ ಸಾಗಿದರು ಮುಗಿಯದ ವಿವಿಧ ಮಾನವ ಶರೀರದ ಅಂಗಗಳನ್ನು ಸುರಕ್ಷಿತವಾಗಿ, ಇರಿಸಿದ ಪರಿಗೆ ಮೆಚ್ಚುಗೆ ವ್ಯಕ್ತ ಪಡಿಸಲೇಬೇಕು. 2012 ರಲ್ಲಿ ಈ ಮ್ಯೂಸಿಯಂ ನವೀಕರಣಗೊಂಡು ಹೊಸ ರೂಪದೊಂದಿಗೆ ಆಕರ್ಷಿತವಾಗಿದೆ. ಉಡುಪಿ ಜಿಲ್ಲೆಯ ಮಣಿಪಾಲ ಅಂತಾರಾಷ್ಟ್ರೀಯ ಖ್ಯಾತಿಯ ನಗರವಾಗಿ ಬೆಳೆದಿದ್ದು ನಿತ್ಯ ನೂರಾರು ಜನ ದೇಶ ವಿದೇಶಗಳಿಂದ ಇಲ್ಲಿ ಅಸ್ಥಿ ಪಂಜರವನ್ನು ಕುತೂಹಲದದಿಂದ ವೀಕ್ಷಿಸಲು ಹಾಗೂ ಅಧ್ಯಯನಕ್ಕಾಗಿ ಬರುತ್ತಾರೆ. ರಜಾ ದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ಮ್ಯೂಸಿಯಂ ಸಾರ್ವಜನಿಕರಿಗೆ ತೆರೆದಿರುತ್ತದೆ. ಟಿಕೆಟ್ ಖರಿದಿಸಿ ಒಳಹೊಕ್ಕು ನೋಡಿದರೆ ಮಾನವ ಶರೀರದ ಅನೇಕಾನೇಕ ಭಾಗಗಳ ಸಂಗ್ರಹಿಸಿಟ್ಟ ಹೊಸತೊಂದು ಪ್ರಪಂಚ ನಮ್ಮೆದುರಿಗೆ ತೆರೆದಿರುತ್ತದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.