ಹೊಸ ವರ್ಷ ಎಲ್ಲರ ಬಾಳಲಿ ಹೊಸತನ ತರಲಿ ಎಂಬ ಶುಭಾಶಯಗಳೊಂದಿಗೆ ಈ ವರ್ಷ ವಿಡಿ ಉತ್ತಮವಾಗಿ ಸಾಗಲಿ ಎಂಬ ಆಶಯ, ಹಂಬಲ, ಉತ್ಸಾಹದೊಂದಿಗೆ 2023ರ ಆಗಮನದ ಹರುಷದಲ್ಲಿ ಎಲ್ಲರೂ ಸತ್ಕರ್ಮ, ಸತ್ಯನಿಷ್ಠೆ, ಪ್ರಾಮಾಣಿಕತೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವುದಾಗಿ ಸಂಕಲ್ಪಸಿಕೊಂಡು ಹೊಸ ಯೋಜನೆ, ನವಕಲ್ಪನೆಯೊಂದಿಗೆ ಬದುಕಿಗೆ ಅರ್ಥಕೊಡಲು ಜೀವನದಲ್ಲಿ ನಿಶ್ಚಿತ ಗುರಿಯನ್ನಿಟ್ಟು ಕೊಂಡಿರುವವರು ಯಶಸ್ವಿ ಆಗುವುದು ಖಂಡಿತಾ. ಹಾಗೆಯೇ ಹೊಸವರ್ಷವನ್ನು ಕ್ರೀಯಾ ಶೀಲತೆಯಿಂದ ಸ್ವಾಗತಿಸುತ್ತಾ ನಿಶ್ಚಿತವಾದ ಗುರಿಯೊಂದಿಗೆ ಹೊಸ ಹೆಜ್ಜೆಯಿಟ್ಟು ಹೊಸ ಅರುಣೋದ ಸಂತಸದ ಫಲಿತಾಂಶಕ್ಕಾಗಿಕಾಯೋಣ.
ಡಿಸೆಂಬರ್ 31 ರ ರಾತ್ರಿ ಎಲ್ಲೆಡೆ ಗೌಜು, ಗದ್ದಲ, ಡಿಸ್ಕೋ ನೃತ್ಯ ಕುಣಿತದ ಸಂಭ್ರಮದಲ್ಲಿ ರಾತ್ರಿ ಅಲೆದಾಟ , ತಿರುಗಾಟ ಇದು ನಗರಜೀವಿಗಳ ಹೊಸ ವರ್ಷಾಚರಣೆ, ಪಾರ್ಟಿ, ಮೋಜು, ಮಸ್ತಿ, ಪಾಶ್ಚಾತ್ಯ ಅನುಕರಣೆ ಅನಿಸಿದರೂ ಅನುಸಂಧಾನಗಳಲ್ಲಿ ಜೀವನದ ಗತಿ, ಬದಲಾಗುತ್ತಿರುವ ಕಾಲ, ಸಾಮಾಜಿಕ ಪರಿಸ್ಥಿತಿ ಇಂದಿನ ಪರಿಸರದೊಂದಿಗೆ ಬಾಳುವ ಸಹಜ ಸ್ವಭಾವದಂತೆ ಹೊಸ ವರ್ಷದ ಆಚರಣೆ ಕೂಡ ಸರ್ವ ಸಾಮಾನ್ಯವಾಗಿದೆ. ನಮ್ಮೆಲ್ಲರ ಬದುಕಿನ ತುಡಿತ , ಮಿಡಿತಗಳು, ಆಲೋಚನೆಗಳು, ಲೋಕದ ವ್ಯವಹಾರಗಳೊಂದಿಗೆ ಹೊಸ ವರ್ಷದ ಆಚರಣೆ ಬೇರೆ ಬೇರೆ ರೀತಿಯಲ್ಲಿ ಆಚರಿಸಿಕೊಂಡರು ಹೊಸವರ್ಷ ಹೊಸ ಹರುಷ ತರಲಿ ವರ್ಷ ವಿಡೀ ಸಂತಸ ತುಂಬಿರಲಿ ಎಂಬ ಉದ್ದೇಶದಿಂದ ತಾನೇ.
ಹಲವು ವರ್ಷ ಗಳ ಹಿಂದೆ ಹೊಸ ವರ್ಷದ ಆಚರಣೆ ಯಲ್ಲಿ ಗೆಳೆಯರು , ಹಿರಿ- ಕಿರಿಯರು ಎನ್ನುವ ಭೇಧಭಾವ ವಿಲ್ಲದೆ ಗ್ರೀಟಿಂಗ್ ಕಾರ್ಡ್ ವಿನಿಮಯ ಜೋರಾಗಿತ್ತು. ಆದರೆ ಈಗೆಲ್ಲಾ ಎಸ್. ಎಮ್ ಎಸ್ ವಾಟ್ಸಾಪ್ ಮೂಲಕ ಶುಭಾಶಯ ಹಂಚಿಕೊಳ್ಳುತ್ತಾರೆ. ಹೊಸ ವರ್ಷದ ಆಚರಣೆಯ ಶುಭಾಶಯಗಳನ್ನು ಆಧುನಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ. ದೊಡ್ಡ ದೊಡ್ಡ ಮಹಾನಗರಗಳಲ್ಲಿ ಹೊಸ ವರ್ಷದ ಕೆಲವು ದಿನ ಮೊದಲೆ ಸಿನೆಮಾ ಟಿಕೆಟ್ ಬುಕ್ಕಿಂಗ್ , ಪಾರ್ಟಿಗಾಗಿ, ಹೋಟೆಲ್ ಬುಕ್ಕಿಂಗ್ ಆಗಿರುತ್ತದೆ. ಮುಂಬಯಿಯ ವಿವಿಧ ಬೀಚ್, ಗೇಟ್ ವೇ ಆಫ್ ಇಂಡಿಯಾ, ಮರಿನ್ ಲೈನ್, ದಾದರ್ ಚೌಪಾಟಿ, ಜೂಹೂ ಬೀಚ್ ಗಳಲ್ಲಿ ಸಮುದ್ರಡದಲ್ಲಿ ಸುತ್ತಾಡುತ್ತಾ ಹೊಸ ವರ್ಷಗಳನ್ನು ಸ್ವಾಗತಿಸುವವರಿದ್ದಾರೆ . ತರತರದ ಆರ್ಕೆಸ್ಟ್ರಾಗಳು, ಅಲ್ಲಲ್ಲಿ ನಡೆಯುತಿರುತ್ತದೆ.
ಭಾರತ ಬಡತನದಲ್ಲಿ ಬಳಲುತ್ತಿದ್ದರು ಡಿಸೆಂಬರ್ 31 ರಾತ್ರಿ ಲಕ್ಷ ಗಟ್ಟಲೇ ಹಣದ ಪಟಾಕಿ ಸಿಡಿಸುವ ನಾಗರಿಕರಿಗೇನೂ ಕೊರತೆ ಇಲ್ಲ. ಹೊಸ ವರ್ಷದ ಆಚರಣೆಗಳ ಹಿಂದೆ ಕೇವಲ ಸ್ವತಂತ್ರ ದಾಯಕ ಅನುಕರಣೆ, ಅನುಸರಣೆಗಳಷ್ಟೆ ಅಲ್ಲ ಅವುಗಳದ್ದೇ ಆದ ಅರ್ಥ ವಂತಿಕೆ ಇರಬೇಕು. ಆಡಂಬರದ ಆಚರಣೆ ಗಿಂತ ಅಗತ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. 2023 ರ ಹೊಸ ವರ್ಷಾಚರಣೆ ಅರ್ಥಗರ್ಭಿತವಾಗಿರಲಿ.
ಭಾರತೀಯ ಪರಂಪರೆಯ ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿಕೊಳ್ಳುತ್ತಾ ಮುಂದಿನ ಪೀಳಿಗೆಗೆ ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಪ್ರೇರೆಪಿಸುವಂತಹ ಆಚರಣೆಗಳೊಂದಿಗೆ ಹೊಸ ವರ್ಷ ವನ್ನು ಆಚರಿಸುತ್ತಾ ಬರುವ ಮನಸ್ಸು ಮಾಡಿದರೆ ಹೊಸ ವರ್ಷಾಚರಣೆಯಲ್ಲಿ ಹೊಸತನ ಉಳಿಯುತ್ತದೆ. ಕಾಲ ಮತ್ತು ಮಾನವ ಸಂಬಂದ ವಿಶಿಷ್ಟವಾದುದು ಸಮಯದೊಳಗೆ ಮನುಷ್ಯ ಮನುಷ್ಯ ನೊಳಗೆ ಸಮಯ ನೆಲೆಯೂರಲು ನಡೆಯುವ ಎಲ್ಲ ಪ್ರಯತ್ನಗಳ ಫಲಿತಾಂಶವೇ ಬದುಕಿನ ಯಶಸ್ಸು ಕಾಲದ ಗತಿಯೊಂದಿಗೆ ಬದಲಾವಣೆಯನ್ನು ಹೊಂದುತ್ತಾ ಗರ್ವವನ್ನು ತ್ಯಜಿಸಿ ದುರಾಸೆಯನ್ನು ಬಿಟ್ಟು ಶಾಂತಿ ಯುತವಾಗಿ ಸತ್ಯದನುಡಿಯೊಂದಿಗೆ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪದೊಂದಿಗೆ ಹೊಸ ವರ್ಷಕ್ಕೆ ಅಡಿ ಇಡೋಣ ಬೆಟ್ಟ ಎಂದಿಗೂ ಮುಂದೆ ಬಾಗದು ಇಲ್ಲಿ ಕಷ್ಟ ಪಟ್ಟು ಅದನ್ನೆರಿದರೆ ಅದು ನಮ್ಮ ಕಾಲಿನ ಕೆಳಗಿರುತ್ತದೆ. ಎಂಬ ಹಿರಿಯರ ಮಾತಿದೆಯಲ್ಲಾ ಆದ್ದರಿಂದ ಶ್ರಮ ಜೀವಿಗಳಾಗೋಣ.
2023 ರ ಹೊಸ ವರ್ಷಕ್ಕೆ ಪ್ರವೇಶಿಸಿದ್ದೇವೆ . ಆದರೆ ನಮ್ಮ ದೇಶದ ವರ್ತಮಾನದಲ್ಲಿ ಅರಾಜಕತೆ , ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಕೌಟುಂಬಿಕ ದೌರ್ಜನ್ಯ ಎಲ್ಲದಕ್ಕೂ ಹೊಸ ವರ್ಷದಲ್ಲಿ ಕಡಿವಾಣ ಹಾಕುವ ಪ್ರಯತ್ನವಾಗಬೇಕು. ಇಂದು ಪರಿಸರ ಮಾಲನ್ಯ ಅದೆಷ್ಟು ಗಂಭೀರ ಸ್ವರೂಪ ತಾಳಿದೆ ಯೆಂದರೆ ಎಲ್ಲಕ್ಕಿಂತ ಭೀಕರ ಸಮಸ್ಯೆಯಾಗಿ ಜಾಗತಿಕ ತಾಪಮಾನದ ಏರಿಕೆ ಅಪಾಯದ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾಗೋಣ ದೇಶದ ಭವಿಷ್ಯತಿಗೆ , ಭದ್ರತೆಗೆ ಪ್ರಗತಿಗೆ ಹಿತ ಎನಿಸುವ ಕಾರ್ಯವೆಸಗಲು ಹೊಸ ವರ್ಷದಲ್ಲಿ ಪಣತೊಡೋಣ . ಪ್ರಜಾ ಪ್ರಭುತ್ವದ ರಕ್ಕಣೆ ಕಾನೂನು ಮತ್ತು ಶಿಸ್ತು ಪಾಲನೆ, ದೇಶದ ರಕ್ಷಣೆ, ಶೈಕ್ಷಣಿಕ ವಿಕಾಸದೊಂದಿಗೆ ಸರ್ವಧರ್ಮ ಸಮನ್ವಯತೆಯಿಂದ ಬಾಳೋಣ ನಮ್ಮೆಲ್ಲರ ಚಿಂತನೆಗಳು ಆರೋಗ್ಯ ಕರವಾಗುರುವ ನಿಟ್ಟಿನಲ್ಲಿ ಯೋಚಿಸೋಣ. ನಮ್ಮ ಭಾಷೆ ಪರಿಸರ, ನೆಲ, ಜಲ, ಎಲ್ಲವನ್ನೂ ಪರಿಶುದ್ಧ ವಾಗಿಟ್ಟುಕೊಳ್ಳುವಲ್ಲಿ ಪ್ರಕೃತಿಯ ಜತೆ ಗೂಡಿ ಬದುಕೋಣ. ಪ್ರಾಕೃತಿಕ ಸಂಪತ್ತಿನ ದುರುಪಯೋಗ ಮನು ಕುಲಕ್ಕೆ ಮಾರಕ . ಇಂದು ನಮ್ಮ ದೇಶದ ರೈತರ ದುಡಿಯುವ ಕೈಗಳ ಹೋರಾಟದ ಬದುಕು ಸುಗಮವಾಗಿ ಸಾಗುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ. ಭಾರತ ವೈವಿಧ್ಯಮಯ ದೇಶ. ಇಲ್ಲಿನ ವಿವಿಧ ಭಾಷೆ, ಸಮುದಾಯಗಳು ಸ್ಥಳೀಯ ಅಗತ್ಯ ಗಳು ಪ್ರಾದೇಶಿಕ ವ್ಯತ್ಯಾಸಗಳು ಹೊಸ ವರ್ಷದ ಆಚರಣೆಯನ್ನು ಬಹುರೂಪಗೊಳಿಸಿ ಸಮೃದ್ಧಗೊಳಿಸಿವೆ.
ಹೊಸ ವರ್ಷದ ವಿಜಯೋತ್ಸವದ ವಿಜಯ ಮಾಲೆ ಎಲ್ಲರ ಕೊರಳಲ್ಲಿ ರಾರಾಜಿಸುತ್ತಿರಲು ಬದುಕಿನಲ್ಲಿ ಆಶಾವಾದಿಗಳಾಗಿರಬೇಕು . ಆಸೆಯ ಸೆಲೆ ಬತ್ತಲು ಬಿಡಬಾರದು ಪ್ರೀತಿಯ ತಂಪು ಒಣಗದಿರಲಿ , ಸತ್ಯ, ನ್ಯಾಯದ ಮಾರ್ಗ ಸದಾ ಹಸಿರಾಗಿರುವಂತೆ ನಿರೀಕ್ಷೆ ಯ ಗುರಿ ಮುಟ್ಟುವವರೆಗೆ ಆಸಕ್ತಿಯಿಂದ ಶಮಿಸ ಬೇಕು
ಪ್ರತಿಯೊಂದು ಆಚರಣೆಯ ಹಿಂದೆ ಭಾವನಾತ್ಮಕತೆಗಳಿರುತ್ತವೆ. ಯುವ ಪೀಳಿಗೆಗೆ ಇದು ಸರಿಯಲ್ಲ ಅದು ಸರಿ ಅಲ್ಲ ಎಂದು ಒತ್ತಡ ಹೇರದೆ ಅಪಾಯವಿಲ್ಲದ ಹೊಸ ವರ್ಷ ಆಚರಿಸಿಕೊಳ್ಳುವಂತೆ ಪ್ರೇರಣೆ ನೀಡುವ ಅಗತ್ಯವಿದೆ. ದೇಶದ ಆಗು ಹೋಗುಗಳೆಲ್ಲವೂ ತರುಣರನ್ನು ಅವಲಂಬಿಸಿದೆ. ಇಂದಿನ ಯುವ ಜನತೆ ತನ್ನ ಕರ್ತವ್ಯವನ್ನು ನೆನಪಿನಲ್ಲಿರಿಸಿಕೊಳ್ಳುವಂತಾಗುವ ವಾತಾವರಣವನ್ನು ಹಿರಿಯರು ನೀಡಬೇಕಾಗಿದೆ. ಡಿ.ವಿ.ಜಿ. ಅವರು ಅಂದಂತೆ ” ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಚಂದ ” ನಮ್ಮ ಸಂಪ್ರದಾಯ ಬದ್ದ ಆಚರಣೆಗಳನ್ನು ಬಿಡದೆ ಹೊಸತನ ಜೀವನದಲ್ಲಿ ಅಳವಡಿಸಿಕೊಳ್ಳೋಣ.
ವರ್ಷದಿಂದ ವರ್ಷಕ್ಕೆ ಹೊಸ ತಿಳುವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿ ಕೊಳ್ಳುತ್ತಾ ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ವೇಗದ ಗತಿ ಬದಲಾಯಿಸಿಕೊಳ್ಳುತ್ತಾ ಬರ ಬೇಕಾದ ಪರಿಸ್ಥಿತಿ ಇಂದು ಎಲ್ಲರ ಎದುರಿಗಿದೆ. ಹಾಗೂ ಅನಿವಾರ್ಯತೆ ಕೂಡ .ಕಾಲ ಬದಲಾಗಿದೆ ಜೊತೆಗೆ ಜನರ ಯೋಚಿಸುವ ದಾಟಿ ಕೂಡ . ಇತರ ಹಬ್ಬಗಳಂತೆ ಹೊಸ ವರ್ಷದ ದಿನ ಜನ ಹೊಸ ಬಟ್ಟೆ ತೊಡುತ್ತಾರೆ. ಪ್ರಮುಖ ದೇವಸ್ಥಾನಗಳಲ್ಲಿ ವಿಪರೀತ ಜನದಟ್ಟಣೆಯಿರುತ್ತದೆ. ಒಟ್ಟಿನಲ್ಲಿ ಸಕಾರಾತ್ಮಕ ಭಾವನೆಗಳು ವಿಷಯಗಳಿಗೆ ಮಹತ್ವ ನೀಡುತ್ತಾ ಹೊಸ ವರ್ಷವನ್ನು ಹೊಸತರದಲ್ಲಿ ಆಚರಿಸುವುದು ಗಮನಾರ್ಹ. 2023 ಎಲ್ಲರ ನೋವು ಮರೆಸಿ ಹೊಸ ಹರುಷ ತರಲಿ ಹೊಸ ವರುಷದ ಹೊಸ ದಿನದ ಆಗಮನ ಎಲ್ಲರ ಜೀವನದಲ್ಲಿ ಶಿಸ್ತು, ಸಂಯಮ, ಪ್ರೀತಿ ಪ್ರೇಮಗಳ ಹದಪಾಕವಾಗಿ ಹೊಸ ಚೈತನ್ಯ ಎಲ್ಲರ ಜೀವನ ದೀಪ್ತಿಯನ್ನು ಬೆಳಗುವಂತಾಗಲಿ. ಆರೋಗ್ಯ ದ ಶ್ರೀ ರಕ್ಷೆಯಿರಲಿ ಎಲ್ಲರ ಹೊಸ ವರ್ಷದ ನವೀನ ಸಂಕಲ್ಪ ಸಾಕಾರಗೊಳ್ಳಲಿ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.