ಕರಾವಳಿಯಲ್ಲಿ ಪ್ರತಿವರ್ಷ ಏನಾದರೂ ಒಂದು ಹೊಸತು ಇದ್ದೇ ಇರುತ್ತದೆ. ಸ್ಥಳೀಯತೆಯನ್ನು ಉಳಿಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಒಂದು ವರ್ಷ ಮೊಸರು ಕುಡಿಕೆ, ಮತ್ತೊಂದು ವರ್ಷ ಪಿಲಿ ನಲಿಕೆ, ಆನಂತರದ ವರ್ಷ ದೇಸೀ ಕಬಡ್ಡಿ, ಮಗದೊಂದು ವರ್ಷ ಹಗ್ಗ ಜಗ್ಗಾಟ… ಹೀಗೆ ಏನಾದರೂ ಒಂದು ಇಲ್ಲಿ ವಿಜೃಂಭಿಸುತ್ತದೆ. ಕಂಬಳಕ್ಕಂತು ಲೆಕ್ಕವಿಲ್ಲ. ಪಕ್ಷಕ್ಕೊಂದು ರಾಜಕಾರಣಿಗೊಂದು ಇಲ್ಲಿ ಕಂಬಳಗಳಿವೆ. ಹೀಗೆ ನಮ್ಮೂರ ಯುವಕರು ಏನಾದರೊಂದು ಕೂಡುಕೂಟದಲ್ಲಿ ಸಂಭ್ರಮಿಸುತ್ತಲೇ ಇರುತ್ತಾರೆ. ಇಲ್ಲಿಯ ಮಂತ್ರಿಗಳು ಎಮ್ಮೆಲ್ಲೆಗಳು ರಾಜಕಾರಣಿಗಳು ಉದ್ಯಮಿಗಳು ಈ ದೇಸಿ ಸಂಭ್ರಮದಲ್ಲಿ ಪಾಲ್ಗೊಳ್ಳುವುದು, ಆಯೋಜಿಸುವುದು ಎಲ್ಲಾ ಇದ್ದೇ ಇದೆ. ಅವುಗಳ ಲಾಭ ನಷ್ಟ ಧರ್ಮ ಜಾತಿ ವೋಟು ಗೀಟು ಪ್ರಯೋಜನಗಳ ಬಗ್ಗೆ ಪಿಎಚ್ಡಿ ಮಾಡಬಹುದಾದ ವಿಷಯ.

ಅದು ಏನೇ ಇರಲಿ, ಈ ಸರಣಿಗೆ ಈ ವರ್ಷ ದೊಡ್ಡಮಟ್ಟದಲ್ಲಿ ಸೇರಿಕೊಂಡದ್ದು ಕೆಸರಿನಲ್ಲಿ ಒಂದು ದಿನ- ಕೆಸರಡೊಂಜಿ ದಿನ! ಕರಾವಳಿಯ ಉದ್ದಕ್ಕೂ ಬೇಸಾಯವಿರುವ, ಇಲ್ಲದ ಗದ್ದೆಗಳನ್ನೆಲ್ಲಾ ಹುಡುಕಿ ಹುಡುಕಿ ಉಳುಮೆ ಮಾಡಿ ಹದಗೊಳಿಸಿ, ಕಟ್ಟಪುಣಿಯಲ್ಲಿ ಚಪ್ಪರ ಎಬ್ಬಿಸಿ ಬಣ್ಣ ಬಣ್ಣದ ಪತ್ರಪತಾಕೆ ಹಾರಿಸಿ ಶೃಂಗರಿಸಿ ನಮ್ಮ ಯುವಕ ಯುವತಿಯರು ಕೆಸರಿಗಿಳಿಯುವ ತವಕ ನೋಡಿದರೆ ಯಾರೇ ಆಗಲಿ ಸಹಜವಾಗಿ ಖುಷಿಯಾಗುತ್ತದೆ. ಕೆಸರಿಲ್ಲದ ನೆಲದ ಮೇಲೆ ನಡೆಯುವ ಹಗ್ಗ ಜಗ್ಗಾಟ, ತ್ರೋಬಾಲ್, ಕಬ್ಬಡ್ಡಿ, ಓಟ ಓಡಾಟ ಎಲ್ಲವೂ ಕೆಸರಿನಲ್ಲಿ ಮೇಳಯಿಸುತ್ತದೆ. ಹೌದು, ಮೇಲ್ನೋಟಕ್ಕೆ ಮಳೆಗಾಲದ ಮಣ್ಣು ಕೆಸರು ಸಂಬಂಧದ ಈ ಮೇಲಿನ ಉಳಿದ ಆಟಗಳಿಗಿಂತ ಇದು ಭಿನ್ನ. ದೇಹ ದಣಿಯುತ್ತದೆ, ಮನಸ್ಸು ತಣಿಯುತ್ತದೆ. ಎಲ್ಲದಕ್ಕಿಂತ ಹೆಚ್ಚು ಇದೇ ಕೆಸರಿನಲ್ಲಿ ಹೊರಳಾಡುವ ಯುವಕರು ಮಕ್ಕಳು ಮತ್ತು ಅವರನ್ನು ಆಡಿಸುವ ಆಯೋಜಕರು, ಪ್ರಾಯೋಜಕರು ಕರಾವಳಿ ಗದ್ದೆಗಳ ಮೇಲಿನ ಅನ್ನದ ಕೃಷಿಯ ಬಗ್ಗೆ ಯೋಚಿಸಿದ್ದೀರಾ?
ಹೌದು ಒಂದು ಮುಡಿ ಗದ್ದೆಗೆ ನೂರು ವರ್ಷ ತುಂಬಿದ್ದರೆ ಆ ಗದ್ದೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನಮ್ಮ ಹಿರಿಯರು ಕಾಲಿಟ್ಟಿದ್ದಾರೆ. ಪಾತುಮಕ್ಕನೂ ಪಾಡ್ದನ ಹೇಳಿದ್ದಾರೆ. ಬಾಯಮ್ಮನೂ ನೇಜಿ ನೆಟ್ಟಿದ್ದಾರೆ. ನಡುಮನೆಯ ರಾಧಕ್ಕನೂ ತುಳು ಕಬಿತೆಗೆ ಓ ಬೇಲೇ.. ಎಂದಿದ್ದಾರೆ. ಇಡೀ ಸಮುದಾಯಗಳನ್ನು ಸೇರಿಸುತ್ತಿದ್ದ ಇಂತಹ ಬಹಳಷ್ಟು ಗದ್ದೆಗಳೆಲ್ಲ ಹಡಿಲು ಬಿದ್ದಿವೆ. ಒಂದು ಕಾಲದಲ್ಲಿ ಪಟ್ಟಾಂಗದ ಕಟ್ಟೆಯಾಗುತ್ತಿದ್ದ, ಊರ ಜನರನ್ನು ಜೋಡಿಸುತ್ತಿದ್ದ ಕಟ್ಟಪುಣಿಗಳೆಲ್ಲ ಡಾಂಬರು ರಸ್ತೆಗಳಾಗಿದೆ. ಕೆಲವು ಗದ್ದೆಗಳು ಕೆಂಪು ಮಣ್ಣು ತುಂಬಿಕೊಂಡು ಶಾಶ್ವತ ಸ್ಥಾವರವಾಗಲು ಸಿದ್ಧಗೊಳ್ಳುತ್ತಿವೆ. ಅದೇ ರಾಶಿ ರಾಶಿ ಕಟ್ಟಡದ ಅಡಿಯಲ್ಲಿ ನಮ್ಮ ಪರಂಪರೆಯ ಜೀವದಾರಿ ಅನ್ನದ ಹುಟ್ಟು ಇತ್ತು. ಅವು ಶ್ರಮ ಬೆವರು ದುಡಿಮೆಯ ಅಂಕಣಗಳಾದ್ದವು. ಇದೇ ಗದ್ದೆಗೆ ಇಳಿಯುವ ನೀವು ನಮ್ಮ ಅನ್ನದಾರಿಯ ಪರಂಪರೆಯ ಸೂಕ್ಷ್ಮತೆಯನ್ನು ಶಾಶ್ವತವಾಗಿ ದಾಖಲಿಸಬೇಕಾದರೆ ದಯವಿಟ್ಟು ನೀವು ಆಟ ಆಡಿದ ಆ ಗದ್ದೆಯನ್ನು ನೀವೇ ಬಿತ್ತುವ ನೀವೇ ನೆಡುವ ನೀವೇ ಕೊಯ್ಯುವ ಆಟ ಪಾಠವನ್ನು ಆಯೋಜಿಸಿ. ಇವತ್ತು ಸಂಭ್ರಮದ ನೆಪದಲ್ಲಿ ಕೆಸರಿಗಿಳಿಯುವ ನೂರಾರು ಮಕ್ಕಳಿಗೆ ನೀವು ಅದೇ ಗದ್ದೆಯ ಕಟ್ಟಪುಣಿಯಲ್ಲಿ ಮಧ್ಯಾಹ್ನ ಅಡಿಕೆ ಹಾಳೆಯ ಬಟ್ಟಲಿಗೆ ಬಡಿಸುವ ಗಂಜಿ ಮತ್ತು ತೆಂಗಿನ ಕಾಯಿಯ ಚಟ್ನಿಯ ಹುಟ್ಟು ದಾರಿ ಗೊತ್ತಾಗಲಿ.
ಕೆಸರಡೊಂಜಿ ದಿನ ಸಾರ್ಥಕವಾಗಬೇಕಾದರೆ ನೀವು ನೆಟ್ಟ ಆ ನೇಜಿ ತೆನೆ- ಕೊರಳು ಬಿಡುವ ಹಾಗೆ ಆಗಲಿ. ಪುದ್ವಾರ್ ಎನ್ನುವ ಮತ್ತೊಂದು ಸಂಭ್ರಮ ಇದೇ ರೀತಿ ಸಾಮೂಹಿಕವಾಗಿ ನಡೆಯಲಿ. ಅನ್ಯತಾ ಭಾವಿಸಬೇಡಿ.
ಬರಹ : ನರೇಂದ್ರ ರೈ ದೇರ್ಲ