‘ಇಂಗು ತೆಂಗು ಇವೆರಡಿದ್ದರೆ, ಮಂಗವೂ ಅಡುಗೆ ಮಾಡಬಲ್ಲದು’ ಈ ನಾಣ್ಣುಡಿಯು ನಮ್ಮ ದೈನಂದಿನ ಅಡುಗೆ, ಅಭ್ಯಾಸ, ಹವ್ಯಾಸಗಳಲ್ಲಿ ತೆಂಗಿನ ಎಣ್ಣೆಯ ಬಳಕೆಯ ಮಹತ್ವವನ್ನು ಹೇಳುತ್ತವೆ. ಮರದಿಂದ ಕಾಯಿ ಕಿತ್ತ 2-3 ದಿನಗಳಲ್ಲಿ ಹಸಿ ತೆಂಗಿನ ಕಾಯಿಯಿಂದ ಹಾಲು ಸಂಸ್ಕರಿಸಿ, ಉತ್ಪಾದಿಸುವ ಎಣ್ಣೆಯನ್ನು ವರ್ಜಿನ್ (ತಾಜಾ)ತೆಂಗಿನ ಎಣ್ಣೆ ಎನ್ನುವರು. ವರ್ಜಿನ್ ತೆಂಗಿನ ಎಣ್ಣೆಯಲ್ಲಿ, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳು ಹೇರಳವಾಗಿರುವುದರಿಂದ ನಮ್ಮ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಭಾಣವಾಗಬಲ್ಲುದು. ಖ್ಯಾತ ಹೃದಯ ರೋಗ ತಜ್ಞರೂ ಹಾಗೂ ಸಂಸದರೂ ಆದ ಡಾ. ಸಿ.ಎನ್ ಮಂಜುನಾಥರವರು ಅಭಿಪ್ರಾಯ ಪಡುವಂತೆ, ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಕೊಬ್ಬಿನ ಅಂಶ ಕಡಿಮೆ ಮಾಡಿ ರಕ್ತನಾಳಗಳ ಕಾರ್ಯ ನಿರ್ವಹಣೆಗೂ ನೆರವಾಗಬಲ್ಲದು.

ಅಂತರರಾಷ್ಟ್ರೀಯ ಖ್ಯಾತಿಯ ಆರೋಗ್ಯ ತಜ್ಞರಾದ ಡಾ. ಬಿ.ಎಂ ಹೆಗ್ಡೆಯವರು ತೆಂಗಿನ ಎಣ್ಣೆ ಆರೋಗ್ಯಕ್ಕೆ ಬಹಳ ಉಪಯುಕ್ತ ಎಂದು ತಿಳಿಸಿರುತ್ತಾರೆ. ವರ್ಜಿನ್ ತೆಂಗಿನ ಎಣ್ಣೆಯನ್ನು ಆಹಾರದಲ್ಲಿ ಬಳಸುವುದರಿಂದ ಜೀರ್ಣಶಕ್ತಿ ವೃಧ್ಧಿ, ದಂತ ಮೂಳೆ ರಕ್ಷಣೆ, ಮೂತ್ರಪಿಂಡಗಳ ರಕ್ಷಣೆ, ಮಧುಮೇಹ ಸುಧಾರಣೆ, ಮಲಬಧ್ಧತೆ ನಿವಾರಣೆ, ಕೂದಲು ಹಾಗೂ ಚರ್ಮದ ರಕ್ಷಣೆ ಇತ್ಯಾದಿ ಆಗಬಲ್ಲದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಅಲ್ಲದೇ ಒಣ ತುಟಿ ಸುಧಾರಣೆಗೆ ಲಿಪ್ ಬಾಮ್ ಆಗಿಯೂ, ವೃಧ್ಧರಿಗೆ ಸ್ವಲ್ಪ ಸಕ್ಕರೆ ಉಪ್ಪು ಬೆರೆಸಿ ಬಾಡಿ ಸ್ಕ್ರಬ್ ಆಗಿಯೂ, ಅಪಸ್ಮಾರ ಸುಧಾರಣೆಯಲ್ಲೂ ಬಳಸಬಹುದೆಂದು ಕಂಡುಬಂದಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನ ಎಣ್ಣೆಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಈಗಿನ ಯುವ ಉದ್ಯಮಿಗಳು ತೆಂಗಿನ ತಾಜಾ ಎಣ್ಣೆ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದ ಆಯಾ ಭಾಗದಲ್ಲಿ ತಾಜಾ ತೆಂಗಿನ ಎಣ್ಣೆಯು ಹೇರಳವಾಗಿ ದೊರೆಯುತ್ತಿದೆ.