ಬೆಂಗಳೂರು ಬಂಟರ ಸಂಘದ ಸಭಾಂಗಣದಲ್ಲಿ ಜುಲೈ 17 ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಹಿತೈಷಿಗಳು ಆಯೋಜಿಸಿದ್ದ ‘ಸಂಕಲ್ಪ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಬಿ.ವೈ ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಾಭಿಮಾನದಿಂದ ಹುಟ್ಟೂರು ಬೈಂದೂರನ್ನು ಬಿಟ್ಟು ದೂರದ ಬೆಂಗಳೂರಿನಲ್ಲಿ ನೆಲೆಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿರುವ ಬೈಂದೂರಿನ ಬೆಂಗಳೂರು ನಿವಾಸಿಗರೆಲ್ಲರೂ ಸೇರಿ ಒಬ್ಬ ಸಾಮಾನ್ಯ ಶಾಸಕರ ಪರವಾಗಿ ನಿಂತು, ಅಭಿಮಾನದಿಂದ ಕರಾವಳಿಯ ಸಂಸ್ಕೃತಿಯಾದ ಭಜನೆ ಮತ್ತು ಯಕ್ಷಗಾನದ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರಾವಳಿ ಭಾಗದ ಬಂಧುಗಳು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಬಾಂಧವ್ಯ ಎಂದಿಗೂ ಮರೆಯಲಾಗದು, ಅಲ್ಲದೇ ಬೈಂದೂರು ಅಭಿವೃದ್ಧಿಗೆ ಹಾಗೂ ಅಲ್ಲಿನ ಸಂಸ್ಕೃತಿ ರಕ್ಷಣೆಗೆ ಸಂಘಟಿತರಾಗಿರುವ ಎಲ್ಲರೂ ಸಹ ಸ್ವಚ್ಛ ಸುಂದರ, ಸಮೃದ್ಧ ಬೈಂದೂರನ್ನು ಕಟ್ಟುವ ನಿಟ್ಟಿನಲ್ಲಿ ಜನಪರ ಕಳಕಳಿಯುಳ್ಳ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಜೊತೆ ಕೈಜೋಡಿಸಿ ಶ್ರಮಿಸಬೇಕೆಂಬ ಮನವಿ ಮಾಡಿ, ಸಂಘಟಿತ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ರಾಮ ಕುಣಿತ ಭಜನೆ, ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಯಶಸ್ವಿಯಾಗಿ ನೆರವೇರಿತು. ಈ ಸಂದರ್ಭದಲ್ಲಿ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಎಂ.ಡಿ ಲಕ್ಷ್ಮೀನಾರಾಯಣ್, ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಸಿ.ಎ ಅಶೋಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯ್ ಶೆಟ್ಟಿ ಹಾಲಾಡಿ, ಮಾಜಿ ಕೋಶಾಧಿಕಾರಿ ಎಚ್ ಅಮರನಾಥ್ ಶೆಟ್ಟಿ, ಅಭಯ ಫೌಂಡೇಶನ್ ನ ಸ್ಥಾಪಕ ಉಮೇಶ್ ಶೆಟ್ಟಿ ಮಂದಾರ್ತಿ, ಡಾ| ದೀಪಕ್ ಶೆಟ್ಟಿ ಬಾರ್ಕೂರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ, ಶಿವಾನಂದ ಶೆಟ್ಟಿ ಸೇರಿದಂತೆ ಬೈಂದೂರು ಕ್ಷೇತ್ರದ ಬಂಧುಗಳು ಉಪಸ್ಥಿತರಿದ್ದರು.