ನಾಟಕ ರಂಗಭೂಮಿ ಕಂಡ ಮಹಾನ್ ನಿರ್ದೇಶಕ, ರಂಗಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬಯಿ ಮಹಾನಗರದಲ್ಲಿ ಸಂಪಾದಿಸಿದ ಜನಪ್ರಿಯತೆ, ಅವರ ನಿರ್ದೇಶನ ಪ್ರತಿಭೆ ಮರೆಯಲಾಗದು. ತುಳು ರಂಗಭೂಮಿ ಹಾಗೂ ಕೆಲವು ಅಪರೂಪದ ಪಾತ್ರ ಚಿತ್ರಣಗಳ ಕನ್ನಡ ನಾಟಕ ನಿರ್ದೇಶನಗಳ ಮೂಲಕ ರಂಗಭೂಮಿಯ ದೈತ್ಯ ಪ್ರತಿಭೆ ಎಂದು ಪ್ರಶಂಸೆ ಪಡೆದವರು.
ಇತ್ತೀಚೆಗೆ ತನ್ನ ಹುಟ್ಟೂರಲ್ಲೇ ಇದ್ದುಕೊಂಡು ಅಲ್ಲಿಯೂ ಅನೇಕ ನಾಟಕ ತಂಡಗಳಿಗೆ ನಿರ್ದೇಶಕರಾಗಿ ದುಡಿಯುತ್ತಾ ವ್ಯಾಪಕ ಪ್ರಸಿದ್ಧಿ ಪಡೆದಿರುತ್ತಾರೆ. ಶ್ರೀಯುತರ ನಿರ್ದೇಶನದಲ್ಲಿ ಪಾತ್ರಗಳು ಜೀವ ತಳೆದು ಭಾವತುಂಬಿ ಮಾತಾಡುತ್ತವೆ. ಹೊಸ ಕಲಾವಿದನನ್ನು ತನ್ನ ನಿರ್ದೇಶನ ಸಾಮರ್ಥ್ಯದಿಂದ ಪ್ರಬುದ್ಧತೆಯ ಅಭಿನಯ ಪಡೆದು ಕಲಾವಿದರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಅವರನ್ನು ನಾಟಕ ಗುರು ಎಂದೇ ಸಂಬೋಧಿಸುತ್ತಾರೆ.
ಹುಟ್ಟುತ್ತಲೇ ಒಬ್ಬಾತ ಪರಿಣತ ಕಲಾವಿದನಾಗಿರುವುದಿಲ್ಲ. ಅವನನ್ನು ತಿದ್ದಿ ತೀಡಿ ಒಬ್ಬ ಪರಿಪೂರ್ಣ ಕಲಾವಿದನನ್ನಾಗಿ ರೂಪಿಸಬೇಕಾಗುತ್ತದೆ. ಶಿಲ್ಪಿಯೊಬ್ಬ ಕಾಟುಶಿಲೆಯನ್ನು ಆಕರ್ಷಕ ಮೂರುತಿಯನ್ನಾಗಿ ರೂಪಿಸುವ ರೀತಿ ನಿರ್ದೇಶಕನಲ್ಲೂ ಅಂಥಾ ಮಂತ್ರ ಸ್ಪರ್ಷ ಇರಬೇಕಾಗುತ್ತದೆ. ಅಂಥಹ ಸ್ಪರ್ಷಮಣಿ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು. ಇವರು ಮೂಲತಃ ಮೂಲ್ಕಿ ಸಮೀಪದ ಕೆಂಚನಕೆರೆಯವರು. ಬಳ್ಕುಂಜೆಗುತ್ತು ದಿವಂಗತ ದಾಬಾ ಶೆಟ್ಟಿ ಮತ್ತು ಕೆಂಚನಕೆರೆ ಶ್ರೀಮತಿ ಸುನಂದಾ ಡಿ ಶೆಟ್ಟಿ ದಂಪತಿಯರಿಗೆ ಮೂಲ್ಕಿ ಕೆಂಚನಕೆರೆ ಹೊಸಮನೆಯಲ್ಲಿ ಜನಿಸಿದರು. ಕುಬೆವೂರು ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯವರೆಗೆ ಕಲಿತ ಇವರು ಮುಂದಿನ ಪ್ರೌಢ ಶಿಕ್ಷಣವನ್ನು ಮುಂಬಯಿಯಲ್ಲಿ ಪಡೆದುಕೊಂಡರು.
ತನ್ನ ಬಾಲ್ಯದ ದಿನಗಳಿಂದಲೇ ರಂಗಭೂಮಿ ಕಡೆಗೆ ಆಕರ್ಷಿತನಾಗಿದ್ದ ಹುಡುಗ ಮುಂಬಯಿ ವಾಸದ ಪ್ರಾರಂಭದ ವರ್ಷಗಳಲ್ಲಿ ತನ್ನ ತೀರ್ಥರೂಪರ ಹೊಟೇಲ್ ವ್ಯವಹಾರದಲ್ಲಿ ಸಹಕರಿಸುತ್ತಿದ್ದರು. ಬಳಿಕ ನಗರದ ಅನೇಕ ಕಡೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡರು. ಮುಂದೆ ತನ್ನದೇ ವ್ಯಾಪಾರ ಆರಂಭಿಸಬೇಕೆನ್ನುವ ಹಂಬಲ ಇದ್ದ ಕೆಂಚನಕೆರೆ ಅವರು ಜೆ.ಕೆ. ಎಂಟರ್ ಪ್ರೈಸಸ್ ಎಂಬ ಪೀಠೋಪಕರಣಗಳ ಶೋ ರೂಮ್ ಸ್ಥಾಪಿಸಿದರು.
ತನ್ನ ವ್ಯಾಪಾರ ವಹಿವಾಟುಗಳ ನಡುವೆಯೂ ಸಮಯ ಕಲ್ಪಿಸಿಕೊಂಡು ನಗರದಲ್ಲಿ ಪ್ರದರ್ಶನಗೊಳ್ಳುವ ವಿವಿಧ ಭಾಷೆಗಳ ನಾಟಕಗಳನ್ನು ಕುತೂಹಲ ಜಿಜ್ಞಾಸೆ ತುಂಬಿದ ಕಣ್ಣುಗಳಿಂದ ವೀಕ್ಷಿಸತೊಡಗಿದರು. ಒಂದೊಂದೂ ನಾಟಕದ ವಿಶೇಷ ಅಂಶಗಳನ್ನು ಬಹಳ ಸೂಕ್ಷ್ಮ ಮತ್ತು ಕುಶಾಗ್ರಮತಿಯ ಕೆಂಚನಕೆರೆ ಅವರು ಗ್ರಹಿಸಿ ಕೊಳ್ಳತೊಡಗಿದರು. ಬಳಿಕ ತನ್ನ ಅದಮ್ಯ ಬಯಕೆಯನ್ನು ಅದುಮಿಟ್ಟುಕೊಳ್ಳಲಾಗದೆ ನಾಟಕ ರಂಗಭೂಮಿಯ ನಟನೆ, ನಿರ್ದೇಶನ, ರಂಗ ವಿನ್ಯಾಸ, ಬೆಳಕು ದೃಶ್ಯ ಸಂಯೋಜನೆ, ಸಂಗೀತ, ಪಾತ್ರಾಭಿವ್ಯಕ್ತಿ, ಪಾತ್ರಚಲನೆ, ಧ್ವನಿ ಹೀಗೆ ಎಲ್ಲಾ ವಿಭಾಗದ ಅನುಭವ ಸಂಪಾದಿಸಿ ತಾನೊಬ್ಬ ಪ್ರಬುದ್ಧ ನಿರ್ದೆಶಕನಾಗಬೇಕೆಂಬ ಇಚ್ಚೆಯಿಂದ ಬಲವಾಗಿ ನಾಟಕ ರಂಗಕ್ಕೆ ಧುಮುಕಿದರು. ಆ ಹೊತ್ತಿಗೆ ಲೇಖಕ, ಕವಿ, ನಾಟಕಗಾರನಾಗಿ ಪ್ರಸಿದ್ಧಿಯಲ್ಲಿದ್ದ ನಂದಳಿಕೆ ನಾರಾಯಣ ಶೆಟ್ಟರ ಸ್ನೇಹ ಸಂಪಾದಿಸಿ ಜೊತೆಗೂಡಿ ಘಾಟ್ ಕೋಪರ್ ನಲ್ಲಿ ಪಲ್ಲವಿ ಆರ್ಟ್ ಎಂಬ ಕಲಾ ಸಂಸ್ಥೆಯನ್ನು ಹುಟ್ಟು ಹಾಕಿ ನಂದಳಿಕೆ ನಾರಾಯಣ ಶೆಟ್ಟರು ಬರೆದಿದ್ದ ನಾಟಕಗಳಿಗೆ ನಿರ್ದೇಶನ ನೀಡತೊಡಗಿದರು.
ಮಮತನ ಮದ್ಮೆ, ಅಯ್ಯಯ್ಯ ಎಂಚ ಪೊರ್ಲಾಂಡ್ ನಾಟಕಗಳ ನಿರ್ದೇಶನ ಜನರ ಅಪಾರ ಪ್ರಶಂಸೆಗೆ ಪಾತ್ರವಾಯಿತು. ಸದಾನಂದ ಸುವರ್ಣ ಅವರ ಗುಡ್ಡೆದ ಭೂತ ನಾಟಕ ನಿರ್ದೇಶನ ಕುರಿತಂತೆ ನಾಟಕ ವಿಮರ್ಶಕರು ಹೊಗಳಿ ಕೊಂಡಾಡಿದರು. ಮರ್ಯಾದಿ ಒರಿಪುಲೆ, ದೆವ್ವದ ಮನೆ ಮೊದಲಾದ ನಾಟಕಗಳಲ್ಲಿ ನಟಿಸಿ ನಟನಾಗಿಯೂ ಗುರುತಿಸಿಕೊಂಡರು. ನಂತರ ರಂಗಧ್ವನಿ ಎಂಬ ನಾಟಕ ತಂಡವನ್ನು ಕಟ್ಟಿಕೊಂಡು ಅನೇಕ ಹೆಸರಾಂತ ನಾಟಕಗಾರರ ನಾಟಕಗಳಿಗೆ ನಿರ್ದೇಶನ ನೀಡಿ ನಾಟಕ ಕಲಾಭಿಮಾನಿಗಳ ಮನಸ್ಸನ್ನು ಗೆದ್ದರು. ಮುಂಬಯಿಯ ಹೆಸರಾಂತ ಕವಿ, ನಾಟಕಗಾರ ಶ್ರೀ ಶಿಮುಂಜೆ ಪರಾರಿ ಅವರ ಮರಾಠಿ ನಾಟಕಗಳ ತುಳು ರೂಪಾಂತರದ ಅನೇಕ ನಾಟಕಗಳಿಗೆ ನಿರ್ದೇಶನ ನೀಡಿ ಮೂಲ ನಾಟಕಗಾರರ ಪ್ರಶಂಸೆಗೆ ಪಾತ್ರರಾದರು. ಕವಿತಾ, ಜೋಕುಲು ಬಾಲೆಲು, ಯಾರಿಗೂ ಹೇಳೋದು ಬ್ಯಾಡಾ ಎಂಬ ನಾಟಕಗಳನ್ನು ಜನಪ್ರಿಯತೆಗೊಳಿಸುವಲ್ಲಿ ಕೆಂಚನಕೆರೆ ನಿರ್ದೇಶನ ದೊಡ್ಡ ಪಾತ್ರ ವಹಿಸಿತು. ನಗರದಲ್ಲಿ ಕಲಾತ್ಮಕ ಪ್ರಯೋಗಾತ್ಮಕ ನಾಟಕ ನೀಡಿ ಜನರಿಗೆ ಮನರಂಜನೆ ಜೊತೆಗೆ ಬುದ್ಧಿಗೆ ಗ್ರಾಸ ನೀಡುವ ವಿಚಾರ ಪ್ರಚೋದಕ ಉತ್ತಮ ಸಂದೇಶಗಳ ನಾಟಕ ನೀಡಿ ಜಗದೀಶ್ ನಾಟಕ ಪ್ರೇಮಿಗಳ ಮನೆ ಮಾತಾದರು.
ಕೆಂಚನಕೆರೆ ನಿರ್ದೇಶನ ಎಂದರೆ ಇತರರಿಗೆ ಭಿನ್ನವಾಗಿ ತನ್ನತನದಿಂದ ಕೂಡಿದ್ದು ರಂಗಭೂಮಿ ಪ್ರತಿಭೆಗಳಲ್ಲಿ ವಿಶಿಷ್ಟ ಹಾಗೂ ಆದರದ ಸ್ಥಾನ ಪಡೆದಿದ್ದಾರೆ. ಸುಮಾರು ಎಂಬತ್ತು ತೊಂಬತ್ತರ ದಶಕದಲ್ಲಿ ಮುಂಬಯಿ ನಗರದ ಯಕ್ಷಗಾನ ರಂಗದಲ್ಲಿ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟರು ಭಾಗವತಿಕೆ ಮತ್ತು ನಿರ್ದೆಶನದಲ್ಲಿ ಗಳಿಸಿದ ಅಪಾರ ಜನಪ್ರಿಯತೆಯಂತೆಯೇ ಅದೇ ಪ್ರಸಿದ್ಧಿಯನ್ನು ನಾಟಕ ರಂಗ ಭೂಮಿಯ ನಟನೆ ನಿರ್ದೇಶನದಲ್ಲಿ ಜಗದೀಶ್ ಕೆಂಚನಕೆರೆ ಗಳಿಸಿದ್ದರು. ಕೆಂಚನಕೆರೆ ನಿರ್ದೇಶನದ ನಾಟಕಗಳೆಂದರೆ ನಾಟಕ ಪ್ರೇಮಿಗಳು ಮುಗಿ ಬೀಳುತ್ತಿದ್ದರು. ಸಭಾಭವನ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ತನ್ನದೇ ವಿಶಿಷ್ಟ ಪರಿಕಲ್ಪನೆಯಲ್ಲಿ ಪಾತ್ರಗಳನ್ನು ಪಡಿಮೂಡಿಸಿ ಪ್ರದರ್ಶನ ಪಡೆವ ರಂಗಭೂಮಿಯ ಜಾದೂಗಾರ ಕೆಂಚನಕೆರೆ ಅವರು. ಸುಮಾರು ಮುನ್ನೂರಕ್ಕೂ ಹೆಚ್ಚು ವೈವಿಧ್ಯಮಯ ಕಥಾ ಹಂದರವನ್ನು ಹೊಂದಿರುವ ನಾಟಕಗಳನ್ನು ಕೆಂಚನಕೆರೆ ನಿರ್ದೇಶಿಸಿ ಭೇಷ್ ಎನಿಸಿಕೊಂಡಿದ್ದಾರೆ. ರಾಷ್ಟ್ರ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ನಿರ್ದೇಶನ, ಬೆಳಕು ವಿನ್ಯಾಸ, ರಂಗ ರಚನೆಗೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಧೀಮಂತರಿವರು. ಇವರ ನಿರ್ದೇಶನದ ಸತ್ಯದ ಸಿರಿ, ಕನಸ್ ಮನಸ್ ನಾಟಕಗಳು ತುಳು ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿವೆ. ಇವರದು ಭಾಷಾಂತರ ನಾಟಕಗಳನ್ನು ನಿರ್ದೆಶಿಸುವುದರಲ್ಲಿ ಅಸಾಮಾನ್ಯ ಪ್ರತಿಭೆ. ಇವರೇ ಬರೆದ ತೆಂಡೆಲ್ ಮೀಟಿಂಗ್, ರಾಂಗ್ ನಂಬರ್, ಮುಗಲ್, ಪಟ್ಟ್ ದಾಂತಿನ ಜೋಕುಲು ಇನ್ನೂ ಕೆಲವು ನಾಟಕಗಳು ಪ್ರದರ್ಶನಗೊಂಡು ಇವರ ನಾಟಕ ರಚನೆಯ ವಿಶೇಷ ಪ್ರತಿಭೆಯನ್ನು ಪರಿಚಯಿಸಿದೆ.
ವಿಜಯಾ ಕಲಾವಿದರು ಕಿನ್ನಿಗೋಳಿ ಇವರ ಪ್ರದರ್ಶನದ ಹರೀಶ್ ಪಡುಬಿದ್ರಿ ರಚನೆಯ ನಾಟಕಗಳು ಸೇರಿದಂತೆ ಹೆಚ್ಚಿನ ನಾಟಕಗಳನ್ನು ನಿರ್ದೇಶಿಸಿಕೊಂಡು ಬಂದಿದ್ದಾರೆ. ಇವು ಒಳನಾಡು ಹೊರನಾಡುಗಳಲ್ಲಿ ದಾಖಲೆ ಪ್ರದರ್ಶನ ಕಂಡಿವೆ. ಕೆಲವು ತುಳು ಚಿತ್ರಗಳಿಗೂ ನಿರ್ದೇಶನ ನೀಡಿದ ಕೀರ್ತಿ ಇವರಿಗಿದೆ. ಇವರು ಬರೆದ ಕೆಂಪು ಬಾವುಟ, ಬಂಟೆರ್ ಕೋಡೆ ಇನಿ ಎಲ್ಲೆ ನಾಟಕಗಳು ಪ್ರಸಿದ್ಧಿ ಪಡೆದಿದ್ದವು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿ ನಾಟಕ ಪ್ರೇಮಿಗಳನ್ನು ರಂಜಿಸಿದ ಕೆಂಚನಕೆರೆ ಅವರು ನಂತರದ ವರ್ಷಗಳಲ್ಲಿ ಹುಟ್ಟೂರಿನ ಹೆಸರಾಂತ ನಾಟಕ ತಂಡಗಳ ಪ್ರದರ್ಶನಗಳಿಗೆ ನಿರಂತರ ನಿರ್ದೇಶನ ನೀಡುವ ಮೂಲಕ ಅಸಂಖ್ಯಾತ ನಾಟಕ ಪ್ರೇಮಿಗಳ ಹೃದಯ ಸಿಂಹಾಸನ ವಿರಾಜ ಮಾನರಾಗಿದ್ದಾರೆ. ರಂಗತರಂಗ ಕಾಪು, ಶಾರದಾ ಆರ್ಟ್ಸ್ ಮಂಜೇಶ್ವರ, ತುಳುವೆರೆ ತುಡಾರ್ ಕಲಾವಿದರು ಸುರತ್ಕಲ್ ನಾಟಕ ತಂಡಗಳಿಗೆ ನಿರ್ದೇಶನ ನೀಡುವ ಮೂಲಕ ವ್ಯಾಪಕ ಪ್ರಸಿದ್ದಿಗೆ ಪಾತ್ರರಾಗಿದ್ದಾರೆ. ಐಸಿರಿ ಕಲಾವಿದರು ವೇಣೂರು ಹಾಗೂ ನಿಮಿಷ ಕಲಾವಿದರು ಕಟಪಾಡಿ ನಾಟಕ ತಂಡಗಳಿಗೂ ನಿರ್ದೇಶನ ನೀಡಿದ ಹೆಗ್ಗಳಿಕೆ ಇವರಿಗಿದೆ.
ಇವರು ಕೆಲವು ಹಿಂದಿ, ಕನ್ನಡ ಜಾಹೀರಾತು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಧ್ವನಿ, ಜಾಹೀರಾತುಗಳಿಗೆ ಕಂಠದಾನ ಮಾಡಿದ್ದಾರೆ. ಕಲಾ ತಪಸ್ವಿ, ನಾಗಿ, ಓಲು ಒಟ್ಟಾತೆರಾ, ತಿಲಕೆ ತಿರ್ಗಾಯೆ, ಬೈರಾಸ್ ಭಾಸ್ಕರೆ, ಲೆಕ್ಕ ತತ್ತಿಬೊಕ್ಕ ನಾಟಕಗಳು ಹೆಸರು ಮಾಡಿವೆ. ನಿನೆಪು ದೀಲೆ, ಸಾದಿ ತಪ್ಪೊಡ್ಚಿ, ಏರಾ ಉಲ್ಲೆರ್, ಮುತ್ತು ಮನಿಪುಜೆ, ವೈದ್ಯೋ ನಾರಾಯಣೋ ಹರಿ, ಭೂತಾಳ ಪಾಂಡ್ಯ, ಉಲಯಿಡೊಂಜಿ ಪಿದಾಯಿಡೊಂಜಿ ಹೀಗೆ ಇವರು ನಿರ್ದೇಶಿಸಿದ ನಾಟಕಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಜೀವನದ ಬಹು ಭಾಗವನ್ನು ರಂಗಭೂಮಿ ಸಖ್ಯದಲ್ಲೇ ಕಳೆದ ಕೆಂಚನಕೆರೆ ಮುಡಿಗೆ ಅನೇಕ ಪ್ರಶಸ್ತಿ ಗರಿಗಳು ಅಲಂಕೃತವಾಗಿವೆ. ತುಳು ನಾಟಕ ಕಲಾವಿದರ ಒಕ್ಕೂಟ ಕುಡ್ಲ ಅವರು ನಾಟಕರಂಗ ಕಲಾನಿಧಿ ಬಿರುದು ನೀಡಿ ಗೌರವಿಸಿದ್ದಾರೆ. ನಂದಿಕೇಶ್ವರ ನಾಟಕ ಮಂಡಳಿ ಮಂಗಳೂರು ಇವರು ನಿರ್ದೇಶನ ವಿಚಕ್ಷಣ ಬಿರುದು ನೀಡಿದ್ದಾರೆ. ಖ್ಯಾತ ನಾಟಕಕಾರ ನಿರ್ದೇಶಕ ಸಂಘಟಕ ದಿ. ಪಿ.ಬಿ ರೈ ಸಂಸ್ಮರಣಾ ಪ್ರಶಸ್ತಿ ನಂದಿಕೇಶ್ವರ ನಾಟಕ ಸಂಘದ ಮುಖಾಂತರ ದೊರಕಿದೆ.
ಹೀಗೆ ರಂಗಭೂಮಿ ಸಹವಾಸವನ್ನು ಜೀವನದಲ್ಲಿ ತಪಸ್ಸೆಂದು ಸ್ವೀಕರಿಸಿ ತುಳು ಭಾಷೆ ಸಂಸ್ಕೃತಿಯ ಉಳಿವು ಉದ್ದಾರಕ್ಕೆ ಶ್ರಮಿಸಿದ ಈ ಕಲಾವಿದನಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಬೇಕಿದೆ. ಸಂಬಂಧ ಪಟ್ಟ ಸಂಸ್ಥೆ ಹಾಗೂ ಶಾಸಕರುಗಳು ಇವರನ್ನು ಶೀಘ್ರ ಗುರುತಿಸಲಿ ಇವರ ಭವಿಷ್ಯದ ಕಲಾಜೀವನ ಸಮೃದ್ಧಿ ನೆಮ್ಮದಿಯಿಂದ ಕೂಡಿರಲೆಂದು ನಾವೆಲ್ಲ ಹಾರೈಸೋಣ. ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಇವರ ಸಾಧನೆಯನ್ನು ಶ್ಲಾಘಿಸುತ್ತಾ ಭವಿಷ್ಯದಲ್ಲಿ ಉತ್ತರೋತ್ತರ ಶ್ರೇಯಸ್ಸನ್ನು ಬಯಸುತ್ತದೆ.
ಶುಭವಿರಲಿ ಸರ್ವರಿಗೆ.
ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು