‘ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಿ’
ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ನೇತೃತ್ವದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ರೆಡ್ಕ್ರಾಸ್ ಮಂಗಳೂರು, ಆಳ್ವಾಸ್ ಹೆಲ್ತ್ ಸೆಂಟರ್ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಮೂಡುಬಿದಿರೆಯ ಸಹಯೋಗದಲ್ಲಿ ಶುಕ್ರವಾರ ಆಳ್ವಾಸ್ ಕಾಲೇಜಿನಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಿತು. ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 449 ಯುನಿಟ್ ರಕ್ತದಾನ ಮಾಡಿದರು.
ಶಿಬಿರ ಉದ್ಘಾಟಿಸಿದ ಗೇಲ್ ಪೆಟ್ರೋ ಕೆಮಿಕಲ್ಸ್ನ ವೈದ್ಯಕೀಯ ಸಲಹಾ ಅಧಿಕಾರಿ, ಡಾ ಜೆ ಎನ್ ಭಟ್, ದೇಶದಲ್ಲಿ 4 ಕೋಟಿ ರಕ್ತದಾನಿಗಳ ಅವಶ್ಯಕತೆ ಇದ್ದು, 4.5 ಲಕ್ಷ ದಾನಿಗಳು ಮಾತ್ರ ಇದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು. ಒಬ್ಬ ವ್ಯಕ್ತಿ ಯೌವನದಿಂದ ಒಟ್ಟು ಸುಮಾರು 80ರಿಂದ 90 ಬಾರಿ ರಕ್ತದಾನ ಮಾಡಬಹುದು. ಪುರುಷರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದ ಅವರು, ನಾನು 36 ಬಾರಿ ರಕ್ತದಾನ ಮಾಡಿದ್ದೇನೆ ಎಂದರು. ರಕ್ತದಾನವೂ ದೇಶಪ್ರೇಮ. ಬದ್ಧತೆಯಿಂದ ರಕ್ತದಾನ ಮಾಡಿ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ರಕ್ತದಾನವು ಜೀವದಾನದಷ್ಟೇ ಪ್ರಮುಖ ಎಂದರು. ಈ ರಕ್ತದಾನ ಶಿಬಿರದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಮೂಡುಬಿದಿರೆಯ ಸುತ್ತಮುತ್ತಲಿನ ಕಾಲೇಜುಗಳಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡರು.
ಎಚ್ಡಿಎಫ್ಸಿ ಶಾಖಾ ಕಾರ್ಯಾಕಾರಿ ವ್ಯವಸ್ಥಾಪಕಿ ಸುಶ್ಮಿತಾ ಶೆಟ್ಟಿ ಇದ್ದರು. ಆಳ್ವಾಸ್ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ ಶರತ್ ಕುಮಾರ್ ರಾವ್, ಐಆರ್ಸಿಎಸ್ಜಿ ಲ್ಲಾ ಸಂಯೋಜಕ ಪ್ರವೀಣಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು.