
ಕರಾವಳಿಯ ಬಹುತೇಕ ಸಾಧಕರು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮಪತಿಗಳಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಅದರೊಂದಿಗೆ ತಾಯ್ನಾಡಿನ ಕಲಾ ಪ್ರಕಾರಗಳಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಅನುಪಮವಾದುದು. ಈಗಲೂ ಯಕ್ಷಗಾನಕ್ಕೆ ಮುಂಬಯಿಯಲ್ಲಿ ರಾಜಾಶ್ರಯವಿದೆ. ಅಲ್ಲಿನ ಕಲಾಭಿಮಾನಿಗಳು ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ನಿರಂತರ ಪೋಷಿಸುತ್ತಿದ್ದಾರೆ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ| ಎಂ ಪ್ರಭಾಕರ ಜೋಶಿ ಹೇಳಿದರು. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಬೆಳ್ಳಿಹಬ್ಬದ ಪ್ರಯುಕ್ತ ಈ ಬಾರಿ ನಡೆಸುವ ‘ಮುಂಬಯಿ ಯಕ್ಷಗಾನ ಸಮ್ಮೇಳನ’ದ ಸಲುವಾಗಿ ಅಜೆಕಾರು ಶ್ರೀರಾಮ ಭಜನಾ ಮಂದಿರದಲ್ಲಿ ಮಾರ್ಚ್ 10 ರಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಪ್ರಧಾನ ಸಲಹೆಗಾರರಾಗಿ ಡಾ| ಜೋಶಿ ಮಾತನಾಡಿದರು. ಮುಂಬಯಿಯಲ್ಲಿ ಯಕ್ಷಗಾನ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಸ್ಮರಣೀಯ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರು ಮಹಾನಗರದ ಉದ್ದಗಲಕ್ಕೂ ನೂರಾರು ಸ್ತ್ರೀ ಪುರುಷರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಸುವ ಮೂಲಕ ಅಸಂಖ್ಯ ಯುವ ಕಲಾವಿದರ ಉದಯಕ್ಕೆ ಕಾರಣರಾಗಿದ್ದಾರೆ. ಕಾರ್ಯಕ್ರಮ ಸಂಘಟನೆಯಲ್ಲೂ ಅವರು ಸಮರ್ಥರು. ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದವರು ಕರೆ ನೀಡಿದರು.

ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಮಾತನಾಡಿ, ಎರಡು ದಶಕಗಳಿಗಿಂತಲೂ ಹಿಂದೆ ಮುಂಬಯಿಯಲ್ಲಿ ಹುಟ್ಟಿಕೊಂಡ ಅಜೆಕಾರು ಕಲಾಭಿಮಾನಿ ಬಳಗವು ಊರಿನ ಶ್ರೇಷ್ಟ ಕಲಾವಿದರನ್ನು ಕರೆಸಿ ಯಕ್ಷಗಾನದ ಸರಣಿ ತಾಳಮದ್ದಳೆ, ಬಯಲಾಟ, ಗ್ರಂಥ ಪ್ರಕಟಣೆಗಳಲ್ಲದೇ ಕಲಾವಿದರಿಗೆ ಗೌರವಾರ್ಪಣೆ ಮತ್ತು ನಿಧಿ ಸಮರ್ಪಣೆಯನ್ನೂ ಮಾಡಿಕೊಂಡು ಬಂದಿದೆ. ಇದಕ್ಕೆ ಮುಂಬಯಿಯ ಕಲಾಭಿಮಾನಿಗಳ ಮತ್ತು ಉದ್ಯಮಿಗಳ ಸಹಾಯ, ಸಹಕಾರ ಅಪಾರವಿದೆ. ಇದೀಗ ಬೆಳ್ಳಿ ಹಬ್ಬದ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ನಡೆಸುವ ಉದ್ದೇಶದಿಂದ ‘ಯಕ್ಷಗಾನ ಸಮ್ಮೇಳನ – 2026’ ಆಯೋಜಿಸಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಸ್ವಾಗತ ಸಮಿತಿಯೊಂದನ್ನು ರಚಿಸಲಾಗುವುದು ಎಂದರು.
ಸಮ್ಮೇಳನದ ಪ್ರಧಾನ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾತನಾಡುತ್ತಾ, ದಿ ಎಚ್.ಬಿ.ಎಲ್ ರಾವ್ ಅವರ ಬಳಿಕ ಮುಂಬಯಿಯಲ್ಲಿ ಯಕ್ಷಗಾನದ ಸಮ್ಮೇಳನ ನಡೆಸುವ ಸಾಹಸಕ್ಕೆ ಯಾರೂ ಕೈ ಹಾಕಿರಲಿಲ್ಲ. ಅಜೆಕಾರು ಬಾಲಕೃಷ್ಣ ಶೆಟ್ಟರು ತಮ್ಮ ಬಳಗದ ರಜತ ಪರ್ವಕ್ಕೆ ಯಕ್ಷಗಾನ ಸಮ್ಮೇಳನದ ಸ್ವರೂಪ ನೀಡುವುದರೊಂದಿಗೆ ಮುಂಬಯಿ ಯಕ್ಷಗಾನದ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ತೆರೆಯಲಿದ್ದಾರೆ. ಇದೇ 2026 ಅಕ್ಟೋಬರ್ 24 ಮತ್ತು 25ರಂದು ಯಕ್ಷಗಾನಕ್ಕೆ ಸಂಬಂಧಿಸಿ ವಿವಿಧ ಗೋಷ್ಠಿಗಳು, ಪ್ರದರ್ಶನ ಪ್ರಾತ್ಯಕ್ಷಿಕೆ ಹಾಗೂ ಕಲಾವಿದರು, ಕಲಾಪೋಷಕರ ಸನ್ಮಾನದ ಮೂಲಕ ಮುಂಬಯಿಯಲ್ಲಿ ಎರಡು ದಿನಗಳ ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುವುದು. ಈ ಸಂದರ್ಭದಲ್ಲಿ ಸಂಗ್ರಾಹ್ಯ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುವುದು ಎಂದು ನುಡಿದರು. ಹಿರಿಯ ಯಕ್ಷಗಾನ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಕೆ ರಮೇಶ ಆಚಾರ್ಯ ತೀರ್ಥಹಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬಳಂತಿಮೊಗರು, ಸದಾಶಿವ ಆಳ್ವ ತಲಪಾಡಿ, ದೀವಿತ್ ಎಸ್.ಕೆ ಪೆರಾಡಿ, ಪ್ರಸಾದ್ ಸವಣೂರು, ಉದ್ಯಮಿ ವಿಜಯ ಶೆಟ್ಟಿ ಅಜೆಕಾರು ಮತ್ತು ಕೆ ಲಕ್ಷ್ಮೀನಾರಾಯಣ ರೈ ಹರೇಕಳ ಸಭೆಯಲ್ಲಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು.


























































































































